ADVERTISEMENT

ಮಾಗಡಿ: ‘ಹೇಮಾವತಿ’ ಯೋಜನೆಗಾಗಿ ರಸ್ತೆಗಿಳಿದ ಹೋರಾಟಗಾರರು

ಮರೂರು ಬಳಿ ಹೆದ್ದಾರಿ ತಡೆಯಲು ಹೋರಾಟಗಾರರ ಯತ್ನ: ಪೊಲೀಸರೊಂದಿಗೆ ಮಾತಿನ ಚಕಮಕಿ

​ಪ್ರಜಾವಾಣಿ ವಾರ್ತೆ
Published 25 ಮೇ 2024, 5:28 IST
Last Updated 25 ಮೇ 2024, 5:28 IST
<div class="paragraphs"><p>ಮಾಗಡಿ ತಾಲ್ಲೂಕಿಗೆ ಹೇಮಾವತಿ ನೀರನ್ನು ಹರಿಸುವ ಎಕ್ಸ್‌ಪ್ರೆಸ್ ಕೆನಾಲ್ ಯೋಜನೆ ಪರವಾಗಿ&nbsp;ಮರೂರು ಹ್ಯಾಂಡ್‌ಪೋಸ್ಟ್‌ನಲ್ಲಿ ಶುಕ್ರವಾರ ‘ನಮ್ಮ ನೀರು ನಮ್ಮ ಹಕ್ಕು’ ಘೋಷವಾಕ್ಯದಡಿ ಪ್ರತಿಭಟನೆ ನಡೆಸಿದ ಹೋರಾಟಗಾರರು ತಹಶೀಲ್ದಾರ್‌ ಶರತ್‌ ಕುಮಾರ್ ಅವರಿಗೆ ಮನವಿ ಸಲ್ಲಿಸಿದರು.&nbsp;&nbsp;</p></div>

ಮಾಗಡಿ ತಾಲ್ಲೂಕಿಗೆ ಹೇಮಾವತಿ ನೀರನ್ನು ಹರಿಸುವ ಎಕ್ಸ್‌ಪ್ರೆಸ್ ಕೆನಾಲ್ ಯೋಜನೆ ಪರವಾಗಿ ಮರೂರು ಹ್ಯಾಂಡ್‌ಪೋಸ್ಟ್‌ನಲ್ಲಿ ಶುಕ್ರವಾರ ‘ನಮ್ಮ ನೀರು ನಮ್ಮ ಹಕ್ಕು’ ಘೋಷವಾಕ್ಯದಡಿ ಪ್ರತಿಭಟನೆ ನಡೆಸಿದ ಹೋರಾಟಗಾರರು ತಹಶೀಲ್ದಾರ್‌ ಶರತ್‌ ಕುಮಾರ್ ಅವರಿಗೆ ಮನವಿ ಸಲ್ಲಿಸಿದರು.  

   

ಮಾಗಡಿ: ಹೇಮಾವತಿ ನೀರನ್ನು ಮಾಗಡಿಗೆ ಹರಿಸುವ ಎಕ್ಸ್‌ಪ್ರೆಸ್ ಕೆನಾಲ್ ಯೋಜನೆ ಪರವಾಗಿ, ತಾಲ್ಲೂಕಿನ ಮರೂರು ಹ್ಯಾಂಡ್‌ಪೋಸ್ಟ್‌ನಲ್ಲಿ ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಪಕ್ಷಗಳು, ರೈತ ಹಾಗೂ ಕನ್ನಡಪರ ಸಂಘಟನೆಗಳು ಶುಕ್ರವಾರ ಪ್ರತಿಭಟನೆ ನಡೆಸಿ ಹೋರಾಟದ ಕಹಳೆ ಮೊಳಗಿಸಿದವು. ತುಮಕೂರು ಜಿಲ್ಲೆಯಲ್ಲಿ ಯೋಜನೆ ವಿರೋಧಿಸಿ ನಡೆದ ಹೋರಾಟಕ್ಕೆ ಪ್ರತಿಯಾಗಿ, ‘ನಮ್ಮ ನೀರು ನಮ್ಮ ಹಕ್ಕು’ ಘೋಷವಾಕ್ಯದಡಿ ಹೋರಾಟಗಾರರು ಪಕ್ಷಾತೀತವಾಗಿ ಹಕ್ಕೊತ್ತಾಯ ಮಂಡಿಸಿದರು.

