
ರಾಮನಗರ ತಾಲ್ಲೂಕಿನ ಕೃಷ್ಣಾಪುರದೊಡ್ಡಿಯಲ್ಲಿರುವ ತಾನಿನಾ ರಂಗದಂಗಳದಲ್ಲಿ ಶಾಂತಲಾ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಆಯೋಜಿಸಿದ್ದ ‘ತಿಂಗಳ ಕಲಾ ಬೆಳಕು’ ಕಾರ್ಯಕ್ರಮದಲ್ಲಿ ರೈತಪರ ಹೋರಾಟಗಾರ್ತಿ ಅನಸೂಯಮ್ಮ ಅವರಿಗೆ ‘ರೈತ ಬಂಧು’ ಪ್ರಶಸ್ತಿ ಪ್ರದಾನ ಮಾಡಲಾಯಿತು.
ರಾಮನಗರ: ‘ರೈತರು ಬೆಳೆಯುವ ಬೆಳೆಗಳಿಗೆ ವೈಜ್ಞಾನಿಕ ದರ ಸಿಕ್ಕರೆ ಮಾತ್ರ ಸಾಲದ ಕಾರಣಕ್ಕೆ ನಡೆಯುತ್ತಿರುವ ರೈತರ ಆತ್ಮಹತ್ಯೆಗೆ ಕಡಿವಾಣ ಬೀಳಲಿದೆ. ಈ ನಿಟ್ಟಿನಲ್ಲಿ ಸರ್ಕಾರಗಳು ಗಂಭೀರವಾಗಿ ಚಿಂತನೆ ನಡೆಸಬೇಕು. ಸೂಕ್ತ ಬೆಲೆಗಾಗಿ ದೊಡ್ಡ ಮಟ್ಟದಲ್ಲಿ ಸಂಘಟಿತ ಹೋರಾಟಗಳು ನಡೆಯಬೇಕು’ ಎಂದು ರೈತಪರ ಹೋರಾಟಗಾರ್ತಿ ಅನಸೂಯಮ್ಮ ಅಭಿಪ್ರಾಯಪಟ್ಟರು.
ತಾಲ್ಲೂಕಿನ ಕೃಷ್ಣಾಪುರದೊಡ್ಡಿಯಲ್ಲಿರುವ ತಾನಿನಾ ರಂಗದಂಗಳದಲ್ಲಿ ಶಾಂತಲಾ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಆಯೋಜಿಸಿದ್ದ ‘ತಿಂಗಳ ಕಲಾ ಬೆಳಕು’ ಕಾರ್ಯಕ್ರಮದಲ್ಲಿ ‘ರೈತ ಬಂಧು’ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಅವರು, ‘ರೈತರ ಬದುಕು ಹಸನಾದರೆ ಮಾತ್ರ ಈ ದೇಶಕ್ಕೆ ಉತ್ತಮ ಭವಿಷ್ಯವಿದೆ’ ಎಂದರು.
ಹೋರಾಟಕ್ಕೆ ಮುಡಿಪು: ‘ಚಿಕ್ಕಂದಿನಿಂದಲೇ ಮೂಢನಂಬಿಕೆಗಳನ್ನು ವಿರೋಧಿಸುತ್ತಿದ್ದ ನಾನು, ಅರಳಾಳುಸಂದ್ರದ ರೈತ ಮುಖಂಡ ಎ. ಸೋಮಲಿಂಗಯ್ಯ ಅವರ ಹೋರಾಟಗಳಿಂದ ಆಕರ್ಷಿತಳಾಗಿ 1974ರಲ್ಲಿ ವಿವಾಹವಾದೆ. ಆನಂತ, ನನ್ನ ಜೀವನ ಸಾಮಾಜಿಕ ಸೇವೆ ಮತ್ತು ಹೋರಾಟಕ್ಕೆ ಮುಡಿಪಾಯತು’ ಎಂದು ನೆನೆದರು.
‘ಪತಿಯೊಂದಿಗೆ 1976ರಲ್ಲಿ ಗೇಣಿ ವಿರೋಧಿ ಹೋರಾಟದಲ್ಲಿ ಭಾಗವಹಿಸಿದೆ. ಮಹಿಳೆಯರಲ್ಲಿ ಜಾಗೃತಿ ಮೂಡಿಸಿ ಒಗ್ಗೂಡಿಸುವ ಕೆಲಸ ಮಾಡಿದೆ. 1976–77ರಲ್ಲಿ ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ತೀವ್ರವಾದಾಗ, ಮಹಿಳೆಯರನ್ನೆಲ್ಲ ಒಗ್ಗೂಡಿಸಿ, ಬೆಂಗಳೂರಿನ ಜಿಲ್ಲಾ ಪಂಚಾಯಿತಿ ಕಚೇರಿ ಎದುರು ಖಾಲಿ ಕೊಡಗಳ ಬೃಹತ್ ಪ್ರತಿಭಟನೆ ನಡೆಸಿದ್ದು ರಾಜ್ಯದ ಗಮನ ಸೆಳೆದಿತ್ತು’ ಎಂದು ಹೇಳಿದರು.
