ADVERTISEMENT

ರಾಮನಗರ: ದಯಾಮರಣ ಕೋರಿದ 16 ರೈತರು

​ಪ್ರಜಾವಾಣಿ ವಾರ್ತೆ
Published 15 ಜನವರಿ 2026, 7:08 IST
Last Updated 15 ಜನವರಿ 2026, 7:08 IST
ರಾಮನಗರದ ಎಪಿಎಂಸಿಯ ರೈತ ಭವನದಲ್ಲಿ ಬುಧವಾರ ರೈತ  ಸಂಘದ ಮುಖಂಡ ನಲ್ಲಹಳ್ಳಿ ಶ್ರೀನಿವಾಸ್, ಹಿರಿಯ ರೈತ ನಾಯಕಿ ಅನಸೂಯಮ್ಮ ಸುದ್ದಿಗೋಷ್ಠಿ ನಡೆಸಿದರು. ಸಂತ್ರಸ್ತ ರೈತರು ಹಾಗೂ ರೈತ ಸಂಘದ ಪದಾಧಿಕಾರಿಗಳು ಇದ್ದಾರೆ
ರಾಮನಗರದ ಎಪಿಎಂಸಿಯ ರೈತ ಭವನದಲ್ಲಿ ಬುಧವಾರ ರೈತ  ಸಂಘದ ಮುಖಂಡ ನಲ್ಲಹಳ್ಳಿ ಶ್ರೀನಿವಾಸ್, ಹಿರಿಯ ರೈತ ನಾಯಕಿ ಅನಸೂಯಮ್ಮ ಸುದ್ದಿಗೋಷ್ಠಿ ನಡೆಸಿದರು. ಸಂತ್ರಸ್ತ ರೈತರು ಹಾಗೂ ರೈತ ಸಂಘದ ಪದಾಧಿಕಾರಿಗಳು ಇದ್ದಾರೆ   

ರಾಮನಗರ: ಉಳುವವನೇ ಭೂಮಿಯ ಒಡೆಯ ಯೋಜನೆಯಡಿ ಜಾರಿಯಾಗಿರುವ ಜಮೀನು ಅತಿಕ್ರಮಣಕ್ಕೆ ಪ್ರಯತ್ನಿಸುತ್ತಿರುವ ವ್ಯಕ್ತಿಯೊಬ್ಬರು ಮಾನಸಿಕವಾಗಿ ಹಾಗೂ ದೈಹಿಕವಾಗಿ ಹಿಂಸೆ ನೀಡುತ್ತಿದ್ದಾರೆ. ಅಧಿಕಾರಿಗಳಿಗೂ ದೂರು ಕೊಟ್ಟರೂ ಪ್ರಯೋಜವಾಗಿಲ್ಲ ಎಂದು ಅಳಲು ತೋಡಿಕೊಂಡಿರುವ ಮಂಗಳವಾರಪೇಟೆಯ 16 ರೈತರು ದಯಾಮರಣ ಕೋರಿ ರಾಷ್ಟ್ರಪತಿಗೆ ಪತ್ರ ಬರೆದಿದ್ದಾರೆ.

ಈ ಕುರಿತು ನಗರದ ಎಪಿಎಂಸಿಯ ರೈತ ಭವನದಲ್ಲಿ ಬುಧವಾರ ರೈತರೊಂದಿಗೆ ಸುದ್ದಿಗೋಷ್ಠಿ ನಡೆಸಿದ ರೈತ ಸಂಘದ ಮುಖಂಡ ನಲ್ಲಹಳ್ಳಿ ಶ್ರೀನಿವಾಸ್, ‘ಉಳುವವವನೇ ಭೂಮಿಯ ಒಡೆಯ ಯೋಜನೆಯಡಿ ಮಂಗಳವಾರಪೇಟೆಯ 16 ರೈತರಿಗೆ 17.24 ಎಕರೆ ಜಮೀನು ಮಂಜೂರಾಗಿದೆ. ಮೂರು ತಲೆಮಾರುಗಳಿಂದ ಆ ಜಮೀನು ಕುಟುಂಬಗಳ ಸ್ವಾಧೀನದಲ್ಲಿತ್ತು’ ಎಂದರು.

‘ಇದೇ ಜಮೀನಿನನ್ನು ತಾಲ್ಲೂಕಿನ ಮಾಜಿ ಸಚಿವರೊಬ್ಬರು ತಮ್ಮ ಸಂಬಂಧಿಗೆ ಮರು ಮಂಜೂರು ಮಾಡಿಸಿದ್ದಾರೆ. ಅವರು 16 ಕುಟುಂಬಗಳಿಗೆ 2018ರಿಂದಲೂ ಈ ಜಮೀನು ನಮ್ಮದು ಎಂದು ತೊಂದರೆ ಕೊಡುತ್ತಿದ್ದಾರೆ. ಈ ಸಂಬಂಧ ಕಾನೂನು ಹೋರಾಟ ಸಹ ಚನ್ನಪಟ್ಟಣದಲ್ಲಿ ನ್ಯಾಯಾಲಯದಲ್ಲಿ ನಡೆದಿದೆ’ ಎಂದು ತಿಳಿಸಿದರು.