ಯೋಜನೆಗಾಗಿ ಈಗಾಗಲೇ ತಾಲ್ಲೂಕು ಕೇಂದ್ರದಲ್ಲಿ ನಡೆದಿರುವ ಹೋರಾಟದ ಮುಂದುವರಿದ ಭಾಗವಾಗಿ ಮರೂರು ಹ್ಯಾಂಡ್‌ಪೋಸ್ಟ್‌ನಲ್ಲಿ ನಡೆದ ಹೋರಾಟದಲ್ಲಿ ಕಾಂಗ್ರೆಸ್, ಬಿಜೆಪಿ ಹಾಗೂ ಜೆಡಿಎಸ್ ಪಕ್ಷಗಳ ಮುಖಂಡರು, ಕಾರ್ಯಕರ್ತರು, ರೈತ ಹಾಗೂ ಕನ್ನಡಪರ ಕಾರ್ಯಕರ್ತರು ಪಾಲ್ಗೊಂಡರು.
‌‌
‘ನಮ್ಮ ನೀರಿನ ಹಕ್ಕನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ’ ಎಂದು ಯೋಜನೆ ಪರವಾಗಿ ಘೋಷಣೆಗಳನ್ನು ಕೂಗಿದ ಹೋರಾಟಗಾರರು, ಹೆದ್ದಾರಿ ತಡೆಯಲು ಯತ್ನಿಸಿದರು. ಆಗ ಪೊಲೀಸರು ಅವರನ್ನು ತಡೆದರು. ಈ ವೇಳೆ, ಪೊಲೀಸರ ಜೊತೆ ಮಾತಿನ ಚಕಮಕಿ ನಡೆಯಿತು. ‘ಯಾವುದೇ ಕಾರಣಕ್ಕೂ ಹೆದ್ದಾರಿ ತಡೆಯಲು ಅವಕಾಶವಿಲ್ಲ. ಪಕ್ಕದಲ್ಲಿ ಪ್ರತಿಭಟನೆ ಮಾಡಿ, ಮನವಿ ಕೊಡಿ’ ಎಂದು ಪೊಲೀಸರು ಮನವೊಲಿಸಿದರು.

ADVERTISEMENT

ನಂತರ ಸ್ಥಳಕ್ಕೆ ಬಂದ ತಹಶೀಲ್ದಾರ್ ಶರತ್ ಕುಮಾರ್ ಅವರಿಗೆ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ಎಚ್‌.ಎಂ. ರೇವಣ್ಣ, ಕಾಂಗ್ರೆಸ್ ಮುಖಂಡ ಮಾಡಬಾಳ್ ಜಯರಾಂ, ಬಿಜೆಪಿ ಒಬಿಸಿ ರಾಜ್ಯ ಉಪಾಧ್ಯಕ್ಷ ಎ.ಎಚ್. ಬಸವರಾಜು, ಮುಖಂಡ ಪ್ರಸಾದ್ ಗೌಡ, ರೈತ ಸಂಘದ ತಾಲ್ಲೂಕು ಅಧ್ಯಕ್ಷ ಹೊಸಪಾಳ್ಯ ಲೋಕೇಶ್ ಸೇರಿದಂತೆ ವಿವಿಧ ಮುಖಂಡರ ನೇತೃತ್ವದಲ್ಲಿ ಮನವಿ ಸಲ್ಲಿಸಲಾಯಿತು. ನಂತರ ಹೋರಾಟಗಾರರು ಪ್ರತಿಭಟನೆ ಕೈಬಿಟ್ಟರು.

ಬಿಜೆಪಿ ಒಬಿಸಿ ರಾಜ್ಯ ಉಪಾಧ್ಯಕ್ಷ ಎ.ಎಚ್. ಬಸವರಾಜು ಮಾತನಾಡಿ, ‘ನಮ್ಮ ನೀರಿನ ಹಕ್ಕಿಗಾಗಿ ನಡೆಯುತ್ತಿರುವ ಹೋರಾಟಕ್ಕೆ ಶಾಸಕ ಬಾಲಕೃಷ್ಣ, ಜೆಡಿಎಸ್ ಜಿಲ್ಲಾ ಘಟಕದ ಅಧ್ಯಕ್ಷರು ಆದ ಮಾಜಿ ಶಾಸಕ ಎ. ಮಂಜುನಾಥ್ ಅವರು ಯಾವುದೇ ಕಾರಣಕ್ಕೂ ಯೋಜನೆಯ ಕಾಮಗಾರಿ ನಿಲ್ಲದಂತೆ ನೋಡಿಕೊಳ್ಳಬೇಕು’ ಎಂದು ಒತ್ತಾಯಿಸಿದರು.

