ADVERTISEMENT

ರಾಮನಗರ | ದ್ವಿತೀಯ ಪಿಯು ಪರೀಕ್ಷೆಗೆ 8,407 ಮಂದಿ ಸಿದ್ಧ

ನಾಳೆಯಿಂದ ಮಾರ್ಚ್ 17ರವರೆಗೆ ವಾರ್ಷಿಕ ಪರೀಕ್ಷೆ; ಜಿಲ್ಲೆಯ 14 ಕೇಂದ್ರಗಳಲ್ಲಿ ಪರೀಕ್ಷೆ; ಸಿಸಿಟಿವಿ ಕ್ಯಾಮೆರಾ, ವೆಬ್ ಕಾಸ್ಟಿಂಗ್ ನಿಗಾ

ಓದೇಶ ಸಕಲೇಶಪುರ
Published 27 ಫೆಬ್ರುವರಿ 2026, 6:26 IST
Last Updated 27 ಫೆಬ್ರುವರಿ 2026, 6:26 IST
ಎಂ. ಮರಿಸ್ವಾಮಿ, ಉಪ ನಿರ್ದೇಶಕರು, ಶಾಲಾ ಶಿಕ್ಷಣ ಇಲಾಖೆ (ಪದವಿ ಪೂರ್ವ), ಬೆಂಗಳೂರು ದಕ್ಷಿಣ ಜಿಲ್ಲೆ
ಎಂ. ಮರಿಸ್ವಾಮಿ, ಉಪ ನಿರ್ದೇಶಕರು, ಶಾಲಾ ಶಿಕ್ಷಣ ಇಲಾಖೆ (ಪದವಿ ಪೂರ್ವ), ಬೆಂಗಳೂರು ದಕ್ಷಿಣ ಜಿಲ್ಲೆ   

ರಾಮನಗರ: ವಿದ್ಯಾರ್ಥಿ ಜೀವನದ ಪ್ರಮುಖ ಘಟ್ಟವಾದ ದ್ವಿತೀಯ ಪಿಯು ವಾರ್ಷಿಕ ಪರೀಕ್ಷೆಯು ನಾಳೆಯಿಂದ ಶುರುವಾಗಲಿದೆ. ಶಾಲಾ ಶಿಕ್ಷಣ ಇಲಾಖೆ (ಪದವಿ ಪೂರ್ವ) ವತಿಯಿಂದ ಫೆ. 28ರಿಂದ ಮಾರ್ಚ್ 17ರವರೆಗೆ ನಡೆಯಲಿರುವ ಪರೀಕ್ಷೆಗೆ ಬೆಂಗಳೂರು ದಕ್ಷಿಣ ಜಿಲ್ಲೆಯಲ್ಲಿ 8,407‌ ವಿದ್ಯಾರ್ಥಿಗಳು ಹಾಜರಾಗಲಿದ್ದಾರೆ. 

ಪರೀಕ್ಷೆ ಬರೆಯುವವರ ಪೈಕಿ 7,453 ಹೊಸ ವಿದ್ಯಾರ್ಥಿಗಳಿದ್ದಾರೆ. ಉಳಿದಂತೆ 768 ಪುನರಾವರ್ತಿತ ಅಭ್ಯರ್ಥಿಗಳು, 185 ಖಾಸಗಿ ಅಭ್ಯರ್ಥಿಗಳು ಹಾಗೂ ಫಲಿತಾಂಶ ಉನ್ನತೀಕರಣದ ಏಕೈಕ ಅಭ್ಯರ್ಥಿ ಇದ್ದಾರೆ. ಕಳೆದ ವರ್ಷಕ್ಕೆ (8,712) ಹೋಲಿಸಿದರೆ ಈ ಸಲ ಪರೀಕ್ಷೆ ಎದುರಿಸುವವರ ಸಂಖ್ಯೆಯಲ್ಲಿ 305 ಮಂದಿ ಕಡಿಮೆಯಾಗಿದ್ದಾರೆ.

