ADVERTISEMENT

ರಾಮನಗರ | 'ಮರುನಾಮಕರಣ ವಿರುದ್ಧ ಸಂಘಟಿತ ಹೋರಾಟ'

ರಾಜ್ಯಪಾಲರ ಭೇಟಿಗೆ ನಿರ್ಧಾರ: ಸಂಘಟನೆಗಳ ಮುಖಂಡರಿಂದ ಸುದ್ದಿಗೋಷ್ಠಿ

​ಪ್ರಜಾವಾಣಿ ವಾರ್ತೆ
Published 30 ಜುಲೈ 2024, 6:16 IST
Last Updated 30 ಜುಲೈ 2024, 6:16 IST
ಜಿಲ್ಲೆಗೆ ಮರುನಾಮಕರಣ ವಿರೋಧಿಸಿ, ರಾಮನಗರದ ಪ್ರವಾಸಿ ಮಂದಿರದಲ್ಲಿ ಕನ್ನಡಪರ ಹಾಗೂ ರೈತಪರ ಸಂಘಟನೆಗಳ ಮುಖಂಡರು ಸೋಮವಾರ ಸುದ್ದಿಗೋಷ್ಠಿ ನಡೆಸಿದರು. ಜಯ ಕರ್ನಾಟಕ ಜನಪರ ವೇದಿಕೆ ರಾಜ್ಯ ಸಲಹೆಗಾರ ಕುಮಾರಸ್ವಾಮಿ, ರೈತ ಸಂಘದ  ಮಲ್ಲಯ್ಯ, ಮುನಿರಾಜು, ಜೆಡಿಎಸ್ ವಕ್ತಾರ ನರಸಿಂಹಮೂರ್ತಿ ಹಾಗೂ ಇತರರು ಇದ್ದಾರೆ
ಜಿಲ್ಲೆಗೆ ಮರುನಾಮಕರಣ ವಿರೋಧಿಸಿ, ರಾಮನಗರದ ಪ್ರವಾಸಿ ಮಂದಿರದಲ್ಲಿ ಕನ್ನಡಪರ ಹಾಗೂ ರೈತಪರ ಸಂಘಟನೆಗಳ ಮುಖಂಡರು ಸೋಮವಾರ ಸುದ್ದಿಗೋಷ್ಠಿ ನಡೆಸಿದರು. ಜಯ ಕರ್ನಾಟಕ ಜನಪರ ವೇದಿಕೆ ರಾಜ್ಯ ಸಲಹೆಗಾರ ಕುಮಾರಸ್ವಾಮಿ, ರೈತ ಸಂಘದ  ಮಲ್ಲಯ್ಯ, ಮುನಿರಾಜು, ಜೆಡಿಎಸ್ ವಕ್ತಾರ ನರಸಿಂಹಮೂರ್ತಿ ಹಾಗೂ ಇತರರು ಇದ್ದಾರೆ   

ರಾಮನಗರ: ರಾಮನಗರ ಜಿಲ್ಲೆಯನ್ನು ಬೆಂಗಳೂರು ದಕ್ಷಿಣ ಎಂದು ಬದಲಾಯಿಸುವ ರಾಜ್ಯ ಸರ್ಕಾರದ ನಿರ್ಧಾರವನ್ನು ವಿರೋಧಿಸಿರುವ ಜಿಲ್ಲೆಯ ಕನ್ನಡಪರ ಹಾಗೂ ರೈತಪರ ಸಂಘಟನೆಗಳು, ಮರುನಾಮಕರಣಕ್ಕೆ ರಾಜ್ಯಪಾಲರು ಅಂಕಿತ ಹಾಕಬಾರದು ಎಂದು ಒತ್ತಾಯಿವೆ. ಜೊತೆಗೆ, ಈ ನಿರ್ಧಾರದ ವಿರುದ್ಧ ಜಿಲ್ಲೆಯಲ್ಲಿ ಸಂಘಟಿತ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿವೆ.