‘ಗೃಹ ಸಚಿವ ಜಿ. ಪರಮೇಶ್ವರ್ ನಮ್ಮ ತಾಲ್ಲೂಕಿನವರು. ಗ್ರಾಮಾಂತರ ಶಾಸಕ ಸುರೇಶ್ ಕುಮಾರ್ ಇಲ್ಲಿನ ಅಳಿಯ. ಹೀಗಿದ್ದರೂ, ಸಿದ್ದಗಂಗಾ ಶ್ರೀಗಳು ಹುಟ್ಟಿದ ತಾಲ್ಲೂಕಿನ ಹೇಮಾವತಿ ಹರಿಯಲು ವಿರೋಧ ವ್ಯಕ್ತಪಡಿಸುತ್ತಿರುವುದು ಸರಿಯಲ್ಲ. ಇದು ಹೀಗೆಯೇ ಮುಂದುವರಿದರೆ, ಉಗ್ರ ಹೋರಾಟ ನಡೆಸಲಾಗುವುದು’ ಎಂದು ಎಚ್ಚರಿಕೆ ನೀಡಿದರು.

ಮುಖಂಡ ಪ್ರಸಾದ್ ಗೌಡ, ‘ನಮ್ಮ ಹಕ್ಕಿನ ಕುರಿತು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು, ಕೂಡಲೇ ತುಮಕೂರಿನ ಸಚಿವರು ಮತ್ತು ಮಾಜಿ ಸಚಿವರ ಜೊತೆ ಚರ್ಚೆ ನಡೆಸಿ ಸಮಸ್ಯೆ ಬಗೆಹರಿಸಬೇಕು. ನಮ್ಮ ಪಾಲಿನ ಹೇಮಾವತಿ ನೀರು ತಾಲ್ಲೂಕಿಗೆ ಹರಿಯಲು ಯಾವುದೇ ಅಡೆತಡೆ ಎದುರಾಗದಂತೆ ನೋಡಿಕೊಳ್ಳಬೇಕು’ ಎಂದು ಒತ್ತಾಯಿಸಿದರು.

ತಾಲೂಕು ಪಂಚಾಯಿತಿ ಮಾಜಿ ಸದಸ್ಯ ವೆಂಕಟೇಶ್, ಮೂರೂ ಪಕ್ಷಗಳ ಮುಖಂಡರು, ಕಾರ್ಯಕರ್ತರು, ರೈತ ಮತ್ತು ಕನ್ನಡಪರ ಸಂಘಟನೆಗಳ ಕಾರ್ಯಕರ್ತರು, ಸಾರ್ವಜನಿಕರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

ಮಾಗಡಿ ತಾಲ್ಲೂಕಿಗೆ ಹೇಮಾವತಿ ನೀರು ಹರಿಸುವ ಎಕ್ಸ್‌ಪ್ರೆಸ್ ಕೆನಾಲ್ ಯೋಜನೆ ಪರವಾಗಿ ಮರೂರು ಹ್ಯಾಂಡ್‌ಪೋಸ್ಟ್‌ನಲ್ಲಿ ಹೋರಾಟಗಾರರು ಶುಕ್ರವಾರ ರಸ್ತೆ ತಡೆಗೆ ಯತ್ನಿಸಿದಾಗ ಪೊಲೀಸರು ತಡೆದರು

‘ಹೇಮಾವತಿ ಮಾಗಡಿಗೆ ಹರಿಯುವುದರಿಂದ ತುಮಕೂರಿನವರಿಗೇನು ನಷ್ಟ? ಅವರು ಮಾತ್ರ ಬದುಕಬೇಕಾ? ನಮಗೂ ಹೇಮಾವತಿ ನೀರಿನ ಮೇಲೆ ಹಕ್ಕಿದ್ದು ಅದನ್ನು ನಾವು ಕೇಳುತ್ತಿದ್ದೇವೆ. ನಮ್ಮ ನೀರಿನ ಹಕ್ಕನ್ನು ಕಸಿದುಕೊಳ್ಳಲು ಯಾರಿಂದಲೂ ಸಾಧ್ಯವಿಲ್ಲ’ ಎಂದ

– ಎ.ಎಚ್. ಬಸವರಾಜು ಉಪಾಧ್ಯಕ್ಷ ಬಿಜೆಪಿ ಒಬಿಸಿ ಮೋರ್ಚಾ

‘ಯಾರಿಂದಲೂ ತಡೆಯಲು ಸಾಧ್ಯವಿಲ್ಲ’

