
ರಾಮನಗರದಲ್ಲಿರುವ ಜಿಲ್ಲಾ ಶಿಕ್ಷಕರ ತರಬೇತಿ ಸಂಸ್ಥೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಸನ್‌ಸೇರಾ ಫೌಂಡೇಷನ್ ವತಿಯಿಂದ, ಸರ್ಕಾರಿ ಪ್ರೌಢಶಾಲೆಗಳ 43 ವಿದ್ಯಾರ್ಥಿಗಳಿಗೆ ₹10 ಸಾವಿರ ವಿದ್ಯಾರ್ಥಿವೇತನ ಹಾಗೂ ಶಾಲೆಗಳಿಗೆ ₹25 ಲಕ್ಷ ಮೊತ್ತದ ವಿವಿಧ ಪರಿಕರಗಳನ್ನು ಕಂಪನಿಯ ಜಂಟಿ ವ್ಯವಸ್ಥಾಪಕ ನಿರ್ದೇಶಕ ಎಫ್.ಆರ್. ಸಿಂಘ್ವಿ ವಿತರಿಸಿದರು.
ರಾಮನಗರ: ನಗರದಲ್ಲಿರುವ ಬೆಂಗಳೂರು ದಕ್ಷಿಣ ಜಿಲ್ಲಾ ಶಿಕ್ಷಕರ ತರಬೇತಿ ಸಂಸ್ಥೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಸನ್‌ಸೇರಾ ಫೌಂಡೇಷನ್ ವತಿಯಿಂದ, ಸರ್ಕಾರಿ ಪ್ರೌಢಶಾಲೆಗಳ 43 ವಿದ್ಯಾರ್ಥಿಗಳಿಗೆ ₹10 ಸಾವಿರ ವಿದ್ಯಾರ್ಥಿವೇತನ ಹಾಗೂ ವಿವಿಧ ಪರಿಕರಗಳನ್ನು ಕಂಪನಿಯ ಜಂಟಿ ವ್ಯವಸ್ಥಾಪಕ ನಿರ್ದೇಶಕ ಎಫ್.ಆರ್. ಸಿಂಘ್ವಿ ವಿತರಿಸಿದರು.
22 ಸರ್ಕಾರಿ ಪ್ರೌಢ ಶಾಲೆಗಳಿಗೆ ದೊಡ್ಡ ಸ್ಮಾರ್ಟ್ ಟಿವಿ, 300 ಸ್ಕೌಟ್ಸ್ ಮತ್ತು ಗೈಡ್ಸ್ ವಿದ್ಯಾರ್ಥಿಗಳಿಗೆ ಸಮವಸ್ತ್ರ, ಶಾಲೆಗಳಿಗೆ ಗ್ರೀನ್ ಬೋರ್ಡ್, ಪೀಠೋಪಕರಣಗಳು ಸೇರಿದಂತೆ ಸುಮಾರು ₹25 ಲಕ್ಷ ವೆಚ್ಚದಲ್ಲಿ ಸರ್ಕಾರಿ ಶಾಲೆಗಳಿಗೆ ಪರಿಕರಗಳನ್ನು ನೀಡಲಾಯಿತು.
ಬಳಿಕ ಮಾತನಾಡಿದ ಸಿಂಘ್ವಿ, ‘ಸರ್ಕಾರಿ ಶಾಲೆಗಳಲ್ಲಿ ವ್ಯಾಸಂಗ ಮಾಡುವ ವಿದ್ಯಾರ್ಥಿಗಳು ಶೇ 100ರಷ್ಟು ಫಲಿತಾಂಶದ ಸಾಧನೆ ಮಾಡಬೇಕು ಎಂಬುದು ನಮ್ಮ ಆಶಯ. ಅದಕ್ಕಾಗಿ ಸನ್‌ಸೇರಾ ಪ್ರತಿಷ್ಠಾನದ ಮೂಲಕ ಸಿಎಸ್‌ಆರ್ ಯೋಜನೆಯಡಿ ವಿದ್ಯಾರ್ಥಿವೇತನ ನೀಡಲಾಗುತ್ತಿದೆ’ ಎಂದರು.
‘ಕಂಪನಿ ವತಿಯಿಂದ ಆನೇಕಲ್ ತಾಲ್ಲೂಕಿನಲ್ಲಿ ಮೊದಲಿಗೆ ಈ ಕಾರ್ಯಕ್ರಮ ಪ್ರಾರಂಭಿಸಿ, ಐದು ವರ್ಷಗಳಿಂದ ನಿರಂತರವಾಗಿ ನಡೆಸಲಾಗುತ್ತಿದೆ. ಈ ವರ್ಷದಿಂದ ಬೆಂಗಳೂರು ದಕ್ಷಿಣ ಜಿಲ್ಲಾ ವಿದ್ಯಾರ್ಥಿಗಳಿಗೆ ನೀಡಲಾಗುತ್ತಿದೆ. ಮುಂದಿನ ವರ್ಷ 100 ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ನೀಡಲಾಗುವುದು. ಶಿಕ್ಷಣ ಪೂರ್ಣಗೊಳ್ಳುವವರೆಗೂ ಮೆರಿಟ್ ಆಧರಿಸಿ ನೀಡಲಾಗುವುದು’ ಎಂದು ಹೇಳಿದರು.
ಡಯಟ್ ಉಪ ನಿರ್ದೇಶಕ ಎನ್. ವೆಂಕಟೇಶ್ ಮಾತನಾಡಿ, ‘ಸನ್‌ಸೇರಾ ಕಂಪನಿಯು ಬೆಂಗಳೂರು ದಕ್ಷಿಣ ಜಿಲ್ಲೆ ವ್ಯಾಪ್ತಿಯ ಸರ್ಕಾರಿ ಶಾಲೆಗಳಿಗೆ ನೆರವು ನೀಡಿದೆ. ಡಯಟ್ ವತಿಯಿಂದ ನಡೆಯುವ ತರಬೇತಿಗಳಿಗೆ ಸುಸಜ್ಜಿತ ಸ್ಟುಡಿಯೊ ಅವಶ್ಯಕತೆ ಇದ್ದು, ಅದನ್ನು ಸಹ ನಿರ್ಮಿಸಿ ಕೊಡಲು ಕಂಪನಿ ಒಪ್ಪಿದೆ’ ಎಂದು ಸಂತಸ ವ್ಯಕ್ತಪಡಿಸಿದರು.
ಡಯಟ್‌ನ ಹಿರಿಯ ಉಪನ್ಯಾಸಕರಾದ ಶಿವಕುಮಾರ್, ಜಯಲಕ್ಷ್ಮೀ, ಎರಿನ್ ಫೌಂಡೇಷನ್‌ನ ಸಾಯಿಪ್ರಕಾಶ್, ಸನ್‌ಸೇರಾ ಕಂಪನಿಯ ಮಧುಸೂದನ್, ಗುರುದತ್, ಶ್ರೀಕಾಂತ್ ಹಾಗೂ ಚಂದ್ರಶೇಖರ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.