ADVERTISEMENT

ರಾಮನಗರ: ಜಾನಪದ ಲೋಕದಲ್ಲಿ ₹1.46 ಲಕ್ಷ ಮೌಲ್ಯದ ವಸ್ತುಗಳ ಕಳ್ಳತನ, ಹಾನಿ

​ಪ್ರಜಾವಾಣಿ ವಾರ್ತೆ
Published 13 ಅಕ್ಟೋಬರ್ 2025, 19:59 IST
Last Updated 13 ಅಕ್ಟೋಬರ್ 2025, 19:59 IST
ರಾಮನಗರದ ಜಾನಪದ ಲೋಕದಲ್ಲಿರುವ ಜಾನಪದ ಪರಿಷತ್ ಅಧ್ಯಕ್ಷರ ಕಚೇರಿಯ ಕಿಟಕಿಯ ಸರಳು ಮುರಿದಿರುವ ಕಳ್ಳರು
ರಾಮನಗರದ ಜಾನಪದ ಲೋಕದಲ್ಲಿರುವ ಜಾನಪದ ಪರಿಷತ್ ಅಧ್ಯಕ್ಷರ ಕಚೇರಿಯ ಕಿಟಕಿಯ ಸರಳು ಮುರಿದಿರುವ ಕಳ್ಳರು   

ರಾಮನಗರ: ನಗರದ ಹೊರವಲಯದಲ್ಲಿರುವ ಜಾನಪದ ಲೋಕಕ್ಕೆ ಮಧ್ಯರಾತ್ರಿ ನುಗ್ಗಿರುವ ಕಳ್ಳರು, ಸುಮಾರು ₹1.46 ಲಕ್ಷ ಮೌಲ್ಯದ ವಸ್ತುಗಳನ್ನು ಕದ್ದೊಯ್ದಿದ್ದು, ವಿವಿಧ ವಸ್ತುಗಳನ್ನು ಹಾನಿ ಮಾಡಿದ್ದಾರೆ. ಘಟನೆ ಕುರಿತು ರಾಮನಗರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಸೋಮವಾರ ಪ್ರಕರಣ ದಾಖಲಾಗಿದೆ.

ಕರ್ನಾಟಕ ಜಾನಪದ ಪರಿಷತ್ ಅಧ್ಯಕ್ಷ ಪ್ರೊ.ಹಿ.ಚಿ. ಬೋರಲಿಂಗಯ್ಯ ಮತ್ತು ಮ್ಯಾನೇಜಿಂಗ್ ಟ್ರಸ್ಟಿ ಆದಿತ್ಯ ನಂಜರಾಜ್ ಕಚೇರಿ, ಲೋಕದ ಆವರಣದಲ್ಲಿರುವ ಮೂರು ಅತಿಥಿ ಗೃಹಗಳಲ್ಲಿ ಕಳ್ಳತನ ನಡೆದಿದೆ. ರಾತ್ರಿ 12.30ಕ್ಕೆ ಬಂದಿರುವ ಕಳ್ಳರು, ಕಚೇರಿ ಎದುರು ಇರುವ ಎತ್ತಿನಗಾಡಿಯ ನೊಗ ಹಾಗೂ ಕಲ್ಲಿನಿಂದ ಕಿಟಕಿ ಮುರಿದು ಒಳ ನುಗ್ಗಿದ್ದಾರೆ.

ಕೊಠಡಿ, ಶೌಚಾಲಯ, ಸ್ನಾನಗೃಹದಲ್ಲಿ ಅಳವಡಿಸಿರುವ ಜಾಗ್ವಾರ್ ಕಂಪನಿಯ 2 ನಲ್ಲಿ ಟ್ಯಾಪ್‌ಗಳು, 3 ಮಿಕ್ಸರ್ ವಾಲ್‌ಗಳು, 15 ಹ್ಯಾಂಗ್ಲರ್ ಕ್ಲಾಕ್‌ಗಳು, 10 ಪಿಲ್ಲರ್ ಕ್ಲಾಕ್‌ಗಳು, 3 ಶವರ್‌ಗಳನ್ನು ಕದ್ದಿದ್ದಾರೆ. 4 ಪಿಂಗಾಣಿ ಹ್ಯಾಂಡ್‌ವಾಷ್ ಬೇಸಿನ್, 2 ಕಿಟಕಿ, 3 ಡೋರ್‌ ಲಾಕ್‌ ಹಾಗೂ ಕಚೇರಿಯಲ್ಲಿರುವ ಗಾಜುಗಳನ್ನು ಒಡೆದು ನಾಶಪಡಿಸಿದ್ದಾರೆ ಎಂದು ಜಾನಪದ ಲೋಕದ ಕಾರ್ಯನಿರ್ವಹಣಾ ಅಧಿಕಾರಿ ದೂರಿನಲ್ಲಿ ತಿಳಿಸಿದ್ದಾರೆ.

ADVERTISEMENT

ಕ್ಯಾಮೆರಾದಲ್ಲಿ ದಾಖಲು: ಜಾನಪದ ಲೋಕದ ಆವರಣದಲ್ಲಿ ಅಳವಡಿಸಿರುವ ಸಿಸಿಟಿವಿ ಕ್ಯಾಮೆರಾದಲ್ಲಿ ಕಳ್ಳನೊಬ್ಬ ಓಡಾಡುತ್ತಿರುವ ದೃಶ್ಯ ದಾಖಲಾಗಿದೆ. ಕೈಯಲ್ಲಿ ದೊಣ್ಣೆ ಹಿಡಿದುಕೊಂಡು ಓಡಾಡುತ್ತಿರುವ ಆತ, ಕಿಟಕಿ ಮತ್ತು ಬಾಗಿಲು ಮುರಿಯಲು ಕಲ್ಲು ಎತ್ತಿಕೊಂಡು ಹೋಗುತ್ತಿರುವ ದೃಶ್ಯ ವಿಡಿಯೊದಲ್ಲಿದೆ.

ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಲಾಗಿದೆ. ಜಾನಪದ ಲೋಕದ ಸಿಬ್ಬಂದಿಯಿಂದಲೂ ಮಾಹಿತಿ ಪಡೆಯಲಾಗಿದೆ. ಒಂದು ಅಥವಾ ಅದಕ್ಕಿಂತ ಹೆಚ್ಚು ಜನ ಕೃತ್ಯ ಎಸಗಿರುವ ಸಾಧ್ಯತೆ ಮೇಲ್ನೋಟಕ್ಕೆ ಕಂಡುಬಂದಿದೆ. ಸಿಸಿಟಿವಿ ಕ್ಯಾಮೆರಾ ದೃಶ್ಯಾವಳಿಗಳನ್ನು ಆಧರಿಸಿ ಕಳ್ಳರ ಪತ್ತೆಗೆ ಕ್ರಮ ವಹಿಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದರು.

ರಾಮನಗರದ ಜಾನಪದ ಲೋಕದಲ್ಲಿರುವ ಜಾನಪದ ಪರಿಷತ್ ಅಧ್ಯಕ್ಷರ ಕಚೇರಿಯ ಕಿಟಕಿಯ ಗಾಜು ಒಡೆದು ಸರಳು ಮುರಿದಿರುವ ಕಳ್ಳರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.