ನಗರದ ಪ್ರವಾಸಿ ಮಂದಿರದಲ್ಲಿ ಸೋಮವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಜಯ ಕರ್ನಾಟಕ ಜನಪರ ವೇದಿಕೆ ರಾಜ್ಯ ಸಲಹೆಗಾರ ಕುಮಾರಸ್ವಾಮಿ, ‘ರಾಜ್ಯಪಾಲರು ಮರುನಾಮಕರಣವನ್ನು ತಿರಸ್ಕರಿಸಬೇಕು ಎಂದು ಒತ್ತಾಯಿಸಿ, ಜಿಲ್ಲೆಯ ವಿವಿಧ ಸಂಘಟನೆಗಳ ನಿಯೋಗವು ರಾಜ್ಯಪಾಲರನ್ನು ಭೇಟಿ ಮಾಡಿ ಮನವಿ ಮಾಡಲಿವೆ. ಜಿಲ್ಲೆಯಾದ್ಯಂತ ಸಂಘಟಿತವಾಗಿ ಹೋರಾಟ ನಡೆಸಲಿದ್ದೇವೆ’ ಎಂದರು.

‘ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಸೇರಿದಂತೆ ಜಿಲ್ಲೆಯ ಕಾಂಗ್ರೆಸ್ ನಾಯಕರಿಗೆ ರಾಮನ ಹೆಸರೇ ತೊಂದರೆಯಾಯಿತೇ? ಇವರ ರಾಜಕಾರಣಕ್ಕೆ ಜಿಲ್ಲೆ ಹೆಸರು ಯಾಕೆ ಬದಲಿಸಬೇಕು? ಅದೂ ಚನ್ನಪಟ್ಟಣ ಉಪ ಚುನಾವಣೆ ಸಂದರ್ಭದಲ್ಲಿ ಈ ನಿರ್ಧಾರ ಕೈಗೊಂಡಿರುವುದರ ಮರ್ಮವೇನು? ಮರುನಾಮಕರಣದಿಂದ ಡಿಕೆಶಿ ಮತ್ತು ಅವರ ಬೆಂಬಲಿಗರಿಗೆ ಬಿಟ್ಟರೆ ರೈತರಿಗೆ ಯಾವುದೇ ಅನುಕೂಲವಾಗುವುದಿಲ್ಲ’ ಎಂದು ಹೇಳಿದರು.

ADVERTISEMENT

‘ರಾಜ್ಯದಲ್ಲಿ ರೈತರು ಸೇರಿದಂತೆ ಜನರು ಅನುಭವಿಸುತ್ತಿರುವ ಹಲವು ಸಮಸ್ಯೆಗಳಿವೆ. ಅವುಗಳಿಗೆ ಸ್ಪಂದಿಸಿ ಪರಿಹರಿಸುವುದನ್ನು ಬಿಟ್ಟು, ಮರುನಾಮಕರಣ ತೀರ್ಮಾನ ಕೈಗೊಂಡಿರುವುದರ ಹಿಂದೆ, ಕೆಲವೇ ರಾಜಕಾರಣಿಗಳ ಸ್ವಹಿತಾಸಕ್ತಿ ಅಡಗಿದೆ. ಇದರಿಂದ ಜಿಲ್ಲೆಯ ಜನರಿಗೆ ಅನಗತ್ಯ ತೊಂದರೆಯೇ ಹೊರತು, ಯಾವುದೇ ಪ್ರಯೋಜನವಿಲ್ಲ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

ರೈತ ಸಂಘದ ಮುಖಂಡ ಮಲ್ಲಯ್ಯ ಮಾತನಾಡಿ, ‘ರೈತರ ಭೂಮಿಯ ಬೆಲೆ ಹೆಚ್ಚು ಮಾಡಲು ಜಿಲ್ಲೆ ಹೆಸರು ಬದಲಾವಣೆ ಮಾಡಿದ್ದೇವೆ ಎಂದು ಕಾಂಗ್ರೆಸ್ ನಾಯಕರು ಸಮಜಾಯಿಷಿ ನೀಡುತ್ತಿದ್ದಾರೆ. ಹಾಗಂತ, ರೈತರೇನಾದರೂ ಕೇಳಿದ್ದರೆ? ಅವರಿಗೆ ಬೇಕಾಗಿರುವುದು ಬೆಳೆಗೆ ತಕ್ಕ ಬೆಲೆಯೇ ಹೊರತು ಭೂಮಿ ಮೌಲ್ಯ ಹೆಚ್ಚಳವಲ್ಲ. ಹೆಸರು ಬದಲಾವಣೆಯಿಂದ ಅಭಿವೃದ್ಧಿಯಾಗುವುದಾದರೆ ರಾಜ್ಯದ ಎಲ್ಲಾ ಜಿಲ್ಲೆಗಳ ಹೆಸರನ್ನು ಸಹ ಬೆಂಗಳೂರು ಎಂದು ಇಡಬಹುದಲ್ಲವೇ? ಎಂದರು.

