ADVERTISEMENT

ಕನಕಪುರ | ಜಾಗ ಇಕ್ಕಟ್ಟು; ಉಪ ನೋಂದಣಿ ಕಚೇರಿಗೆ ಬಿಕ್ಕಟ್ಟು

ಕನಕಪುರ ಸಬ್ ರಿಜಿಸ್ಟ್ರಾರ್ ಕಚೇರಿಗಿಲ್ಲ ಮೂಲಸೌಕರ್ಯ, ಜನರ ಪರದಾಟ

ಬರಡನಹಳ್ಳಿ ಕೃಷ್ಣಮೂರ್ತಿ
Published 12 ಫೆಬ್ರುವರಿ 2024, 4:35 IST
Last Updated 12 ಫೆಬ್ರುವರಿ 2024, 4:35 IST
ಕನಕಪುರ ಉಪ ನೋಂದಣಿ ಕಚೇರಿಯ ನೋಟ
ಕನಕಪುರ ಉಪ ನೋಂದಣಿ ಕಚೇರಿಯ ನೋಟ   

ಕನಕಪುರ: ತಾಲ್ಲೂಕಿನ ಉಪನೋಂದಣಿ ಕಚೇರಿಯು ಇಕ್ಕಟ್ಟಾಗಿದ್ದು, ಮೂಲಸೌಕರ್ಯಗಳು ಇಲ್ಲದಿರುವ ಕಾರಣ ಜನರಿಗೆ ತೊಂದರೆಯುಂಟಾಗುತ್ತಿದೆ. 

ರಾಮನಗರ ಜಿಲ್ಲೆಯಲ್ಲಿಯೇ ಅತಿ ಹೆಚ್ಚು ನೋಂದಣಿ ಪ್ರಕ್ರಿಯೆ ನಡೆಯುವ ಹಾಗೂ ರಾಜ್ಯ ಸರ್ಕಾರಕ್ಕೆ ಅತಿ ಹೆಚ್ಚು ತೆರಿಗೆ ಸಂಗ್ರಹಿಸುವ ಮೂಲಕ ಆದಾಯದ ಮೂಲವಾಗಿರುವ ಕನಕಪುರ ತಾಲ್ಲೂಕು ಉಪನೋಂದಣಿ ಕಚೇರಿ ಸೂಕ್ತ ಸೌಲಭ್ಯಗಳಿಲ್ಲದೇ ಸೊರಗಿದೆ.

ತಾಲ್ಲೂಕು ಉಪ ನೋಂದಣಿ ಕಚೇರಿಯ ಕಟ್ಟಡವು ಕನಕಪುರದ ಎಂ.ಜಿ. ರಸ್ತೆಯ ಅಯ್ಯಪ್ಪ ಸ್ವಾಮಿ ದೇವಾಲಯ ಸಮೀಪದ ಇಕ್ಕಟ್ಟಿನ ತಿರುವಿನಲ್ಲಿದೆ. ಖಾಸಗಿ ಕಟ್ಟಡದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಉಪ ನೋಂದಣಿ ಕಚೇರಿಯನ್ನು ಸೂಕ್ತ ಸೌಲಭ್ಯಗಳಿರುವ ಜಾಗಕ್ಕೆ ಸ್ಥಳಾಂತರಿಸಬೇಕು ಎಂಬುದು ತಾಲ್ಲೂಕಿನ ಜನರ ಒತ್ತಾಯ.

ADVERTISEMENT

ಈ ಹಿಂದೆ ತಾಲ್ಲೂಕು ಕಚೇರಿಯ ಒಳಗಿದ್ದ ಉಪ ನೋಂದಣಿ ಕಚೇರಿಯನ್ನು, ತಾಲ್ಲೂಕು ಕಚೇರಿಗೆ ಹೊಸ ಕಟ್ಟಡ ಕಟ್ಟುವ ಸಂದರ್ಭದಲ್ಲಿ ಕೆಡವಲಾಗಿತ್ತು. ಆಗ ಉಪ ನೋಂದಣಿ ಕಚೇರಿಯನ್ನು ತಾತ್ಕಾಲಿಕವಾಗಿ ಈಗಿರುವ ಕಟ್ಟಡ ಅಂದರೆ ಅಂದು ಕಲ್ಯಾಣ ಮಂಟಪವಾಗಿದ್ದ ಕಟ್ಟಡಕ್ಕೆ ಸ್ಥಳಾಂತರಿಸಲಾಯಿತು. 

