ADVERTISEMENT

ರಾಮನಗರ | ಆತ್ಮಹತ್ಯೆ ವರದಿ: ಸಂಯಮ ವಹಿಸಲು ಸಲಹೆ

​ಪ್ರಜಾವಾಣಿ ವಾರ್ತೆ
Published 21 ಜನವರಿ 2026, 4:07 IST
Last Updated 21 ಜನವರಿ 2026, 4:07 IST
<div class="paragraphs"><p>ರಾಮನಗರದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಮಾಧ್ಯಮದವರಿಗಾಗಿ ಹಮ್ಮಿಕೊಂಡಿದ್ದ ಕಾರ್ಯಾಗಾರವನ್ನು&nbsp;ಜಿಲ್ಲಾ ಪಂಚಾಯಿತಿ ಸಹಾಯಕ ಕಾರ್ಯಕ್ರಮ ಅಧಿಕಾರಿ ಲೋಕೇಶ್, ಜಿಲ್ಲಾ ಮಾನಸಿಕ ಆರೋಗ್ಯ ಕಾರ್ಯಕ್ರಮಾಧಿಕಾರಿ ಡಾ. ಕುಮಾರ್ ಉದ್ಘಾಟಿಸಿದರು.&nbsp;</p></div>

ರಾಮನಗರದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಮಾಧ್ಯಮದವರಿಗಾಗಿ ಹಮ್ಮಿಕೊಂಡಿದ್ದ ಕಾರ್ಯಾಗಾರವನ್ನು ಜಿಲ್ಲಾ ಪಂಚಾಯಿತಿ ಸಹಾಯಕ ಕಾರ್ಯಕ್ರಮ ಅಧಿಕಾರಿ ಲೋಕೇಶ್, ಜಿಲ್ಲಾ ಮಾನಸಿಕ ಆರೋಗ್ಯ ಕಾರ್ಯಕ್ರಮಾಧಿಕಾರಿ ಡಾ. ಕುಮಾರ್ ಉದ್ಘಾಟಿಸಿದರು. 

   

ರಾಮನಗರ: ‘ಆತ್ಮಹತ್ಯೆ ಅತ್ಯಂತ ಸೂಕ್ಷ್ಮ ವಿಷಯ. ವಿವಿಧ ಕಾರಣಗಳಿಗಾಗಿ ತಮ್ಮ ಬದುಕನ್ನು ಅಂತ್ಯಗೊಳಿಸಿಕೊಳ್ಳುವವರ ಬಗ್ಗೆ ವರದಿ ಮಾಡುವಾಗ ಮಾಧ್ಯಮಗಳು ಸಂಯಮ ತೋರಬೇಕು’ ಎಂದು ಜಿಲ್ಲಾ ಮಾನಸಿಕ ಆರೋಗ್ಯ ಕಾರ್ಯಕ್ರಮಾಧಿಕಾರಿ ಡಾ. ಕುಮಾರ್ ಸಲಹೆ ನೀಡಿದರು.

ನಗರದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ನಿಮ್ಹಾನ್ಸ್‌ನ ಸುರಕ್ಷಾ ಯೋಜನೆ, ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಹಾಗೂ ಜಿಲ್ಲಾ ಮಾನಸಿಕ ಆರೋಗ್ಯ ಕಾರ್ಯಕ್ರಮ ವಿಭಾಗದ ಸಹಯೋಗದಲ್ಲಿ ಮಾಧ್ಯಮದವರಿಗಾಗಿ ಮಂಗಳವಾರ ಹಮ್ಮಿಕೊಂಡಿದ್ದ ‘ಆತ್ಮಹತ್ಯೆ ತಡೆಗಟ್ಟುವಲ್ಲಿ ಮಾಧ್ಯಮಗಳ ಪಾತ್ರ ಹಾಗೂ ವರದಿಗಾರಿಕೆಯಲ್ಲಿ ಪಾಲಿಸಬೇಕಾದ ಮಾರ್ಗಸೂಚಿಗಳು’ ಕುರಿತ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು.

