ADVERTISEMENT

ಬೈಕ್‌ನಲ್ಲೇ ಕಾಶ್ಮೀರದಿಂದ ಕನ್ಯಾಕುಮಾರಿವರೆಗೆ

​ಪ್ರಜಾವಾಣಿ ವಾರ್ತೆ
Published 24 ಏಪ್ರಿಲ್ 2024, 5:38 IST
Last Updated 24 ಏಪ್ರಿಲ್ 2024, 5:38 IST
ಕುದೂರು ಪಟ್ಟಣದ ಕೃಷ್ಣರವರು ಏಕಾಂಗಿಯಾಗಿ ಬುಲೆಟ್ ಬೈಕ್ ನಲ್ಲಿ ಕಾಶ್ಮೀರದಿಂದ ಕನ್ಯಾಕುಮಾರಿಯವರೆಗೆ ಪ್ರವಾಸ ಮಾಡಿದರು.
ಕುದೂರು ಪಟ್ಟಣದ ಕೃಷ್ಣರವರು ಏಕಾಂಗಿಯಾಗಿ ಬುಲೆಟ್ ಬೈಕ್ ನಲ್ಲಿ ಕಾಶ್ಮೀರದಿಂದ ಕನ್ಯಾಕುಮಾರಿಯವರೆಗೆ ಪ್ರವಾಸ ಮಾಡಿದರು.   

ಕುದೂರು: ಬುಲೆಟ್ ಬೈಕ್ ಹಿಂದೆ ಎರಡು ದೊಡ್ಡ ಲಗೇಜ್ ಬ್ಯಾಗ್... ಜೊತೆಯಲ್ಲಿ ಪುನೀತ್ ರಾಜಕುಮಾರ್ ಚಿತ್ರವಿರುವ ಒಂದು ನಾಡಧ್ವಜ.

ಇದು ಕುದೂರಿನ ಕೃಷ್ಣ ಅವರು ಕಾಶ್ಮೀರದಿಂದ ಕನ್ಯಾಕುಮಾರಿವರೆಗೆ ಏಕಾಂಗಿ ಬೈಕ್ ಸವಾರಿಗೆ ಹೊರಟ ಪರಿ. ಈ ಪಯಣವನ್ನು ಯಶಸ್ವಿಯಾಗಿ ಮುಗಿಸಿಬಂದಿರುವ ಕೃಷ್ಣ, 29 ದಿನಗಳಲ್ಲಿ ಸುಮಾರು 13 ಸಾವಿರ ಕಿ.ಮೀ. ಸಂಚರಿಸಿದ್ದಾರೆ. 

‘ದೇಶ ಸುತ್ತು ಕೋಶ ಓದು’ ಎಂಬ ನಾಣ್ನುಡಿಯಂತೆ ವೃತ್ತಿಯಲ್ಲಿ ಕ್ಷೌರಿಕರಾಗಿರುವ ಕೃಷ್ಣ ಅವರು ಪ್ರವೃತ್ತಿಯಲ್ಲಿ ಚಾರಣಿಗ ಹಾಗೂ, ಹವ್ಯಾಸಿ ಬೈಕ್ ಸವಾರ. 57 ವರ್ಷ ವಯಸ್ಸಿನ ಕೃಷ್ಣ ಅವರು ಕಾಶ್ಮೀರದಿಂದ ಕನ್ಯಾಕುಮಾರಿ ತನಕ ದೇಶದ ಎಲ್ಲಾ ರಾಜ್ಯಗಳ ಪ್ರಮುಖ ಸ್ಥಳಗಳನ್ನು ವೀಕ್ಷಿಸಿ ಕ್ಷೇಮವಾಗಿ ಕುದೂರಿಗೆ ಹಿಂತಿರುಗಿದ್ದಾರೆ.

ADVERTISEMENT

ಮಾರ್ಚ್ 20ರಂದು ಕುದೂರಿನಿಂದ ಹೊರಟ ಕೃಷ್ಣ ಅವರು ಏ. 19ರಂದು ಯಶಸ್ವಿ ಬೈಕ್ ಸವಾರಿ ಮುಗಿಸಿ ಕುದೂರಿಗೆ ವಾಪಸಾಗಿದ್ದಾರೆ. ಇವರ ಈ ಕಾರ್ಯಕ್ಕೆ ಕುಟುಂಬದವರ ಸಹಕಾರ ಜೊತೆಗೆ ಸ್ನೇಹಿತ ಎಲ್ಐಸಿ ರಮೇಶ್ ಅವರ ಮಾರ್ಗದರ್ಶನವಿತ್ತು. 