‘ಮಾಗಡಿಗೆ ಹೇಮಾವತಿ ನೀರು ಬರುವುದನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ. ಇಲ್ಲಿಗೆ ನೀರು ತರುವುದಕ್ಕಾಗಿಯೇ ಎಕ್ಸ್‌ಪ್ರೆಸ್ ಕೆನಾಲ್ ಯೋಜನೆಗೆ ಸರ್ಕಾರ ಚಾಲನೆ ನೀಡಿದೆ. ಯೋಜನೆಗಾಗಿ ನಾನು ಸಾಕಷ್ಟು ಹೋರಾಟ ಮಾಡಿದ್ದೇನೆ. ಹಿಂದೆ ಎಸ್‌.ಎಂ. ಕೃಷ್ಣ ಅವರು ನೀರಾವರಿ ಸಚಿವರಾಗಿದ್ದಾಗಿನಿಂದಲೂ ನೀರು ತರುವ ಬಗ್ಗೆ ಸಾಕಷ್ಟು ಪ್ರಯತ್ನಗಳು ನಡೆದಿದ್ದವು. ಅದೆಲ್ಲದರ ಫಲವಾಗಿ ಹಿಂದೆ ಸಿದ್ದರಾಮಯ್ಯ ಅವರೇ ಮುಖ್ಯಮಂತ್ರಿಯಾಗಿದ್ದಾಗ ಯೋಜನೆಗೆ ಚಾಲನೆ ಕೊಟ್ಟಿದ್ದರು. ಇದೀಗ ಅವರೇ ಸಿ.ಎಂ ಆಗಿದ್ದು ಜಲಸಂಪನ್ಮೂಲ ಸಚಿವರು ಆಗಿರುವ ಡಿಸಿಎಂ ಡಿ.ಕೆ. ಶಿವಕುಮಾರ್ ನೇತೃತ್ವದಲ್ಲಿ ₹900 ಕೋಟಿ ವೆಚ್ಚದಲ್ಲಿ ಕಾಮಗಾರಿಗೆ ಚಾಲನೆ ಸಿಕ್ಕಿದೆ. ಬಹುವರ್ಷಗಳ ನಂತರ ನಮ್ಮೆಲ್ಲರ ಕನಸು ಸಾಕಾರವಾಗುತ್ತಿದ್ದು ಇದಕ್ಕೆ ವಿರೋಧ ಸರಿಯಲ್ಲ’ ಎಂದು ಗ್ಯಾರಂಟಿ ಯೋಜನೆಗಳ ಅನುಷ್ಠಾನದ ರಾಜ್ಯ ಸಮಿತಿ ಅಧ್ಯಕ್ಷ ಎಚ್‌.ಎಂ. ರೇವಣ್ಣ ಹೇಳಿದರು. ‘ನಮ್ಮ ಹೋರಾಟ ಯೋಜನೆ ಅನುಷ್ಠಾನದ ಪರವಾಗಿ ಹಾಗೂ ಮಾಗಡಿಗೆ ನೀರು ಹರಿಯುವುದನ್ನು ವಿರೋಧಿಸುತ್ತಿರುವ ತುಮಕೂರಿನವರ ವಿರುದ್ಧವೇ ಹೊರತು ಸರ್ಕಾರದ ವಿರುದ್ಧವಲ್ಲ. ಯೋಜನೆ ಕುರಿತು ಸದ್ಯದಲ್ಲೇ ಮುಖ್ಯಮಂತ್ರಿ ಜೊತೆ ಚರ್ಚಿಸುವೆ. ತಾಲ್ಲೂಕಿನ ಹೋರಾಟಗಾರರನ್ನು ಡಿಸಿಎಂ ಅವರೊಂದಿಗೆ ಭೇಟಿ ಮಾಡಿಸಿ ಯೋಜನೆಗೆ ಯಾವುದೇ ತಡೆಯಾಗದಂತೆ ನೋಡಿಕೊಳ್ಳುವಂತೆ ಮನವಿ ಮಾಡಲಾಗುವುದು. ಯೋಜನೆಯಿಂದ ತಾಲ್ಲೂಕಿನ 63 ಕೆರೆಗಳು ತುಂಬಲಿವೆ. ನಮ್ಮ ಹಕ್ಕಿಗಾಗಿ ನಡೆಯುತ್ತಿರುವ ಹೋರಾಟದಲ್ಲಿ ತಾಲ್ಲೂಕಿನ ಪ್ರತಿಯೊಬ್ಬರು ಪಾಲ್ಗೊಳ್ಳಬೇಕು’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.