ಸ್ವಾಭಿಮಾನ ಸೇವಾ ಸಮಿತಿಯು ರಾಮನಗರದ ಎಂ.ಎಚ್. ಕಾಲೇಜು ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ನಿವೃತ್ತ ನೌಕರರಿಗೆ ಗಣ್ಯರು ಸನ್ಮಾನಿಸಿದರು. ನಿವೃತ್ತ ಪೊಲೀಸ್ ಅಧೀಕ್ಷಕ ಸಿದ್ದರಾಮಯ್ಯ, ದಲಿತ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ಶಿವಕುಮಾರ ಸ್ವಾಮಿ, ಸಮಿತಿ ಅಧ್ಯಕ್ಷ ಎಸ್. ಗವಿಯಯ್ಯ, ಹಾಗೂ ಇತರರು ಇದ್ದಾರೆ
ರಾಮನಗರ: ‘ಶೋಷಿತ ಸಮುದಾಯಗಳು ಬಡತನ, ಅನಕ್ಷರತೆ, ದೌರ್ಜನ್ಯದಂತಹ ಸಂಕೋಲೆಗಳಿಂದ ಬಿಡುಗಡೆ ಆಗಬೇಕಾದರೆ ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡಬೇಕು. ಶಿಕ್ಷಣವೊಂದೇ ಬದಲಾವಣೆಗೆ ಇರುವ ಏಕೈಕ ಅಸ್ತ್ರ. ಡಾ. ಬಿ.ಆರ್. ಅಂಬೇಡ್ಕರ್ ಅವರು ಶಿಕ್ಷಣದ ಸಾಮರ್ಥ್ಯ ಏನೆಂಬುದನ್ನು ನಮಗೆ ತೋರಿಸಿ ಕೊಟ್ಟಿದ್ದಾರೆ’ ಎಂದು ನಿವೃತ್ತ ಪೊಲೀಸ್ ಅಧೀಕ್ಷಕ ಸಿದ್ದರಾಮಯ್ಯ ಹೇಳಿದರು.
ಸ್ವಾಭಿಮಾನ ಸೇವಾ ಸಮಿತಿಯು ನಗರದ ಎಂ.ಎಚ್. ಕಾಲೇಜು ಸಭಾಂಗಣದಲ್ಲಿ ಇತ್ತೀಚೆಗೆ ಹಮ್ಮಿಕೊಂಡಿದ್ದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಹಾಗೂ ನಿವೃತ್ತ ನೌಕರರಿಗೆ ಸನ್ಮಾನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
‘ಶೋಷಿತ ಸಮುದಾಯಗಳಿಗೆ ಅಂಬೇಡ್ಕರ್, ಜ್ಯೋತಿ ಬಾಪುಲೆ, ಸಾವಿತ್ರಿ ಬಾಪುಲೆ ಅವರಿಗಿಂತ ಬೇರೆ ಯಾವುದೇ ಪ್ರೇರಣೆ ಬೇಕಿಲ್ಲ. ಶಿಕ್ಷಣದ ಮಹತ್ವ ಮನಗಂಡು ಎಲ್ಲರೂ ತಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸಬೇಕು’ ಎಂದು ಸಲಹೆ ನೀಡಿದರು.
‘ಸಮುದಾಯದಲ್ಲಿ ಶಿಕ್ಷಣ ಪಡೆದು ಸಮಾಜದಲ್ಲಿ ಸ್ಥಾನಮಾನ ಪಡೆದವರು ಮತ್ತೆ, ತಮ್ಮ ಸಮುದಾಯದತ್ತ ತಿರುಗಿ ನೋಡದ ಪರಿಸ್ಥಿತಿ ಇದೆ. ಅದು ತಪ್ಪು. ಸಮುದಾಯದ ಮೀಸಲಾತಿ ಪಡೆದು ಮೇಲೆ ಬಂದವರು ಸಮುದಾಯದಕ್ಕೆ ಮರಳಿ ತಮ್ಮ ಕೈಲಾದ ನೆರವು ನೀಡುವ ಮನೋಭಾವ ಬೆಳೆಸಿಕೊಳ್ಳಬೇಕು’ ಎಂದು ಕಿವಿಮಾತು ಹೇಳಿದರು.
ವಿಶೇಷ ಉಪನ್ಯಾಸ ನೀಡಿದ ಉಪನ್ಯಾಸಕ ಬೀರಯ್ಯ, ‘ನಮ್ಮ ಮಕ್ಕಳು ಸ್ಪರ್ಧಾತ್ಮಕ ಜಗತ್ತನ್ನು ಎದುರಿಸಿ ಬೆಳೆಯಬೇಕಿದೆ. ಅದಕ್ಕಾಗಿ ನಾಲ್ಕು ಕೌಶಲಗಳು ಅಗತ್ಯ. ಮೊದಲು ಇಂಗ್ಲಿಷ್ ಕಲಿಯಬೇಕು. ಅಂಬೇಡ್ಕರ್ ಸಹ ಇಂಗ್ಲಿಷ್ ಶಿಕ್ಷಣ ಪ್ರತಿಪಾದಿಸಿದ್ದರು. ಎರಡನೇಯದಾಗಿ ಕಂಪ್ಯೂಟರ್ ಶಿಕ್ಷಣ ಅಗತ್ಯ. ಮೂರನೇಯದಾಗಿ ಸಂವಹನ ಕೌಶಲ ಹಾಗೂ ನಾಲ್ಕನೇಯದಾಗಿ ನೈತಿಕತೆ ಕಲಿಸಬೇಕು’ ಎಂದು ತಿಳಿಸಿದರು.