ಸಮತಾ ಶಾಲೆ: ‘ಡಾ. ರಾಮಮನೋಹರ ಲೋಹಿಯಾ ಸಮತಾ ವಿದ್ಯಾಲಯವನ್ನು ಅರಳಾಳುಸಂದ್ರದ 30 ಎಕರೆ ಪ್ರದೇಶದಲ್ಲಿ ಸ್ಥಾಪಿಸಲಾಯಿತು. ದೇಶದ ವಿವಿಧೆಡೆಯಿಂದ ರೈತರು, ವಿಚಾರವಂತರು ಇಲ್ಲಿನ ವಿಚಾರ ಸಂಕಿರಣ, ಸಂವಾದದಲ್ಲಿ ಪಾಲ್ಗೊಳ್ಳುತ್ತಿದ್ದರು. ಈ ವಿದ್ಯಾಲಯದ ಧರ್ಮದರ್ಶಿಗಳಲ್ಲಿ ನಾನೂ ಒಬ್ಬಳು. ಹೆಣ್ಣು ಮಕ್ಕಳ ಶಿಕ್ಷಣ, ರೈತ ಚಳವಳಿ ನಡೆಯಬೇಕಾದ ದಿಕ್ಕು ದೆಸೆ, ರೈತರ ಜೀವನ ಸುಧಾರಣೆ ಬಗ್ಗೆ ಮಹತ್ವದ ಚರ್ಚೆಗಳಾಗುತ್ತಿತ್ತು. ಅದರಲ್ಲಿ ನಾನೂ ಭಾಗವಹಿಸುತ್ತಿದ್ದೆ’ ಎಂದರು.
‘ಖ್ಯಾತ ಸಾಹಿತಿ ಪಿ. ಲಂಕೇಶ್ ಅವರ ಜತೆಗೂಡು ಜಾತ್ಯತೀತ ವಿವಾಹ ವೇದಿಕೆಯನ್ನು 1983ರಲ್ಲಿ ಸ್ಥಾಪಿಸಲಾಯಿತು. ವೇದಿಕೆ ಮೂಲಕ ಚನ್ನಪಟ್ಟಣದ ಒಕ್ಕಲಿಗ ಹುಡುಗ ಮತ್ತು ಬ್ರಾಹ್ಮಣ ಹುಡುಗಿಯ ವಿವಾಹ ಮಾಡಿಸಿದೆ. ಕೆಲ ಕಾಲ ನನ್ನ ಮನೆಯಲ್ಲೇ ಆಶ್ರಯ ನೀಡಿದೆ. ಆಗ ಮೇಲ್ವರ್ಗದ ಜನರು ನನ್ನ ಮೇಲೆ ಕೆಂಡ ಕಾರಿದ್ದಲ್ಲದೆ, ಜೀವ ಬೆದರಿಕೆ ಹಾಕಿದ್ದರು’ ಎಂದು ಜಹೇಳಿದರು.
ಕಾರ್ಯಕ್ರಮದಲ್ಲಿ ಕಸ್ತೂರಿ ಕರ್ನಾಟಕ ಜನಪರ ವೇದಿಕೆ ರಾಜ್ಯಾಧ್ಯಕ್ಷ ಎಲ್. ರಮೇಶ್ ಗೌಡ, ನಗರಸಭೆ ಉಪಾಧ್ಯಕ್ಷೆ ಆಯಿಷಾ ಬಾನು, ರಾಮನಗರ ನಗರಾಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಶಿವಮಾದು, ಹುಣಸನಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಕೆ.ವಿ. ಪ್ರಕಾಶ್, ಬಿ. ಕೃಷ್ಣಪ್ಪ ಟ್ರಸ್ಟಿನ ಮ್ಯಾನೇಜಿಂಗ್ ಟ್ರಸ್ಟಿ ಇಂದಿರಾ ಕೃಷ್ಣಪ್ಪ, ಮಾನವ ಹಕ್ಕುಗಳ ಹೋರಾಟಗಾರ್ತಿ ಅಖಿಲ, ಶಾಂತಲಾ ಚಾರಿಟೇಬಲ್ ಟ್ರಸ್ಟಿನ ಸಂಸ್ಥಾಪಕ ಕಾರ್ಯದರ್ಶಿ ಕವಿತಾ ರಾವ್, ಶಿಕ್ಷಕ ರಾಜಶೇಖರ್, ಗಾಯಕರಾದ ಚಿತ್ರಾರಾವ್, ಮಹದೇವ್ ಹಾಗೂ ರಂಗಭೂಮಿ ಕಲಾವಿದ ರವಿಕುಮಾರ್ ಇದ್ದರು.
