ADVERTISEMENT

ವಸೂಲಿ ಗಿರಾಕಿ | ಮಾತಾಡಿ ಸಮಯ ವ್ಯರ್ಥ ಮಾಡಲ್ಲ: ಎಚ್‌.ಸಿ.ಬಾಲಕೃಷ್ಣ

​ಪ್ರಜಾವಾಣಿ ವಾರ್ತೆ
Published 7 ಜುಲೈ 2025, 2:04 IST
Last Updated 7 ಜುಲೈ 2025, 2:04 IST
ಮಾಗಡಿ ಪಟ್ಟಣದ ತಾಲ್ಲೂಕು ಕಚೇರಿ ಮುಂಭಾಗದಲ್ಲಿ ಸುದ್ದಿಗಾರರೊಂದಿಗೆ ಶಾಸಕ ಬಾಲಕೃಷ್ಣ ಮಾತನಾಡಿದರು
ಮಾಗಡಿ ಪಟ್ಟಣದ ತಾಲ್ಲೂಕು ಕಚೇರಿ ಮುಂಭಾಗದಲ್ಲಿ ಸುದ್ದಿಗಾರರೊಂದಿಗೆ ಶಾಸಕ ಬಾಲಕೃಷ್ಣ ಮಾತನಾಡಿದರು   

ಮಾಗಡಿ: ‘ವಸೂಲಿ ಗಿರಾಕಿಗಳ ಬಗ್ಗೆ ಮಾತನಾಡಿ ಸಮಯ ವ್ಯರ್ಥ ಮಾಡಿಕೊಳ್ಳುವುದಿಲ್ಲ’ ಎಂದು ಕೆಂಪೇಗೌಡ ಅಭಿವೃದ್ಧಿ ಸಮಿತಿ ರಾಜ್ಯಾಧ್ಯಕ್ಷ ಎಚ್.ಎಂ. ಕೃಷ್ಣಮೂರ್ತಿ ವಿರುದ್ಧ ಶಾಸಕ ಎಚ್‌.ಸಿ.ಬಾಲಕೃಷ್ಣ ವಾಗ್ದಾಳಿ ನಡೆಸಿದರು.

ಮಾಗಡಿ ಕೋಟೆ ಅಭಿವೃದ್ಧಿಗೆ ಸರ್ಕಾರ ಬಿಡುಗಡೆ ಮಾಡಿದ ₹103 ಕೋಟಿ ಅನುದಾನದಲ್ಲಿ ಶಾಸಕ ಎಚ್‌.ಸಿ. ಬಾಲಕೃಷ್ಣ ಪಾತ್ರವೇನೂ ಇಲ್ಲ ಎಂಬ ಕೆಂಪೇಗೌಡ ಅಭಿವೃದ್ಧಿ ಸಮಿತಿ ರಾಜ್ಯ ಘಟಕದ ಅಧ್ಯಕ್ಷ ಎಚ್.ಎಂ.ಕೃಷ್ಣಮೂರ್ತಿ ಟೀಕೆಗೆ ಅವರು ಈ ರೀತಿ ಪ್ರತಿಕ್ರಿಯಿಸಿದರು.

‘ಎಚ್.ಎಂ.ಕೃಷ್ಣಮೂರ್ತಿ ವಸೂಲಿ ಗಿರಾಕಿ ಎಂಬುದು ಗೊತ್ತಾಗಿದೆ. ಕಳೆದ ಬಾರಿ ಕೆಂಪೇಗೌಡ ಜಯಂತಿಗೆ ಹಣ ನೀಡುವಂತೆ ಕೇಳಿಕೊಂಡಿದ್ದರು. ₹5 ಲಕ್ಷ ಖರ್ಚು ಮಾಡಿ ₹25 ಲಕ್ಷವನ್ನು ಬಿಬಿಎಂಪಿಯಲ್ಲಿ ವಸೂಲಿ ಮಾಡಿರುವುದು ಗೊತ್ತಾಗಿದೆ’ ಎಂದರು.

ADVERTISEMENT

‘ನಾನು ಚುನಾವಣಾ ಪ್ರಚಾರಕ್ಕೆ ಬನ್ನಿ ಎಂದು ಕರೆದಿರಲಿಲ್ಲ. ಅವರೇ ಬಂದಿದ್ದರು. ನನ್ನ ಬಳಿ ಬರುವ ಹಿಂದಿನ ರಾತ್ರಿ ಮಾಜಿ ಶಾಸಕ ಎ.ಮಂಜುನಾಥ್ ಅವರಿಂದ ಹಣ ಪಡೆದು ಬಂದಿದ್ದರು’ ಎಂದು ಆರೋಪ ಮಾಡಿದರು.

ಎಚ್.ಎಂ. ಕೃಷ್ಣಮೂರ್ತಿ ಅವರು ಹೇಳಿದಂತೆ ಮಾಗಡಿ ಕೋಟೆ ಅಭಿವೃದ್ಧಿ ಮಾಡಲು ಸಾಧ್ಯವೇ? ಕಂದಕದ ನಾಲ್ಕು ಭಾಗದಲ್ಲಿ ತೆರವು ಮಾಡಲು ಸಾಧ್ಯವಾಗುತ್ತಾ? ರಸ್ತೆ ನಿರ್ಮಾಣ ಮಾಡಲಾಗಿದೆ ಎಂದರು.

ಕೆಂಪೇಗೌಡ ಪ್ರತಿಮೆ ಸ್ಥಳಾಂತರದ ಬಗ್ಗೆ ವಿರೋಧ ವ್ಯಕ್ತಪಡಿಸಿದರೆ ಕಾನೂನು ರೀತಿ ಕ್ರಮ ಕೈಗೊಳ್ಳುತ್ತೇವೆ. ಎಕ್ಸ್‌ಪ್ರೆಸ್‌ ಕೆನಾಲ್ ಕಾಮಗಾರಿ ಸ್ವಲ್ಪ ವಿಳಂಬವಾಗಬಹುದೇ ಹೊರತು, ಯಾವುದೇ ಕಾರಣಕ್ಕೂ ನಿಲ್ಲುವುದಿಲ್ಲ ಎಂದರು.

ಪೂಜಾರಿ ಪಾಳ್ಯ ಕೃಷ್ಣಮೂರ್ತಿ, ನರಸಿಂಹಮೂರ್ತಿ, ಬ್ಯಾಲಕೆರೆ ಚಿಕ್ಕರಾಜು, ಗಂಗಹನುಮಯ್ಯ, ಚಿಲಿಪಿಲಿ ರಾಜು ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.