ADVERTISEMENT

‘ಆತ್ಮಹತ್ಯೆ ಕುರಿತು ಕೆಲ ಮುದ್ರಣ ಮತ್ತು ದೃಶ್ಯ ಮಾಧ್ಯಮಗಳಲ್ಲಿ ಬರುವ ಸುದ್ದಿಗಳು ಸಮಾಜದ ಮೇಲೆ ನಕಾರಾತ್ಮಕ ಪರಿಣಾಮ ಬೀರುವ ಸಾಧ್ಯತೆ ಇರುತ್ತದೆ. ಹಾಗಾಗಿ, ಸುದ್ದಿ ಮಾಡುವುದಕ್ಕೆ ಮುಂಚೆ ಅದರಿಂದ ಸಂತ್ರಸ್ತ ಕುಟುಂಬದವರು ಮತ್ತು ಸಮಾಜದ ಮೇಲಾಗುವ ಪರಿಣಾಮದ ಬಗ್ಗೆಯೂ ಚಿಂತನೆ ನಡೆಸಬೇಕು’ ಎಂದರು.

‘ವಿಭಕ್ತ ಕುಟುಂಬದಲ್ಲೇ ಆತ್ಮಹತ್ಯೆ ಹೆಚ್ಚು. ಇತ್ತೀಚೆಗೆ ಮಕ್ಕಳೂ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಸಾಮಾಜಿಕ ಜಾಲತಾಣ ಮತ್ತು ಮಾಧ್ಯಮದ ಪ್ರಭಾವ ಇದಕ್ಕೆ ಕಾರಣ. ವ್ಯಕ್ತಿಯಲ್ಲಾಗುವ ಬದಲಾವಣೆಗಳು ಆತ್ಮಹತ್ಯೆ ಮುನ್ಸೂಚನೆ ನೀಡುತ್ತವೆ. ಜೊತೆಯಲ್ಲಿರುವವರು ಗುರುತಿಸಿದರೆ ಮುಂದಾಗುವ ಅನಾಹುತ ತಡೆಯಬಹದು’ ಎಂದು ಅಭಿಪ್ರಾಯಪಟ್ಟರು.

ನಿಮ್ಹಾನ್ಸ್ ಸುರಕ್ಷಾ ಯೋಜನೆಯ ಸಂಯೋಜಕ ಮಹೇಂದ್ರ ಮಾತನಾಡಿ, ‘ಆತ್ಮಹತ್ಯೆ ಬಗ್ಗೆ ಮಾಧ್ಯಮಗಳು ವರದಿ ಮಾಡುವಾಗ ವಿಶ್ವ ಆರೋಗ್ಯ ಸಂಸ್ಥೆಯ ಮಾರ್ಗಸೂಚಿಗಳನ್ನು ಪಾಲಿಸಬೇಕು. ಆ ಮೂಲಕ, ಸಮಾಜಕ್ಕೆ ಭರವಸೆ ನೀಡುವ ಕೆಲಸ ಮಾಡಬೇಕು’ ಎಂದು ತಿಳಿಸಿದರು.

ಜಿಲ್ಲಾಸ್ಪತ್ರೆಯ ಮನೋವೈದ್ಯಕೀಯ ಸಾಮಾಜಿಕ ಕಾರ್ಯಕರ್ತೆ ಪದ್ಮರೇಖಾ, ‘ನಿಮ್ಹಾನ್ಸ್‌ ಸಮೀಕ್ಷೆ ಪ್ರಕಾರ ದೇಶದ ಶೇ 10ರಷ್ಟು ಜನಸಂಖ್ಯೆ ಒಂದಲ್ಲ ಒಂದು ರೀತಿಯ ಮಾನಸಿಕ ಕಾಯಿಲೆಯಿಂದ ಹಾಗೂ ಶೇ 20ರಷ್ಟು ಮಂದಿ ಖಿನ್ನತೆಯಿಂದ ಬಳಲುತ್ತಿದ್ದಾರೆ ಎಂದು ಅಧ್ಯಯನಗಳು ಹೇಳಿವೆ. ಆತ್ಮಹತ್ಯೆ ಕುರಿತು ಸಮಾಜದಲ್ಲಿ ಅನೇಕ ತಪ್ಪು ಕಲ್ಪನೆಗಳನ್ನು ಹೋಗಲಾಡಿಸಬೇಕು’ ಎಂದರು.