2018ರ ವೇಳೆಗೆ ತಾಲ್ಲೂಕು ಕಚೇರಿಗೆ ಹೊಸ ಕಟ್ಟಡ ಕಟ್ಟಿ ಉದ್ಘಾಟನೆಯೂ ಆಯಿತು. ಆದರೆ, ಉಪ ನೋಂದಣಿ ಕಚೇರಿಗೆ ಮಾತ್ರ ಅಲ್ಲಿಗೆ ಹೋಗುವ ಭಾಗ್ಯ ದೊರೆಯದೇ ಕಲ್ಯಾಣಮಂಟಪದಲ್ಲೇ ಇಂದಿಗೂ ಕಾರ್ಯ ನಿರ್ವಹಿಸುವಂತಾಗಿದೆ. ಇಂದಿಗೂ ಸ್ವಂತ ಕಟ್ಟಡದ ಭಾಗ್ಯ ಒದಗಿಬಂದಿಲ್ಲ. ಇಕ್ಕಟ್ಟಾದ ಸ್ಥಳದಲ್ಲಿಯೇ ಸಿಬ್ಬಂದಿ ಕಾರ್ಯ ನಿರ್ವಹಿಸಬೇಕಿದೆ. ಕಚೇರಿಯ ಎರಡೂ ಬದಿಯಲ್ಲಿ ಅತ್ಯಂತ ಚಿಕ್ಕದಾದ ರಸ್ತೆಗಳಿವೆ. ಕಚೇರಿಯ ಎದುರೇ ಬೆಂಗಳೂರು–ಕನಕಪುರ ಹೆದ್ದಾರಿ ರಸ್ತೆ ಇರುವುದರಿಂದ ಇಲ್ಲಿ ವಾಹನಗಳ ಓಡಾಟದ ಭರಾಟೆಯೂ ಹೆಚ್ಚು. ಮತ್ತೊಂದೆಡೆ ಉಪ ನೋಂದಣಿ ಕಚೇರಿಗೆ ಬರುವವರು ತಮ್ಮ ವಾಹನಗಳನ್ನು ಮುಖ್ಯರಸ್ತೆಯಲ್ಲೇ ನಿಲ್ಲಿಸುವುದರಿಂದ ಸಾರ್ವಜನಿಕರ ಓಡಾಟಕ್ಕೂ ತೊಂದರೆ. 

ಮತ್ತೊಂದು ಬದಿಯಲ್ಲಿ ರಾಮನಗರ ಕಡೆಯಿಂದ ಬಸ್‌ಗಳು ಬರುವುದರಿಂದ ಇಲ್ಲಿಯೂ ಸ್ಥಳ ತೀರಾ ಇಕ್ಕಟ್ಟಾಗಿದೆ. ಅದರ ಜೊತೆಗೆ ಉಪ ನೋಂದಣಿ ಕಚೇರಿಯ ಸುತ್ತಮುತ್ತಲೂ ಜನರು ದ್ವಿಚಕ್ರ ವಾಹನ ನಿಲ್ಲಿಸುತ್ತಾರೆ. ಹಾಗಾಗಿ, ಇಲ್ಲಿ  ವಾಹನ ನಿಲ್ಲಿಸುವ ವಿಚಾರವಾಗಿ ಜನರಲ್ಲಿ ನಿತ್ಯವೂ ಜಗಳ ಕಾಯಂ ಎಂಬಂತಾಗಿದೆ.