ದಲಿತ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ಶಿವಕುಮಾರ ಸ್ವಾಮಿ, ‘ಸಮುದಾಯದ ಸರ್ಕಾರಿ ನೌಕರರು ಸಂಘಟನೆಗಳಿಗೆ ಮಾರ್ಗದರ್ಶನ ಮಾಡಬೇಕು. ಶಿಕ್ಷಣದ ಕುರಿತು ಜಾಗೃತಿ ಮೂಡಿಸುವ ಜೊತೆಗೆ ಸಮುದಾಯವನ್ನು ಅಭಿವೃದ್ಧಿ ಪಥದಲ್ಲಿ ಕೊಂಡೊಯ್ಯಲು ನೆರವಾಗಬೇಕು’ ಎಂದರು.
ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಹಾಗೂ ನಿವೃತ್ತ ನೌಕರರಿಗೆ ಗಣ್ಯರು ಸನ್ಮಾನ ಮಾಡಿದರು. ಅಧ್ಯಕ್ಷತೆಯನ್ನು ಸ್ವಾಭಿಮಾನ ಸೇವಾ ಸಮಿತಿ ಅಧ್ಯಕ್ಷ ಎಸ್. ಗವಿಯಯ್ಯ ವಹಿಸಿದ್ದರು. ನಗರಸಭೆ ಸದಸ್ಯರಾದ ಕೆ. ರಮೇಶ್, ಪದ್ಮ, ಕರ್ನಾಟಕ ರಾಜ್ಯ ಪೌರ ನೌಕರರ ಸಂಘದ ರಾಜ್ಯ ಉಪಾಧ್ಯಕ್ಷ ಆರ್. ನಾಗರಾಜು, ಬಿಡದಿ ರೋಟರಿ ಅಧ್ಯಕ್ಷ ರಮೇಶ್, ರಂಗರಾಜು, ಡಾ. ನಯಾಜ್ ಅಹಮದ್, ಪುರುಷೋತ್ತಮ್, ಸಿದ್ದರಾಜು ಸಿ., ಯೋಗಾನಂದ ಕೆ., ದಲಿತ ಮುಖಂಡ ಶಿವಶಂಕರ್ ಹಾಗೂ ಸಮಿತಿ ಪದಾಧಿಕಾರಿಗಳು ಇದ್ದರು. ಸಮಿತಿ ಪ್ರಧಾನ ಕಾರ್ಯದರ್ಶಿ ಆರ್.ಸಿ. ವಿಜಯಕುಮಾರ್ ನಿರೂಪಣೆ ಮಾಡಿದರು.
‘ಸಮುದಾಯಗಳು ಭಿನ್ನಾಭಿಪ್ರಾಯ ಬದಿಗೊತ್ತಿ ಒಗ್ಗಟ್ಟು ಪ್ರದರ್ಶಿಸಬೇಕು. ಅಂಬೇಡ್ಕರ್ ಅವರ ಕನಸಿನ ಭಾರತ ನಿರ್ಮಾಣವಾಗಬೇಕಾದರೆ ಶೋಷಿತ ಸಮುದಾಯಗಳು ಹಾಗೂ ಹಿಂದುಳಿದ ಸಮುದಾಯಗಳು ವಿದ್ಯಾವಂತರು ತಮ್ಮ ಸಮಾಜಕ್ಕೆ ಕೊಡುಗೆ ನೀಡಬೇಕು. ಸಮಾಜದ ಕಟ್ಟಕಡೆಯ ವ್ಯಕ್ತಿಗಳನ್ನು ಮುಖ್ಯವಾಹಿನಿಗೆ ತರುವ ಕೆಲಸವನ್ನು ಸಂಘಟನೆಗಳು ಹಾಗೂ ಸಂಘ–ಸಂಸ್ಥೆಗಳು ಮಾಡಬೇಕು. ಅವರಿಗೆ ಶಿಕ್ಷಣ ಕೊಡಿಸಬೇಕು. ದೌರ್ಜನ್ಯ ಸೇರಿದಂತೆ ಯಾವುದೇ ರೀತಿಯ ಅನ್ಯಾಯವಾದಾಗ ಅವರ ಪರ ನಿಂತ ನೈತಿಕವಾಗಿ ಧೈರ್ಯ ತುಂಬಬೇಕು’ ಎಂದು ನಗರಸಭೆ ಅಧ್ಯಕ್ಷ ಕೆ. ಶೇಷಾದ್ರಿ ಶಶಿ ಅವರು ಸಲಹೆ ನೀಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.