ರಾಮನಗರ: ಮದ್ಯವ್ಯಸನಿಯೊಬ್ಬ ಹಣಕ್ಕಾಗಿ ತಾಯಿಯ ಕತ್ತು ಕೊಯ್ದು ಕೊಲೆ ಮಾಡಿರುವ ಘಟನೆ ತಾಲ್ಲೂಕಿನ ಜಾಲಮಂಗಲ ಗ್ರಾಮದಲ್ಲಿ ಗುರುವಾರ ನಡೆದಿದೆ. ಸರೋಜಮ್ಮ (60) ಕೊಲೆಯಾದವರು. ಆರೋಪಿ ಪುತ್ರ ಅನಿಲ್ ಕುಮಾರ್‌ನನ್ನು ರಾಮನಗರ ಗ್ರಾಮಾಂತರ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಸರೋಜಮ್ಮ ಅವರ ಇಬ್ಬರ ಪುತ್ರರ ಪೈಕಿ 43 ವರ್ಷ ಅನಿಲ್ ಮೊದಲನೆಯವನು. ಅವರ ಪತಿ ಹಾಗೂ ಮತ್ತೊಬ್ಬ ಅಂಗವಿಕಲ ಪುತ್ರ ಈಗಾಗಲೇ ಮೃತಪಟ್ಟಿದ್ದಾರೆ. ಸರೋಜಮ್ಮ ಅವರು ಕೂಲಿ ಮತ್ತು ಮನೆಗೆಲಸ ಮಾಡಿ ಮನೆ ನಿರ್ವಹಣೆ ಮಾಡುತ್ತಿದ್ದರು.
ಕೆಲಸಕ್ಕೆ ಹೋಗದೆ ಮನೆಯಲ್ಲೇ ಇದ್ದ ಅನಿಲ್ ಮದ್ಯವ್ಯಸನಿಯಾಗಿದ್ದ. ಹಣಕ್ಕಾಗಿ ತಾಯಿ ಜೊತೆ ನಿತ್ಯ ಜಗಳವಾಡುತ್ತಿದ್ದ. ಹಣ ಕೊಡದಿದ್ದಾಗ ಕಿತ್ತುಕೊಂಡು ಹೋಗುತ್ತಿದ್ದ. ಅದೇ ರೀತಿ ಗುರುವಾರ ಸಂಜೆ 5.30ರ ಸುಮಾರಿಗೆ ಅನಿಲ್ ತಾಯಿ ಬಳಿ ಹಣ ಕೇಳಿದ್ದ.
ಹಣ ಕೊಡಲು ನಿರಾಕರಿಸಿದ್ದ ತಾಯಿ, ದುಡಿದು ಬದುಕುವಂತೆ ಬುದ್ದಿ ಹೇಳಿದ್ದಾರೆ. ಇದರಿಂದ ಕೋಪಗೊಂಡ ಅನಿಲ್, ತಾಯಿ ಮೇಲೆ ಹಲ್ಲೆ ನಡೆಸಿ ತಳ್ಳಿದ್ದಾನೆ. ನಿಯಂತ್ರಣ ಕಳೆದುಕೊಂಡ ಸರೋಜಮ್ಮ ಕೆಳಕ್ಕೆ ಬಿದ್ದಿದ್ದಾರೆ. ಆಗ ಅನಿಲ್ ಅಡುಗೆ ಮನೆಯಲ್ಲಿದ್ದ ಚಾಕು ತಂದು ಕತ್ತು ಕೊಯ್ದು ಕೊಲೆ ಮಾಡಿದ್ದಾನೆ.
ಕೃತ್ಯದ ಬಳಿಕ ಅನಿಲ್, ರಕ್ತಸಿಕ್ತ ಚಾಕುವಿನೊಂದಿಗೆ ಮನೆಯ ಹೊರಗಡೆ ಬಂದು ಕುಳಿತಿದ್ದಾನೆ. ಆತನನ್ನು ಕಂಡ ಅಕ್ಕಪಕ್ಕದ ಮನೆಯವರು ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಹೋಗಿ ಆತನನ್ನು ವಶಕ್ಕೆ ಪಡೆಯಲಾಯಿತು. ಮದ್ಯ ಸೇವನೆಗೆ ಹಣ ಕೊಡದಿದ್ದಕ್ಕಾಗಿ ಕೊಲೆ ಮಾಡಿದ್ದಾಗಿ ಆರೋಪಿ ಹೇಳಿದ್ದಾನೆ ಎಂದು ಪೊಲೀಸರು ತಿಳಿಸಿದರು.
ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಆರ್. ಶ್ರೀನಿವಾಸ ಗೌಡ, ಡಿವೈಎಸ್ಪಿ ಶ್ರೀನಿವಾಸ್, ರಾಮನಗರ ಗ್ರಾಮಾಂತರ ಠಾಣೆ ಇನ್‌ಸ್ಪೆಕ್ಟರ್ ರಮೇಶ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.