ADVERTISEMENT

ರಾಮನಗರ | ಪಿಯು ಪರೀಕ್ಷೆ: ಮೊದಲ ದಿನ 174 ಮಂದಿ ಗೈರು

ಕನ್ನಡ ವಿಷಯಕ್ಕೆ 6,692 ಮಂದಿ ಹಾಜರು; ಹೂ ನೀಡಿ ವಿದ್ಯಾರ್ಥಿಗಳನ್ನು ಸ್ವಾಗತಿಸಿದ ಪ್ರಾಂಶುಪಾಲ

​ಪ್ರಜಾವಾಣಿ ವಾರ್ತೆ
Published 1 ಮಾರ್ಚ್ 2026, 4:31 IST
Last Updated 1 ಮಾರ್ಚ್ 2026, 4:31 IST
ಕನಕಪುರದ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪರೀಕ್ಷಾ ಕೇಂದ್ರಕ್ಕೆ ಪರೀಕ್ಷೆ ಬರೆಯಲು ಬಂದ ವಿದ್ಯಾರ್ಥಿಗಳಿಗೆ ಪ್ರಾಂಶುಪಾಲ ಡಾ. ದೊಡ್ಡಬೋರಯ್ಯ ಅವರು ಹೂ ನೀಡಿ ಸ್ವಾಗತಿಸಿದರು
ಕನಕಪುರದ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪರೀಕ್ಷಾ ಕೇಂದ್ರಕ್ಕೆ ಪರೀಕ್ಷೆ ಬರೆಯಲು ಬಂದ ವಿದ್ಯಾರ್ಥಿಗಳಿಗೆ ಪ್ರಾಂಶುಪಾಲ ಡಾ. ದೊಡ್ಡಬೋರಯ್ಯ ಅವರು ಹೂ ನೀಡಿ ಸ್ವಾಗತಿಸಿದರು   

ರಾಮನಗರ: ಶಾಲಾ ಶಿಕ್ಷಣ ಇಲಾಖೆ (ಪದವಿ ಪೂರ್ವ) ಶನಿವಾರದಿಂದ ದ್ವಿತೀಯ ಪಿಯು ವಾರ್ಷಿಕ ಪರೀಕ್ಷೆ ಆರಂಭಿಸಿದೆ. ಇಂದು ನಡೆದ ಪ್ರಥಮ ಭಾಷೆ ಕನ್ನಡದ ಪರೀಕ್ಷೆಗೆ 174 ವಿದ್ಯಾರ್ಥಿಗಳು ಗೈರಾಗಿದ್ದಾರೆ.

ಪರೀಕ್ಷೆಗೆ ಒಟ್ಟು 6,693 ಮಂದಿ ನೋಂದಣಿ ಮಾಡಿಕೊಂಡಿದ್ದರು. ಆ ಪೈಕಿ 6,692 ಮಂದಿ ಕನ್ನಡ ವಿಷಯ ಹಾಗೂ ಏಕೈಕ ವಿದ್ಯಾರ್ಥಿ ಅರೇಬಿಕ್ ವಿಷಯದವರಾಗಿದ್ದರು. ಕನ್ನಡದವರ ಪೈಕಿ 174 ಮಂದಿ ಪರೀಕ್ಷೆಗೆ ಗೈರು ಹಾಜರಾಗಿದ್ದರು.

ಕನಕಪುರದ ಸರ್ಕಾರಿ ಪ್ರಥಮ ಪದವಿ ಪೂರ್ವ ಕಾಲೇಜಿನ ಪರೀಕ್ಷಾ ಕೇಂದ್ರಕ್ಕೆ ಪರೀಕ್ಷೆ ಬರೆಯಲು ಬಂದ ವಿದ್ಯಾರ್ಥಿಗಳಿಗೆ ಪ್ರಾಂಶುಪಾಲ ಡಾ. ದೊಡ್ಡಬೋರಯ್ಯ ಅವರು ಗುಲಾಬಿ ನೀಡುವ ಮೂಲಕ, ಪರೀಕ್ಷೆಗೆ ಶುಭ ಕೋರಿದರು.

ADVERTISEMENT

‘ಮೊದಲ ದಿನದ ಪರೀಕ್ಷೆ ಜಿಲ್ಲೆಯಾದ್ಯಂತ ಸುಸೂತ್ರವಾಗಿ ನಡೆಯಿತು. ವಿದ್ಯಾರ್ಥಿಗಳು ಸಹ ಉತ್ಸಾಹದಿಂದ ಪರೀಕ್ಷೆ ಎದುರಿಸಿದರು. ಎಲ್ಲರೂ ತಮ್ಮ ಜವಾಬ್ದಾರಿಯನ್ನು ಚನ್ನಾಗಿ ನಿರ್ವಹಣೆ ಮಾಡಿದ್ದಾರೆ’ ಎಂದು ಇಲಾಖೆಯ ಉಪ ನಿರ್ದೇಶಕ ಎಂ. ಮರಿಸ್ವಾಮಿ ‘ಪ್ರಜಾವಾಣಿ’ಗೆ ತಿಳಿಸಿದರು.

ಪರೀಕ್ಷೆ ಹಿನ್ನೆಲೆಯಲ್ಲಿ ಜಿಲ್ಲೆಯ 14 ಕೇಂದ್ರಗಳಿಗೆ ವಿದ್ಯಾರ್ಥಿಗಳು ಪರೀಕ್ಷೆ ಆರಂಭಕ್ಕೆ ಒಂದು ತಾಸು ಮುಂಚೆಯೇ ಬಂದು ಅಭ್ಯಾಸ ಮಾಡುತ್ತಿದ್ದರು. ಜೊತೆಗೆ ಪೋಷಕರು ಸಹ ತಮ್ಮ ಮಕ್ಕಳನ್ನು ಕರೆತಂದು ಜೊತೆಗಿದ್ದರು. ಪರೀಕ್ಷೆ ಮುಗಿಯುತ್ತಿದ್ದಂತೆ ಹೊರಗಡೆಯೇ ಕಾಯುತ್ತಿದ್ದ ಪೋಷಕರೊಂದಿಗೆ ವಿದ್ಯಾರ್ಥಿಗಳು ಮನೆಯತ್ತ ಹೆಜ್ಜೆ ಹಾಕಿದರು.

ಪರೀಕ್ಷೆಯ ಎರಡನೇ ವಿಷಯವಾದ ಭೂಗೋಳ ಶಾಸ್ತ್ರ, ಸಂಖ್ಯಾಶಾಸ್ತ್ರ ಹಾಗೂ ಮನಃಶಾಸ್ತ್ರ ವಿಷಯದ ಪರೀಕ್ಷೆ
ಮಾರ್ಚ್‌ 2ರಂದು ನಡೆಯಲಿದೆ.

ರಾಮನಗರದ ಬಿಎಸ್‌ವಿಪಿ ಬಾಲಕಿಯರ ಪದವಿ ಪೂರ್ವ ಕಾಲೇಜಿನ ಪರೀಕ್ಷಾ ಕೇಂದ್ರದ ಮುಂದೆ ಜಮಾಯಿಸಿದ್ದ ದ್ವಿತೀಯ ಪಿಯು ವಿದ್ಯಾರ್ಥಿಗಳು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.