ಸಾಂದರ್ಭಿಕ ಚಿತ್ರ
ರಾಮನಗರ: ಹಳೆ ದ್ವೇಷದ ಹಿನ್ನೆಲೆಯಲ್ಲಿ ಪುಂಡರ ಗುಂಪೊಂದು ಎದುರಾಳಿ ಗುಂಪಿನ ನಾಲ್ವರ ಮೇಲೆ ಲಾಂಗ್ ಮತ್ತು ಮಚ್ಚಿನಿಂದ ಹಲ್ಲೆ ಮಾಡಿ ಅಪಹರಿಸಿ, ನಂತರ ಆಸ್ಪತ್ರೆ ಬಳಿ ಬಿಟ್ಟು ಹೋಗಿರುವ ಘಟನೆ ತಾಲ್ಲೂಕಿನ ಅಚ್ಚಲು ಗ್ರಾಮದ ಒಂಟಿ ಮನೆಯಲ್ಲಿ ಗುರುವಾರ ನಡೆದಿದೆ. ಪುಂಡರು ಗ್ರಾಮದಲ್ಲಿ ಮಾರಾಕಾಸ್ತ್ರಗಳನ್ನು ಹಿಡಿದು ಓಡಾಡಿರುವುದು ಸ್ಥಳೀಯರಲ್ಲಿ ಆತಂಕ ಮೂಡಿಸಿದೆ.
ಸೀಜರ್ ಸಿದ್ದು ಮತ್ತು ರಾಮನಗರದ ಸಂಜು ಗುಂಪಿನ ನಡುವೆ ಈ ಗಲಾಟೆ ನಡೆದಿದೆ. ಘಟನೆಗೆ ಸಂಬಂಧಿಸಿದಂತೆ ಸಂಜು, ಪುನೀತ, ಶಶಾಂಕ, ದೇವರಾಜು, ಅರುಣ, ಪ್ರಮೋದ ಸೇರಿದಂತೆ 10 ಮಂದಿ ವಿರುದ್ಧ ರಾಮನಗರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಘಟನೆಯಲ್ಲಿ ಗಾಯಗೊಂಡಿರುವ ಮದ್ದೂರು ತಾಲ್ಲೂಕಿನ ಕದಲೂರಿನ ಬಬ್ಲು, ಮಧು, ಗಣೇಶ ಹಾಗೂ ಹರ್ಷ ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಾಗಿದ್ದಾರೆ.
ಘಟನೆ ಹಿನ್ನೆಲೆ: ಪ್ರಕರಣವೊಂದರ ವಿಚಾರಣೆಗೆ ಹಾಜರಾಗಲು ರಾಮನಗರಕ್ಕೆ ಜುಲೈ 16ರಂದು ಬಂದಿದ್ದ ನಾಲ್ವರೂ, ಅಚ್ಚಲು ಗ್ರಾಮದಲ್ಲಿರುವ ಒಂಟಿ ಮನೆಯಲ್ಲಿ ರಾತ್ರಿ ಉಳಿದುಕೊಂಡಿದ್ದರು. ಈ ವಿಷಯ ತಿಳಿದ ಸಂಜು ನೇತೃತ್ವದ 8ರಿಂದ 10 ಮಂದಿಯ ಗುಂಪು, ಬಬ್ಲುವನ್ನು ಗುರಿಯಾಗಿಸಿಕೊಂಡು ಬೆಳಿಗ್ಗೆ 8.30ರ ಸುಮಾರಿಗೆ ಮನೆಗೆ ನುಗ್ಗಿತು.
ಮಚ್ಚಿನಿಂದ ನಾಲ್ವರ ಮೇಲೂ ಕೈ ಸೇರಿದಂತೆ ದೇಹದ ಇತರ ಭಾಗಗಳ ಮೇಲೆ ಲಾಂಗ್ ಮತ್ತು ಮಚ್ಚಿನಿಂದ ಗುಂಪು ಹಲ್ಲೆ ನಡೆಸಿತು. ನಂತರ ನಾಲ್ವರನ್ನೂ ಅಪಹರಿಸಿತು. ಮಾರ್ಗಮಧ್ಯೆ ಹರ್ಷ ಆರೋಪಿಗಳಿಂದ ತಪ್ಪಿಸಿಕೊಂಡಿದ್ದ. ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಠಾಣೆಗೆ ಬಂದು ಘಟನೆಯ ಮಾಹಿತಿ ನೀಡಿದ ಎಂದು ಪೊಲೀಸರು ಹೇಳಿದರು.
ಮೂವರನ್ನು ಅಪಹರಿಸಿಕೊಂಡು ಹೋಗಿ ಮತ್ತೆ ಹಲ್ಲೆ ನಡೆಸಿದ್ದ ಗುಂಪು, ಚನ್ನಪಟ್ಟಣ ತಾಲ್ಲೂಕಿನ ಬೆಂಗಳೂರು–ಮೈಸೂರು ರಾಷ್ಟ್ರೀಯ ಹೆದ್ದಾರಿಯಲ್ಲಿರುವ ಚಾಮುಂಡೇಶ್ವರಿ ಆಸ್ಪತ್ರೆ ಬಳಿ ಅವರನ್ನು ಬಿಟ್ಟು ಹೋಗಿತ್ತು. ಸಿದ್ದು ಮತ್ತು ಸಂಜು ಗೆಳೆಯರಾಗಿದ್ದು, ಕ್ಷುಲ್ಲಕ ಕಾರಣಗಳಿಗೆ ಗಲಾಟೆ ಮಾಡಿಕೊಂಡು ಇತ್ತೀಚೆಗೆ ಬೇರೆಯಾಗಿದ್ದರು.
ಬಬ್ಲು ಸಿದ್ದು ಜೊತೆ ಗುರುತಿಸಿಕೊಂಡಿದ್ದ. ಇತ್ತೀಚೆಗೆ ಸಂಜು ಆಪ್ತ ಯಶ್ ಎಂಬುವನಿಗೆ ಬಬ್ಲು ಸ್ನೇಹಿತ ಬೈಯ್ದಿದ್ದ. ಇದೇ ಕಾರಣಕ್ಕೆ ಸಂಜು ಗುಂಪು ಬಬ್ಲುನನ್ನು ಗುರಿಯಾಗಿಸಿಕೊಂಡು ಹಲ್ಲೆ ನಡೆಸಿದೆ. ಹಲ್ಲೆಗೊಳಗಾಗಿರುವವರ ವಿರುದ್ಧ ಐಜೂರು ಪೊಲೀಸ್ ಠಾಣೆಯಲ್ಲಿ ಗಲಾಟೆಗೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿತ್ತು. ಅದರ ವಿಚಾರಣೆಗಾಗಿ ನಾಲ್ವರೂ ಬಂದಿದ್ದರು ಎಂದು ಪೊಲೀಸರು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.