ರಾಮನಗರ: ತಾಲ್ಲೂಕಿನ ಬಿಡದಿ ಹೋಬಳಿಯ ಭೈರಮಂಗಲ ಮತ್ತು ಕಂಚುಗಾರನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಗ್ರೇಟರ್ ಬೆಂಗಳೂರು ಸಮಗ್ರ ಉಪನಗರ ಯೋಜನೆಗೆ ಭೂ ಸ್ವಾಧೀನ ವಿರೋಧಿಸಿ, ಆ ಭಾಗದ ರೈತರು ನಗರದ ಕಂದಾಯ ಭವನದಲ್ಲಿರುವ ಗ್ರೇಟರ್ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಕಚೇರಿ ಆವರಣದಲ್ಲಿ ಶನಿವಾರ ಪ್ರತಿಭಟನೆ ನಡೆಸಿದರು.
ಭೂ ಸ್ವಾಧೀನವಾಗಲಿರುವ 26 ಗ್ರಾಮಗಳ ರೈತರ ಅಹವಾಲು ಆಲಿಕೆ ಸಭೆಯನ್ನು ಮಾಗಡಿ ಶಾಸಕ ಎಚ್.ಸಿ. ಬಾಲಕೃಷ್ಣ ಅವರು ಕಚೇರಿಯಲ್ಲಿ ಹಮ್ಮಿಕೊಂಡಿದ್ದರು. ವಿಷಯ ತಿಳಿದು ಮಹಿಳೆಯರು ಸೇರಿದಂತೆ ನೂರಕ್ಕೂ ಹೆಚ್ಚು ಮಂದಿ ಸ್ಥಳದಲ್ಲಿ ಜಮಾಯಿಸಿದರು.
ನಮ್ಮ ಭೂಮಿ ನಮ್ಮ ಹಕ್ಕು, ಕೊಡುವುದಿಲ್ಲ ಕೊಡುವುದಿಲ್ಲ ಭೂಮಿ ಕೊಡುವುದಿಲ್ಲ ಎಂದು ಘೋಷಣೆಗಳನ್ನು ಕೂಗಿದ ರೈತರು, ಶಾಸಕ ಬಾಲಕೃಷ್ಣ ಹಾಗೂ ಸರ್ಕಾರದ ವಿರುದ್ಧ ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಅಹವಾಲು ಸಭೆ ನಡೆಯುತ್ತಿದ್ದ ಕಚೇರಿ ಎದುರು ಕುಳಿತು ಧರಣಿ ಕುಳಿತರು.
ಸ್ಥಳಕ್ಕೆ ಬಂದ ಬಾಲಕೃಷ್ಣ ಧರಣಿನಿರತರ ಮನವೊಲಿಸಲು ಮುಂದಾದರು. ಇದು ಸರ್ಕಾರದ ಯೋಜನೆ. ಯೋಜನೆಯನ್ನು ನಾನು ರದ್ದು ಮಾಡಲು ಸಾಧ್ಯವಿಲ್ಲ. ನಿಮ್ಮ ಅಹವಾಲುಗಳನ್ನು ನನಗೆ ತಿಳಿಸಿ. ಸರ್ಕಾರದ ಗಮನಕ್ಕೆ ತಂದು ಪರಿಹರಿಸುವೆ ಎಂದು ಭರವಸೆ ನೀಡಿದರು.
ಅದಕ್ಕೆ ಒಪ್ಪದ ರೈತರು, ಯೋಜನೆಯನ್ನು ರದ್ದುಪಡಿಸಿ ನಮ್ಮ ಭೂಮಿಯನ್ನು ನಮಗೆ ಬಿಟ್ಟು ಬಿಡಿ ಎಂದು ಆಗ್ರಹಿಸಿದರು. ಅದು ನನ್ನ ಕೈಯಲ್ಲಿ ಇಲ್ಲ ಎಂದು ಬಾಲಕೃಷ್ಣ ಹೇಳಿದಾಗ, ರೈತರು ಆಕ್ರೋಶ ಹೊರಹಾಕಿದರು. ಮನವೊಲಿಕೆಗೆ ರೈತರು ಬಗ್ಗದಿದ್ದಾಗ ಬಾಲಕೃಷ್ಣ ಕಚೇರಿ ಒಳಗೆ ಹೋದರು. ರೈತರು ಹೊರಗಡೆ ಧರಣಿ ಮುಂದುವರಿಸಿದರು.
ಕೆಲ ಹೊತ್ತಿನ ನಂತರ ಹೊರಬಂದ ಬಾಲಕೃಷ್ಣ ಮತ್ತೆ ರೈತರ ಮನವೊಲಿಸಲು ಯತ್ನಿಸಿದರು. ಆಗಲೂ ರೈತರು ತಮ್ಮ ಪಟ್ಟು ಸಡಿಲಿಸಲಿಲ್ಲ. ಕಡಗೆ ಪೊಲೀಸರ ನೆರವಿನೊಂದಿಗೆ ಬಾಲಕೃಷ್ಣ ಕಚೇರಿಯಿಂದ ಹೊರ ನಡೆದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.