ಜಿಲ್ಲೆಯಾದ್ಯಂತ 14 ಕೇಂದ್ರಗಳಲ್ಲಿ ಪರೀಕ್ಷೆ ನಡೆಯಲಿದೆ. ವಿದ್ಯಾರ್ಥಿಗಳ ಸಂಖ್ಯೆ ಮತ್ತು ಕಾಲೇಜುಗಳಿಗೆ ಅನುಗುಣವಾಗಿ ರಾಮನಗರದಲ್ಲಿ 5, ಚನ್ನಪಟ್ಟಣ ಮತ್ತು ಕನಕಪುರದಲ್ಲಿ ತಲಾ 3, ಮಾಗಡಿಯಲ್ಲಿ 2 ಹಾಗೂ ಹಾರೋಹಳ್ಳಿಯಲ್ಲಿ 1 ಪರೀಕ್ಷಾ ಕೇಂದ್ರಗಳನ್ನು ಸ್ಥಾಪಿಸಲಾಗಿದೆ. ಈ ಪೈಕಿ 8 ಸರ್ಕಾರಿ ಪದವಿ ಪೂರ್ವ ಕಾಲೇಜುಗಳು, 4 ಅನುದಾನಿತ ಹಾಗೂ 2 ಅನುದಾನ ರಹಿತ ಕಾಲೇಜುಗಳಾಗಿವೆ.

ADVERTISEMENT

ವಾಣಿಜ್ಯ ವಿದ್ಯಾರ್ಥಿಗಳೇ ಹೆಚ್ಚು: ಹೊಸದಾಗಿ ಪರೀಕ್ಷೆಗೆ ಹಾಜರಾಗುವವರ ಪೈಕಿ ಈ ಸಲ ವಾಣಿಜ್ಯ ವಿಭಾಗದ ವಿದ್ಯಾರ್ಥಿಗಳೇ ಹೆಚ್ಚು. ಈ ವಿಭಾಗದಿಂದ 3397 ಮಂದಿ ಪರೀಕ್ಷೆ ಬರೆಯುತ್ತಿದ್ದಾರೆ. ಉಳಿದಂತೆ ವಿಜ್ಞಾನ ವಿಭಾಗದಿಂದ 2,558 ಹಾಗೂ ಕಲಾ ವಿಭಾಗದಿಂದ 1,498 ವಿದ್ಯಾರ್ಥಿಗಳಿದ್ದಾರೆ.

ಪರೀಕ್ಷೆ ಎದುರಿಸುವವರಲ್ಲಿ ವಿದ್ಯಾರ್ಥಿನಿಯರದ್ದೇ ಸಿಂಹಪಾಲು. ಹೆಣ್ಣು ಮಕ್ಕಳು 4,590 ಮಂದಿ ಇದ್ದರೆ, ಗಂಡು ಮಕ್ಕಳು ಕೇವಲ 2863 ಇದ್ದಾರೆ. ಎಂದಿನಂತೆ ಈ ಸಲವೂ ನಗರಕ್ಕಿಂತ ಗ್ರಾಮಾಂತರ ಭಾಗದ ವಿದ್ಯಾರ್ಥಿಗಳೇ ಅಧಿಕ ಎಂಬುದು ಗಮನಾರ್ಹ. ನಗರ ವ್ಯಾಪ್ತಿಯಲ್ಲಿ 2,499 ವಿದ್ಯಾರ್ಥಿಗಳಿದ್ದರೆ, ಗ್ರಾಮಾಂತರದಲ್ಲಿ 4,954 ಮಂದಿ ಇದ್ದಾರೆ!

