ADVERTISEMENT

ರಾಮನಗರ: ಸಿವಿಲ್ ನ್ಯಾಯಾಧೀಶರಾಗಿ ಮಹದೇವ್ ಆಯ್ಕೆ

ನ್ಯಾಯಾಂಗ ಪರೀಕ್ಷೆಯಲ್ಲಿ ನಿವೃತ್ತ ಉಪನ್ಯಾಸಕನ ಪುತ್ರನಿಗೆ 23ನೇ ರ‍್ಯಾಂಕ್

​ಪ್ರಜಾವಾಣಿ ವಾರ್ತೆ
Published 20 ಫೆಬ್ರುವರಿ 2026, 4:42 IST
Last Updated 20 ಫೆಬ್ರುವರಿ 2026, 4:42 IST
ಕರ್ನಾಟಕ ನ್ಯಾಯಾಂಗ ಪರೀಕ್ಷೆಯಲ್ಲಿ 23ನೇ ರ‍್ಯಾಂಕ್‌ನೊಂದಿಗೆ ಸಿವಿಲ್ ನ್ಯಾಯಾಧೀಶರಾಗಿ ಆಯ್ಕೆಯಾದ ಪುತ್ರ ಮಹದೇವ್ ಕೆ. ಗೌಡ ಅವರಿಗೆ ತಂದೆ ಕೆ. ಕರೀಗೌಡ ಮತ್ತು ತಾಯಿ ಚಂದ್ರಮ್ಮ ದಂಪತಿ ಸಿಹಿ ತಿನ್ನಿಸಿದರು
ಕರ್ನಾಟಕ ನ್ಯಾಯಾಂಗ ಪರೀಕ್ಷೆಯಲ್ಲಿ 23ನೇ ರ‍್ಯಾಂಕ್‌ನೊಂದಿಗೆ ಸಿವಿಲ್ ನ್ಯಾಯಾಧೀಶರಾಗಿ ಆಯ್ಕೆಯಾದ ಪುತ್ರ ಮಹದೇವ್ ಕೆ. ಗೌಡ ಅವರಿಗೆ ತಂದೆ ಕೆ. ಕರೀಗೌಡ ಮತ್ತು ತಾಯಿ ಚಂದ್ರಮ್ಮ ದಂಪತಿ ಸಿಹಿ ತಿನ್ನಿಸಿದರು   

ರಾಮನಗರ: ಕರ್ನಾಟಕ ಹೈಕೋರ್ಟ್ ನಡೆಸಿದ 2025ನೇ ಸಾಲಿನ ಕರ್ನಾಟಕ ನ್ಯಾಯಾಂಗ ಪರೀಕ್ಷೆಯಲ್ಲಿ (ಕರ್ನಾಟಕ ಸಿವಿಲ್ ನ್ಯಾಯಾಧೀಶರ ನೇಮಕಾತಿ) ನಗರದ ಮಂಜುನಾಥ ನಗರದ ಮಹದೇವ್ ಕೆ. ಗೌಡ 23ನೇ ರ‍್ಯಾಂಕ್‌ ಪಡೆಯುವ ಮೂಲಕ ಸಿವಿಲ್ ನ್ಯಾಯಾಧೀಶರಾಗಿ ಆಯ್ಕೆಯಾಗಿದ್ದಾರೆ.

ಮೂಲತಃ ತಾಲ್ಲೂಕಿನ ಆನಮಾನಹಳ್ಳಿಯವರಾದ ನಿವೃತ್ತ ಇತಿಹಾಸ ಉಪನ್ಯಾಸಕ ಕೆ. ಕರೀಗೌಡ ಮತ್ತು ಚಂದ್ರಮ್ಮ ದಂಪತಿ ಪುತ್ರನಾದ ಮಹದೇವ್ ಅವರು, ತಮ್ಮ 28ನೇ ವಯಸ್ಸಿನಲ್ಲಿ ಸತತ ಮೂರನೇ ಪ್ರಯತ್ನದಲ್ಲಿ ನ್ಯಾಯಾಧೀಶರಾಗಿ ಆಯ್ಕೆಯಾಗುವ ಮೂಲಕ, ಸ್ಪಷ್ಟ ಗುರಿಯೊಂದಿಗೆ ಸತತ ಪ್ರಯತ್ನ ನಡೆಸಿದರೆ ಯಾವುದೂ ಅಸಾಧ್ಯವಲ್ಲ ಎಂದು ತೋರಿಸಿದ್ದಾರೆ.