ಕನಕಪುರದ ರೂರಲ್ ಕಾಲೇಜಿನ ಸಂಸ್ಥಾಪಕ ಕರಿಯಪ್ಪ ಲೋಹಿಯಾ ಜೆ.ಪಿ. ಕಡಿದಾಳ್ ಶಾಮಣ್ಣ ದೇವನೂರು ಮಹಾದೇವ ಕಿಶನ್ ಪಟ್ಣಾಯಕ್ ಅವರು ನನ್ನ ಜೀವನದ ಆದರ್ಶ ವ್ಯಕ್ತಿಗಳು. ಅವರ ತತ್ವ ವಿಚಾರಗಳಿಂದ ಸಾಕಷ್ಟು ಪ್ರಭಾವಿತಳಾಗಿದ್ದೇನೆ
– ಅನಸೂಯಮ್ಮ ರೈತಪರ ಹೋರಾಟಗಾರ್ತಿ
ಜೈಲು ವಾಸ; ಏಳೆಂಟು ಪ್ರಕರಣ
ಹಸಿರು ಕ್ರಾಂತಿ ಸಂದರ್ಭದಲ್ಲಿ ಬ್ಯಾಂಕ್‌ಗಳಿಂದ ಸಾಲ ಪಡೆದಿದ್ದ ರೈತರ ಮನೆ ಜಮೀನು ಜಫ್ತಿ ಮಾಡಲು ಬ್ಯಾಂಕ್ ಸಿಬ್ಬಂದಿ ಹಳ್ಳಿಗಳಿಗೆ ಬರುತ್ತಿದ್ದರು. ಅದನ್ನ ವಿರೋಧಿಸಿ ನಡೆದ ರೈತ ಹೋರಾಟದಲ್ಲಿ ಸಕ್ರಿಯವಾಗಿ ಭಾಗವಹಿಸಿದ್ದೆ. 1984ರಲ್ಲಿ ‘ಗುಂಡು ಹಾಕುವ ಸರ್ಕಾರಕ್ಕೆ ತೆರಿಗೆಯೂ ಇಲ್ಲ ಓಟೂ ಇಲ್ಲ’ ಎಂಬ ಘೋಷಣೆಯೊಂದಿಗೆ ಹೋರಾಟ ಮಾಡಲಾಗಿತ್ತು. ಆಗ ನನ್ನನ್ನು ಸೇರಿದಂತೆ ಪೊಲೀಸರು 19 ಹೋರಾಟಗಾರರನ್ನು ಬಂಧಿಸಿ 16 ದಿನ ಬೆಂಗಳೂರಿನ ಸೆಂಟ್ರಲ್ ಜೈಲಿಗೆ ಹಾಕಿದ್ದರು. ಅಲ್ಲಿ ರೈತ ಹೋರಾಟಗಾರ ಕಡಿದಾಳ್ ಶಾಮಣ್ಣ ಅವರ ಪರಿಚಯವಾಯಿತು. ಸ್ಥಳೀಯ ಸಂಪನ್ಮೂಲಗಳು ಸ್ಥಳೀಯರಿಗೆ ಸಿಗಬೇಕು ಎಂದು ರೈತ ಸಂಘ ಕನಕಪುರದ ಗ್ರಾನೈಟ್ ವಿರೋಧಿ ಹೋರಾಟ ನಡೆಸಿತು. ಆಗಲೂ ಪೊಲೀಸರು ಜೈಲಿಗೆ ಹಾಕಿದ್ದರು. ರೈತರಿಗೆ ಮಾಹಿತಿ ನೀಡದೆ ಅನಧಿಕೃತವಾಗಿ ಗ್ರಾಮ ಪ್ರವೇಶಿಸುತ್ತಿದ್ದ ಅಧಿಕಾರಿಗಳು ಮತ್ತು ಬ್ಯಾಂಕ್ ಸಿಬ್ಬಂದಿಯಿಂದ ಕ್ಷಮಾಪಣಾ ಪತ್ರಗಳನ್ನು ಬರೆಸಿಕೊಂಡಿದ್ದೆವು. ರೈತ ಹೋರಾಟದಲ್ಲಿ ಭಾಗವಹಿಸಿದ ಕಾರಣಕ್ಕೆ ನನ್ನ ಮೇಲೆ ಪೊಲೀಸರು ಏಳೆಂಟು ಪ್ರಕರಣಗಳನ್ನು ದಾಖಲಿಸಿದ್ದರು’ ಎಂದು ಅನಸೂಯಮ್ಮ ನೆನೆದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.