ಜೆಡಿಎಸ್ ಮುಖಂಡ ನರಸಿಂಹಮೂರ್ತಿ, ‘ಕಾಂಗ್ರೆಸ್‌ನವರು ರಾಜಕೀಯ ಕಾರಣಕ್ಕೆ ಹಾಗೂ ತಮ್ಮ ರಿಯಲ್ ಎಸ್ಟೇಟ್ ಮಾಫಿಯಾವನ್ನು ವಿಸ್ತರಿಸಿಕೊಳ್ಳುವುದಕ್ಕಾಗಿ ಜಿಲ್ಲೆ ಹೆಸರು ಬದಲಾವಣೆ ನಿರ್ಧಾರಕ್ಕೆ ಕೈ ಹಾಕಿದ್ದಾರೆ. ಈ ಕುರಿತು, ಯಾವುದೇ ಜನಾಭಿಪ್ರಾಯ ಸಂಗ್ರಹಿಸದೆ ತಮಗೆ ಬೇಕಾದವರ ಕೂಟ ಕಟ್ಟಿಕೊಂಡು ಮುಖ್ಯಮಂತ್ರಿಗೆ ಮನವಿ ಸಲ್ಲಿಸಿ, ಸಚಿವ ಸಂಪುಟದಲ್ಲಿ ಒಪ್ಪಿಗೆ ಪಡೆದಿದ್ದಾರೆ’ ಎಂದು ಹೇಳಿದರು.

ರೈತ ಸಂಘದ ಮುಖಂಡ ಮುನಿರಾಜು, ‘ಸರ್ಕಾರದ ನಿರ್ಧಾರದಿಂದಾಗಿ ಸ್ಥಳೀಯ ರೈತರು ತಮ್ಮ ಜಮೀನನ್ನು ರಿಯಲ್ ಎಸ್ಟೇಟ್‌ ಮಾಫಿಯಾದವರಿಗೆ ಮಾರಾಟ ಮಾಡಿ, ಮುಂದೊಂದು ದಿನ ಅವರ ಜಮೀನಿನಲ್ಲೇ ಕೂಲಿ ಮಾಡಬೇಕಾದ ಸ್ಥಿತಿ ಬರಲಿದೆ. ಉದ್ಯೋಗಕ್ಕಾಗಿ ಮನೆ ಬಿಟ್ಟು ಗುಳೆ ಹೋಗಬೇಕಾಗುತ್ತದೆ. ಸರ್ಕಾರದ ಈ ನಿರ್ಧಾರ ಜನ ವಿರೋಧಿಯಾಗಿದ್ದು, ಕೂಡಲೇ ಹಿಂಪಡೆಯಬೇಕು’ ಎಂದು ಆಗ್ರಹಿಸಿದರು.

ವಿವಿಧ ಸಂಘಟನೆಗಳ ಮುಖಂಡರಾದ ನಿಲೇಶ್, ಶಿವುಗೌಡ, ಐಜೂರು ಜಗದೀಶ್, ರಾಜು, ಭಾಸ್ಕರ್, ನಾರಾಯಣ್, ನಾಗರಾಜು, ಪ್ರಶಾಂತ್, ರಾಮೇಗೌಡ ಹಾಗೂ ಇತರರು ಇದ್ದರು.

ಕೆಲವರ ಸ್ವಾರ್ಥ ರಾಜಕಾರಣಕ್ಕಾಗಿ ಹೆಸರು ಬದಲಾವಣೆ ಭೂಮಿ ಮೌಲ್ಯ ಹೆಚ್ಚಿಸುವ ಬದಲು ಬೆಳೆ ಬೆಲೆ ಹೆಚ್ಚಿಸಿ ನಿರ್ಧಾರದಿಂದ ರಿಯಲ್ ಎಸ್ಟೇಟ್ ಮಾಫಿಯಾಗೆ ಅನುಕೂಲ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.