ಮೈಸೂರಿನ ಜೆಎಸ್‌ಎಸ್‌ ಕಾನೂನು ಕಾಲೇಜಿನಲ್ಲಿ 2021ರಲ್ಲಿ ಕಾನೂನು ಪದವಿ ಪಡೆದಿರುವ ಮಹದೇವ್ ಅವರು, ಅದೇ ವರ್ಷ ಕರ್ನಾಟಕ ಹೈಕೋರ್ಟ್‌ನ ಹಿರಿಯ ನ್ಯಾಯಾಧೀಶ ಎಚ್.ಎಸ್. ಶಾಂತಿಭೂಷಣ್ ಅವರ ಬಳಿ ವಕೀಲಿಕೆ ಅಭ್ಯಾಸಕ್ಕೆ ಸೇರಿಕೊಂಡರು. ಇದೇ ಸಂದರ್ಭದಲ್ಲಿ ನ್ಯಾಯಾಂಗ ಪರೀಕ್ಷೆಗೂ ತಯಾರಿ ಆರಂಭಿಸಿದರು.

ADVERTISEMENT

‘2022ರಲ್ಲಿ ಮೊದಲ ಬಾರಿಗೆ ಪರೀಕ್ಷೆ ಎದುರಿಸಿದ ಪುತ್ರ ಪ್ರಿಲಿಮಿನರಿ ಮತ್ತು ಮುಖ್ಯ ಪರೀಕ್ಷೆಯಲ್ಲಿ ಪಾಸ್ ಆಗಿ ಸಂದರ್ಶನದವರೆಗೆ ಹೋಗಿದ್ದ. ಆದರೆ, ಆ ವರ್ಷ ಆಯ್ಕೆಯಾಗಿರಲಿಲ್ಲ. 2023ರಲ್ಲೂ ಎದುರಿಸಿದ್ದ. 2024ರಲ್ಲಿ ಪರೀಕ್ಷೆ ನಡೆದಿರಲಿಲ್ಲ. ಆದರೂ, ತಯಾರಿ ಮಾತ್ರ ನಿಲ್ಲಿಸಿರಲಿಲ್ಲ. 2025ರಲ್ಲಿ ನಡೆದ ಪರೀಕ್ಷೆಯಲ್ಲಿ ಅಂತಿಮವಾಗಿ ಆಯ್ಕೆಯಾಗಿದ್ದಾನೆ’ ಎಂದು ಮಹದೇವ್ ಅವರ ತಂದೆ ಕರೀಗೌಡ ಅವರು ‘ಪ್ರಜಾವಾಣಿ’ಯೊಂದಿಗೆ ಸಂತಸ ಹಂಚಿಕೊಂಡರು.

‘ಪಿಯುಸಿಯಲ್ಲಿ ವಿಜ್ಞಾನ ಓದಿದ್ದ ಪುತ್ರ, ನಂತರ ಬಿಎಸ್ಸಿ ಅರಣ್ಯಶಾಸ್ತ್ರ ಕೋರ್ಸ್‌ಗೆ ಸೇರಿಕೊಂಡಿದ್ದ. ಒಂದು ಸೆಮಿಸ್ಟರ್‌ವರೆಗೆ ಓದಿದ್ದ ಆತನ ಮನಸ್ಸು ಕಾನೂನು ಕೋರ್ಸ್ ಕಡೆಗೆ ಸೆಳೆಯಿತು. ಆತನ ಇಚ್ಛೆಯಂತೆ ಮೈಸೂರಿನ ಜೆಎಸ್‌ಎಸ್‌ ಕಾಲೇಜಿಗೆ ಸೇರಿಸಿದೆ. ಆಗಲೇ ತಾನು ಜಡ್ಜ್ ಆಗಬೇಕು ಎಂಬ ಕನಸು ಕಂಡು, ಗುರಿ ಸಾಧನೆಗೆ ಪರಿಶ್ರಮ ಹಾಕತೊಡಗಿದ. ಕಡೆಗೂ ಅಂದುಕೊಂಡಿದ್ದನ್ನು ಸಾಧಿಸಿದ್ದಾನೆ’ ಎಂದು ಹೆಮ್ಮೆ ವ್ಯಕ್ತಪಡಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.