ಉಪ ನೋಂದಣಿಯ ಕಚೇರಿಯೊಳಗೆ ಹೋದರೆ ಅಲ್ಲಿಯೂ ಎಲ್ಲೆಡೆ ಇಕ್ಕಟಾದ ಜಾಗದ್ದೇ ಸಮದಸ್ಯೆ. ಮಹಿಳೆ ಮತ್ತು ವೃದ್ಧರಿಗೆ ಕೂರಲು ಸ್ಥಳವಿಲ್ಲ. ತಾಯಂದಿರು ಮಕ್ಕಳಿಗೆ ಹಾಲುಣಿಸಲು ಪ್ರತ್ಯೇಕವಾದ ಜಾಗ ಕೇವಲ ಹೆಸರಿಗೆ ಮಾತ್ರ ಮಾಡಲಾಗಿದೆ. ಅದು ಬಳಸುವ ಸ್ಥಿತಿಯಲ್ಲಿ ಇರದೇ ಇರುವುದಿರಂಧ ತಾಯಂದಿರುವ ಮತ್ತು ಶಿಶುಗಳಿಗೆ ಉಪಯೋಗಕ್ಕೆ ಬಾರದಂತಾಗಿದೆ. ಕಟ್ಟಡದೊಳಗಿನ ಇಕ್ಕಟ್ಟಾದ ಜಾಗದಲ್ಲೇ ಅಧಿಕಾರಿಗಳು ಕಾರ್ಯ ನಿರ್ವಹಿಸುತ್ತಾರೆ. ಅದರಲ್ಲೂ ನೋಂದಣಿಗೆ ಬರುವ ಜನರಿಗೆ ಇಲ್ಲಿ ನಿಲ್ಲಲು ಜಾಗವೇ ಇಲ್ಲದಂತಾಗಿದೆ. ಇದರಿಂದ ಬೇಸತ್ತಿರುವ ಸಾರ್ವಜನಿಕರು ಹಲವು ಬಾರಿ ಕಟ್ಟಡವನ್ನು ವಿಶಾಲವಾದ ಜಾಗಕ್ಕೆ ಬದಲಾಯಿಸುವಂತೆ ಉಪ ನೋಂದಣಾಧಿಕಾರಿಗೆ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ. 

ಸಾರ್ವಜನಿಕರ ಜೊತೆಗೆ ಕೆಲ ಸಂಘಟನೆಯ ಮುಖಂಡರೂ ಹಲವು ಬಾರಿ ಕಚೇರಿ ಸ್ಥಳಾಂತರಕ್ಕೆ ಪ್ರತಿಭಟನೆ, ಹೋರಾಟ ಮಾಡಿದ್ದಾರೆ. ಆದರೆ ಯಾವ ಹೋರಾಟ, ಪ್ರತಿಭಟನೆಗಳೂ ಸಮಸ್ಯೆಯನ್ನು ಬಗೆಹರಿಸಿಲ್ಲ. ಕನಕಪುರ ತಾಲ್ಲೂಕಿನಲ್ಲಿ ಎಲ್ಲಾ ಇಲಾಖೆಗಳಿಗೂ ಉತ್ತಮ ಕಚೇರಿ ಮಾಡಿಕೊಟ್ಟಿರುವ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಮತ್ತು ಸಂಸದ ಡಿ.ಕೆ.ಸುರೇಶ್‌ ಅವರು ಈ ಕಡೆ ಗಮನ ಹರಿಸಿಲ್ಲ ಎಂಬುದು ಸಾರ್ವಜನಿಕ ದೂರು. 

ಉಪ ನೋಂದಣಿ ಕಚೇರಿಗೆ ಹೋಗಲು ಅಳವಡಿಸಿರುವ ಕಡಿದಾದ ಮೆಟ್ಟಿಲುಗಳು
ಉಪ ನೋಂದಣಿ ಕಚೇರಿಗೆ ವಯೋವೃದ್ಧರು ಅಂಗವಿಕಲರಿಗಾಗಿ ಅಳವಡಿಸುತ್ತಿರುವ ರ‍್ಯಾಂಪ್
ಉಪ ನೋಂದಣಿ ಕಚೇರಿ ಮುಂಭಾಗದ ಮುಖ್ಯರಸ್ತೆಯಲ್ಲೇ ವಾಹನಗಳನ್ನು ನಿಲ್ಲಿಸಿರುವುದು
ಕಚೇರಿಯ ಒಳಗಡೆ ಜನರು ಜಾಗವಿಲ್ಲದೆ ಇಕ್ಕಟ್ಟಾದ ಜಾಗದಲ್ಲಿ ನಿಂತಿರುವುದು
ಕಿರಿದಾಗಿರುವ ಜಾಗದಲ್ಲಿರುವ ನೋಂದಣಿಯ ಕೌಂಟರ್‌ 
ಉಪ ನೋಂದಣಿ ಕಚೇರಿಯಲ್ಲಿ ನೋಂದಣಿಗಾಗಿ ನಿಂತಿರುವ ಜನರು
ಚೀಲೂರು ಮುನಿರಾಜು