ಪ್ರವಾಸದ ವೇಳೆ ಬೇರೆ ರಾಜ್ಯಗಳ ಜನರು ಪ್ರೀತಿ, ವಿಶ್ವಾಸದಿಂದ ಮಾತನಾಡಿಸಿದ್ದರು. ಜೀವನದಲ್ಲೊಮ್ಮೆ ಕಾಶ್ಮೀರದಿಂದ ಕನ್ಯಾಕುಮಾರಿಯವರಿಗೂ ಬೈಕ್ ಪ್ರವಾಸ ಹೋಗಬೇಕು ಎಂಬ ಕನಸಿತ್ತು. ಅದು ಈಗ ಈಡೇರಿದೆ ಎನ್ನುವ ಸಂತೋಷವಿದೆ. ನಮ್ಮ ರಾಜ್ಯದಲ್ಲಿ ಸಿಗುವ ಆಹಾರವೇ ಶ್ರೇಷ್ಠ ಎಂಬ ಅನಿಸಿಕೆ ನನಗೆ ಆಗಿದೆ ಎನ್ನುತ್ತಾರೆ ಕೃಷ್ಣ.

‘ಪ್ರಯಾಣದ ವೇಳೆ ನನಗೆ ಭಾಷೆಯ ಸಮಸ್ಯೆ ಹೆಚ್ಚು ಕಾಡುತ್ತಿತ್ತು. ಅಲ್ಲಿನ ಆಹಾರ ನನಗೆ ಅಷ್ಟಾಗಿ ಹಿಡಿಸುತ್ತಿರಲಿಲ್ಲ. ಒಮ್ಮೊಮ್ಮೆ ಮ್ಯಾಗಿ, ತಂಪು ಪಾನೀಯಗಳನ್ನು ಮಾತ್ರ ಸೇವಿಸುತ್ತಿದ್ದೆ. ನಮ್ಮ ರಾಜ್ಯಕ್ಕಿಂತ ಹೆಚ್ಚು ಪಂಜಾಬ್, ರಾಜಸ್ಥಾನಗಳಲ್ಲಿ ಬಿಸಿಲಿನ ತಾಪವಿತ್ತು. ಟ್ರಾಫಿಕ್ ಸಮಸ್ಯೆ ಕೂಡ ಹೆಚ್ಚಿತ್ತು. ಪ್ರತಿ ದಿನ ಸರಾಸರಿ 800 ಕಿ.ಮೀ ನಷ್ಟು ದೂರ ಸಂಚರಿಸುತ್ತಿದ್ದೆ. ದೆಹಲಿಯಿಂದ ಹಿಂತಿರುಗುವಾಗ ಒಮ್ಮೆ ಕಾರೊಂದು ಬೈಕಿನ ಮಿರರ್ ಗೆ ತಾಕಿತ್ತು’ ಎಂದು ತಮ್ಮ ಪ್ರವಾಸದ ಅನುಭವ ಹಂಚಿಕೊಂಡರು.

‘ಚುನಾವಣೆಗೂ ಮುನ್ನ ಊರು ತಲುಪಬೇಕಾಗಿದ್ದರಿಂದ ಪ್ರಮುಖ ಸ್ಥಳಗಳಿಗೆ ಮಾತ್ರ ಭೇಟಿ ನೀಡಿ ಅಲ್ಲಿನ ಆಚಾರ, ವಿಚಾರ, ಕಲೆ, ಸಂಸ್ಕೃತಿ ಬಗ್ಗೆ ಮಾಹಿತಿ ಕಲೆ ಹಾಕಿದ್ದೇನೆ’ ಎನ್ನುತ್ತಾರೆ ಕೃಷ್ಣ.

‘ಸ್ನೇಹಿತ ಕೃಷ್ಣ ಏಕಾಂಗಿಯಾಗಿ ಬೈಕ್ ನಲ್ಲಿ ದೇಶದಾದ್ಯಂತ ಸಂಚರಿಸಿ ಕ್ಷೇಮವಾಗಿ ಕುದೂರಿಗೆ ವಾಪಸ್ ಆಗಿರುವುದು ಸಂತಸ ತಂದಿದೆ. 56 ವರ್ಷ ವಯಸ್ಸಾಗಿದ್ದರೂ, 26 ವರ್ಷ ವಯಸ್ಸಿನ ಯುವಕರ ರೀತಿ ಉತ್ಸಾಹ ಇರುವುದು ನಮಗೆ ಬೆರಗು ಮೂಡಿಸಿದೆ’ ಎನ್ನುತ್ತಾರೆ ಸ್ನೇಹಿತ ಪಾನಿಪುರಿ ಶಂಕರ್.

ಕುದೂರು ಪಟ್ಟಣದ ಕೃಷ್ಣರವರು ಏಕಾಂಗಿಯಾಗಿ ಬುಲೆಟ್ ಬೈಕ್ ನಲ್ಲಿ ಕಾಶ್ಮೀರದಿಂದ ಕನ್ಯಾಕುಮಾರಿಯವರೆಗೆ ಪ್ರವಾಸ ಮಾಡಿದರು.
ಕುದೂರು ಪಟ್ಟಣದ ಕೃಷ್ಣರವರು ಈಚೆಗೆ ಬೈಕ್ ನಲ್ಲಿ ದೇಶ ಸಂಚಾರ ನಡೆಸಿದರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.