2 ಪೂರ್ವ ಸಿದ್ದತಾ ಪರೀಕ್ಷೆ: ‘ಫಲಿತಾಂಶ ಸುಧಾರಣೆಗಾಗಿ ಶಾಲಾ ಶಿಕ್ಷಣ (ಪದವಿ ಪೂರ್ವ) ಇಲಾಖೆಯು ಎರಡು ಪೂರ್ವ ಸಿದ್ಧತಾ ಪರೀಕ್ಷೆಗಳನ್ನು ನಡೆಸಿತ್ತು. ರಾಜ್ಯದಾದ್ಯಂತ ಏಕರೂಪದ ಪ್ರಶ್ನೆ ಪತ್ರಿಕೆಗಳನ್ನು ನೀಡಲಾಗಿದೆ. ಈ ವರ್ಷ ಪ್ರತಿ ವಿಷಯಕ್ಕೆ ಒಂದೇ ನೀಲನಕ್ಷೆ ಬಿಡುಗಡೆ ಮಾಡಲಾಗಿದೆ’ ಎಂದು ಇಲಾಖೆಯ ಬೆಂಗಳೂರು ದಕ್ಷಿಣ ಜಿಲ್ಲೆಯ ಉಪ ನಿರ್ದೇಶಕ ಎಂ. ಮರಿಸ್ವಾಮಿ ‘ಪ್ರಜಾವಾಣಿ’ಗೆ ತಿಳಿಸಿದರು.

‘ಫಲಿತಾಂಶ ಸುಧಾರಣೆ ನಿಟ್ಟಿನಲ್ಲಿ ಉಪನ್ಯಾಸಕರಿಗೆ ತರಬೇತಿ ಕಾರ್ಯಾಗಾರಗಳನ್ನು ನಡೆಸಿದ್ದೇವೆ. ವಿದ್ಯಾರ್ಥಿಗಳಲ್ಲಿ ಪರೀಕ್ಷಾ ಆತಂಕ ಮತ್ತು ಒತ್ತಡ ನಿವಾರಣೆಗಾಗಿ ‘ಪ್ರಜಾವಾಣಿ’ ಸಹಯೋಗದಲ್ಲಿ ಪರೀಕ್ಷಾ ಮಾರ್ಗದರ್ಶಿ ಕಾರ್ಯಾಗಾರ ಆಯೋಜಿಸಿ ಆತ್ಮವಿಶ್ವಾಸ ತುಂಬಲಾಗಿದೆ. ಕಾಲೇಜುಗಳ ಮಟ್ಟದಲ್ಲೂ ಸಂಪನ್ಮೂಲ ವ್ಯಕ್ತಿಗಳನ್ನು ಕರೆಯಿಸಿ ಪ್ರೇರಣಾ ಕಾರ್ಯಾಗಾರ ಮಾಡಲಾಗಿದೆ’ ಎಂದರು.

ಕ್ಯಾಮೆರಾ ಕಣ್ಗಾವಲು: ‘ಈ ಸಲವೂ ಸಿಸಿಟಿವಿ ಕ್ಯಾಮೆರಾ ಕಣ್ಗಾವಲು ಹಾಗೂ ವೆಬ್ ಕಾಸ್ಟಿಂಗ್ ಮುಖಾಂತರ ಪರೀಕ್ಷೆ ನಡೆಸಲಾಗುತ್ತದೆ. ಪರೀಕ್ಷಾ ಕಾರ್ಯಕ್ಕೆ ಅಂಚೆ ಕಚೇರಿ, ಪೊಲೀಸ್ ಸಿಬ್ಬಂದಿ ಹಾಗೂ ಆಶಾ ಕಾರ್ಯಕರ್ತೆಯರು ಪರೀಕ್ಷೆಗೆ ಸಹಕಾರ ಪಡೆಯಲಾಗುತ್ತಿದೆ. ಪರೀಕ್ಷಾ ಕೇಂದ್ರಗಳಲ್ಲಿ ವಿದ್ಯುತ್, ಶೌಚಾಲಯ, ಕುಡಿಯುವ ನೀರು ಸೇರಿದಂತೆ ಸಕಲ ವ್ಯವಸ್ಥೆಗೆ ಕ್ರಮ ಕೈಗೊಳ್ಳಲಾಗಿದೆ’ ಎಂದು ಹೇಳಿದರು.