ಕನಕಪುರ ಉಪ ನೋಂದಣಿ ಕಚೇರಿಯನ್ನು 2014ರಲ್ಲಿ ₹ 58900 ಬಾಡಿಗೆಗೆ ಪಡೆಯಲಾಗಿದೆ. ಕೆಲವು ಅಗತ್ಯ ಸೌಕರ್ಯಗಳನ್ನು ಕಲ್ಪಿಸಲು ಕಟ್ಟಡದ ಮಾಲೀಕರಲ್ಲಿ ಮನವಿ ಮಾಡಲಾಗಿದೆ. ಕಟ್ಟಡವನ್ನು ಬೇರೆ ಕಡೆಗೆ ಸ್ಥಳಾಂತರಿಸಲು ಇಲ್ಲವೇ ನಿವೇಶನ ನೀಡಿದರೆ ಕಟ್ಟಡ ನಿರ್ಮಿಸಿಕೊಳ್ಳಲು ಕೋರಿ ಸಂಬಂಧಿಸಿದ ಅಧಿಕಾರಿಗಳಿಗೆ ಮನವಿ ಮಾಡಲಾಗಿದೆ.  ಸುರೇಶ್‌ ಎ. ಉಪ ನೋಂದಣಾಧಿಕಾರಿ ಕನಕಪುರ ಈ ಕಚೇರಿಯಲ್ಲಿ ದಿನಕ್ಕೆ 60 ರಿಂದ 70 ನೋಂದಣಿ ಕಾರ್ಯ ನಡೆಯುತ್ತದೆ. ತಿಂಗಳಿಗೆ ಸುಮಾರು ₹ 4 ರಿಂದ ₹ 5 ಕೋಟಿ ಸಂಗ್ರಹವಾಗುತ್ತದೆ.  ವರ್ಷಕ್ಕೆ 1200 ವಿವಾಹ ನೋಂದಣಿ ಆಗುತ್ತವೆ. ಹೆಚ್ಚಿನ ಸಂಖ್ಯೆಯಲ್ಲಿ ನೋಂದಣಿಗೆ ಜನರು ಬರುತ್ತಿದ್ದು ಇರುವ ಜಾಗದಲ್ಲಿಯೇ ಅವಶ್ಯಕತೆ ಇರುವಷ್ಟು ಮೂಲಸೌಕರ್ಯ ಕಲ್ಪಿಸಿದ್ದೇವೆ. ವಯೋವೃದ್ಧರಿಗಾಗಿ ಲಿಫ್ಟ್‌ ಅಳವಡಿಸಲು ಮನವಿ ಮಾಡಿದ್ದೇವೆ.  –ಅನಿತಾ ಐ.ಎಸ್. ಉಪ ನೋಂದಣಾಧಿಕಾರಿ ಕನಕಪುರ ಇಲ್ಲಿನ ಉಪ ನೋಂದಣಿ ಕಚೇರಿ ಇಕ್ಕಟ್ಟಾಗಿದೆ. ಜನರು ವಿಧಿಯಿಲ್ಲದೆ ಇಲ್ಲಿಗೆ ರಿಜಿಸ್ಟರ್‌ಗೆ ಬರುತ್ತಾರೆ ಪ್ರತಿದಿನ ಲಕ್ಷಾಂತರ ರೂಪಾಯಿ ಟ್ಯಾಕ್ಸ್‌ ಹೋಗುತ್ತದೆ. ಜನರಿಗೆ ಅನುಕೂಲಕರವಾಗಿ ಇರುವಂತೆ ಕಚೇರಿ ನಿರ್ಮಿಸಿ ಅಗತ್ಯ ಮೂಲಸೌಕರ್ಯ ಕೊಡಬೇಕು. ರೇಷ್ಮೆ ಗೂಡಿನ ಮಾರುಕಟ್ಟೆಯ ಹಳೇ ನಗರಸಭೆ ಕಚೇರಿ ಕುರುಪೇಟೆಯ ಕೆಇಬಿ ಕಟ್ಟಡಕ್ಕೆ ಸ್ಥಳಾಂತರಿಸಬೇಕು ಇಲ್ಲವಾದಲ್ಲಿ ಯೋಜನಾ ಪ್ರಾಧಿಕಾರಕ್ಕೆ ಜಾಗ ಕೊಟ್ಟಂತೆ ಸೂಕ್ತ ಸ್ಥಳದಲ್ಲಿ ಜಾಗ ಕೊಟ್ಟು ಅಲ್ಲಿ ಸ್ವಂತ ಕಟ್ಟಡ ನಿರ್ಮಿಸಿ ಸ್ಥಳಾಂತರಿಸಬೇಕು. ಚೀಲೂರು ಮುನಿರಾಜು ರೈತ ಸಂಘದ ರಾಜ್ಯ ಸಂಚಾಲಕ ಕನಕಪುರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.