ADVERTISEMENT

‘ಜಮೀನಿನಲ್ಲಿ ಬೆಳೆದಿದ್ದ ಭತ್ತವನ್ನು ಇತ್ತೀಚೆಗೆ ಕೊಯ್ಲು ಮಾಡಲು ಹೋದಾಗ, ಆ ವ್ಯಕ್ತಿ ಕಡೆಯವರು ಅಡ್ಡಿಪಡಿಸಿದ್ದಾರೆ. ಸ್ಥಳಕ್ಕೆ ಬಂದ ಪೊಲೀಸರು ಸಹ ಆ ವ್ಯಕ್ತಿ ಪರವಾಗಿಯೇ ವಕಾಲತ್ತು ಮಾಡಿದ್ದಾರೆ. ಇದರಿಂದ ನೊಂದ ರೈತ ವಿಶ್ವನಾಥ್ ಪೊಲೀಸರ ಸಮ್ಮುಖದಲ್ಲೇ ವಿಷ ಕುಡಿದು ಆತ್ಮಹತ್ಯೆಗೆ ಯತ್ನಿಸಿ ಆಸ್ಪತ್ರೆಯಲ್ಲಿದ್ದಾರೆ’ ಎಂದು ಹೇಳಿದರು.

‘ವ್ಯಕ್ತಿಯು ರೈತರಿಗೆ ನೀಡುವ ಮಾನಸಿಕ ಮತ್ತು ದೈಹಿಕ ಹಿಂಸೆ ಕುರಿತು ತಹಶೀಲ್ದಾರ್ ಮತ್ತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ದೂರು ಕೊಟ್ಟರೂ ಪ್ರಯೋಜನವಾಗಿಲ್ಲ. ಆತ ಪ್ರಭಾವಿಯಾಗಿರುವುದರಿಂದ ಯಾರೂ ರೈತರ ನೆರವಿಗೆ ಬರುತ್ತಿಲ್ಲ. ಹಾಗಾಗಿ, ದಯಾಮರಣ ಕೋರಿ ರಾಷ್ಟ್ರಪತಿಗೆ ಪತ್ರ ಬರೆದು ಮನವಿ ಮಾಡಿದ್ದಾರೆ’ ಎಂದರು.

ಸುದ್ದಿಗೋಷ್ಠಿಯಲ್ಲಿ ರೈತ ಸಂಘದ ಮುಖಂಡರಾದ ರಾಜು, ಕೃಷ್ಣಪ್ಪ, ದೇವರಾಜು, ರಮೇಶ್, ಶಿವರಾಜ್, ರೈತರಾದ ರತ್ನಮ್ಮ, ವಿಶ್ವನಾಥ್, ಮಲ್ಲಪ್ಪ, ಶೋಭ, ರೇಖಾ, ಚಿಕ್ಕಮ್ಮ, ಜಯಲಕ್ಷ್ಮಮ್ಮ, ವೆಂಕಟಮ್ಮ, ಜಯಮ್ಮ ಹಾಗೂ ಇತರರು ಇದ್ದರು.

ಮರು ಮಂಜೂರು ಹೇಗೆ ಸಾಧ್ಯ?

‘ಮಂಗಳವಾರಪೇಟೆಯಲ್ಲಿ ಪ್ರತಿ ಎಕರೆ ಭೂಮಿಗೆ ನಾಲ್ಕೈದು ಕೋಟಿ ದರವಿದೆ. ಹಾಗಾಗಿ ಪ್ರಭಾವಿ ವ್ಯಕ್ತಿ ರೈತರಿಗೆ ಕಿರುಕುಳ ನೀಡುತ್ತಿದ್ದಾನೆ. ಒಮ್ಮೆ ಮಂಜೂರಾದ ಜಮೀನನ್ನು ಮರು ಮಂಜೂರು ಮಾಡಲು ಹೇಗೆ ಸಾಧ್ಯ? ಇದರಲ್ಲಿ ಅಧಿಕಾರಿಗಳು ಸಹ ಶಾಮೀಲಾಗಿರುವ ಶಂಕೆ ಇದೆ. ರೈತರ ಜಮೀನು ಕಸಿದುಕೊಂಡು ಅವರ ಜೀವನ ಹಾಳು ಮಾಡುವ ಕೆಲಸ ನಡೆಯುತ್ತಿದೆ. ರೈತರು ಕೊಯ್ಲು ಮಾಡುವಾಗ ಪೊಲೀಸರು ರಕ್ಷಣೆ ನೀಡಲಿಲ್ಲ. ಈ ಕುರಿತು ಡಿವೈಎಸ್ಪಿಗೆ ಕರೆ ಮಾಡಿದಾಗ ಸ್ವೀಕರಿಸಿಲ್ಲ. ಪೊಲೀಸರು ಸಹ ಪ್ರಭಾವಿಗಳ ಪರ ನಿಂತರೆ ಹೇಗೆ?’ ಎಂದು ಹಿರಿಯ ರೈತ ನಾಯಕಿ ಅನಸೂಯಮ್ಮ ಪ್ರಶ್ನಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.