ಜಿ. ಶಿವಣ್ಣ ಕೊತ್ತಿಪುರ ಜಿಲ್ಲಾಧ್ಯಕ್ಷ ಪದವಿ ಪೂರ್ವ ಕಾಲೇಜುಗಳ ಪ್ರಾಂಶುಪಾಲರ ಸಂಘ ಬೆಂಗಳೂರು ದಕ್ಷಿಣ ಜಿಲ್ಲೆ
ಡಿಸೆಂಬರ್ ತಿಂಗಳಾಂತ್ಯಕ್ಕೆ ಪಠ್ಯಕ್ರಮದ ಬೋಧನೆ ಮುಗಿಸಿ ಪುನರಾವರ್ತನೆ ಮಾಡಿಸಲಾಗಿದೆ. 3 ಮಾದರಿ ಪ್ರಶ್ನೆಪತ್ರಿಕೆಗಳನ್ನು ವಿದ್ಯಾರ್ಥಿಗಳಿಗೆ ಅಭ್ಯಾಸ ಮಾಡಿಸಲಾಗಿದೆ. ಫಲಿತಾಂಶದಲ್ಲಿ ಜಿಲ್ಲೆಯು ಅಗ್ರ 10ರಲ್ಲಿ ಸ್ಥಾನ ಪಡೆಯುವ ನಿಟ್ಟಿನಲ್ಲಿ ಸಕಲ ಪ್ರಯತ್ನ ಮಾಡಿದ್ದೇವೆ
– ಎಂ. ಮರಿಸ್ವಾಮಿ ಉಪ ನಿರ್ದೇಶಕ ಶಾಲಾ ಶಿಕ್ಷಣ ಇಲಾಖೆ (ಪದವಿ ಪೂರ್ವ) ಬೆಂಗಳೂರು ದಕ್ಷಿಣ ಜಿಲ್ಲೆ
ವಿದ್ಯಾರ್ಥಿಗಳು ಮಾದರಿ ಪ್ರಶ್ನೆಪತ್ರಿಕೆಗಳನ್ನು ಚನ್ನಾಗಿ ಅಭ್ಯಾಸ ಮಾಡಬೇಕು. ಪರೀಕ್ಷಾ ಕೊಠಡಿಯಲ್ಲಿ ಯಾವುದೇ ಕಾರಣಕ್ಕೂ ಆತಂಕ ಮತ್ತು ಒತ್ತಡಕ್ಕೆ ಒಳಗಾಗದೆ ಆತ್ಮವಿಶ್ವಾಸದಿಂದ ಪರೀಕ್ಷೆ ಎದುರಿಸಬೇಕು
– ಜಿ. ಶಿವಣ್ಣ ಕೊತ್ತಿಪುರ ಜಿಲ್ಲಾಧ್ಯಕ್ಷ ಪದವಿ ಪೂರ್ವ ಕಾಲೇಜುಗಳ ಪ್ರಾಂಶುಪಾಲರ ಸಂಘ