ಜಿಲ್ಲಾ ಪಂಚಾಯಿತಿಯ ಸಹಾಯಕ ಯೋಜನಾಧಿಕಾರಿ ಯಶವಂತ್, ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ಶಿವಲಿಂಗಯ್ಯ ವಿಭೂತಿಕೆರೆ, ಪ್ರಧಾನ ಕಾರ್ಯದರ್ಶಿ ಮಂಜುನಾಥ್, ಸಂಶೋಧನಾರ್ಥಿಗಳಾದ ಹರೀಶ್ ಕುಮಾರ್, ಡಾ. ಸಾಧ್ವಿ ಕೃಷ್ಣಮೂರ್ತಿ, ಸುರಕ್ಷಾ ತಂಡದ ಸದಸ್ಯರಾದ ಯಶವಂತ್, ರೇವತಿ, ನಿಶಾ, ಪವಿತ್ರಾ ಇದ್ದರು.

ಸುರಕ್ಷಾ ಯೋಜನೆ ಮೂಲಕ 3 ವರ್ಷಗಳಿಂದ ಸಮುದಾಯದ ಮಟ್ಟದಲ್ಲಿ ಆತ್ಮಹತ್ಯೆ ತಡೆಗಟ್ಟುವಿಕೆ ಕುರಿತು ಜಾಗೃತಿ ಮೂಡಿಸಲಾಗುತ್ತಿದೆ. ಸಮುದಾಯ ಜಾಗೃತಿಯಾದಾಗ ಮಾತ್ರ ಆತ್ಮಹತ್ಯೆ ಪ್ರಮಾಣ ಇಳಿಕೆಯಾಗುತ್ತದೆ
– ಮಹೇಂದ್ರ ಸಂಯೋಜಕ ನಿಮ್ಹಾನ್ಸ್ ಸುರಕ್ಷಾ ಯೋಜನೆ
ಕುಟುಂಬದಲ್ಲಿ ಯಾರಿಗಾದರೂ ಮಾನಸಿಕ ಕಾಯಿಲೆ ಬಂದಾಗ ಅವರನ್ನು ದೇವಾಲಯಕ್ಕೆ ಕರೆದೊಯ್ದು ಸಮಯ ವ್ಯರ್ಥ ಮಾಡದೆ ಸಮೀಪದ ಆಸ್ಪತ್ರೆಯಲ್ಲಿರುವ ಆಪ್ತ ಸಮಾಲೋಚಕರನ್ನು‌ ಭೇಟಿ‌ ಮಾಡಿ ಸೂಕ್ತ ಚಿಕಿತ್ಸೆ ಕೊಡಿಸಬೇಕು
– ಪದ್ಮರೇಖಾ ಮನೋವೈದ್ಯಕೀಯ ಸಾಮಾಜಿಕ ಕಾರ್ಯಕರ್ತೆ

ಸಾವಿರ ಮಂದಿಗೆ ಟೆಲಿ ಸಮಾಲೋಚನೆ ಸುರಕ್ಷಾ ಯೋಜನೆಯಡಿ ಜಿಲ್ಲಾಸ್ಪತ್ರೆಯಲ್ಲಿ ಆರಂಭಿಸಿರುವ ಉಚಿತ ಸಹಾಯವಾಣಿ: 14416 ಟೆಲಿ ಮನಸ್‌ಗೆ 3 ವರ್ಷದಲ್ಲಿ 3 ಸಾವಿರಕ್ಕೂ ಹೆಚ್ಚು ಮಂದಿ ಕರೆ ಮಾಡಿ ಸಮಾಲೋಚನೆ ಪಡೆದಿದ್ದಾರೆ. ವಿದ್ಯಾರ್ಥಿಗಳಿಂದಿಡಿದು ವೃದ್ಧರವರೆಗೆ ಈ ಸಹಾಯವಾಣಿಗೆ ಕರೆಗಳು ಬಂದಿವೆ. ಸಮಾಲೋಚಕರ ಸಲಹೆ ಮೇರೆಗೆ ಕೆಲವರು ಚಿಕಿತ್ಸೆ ಪಡೆದಿದ್ದಾರೆ’ ಎಂದು ಡಾ. ಕುಮಾರ್ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.