ADVERTISEMENT

ಹದಗೆಟ್ಟ ರಸ್ತೆ: ಸಂಚಾರಕ್ಕೆ ಸಂಚಕಾರ

ಮಳೆಯಿಂದಾಗಿ ಹೆಚ್ಚಾಯ್ತು ಗುಂಡಿಗಳು: ಸವಾರರ ಗೋಳು

​ಪ್ರಜಾವಾಣಿ ವಾರ್ತೆ
Published 31 ಜುಲೈ 2022, 5:34 IST
Last Updated 31 ಜುಲೈ 2022, 5:34 IST
ವಿವೇಕಾನಂದ ನಗರ ರಸ್ತೆಯಲ್ಲಿ ಕಂಡ ಗುಂಡಿ
ವಿವೇಕಾನಂದ ನಗರ ರಸ್ತೆಯಲ್ಲಿ ಕಂಡ ಗುಂಡಿ   

ರಾಮನಗರ: ನಿರಂತರ ಮಳೆಯಿಂದಾಗಿ ನಗರದೊಳಗಿನ ರಸ್ತೆಗಳು ಕೆಸರುಮಯವಾಗಿದ್ದು, ಜನರು ಓಡಾಟಕ್ಕೆ ಸರ್ಕಸ್‌ ಮಾಡುವಂತೆ ಆಗಿದೆ.

ರಾಮನಗರದ ಸಾಕಷ್ಟು ರಸ್ತೆಗಳು ಡಾಂಬರೀಕರಣಗೊಂಡು ವರ್ಷಗಳೇ ಕಳೆದಿದೆ. ಹೀಗಾಗಿ, ಇವುಗಳಲ್ಲಿ ಗುಂಡಿಗಳು ಸಾಮಾನ್ಯವಾಗಿವೆ. ಈಚೆಗೆ ದುರಸ್ತಿಗೊಂಡ ರಸ್ತೆಗಳಲ್ಲೂ ಕೆಸರು ತುಂಬಿಕೊಂಡಿದೆ. ಸಾಕಷ್ಟು ಕಡೆ ರಸ್ತೆಗಳು ಹಾಳಾದ ಕಾರಣ ದ್ವಿಚಕ್ರವಾಹನ ಸವಾರರು ಬೈಕ್‌ ಸ್ಕಿಡ್ ಆಗಿ ಬಿದ್ದು ಗಾಯಗೊಳ್ಳುವ ಘಟನೆಗಳು ಸಾಮಾನ್ಯವಾಗಿದೆ. ದೊಡ್ಡ ವಾಹನ ಬಂದ ಸಂದರ್ಭದಲ್ಲಿ ಜಾಗ ಬಿಟ್ಟುಕೊಡಲೆಂದು ಪಕ್ಕಕ್ಕೆ ಸರಿದರೂ ಬೀಳುವುದು ಗ್ಯಾರಂಟಿ
ಆಗಿದೆ.

ಕೆಂಪೇಗೌಡ ವೃತ್ತದಿಂದ ರಾಯರದೊಡ್ಡಿ ವೃತ್ತ ಮಾರ್ಗವಾಗಿ ಕೆಂಪೇಗೌಡನದೊಡ್ಡಿವರೆಗೆ ಸಾಗುವ ರಸ್ತೆಯನ್ನು ಕೆಲವು ವರ್ಷಗಳ ಹಿಂದಷ್ಟೇ ಡಾಂಬರೀಕರಣ ಮಾಡಲಾಗಿದೆ. ಆದರೆ, ಇಲ್ಲಿಯೂ ಅಲ್ಲಲ್ಲಿ ಈಗಾಗಲೇ ಹೊಂಡಗಳು ನಿರ್ಮಾಣ ಆಗಿವೆ. ಇಲ್ಲಿನ ಅವ್ಯವಸ್ಥೆ ಖಂಡಿಸಿ ಈಚೆಗೆ ನಾಗರಿಕರು ರಸ್ತೆ ತಡೆ ನಡೆಸಿದ್ದರು. ಆ ನಂತರ ರಸ್ತೆಗೆ ಜಲ್ಲಿ ಸುರಿಯಲಾಗಿತ್ತು. ಇದೀಗ ಮತ್ತೆ ಗುಂಡಿಗಳು ಬೀಳತೊಡಗಿವೆ.