ಕೇಂದ್ರಗಳಲ್ಲಿ ಬಿಗಿ ಬಂದೋಬಸ್ತ್‌

ಪ್ರಶ್ನೆಪತ್ರಿಕೆ ಒಯ್ಯುವ ವಾಹನಗಳಿಗೆ ಜಿಪಿಎಸ್ ಅಳವಡಿಸಲಾಗಿದೆ. ತಹಶೀಲ್ದಾರ್ ಬಿಇಒ ಪ್ರಾಂಶುಪಾಲರನ್ನು ಒಳಗೊಂಡ ತ್ರಿಸದಸ್ಯ ಸಮಿತಿಯ ಬಿಗಿ ಪೊಲೀಸ್ ಬಂದೋಬಸ್ತ್‌ನಲ್ಲಿ ಪರೀಕ್ಷಾ ಕೇಂದ್ರಕ್ಕೆ ಪ್ರಶ್ನೆಪತ್ರಿಕೆಗಳನ್ನು ಕಳಿಸಲಾಗುವುದು. ಪರೀಕ್ಷಾ ಕೇಂದ್ರಗಳ ಮೇಲೆ ವಿಶೇಷ ಜಾಗೃತ ದಳ ನಿಗಾ ಇಡಲಿದೆ. ಪ್ರತಿ ಪರೀಕ್ಷಾ ಕೇಂದ್ರಗಳಲ್ಲಿ ಸಿಸಿಟಿವಿ ಕ್ಯಾಮೆರಾ ಅಳವಡಿಸಲಾಗಿದೆ. ವಿದ್ಯುತ್ ಕೈ ಕೊಟ್ಟರೆ ಪರ್ಯಾಯವಾಗಿ ಯುಪಿಎಸ್ ವ್ಯವಸ್ಥೆ ಮಾಡಲಾಗಿದೆ. ಪ್ರತಿ ಕೊಠಡಿಗಳ ಮೇಲೆ ವೆಬ್ ಕಾಸ್ಟಿಂಗ್ ನಿಗಾ ಇಡಲಾಗುವುದು. ಡಿಡಿಪಿಯು ಕಚೇರಿಯಲ್ಲಿ ತಂಡವೊಂದು ಇದರ ನಿರ್ವಹಣೆ ಮಾಡಲಿದೆ ಎಂದು ಎಂ. ಮರಿಸ್ವಾಮಿ ತಿಳಿಸಿದರು.

ಎಲ್ಲೆಲ್ಲಿ ಪರೀಕ್ಷಾ ಕೇಂದ್ರಗಳು?

* ಬಾಲಕರ ಸರ್ಕಾರಿ ಪದವಿ ಪೂರ್ವ ಕಾಲೇಜು ರಾಮನಗರ

* ಶಾಂತಿನಿಕೇತನ ಪದವಿ ಪೂರ್ವ ಕಾಲೇಜು ರಾಮನಗರ

* ಬಾಲಕರ ಸರ್ಕಾರಿ ಪದವಿ ಪೂರ್ವ ಕಾಲೇಜು ಚನ್ನಪಟ್ಟಣ

* ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜು ಚನ್ನಪಟ್ಟಣ

* ಸರ್ಕಾರಿ ಪದವಿ ಪೂರ್ವ ಕಾಲೇಜು ಮಾಗಡಿ

* ಸರ್ಕಾರಿ ಪದವಿ ಪೂರ್ವ ಕಾಲೇಜು ಕುದೂರು ಮಾಗಡಿ

* ರೂರಲ್ ಪದವಿ ಪೂರ್ವ ಕಾಲೇಜು ಕನಕಪುರ

* ಸರ್ಕಾರಿ ಪದವಿ ಪೂರ್ವ ಕಾಲೇಜು (ಮಾಜಿ ಪುರಸಭೆ) ಕನಕಪುರ

* ಸಾರ್ವಜನಿಕ ಪದವಿ ಪೂರ್ವ ಕಾಲೇಜು ಚನ್ನಪಟ್ಟಣ

* ಬಿಎಎಸ್‍ವಿಪಿ ಮಹಿಳಾ ಪದವಿ ಪೂರ್ವ ಕಾಲೇಜು ರಾಮನಗರ

* ಸರ್ಕಾರಿ ಪದವಿ ಪೂರ್ವ ಕಾಲೇಜು ಹಾರೋಹಳ್ಳಿ

* ಬಸವೇಶ್ವರಸ್ವಾಮಿ ಸರ್ಕಾರಿ ಪದವಿ ಪೂರ್ವ ಕಾಲೇಜು ಬಿಡದಿ

* ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜು ರಾಮನಗರ

* ಆದಿತ್ಯಾಸ್ ಪದವಿ ಪೂರ್ವ ಕಾಲೇಜು ಕನಕಪುರ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.