
ರಾಮನಗರ: ನಗರದಲ್ಲಿ ಮಾದಕವಸ್ತುಗಳಾದ ಮೆಥಾಂಫೆಟಮೈನ್ ಕ್ರಿಸ್ಟಲ್ ಹಾಗೂ ಎಂಡಿಎಂಎ ಮಾತ್ರೆಗಳನ್ನು ಮಾರಾಟ ಮಾಡುತ್ತಿದ್ದ ಜಾಲವನ್ನು ಬೇಧಿಸಿರುವ ಐಜೂರು ಠಾಣೆ ಪೊಲೀಸರು, ವಿದೇಶಿ ಪ್ರಜೆ ಸೇರಿದಂತೆ ಇಬ್ಬರನ್ನು ಬಂಧಿಸಿದ್ದಾರೆ.
ಉಗಾಂಡದ ನಾನಾ ಜಾನ್ಸನ್ ಹಾಗೂ ಬೆಂಗಳೂರಿನ ಫಾರೂಕ್ ನಗರದ ಸಾಕಿಲ್ ಪಾಷ ಅಲಿಯಾಸ್ ಸಲ್ಮಾನ್ ಖಾನ್ ಬಂಧಿತರು. ಆರೋಪಿಗಳಿಂದ ₹19 ಲಕ್ಷ ಮೌಲ್ಯದ 190.65 ಗ್ರಾಂ ಎಂಡಿಎಂಎ ಮಾತ್ರೆಗಳು ಹಾಗೂ ₹55.90 ಲಕ್ಷ ಮೌಲ್ಯದ 559.34 ಗ್ರಾಂ ಮೆಥಾಂಫೆಟಮೈನ್ ಕ್ರಿಸ್ಟಲ್ ಸೇರಿದಂತೆ ಒಟ್ಟು ₹74.90 ಲಕ್ಷ ಮೌಲ್ಯದ ಮಾದಕವಸ್ತು ಹಾಗೂ ಕಾರು ವಶಪಡಿಸಿಕೊಂಡಿದ್ದಾರೆ.
ನಗರದ ಎಪಿಎಂಸಿ ಮಾವಿನ ಮಂಡಿ ಬಳಿ ವ್ಯಕ್ತಿಯೊಬ್ಬ ಮಾದಕವಸ್ತು ಮಾರಾಟ ಮಾಡಲು ಯತ್ನಿಸುತ್ತಿದ್ದ ಮಾಹಿತಿ ಮೇರೆಗೆ ಸ್ಥಳಕ್ಕೆ ಹೋಗಿ ಪರಿಶೀಲಿಸಿದಾಗ, ಕಾರಿನಲ್ಲಿ ಕುಳಿತಿದ್ದ ಸಾಕಿಲ್ ಪಾಷನನ್ನು ವಶಕ್ಕೆ ಪಡೆದರು. ಆತನ ಬಳಿ ಇದ್ದ ಎಂಡಿಎಂಎ ಮಾತ್ರೆ ವಶಕ್ಕೆ ಪಡೆದು ಅದರ ಮೂಲವನ್ನು ವಿಚಾರಿಸಿದಾಗ, ಮೊಬೈಲ್ ಮೂಲಕ ಪರಿಚಯವಾದ ಉಗಾಂಡ ಪ್ರಜೆ ಜಾನ್ಸನ್ ಹೆಸರು ಬಾಯ್ಬಿಟ್ಟ ಎಂದು ಪೊಲೀಸರು ಹೇಳಿದರು.
ಬೆಂಗಳೂರಿನ ಜಿಗಣಿಯಲ್ಲಿ ವಾಸವಾಗಿದ್ದ ಜಾನ್ಸನ್‌ನನ್ನು ಬಂಧಿಸಿ ಆತನಿಂದ ಮೆಥಾಂಫೆಟಮೈನ್ ಕ್ರಿಸ್ಟಲ್ ವಶಪಡಿಸಿಕೊಳ್ಳಲಾಯಿತು. ಜಾನ್ಸನ್ ವಿರುದ್ಧ ಬೆಂಗಳೂರಿನ ವಿವಿಧ ಪೊಲೀಸ್ ಠಾಣೆಗಳಲ್ಲಿ ಪ್ರಕರಣಗಳು ದಾಖಲಾಗಿವೆ ಎಂದು ಪೊಲೀಸರು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.