ADVERTISEMENT

ರೈಲು ನಿಲ್ದಾಣದ ಸಮೀಪ ಕೆಳಸೇತುವೆಯನ್ನು ದುರಸ್ತಿ ಮಾಡಿದ್ದರೂ ಮಳೆ ಸಮಯದಲ್ಲಿ ಇನ್ನೂ ನೀರು ನಿಂತು ವಾಹನ ಸವಾರರಿಗೆ ಕಿರಿಕಿರಿ ಆಗುತ್ತಿದೆ. ಇದರಿಂದ ಮೇಲೆ ಹೊರಟರೆ ಹುಣಸನಹಳ್ಳಿಗೆ ಸಂಪರ್ಕ ಕಲ್ಪಿಸುವ ರಸ್ತೆ ಸಹ ಅಷ್ಟೇ ಹದಗೆಟ್ಟಿದೆ. ಅನ್ನೂ ಅನೇಕ ಮುಖ್ಯರಸ್ತೆಗಳೇ ಹಾಳಾಗಿವೆ.

ಮಳೆಯ ಸಂದರ್ಭದಲ್ಲಿ ನೀರಿನ ಹರಿವಿಗೆ ಸೂಕ್ತ ವ್ಯವಸ್ಥೆ ಮಾಡದಿರುವ ಕಾರಣಕ್ಕೆ ಅನೇಕ ರಸ್ತೆಗಳ ಮೇಲೆ ನೀರು ಸಂಗ್ರಹ ಆಗುತ್ತಿದ್ದು, ಇದರಿಂದ ರಸ್ತೆ ಹಾಳಾಗಿ ಜನರಿಗೆ ಕಿರಿಕಿರಿಯೂ ಹೆಚ್ಚುತ್ತಿದೆ.

ಹೊಸ ಬಡಾವಣೆಗಳ ಸ್ಥಿತಿ ಅಯೋಮಯ: ಟಿಪ್ಪುನಗರ, ಮೆಹಬೂಬ್‌ನಗರ, ಯಾರಬ್‌ ನಗರ ರಸ್ತೆಗಳು ಸಹ ಹಾಳಾಗಿ ಅನೇಕ ವರ್ಷಗಳೇ ಕಳೆದಿವೆ. ವಿಜಯನಗರ, ಅರ್ಕೇಶ್ವರ ಬಡಾವಣೆ, ದೇವರಸೇಗೌಡನದೊಡ್ಡಿ ಭಾಗದಲ್ಲಿ ಸಹ ಓಡಾಡುವ ಹಾದಿ ಸುಸ್ಥಿತಿಯಲ್ಲಿ ಇಲ್ಲ.

ಇನ್ನು ನಗರದ ಹೃದಯ ಭಾಗದಲ್ಲಿ ಇರುವ ಅನೇಕ ಬಡಾವಣೆಗಳ ರಸ್ತೆಗಳೂ ಹಾಳಾಗಿವೆ. ಕಾಯಿಸೊಪ್ಪಿನ ಬೀದಿ ದಕ್ಷಿಣ, ಚಾಮುಂಡೇಶ್ವರಿ ಬಡಾವಣೆ, ಮೇದರ ಬೀದಿ, ಬಾಲಗೇರಿ ಸೇರಿದಂತೆ ವಿವಿಧ ಪ್ರದೇಶಗಳಲ್ಲಿ ರಸ್ತೆಯ ‘ಅವಶೇಷ’ಗಳಷ್ಟೇ
ಉಳಿದುಕೊಂಡಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.