ADVERTISEMENT

ರಾಮನಗರ: ಟೇಕ್ವಾಂಡೊ ಕ್ರೀಡಾಪಟುಗಳಿಗೆ ಸನ್ಮಾನ

​ಪ್ರಜಾವಾಣಿ ವಾರ್ತೆ
Published 4 ಮಾರ್ಚ್ 2024, 5:39 IST
Last Updated 4 ಮಾರ್ಚ್ 2024, 5:39 IST
ರಾಷ್ಟ್ರಮಟ್ಟದ ನಡೆದ ಟೇಕ್ವಾಂಡೊ ಸ್ಪರ್ಧೆಯಲ್ಲಿ ಭಾಗವಹಿಸಿ ಪದಕ ಗಳಿಸಿದ ರಾಮನಗರ ಜಿಲ್ಲಾ ಟೇಕ್ವಾಂಡೊ ಸಂಸ್ಥೆಯ ಕ್ರೀಡಾಪಟುಗಳಿಗೆ ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಗಣ್ಯರು ಸನ್ಮಾನಿಸಿದರು
ರಾಷ್ಟ್ರಮಟ್ಟದ ನಡೆದ ಟೇಕ್ವಾಂಡೊ ಸ್ಪರ್ಧೆಯಲ್ಲಿ ಭಾಗವಹಿಸಿ ಪದಕ ಗಳಿಸಿದ ರಾಮನಗರ ಜಿಲ್ಲಾ ಟೇಕ್ವಾಂಡೊ ಸಂಸ್ಥೆಯ ಕ್ರೀಡಾಪಟುಗಳಿಗೆ ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಗಣ್ಯರು ಸನ್ಮಾನಿಸಿದರು   

ರಾಮನಗರ: ‘ಪಠ್ಯದಷ್ಟೇ ಪಠ್ಯೇತರ ಚಟುವಟಿಕೆಗಳು ಸಹ ವಿದ್ಯಾರ್ಥಿಗಳಿಗೆ ಭವಿಷ್ಯ ಕಟ್ಟಿಕೊಡುತ್ತವೆ. ಕ್ರೀಡಾಪಟುಗಳನ್ನು ತಮ್ಮ ಕ್ಷೇತ್ರದಲ್ಲಿ ಅತ್ಯುನ್ನತ ಸಾಧನೆ ಮಾಡುವ ಮೂಲಕ ಅದನ್ನು ಸಾಕಾರ ಮಾಡಿಕೊಳ್ಳಬೇಕು. ನಮ್ಮ ನಾಡು ಮತ್ತು ದೇಶಕ್ಕೆ ಕೀರ್ತಿ ತರಬೇಕು’ ಎಂದು ರಾಜ್ಯ ಸರ್ಕಾರಿ ನೌಕರರ ಸಂಘದ ರಾಮನಗರ ಜಿಲ್ಲಾ ಘಟಕದ ಅಧ್ಯಕ್ಷ ಕೆ. ಸತೀಶ್ ಹೇಳಿದರು.

ಗುಜರಾತ್ ಮತ್ತು ರಾಜಸ್ಥಾನದಲ್ಲಿ ಶನಿವಾರ ನಡೆದ ರಾಷ್ಟ್ರಮಟ್ಟದ ನಡೆದ ಟೇಕ್ವಾಂಡೊ ಸ್ಪರ್ಧೆಯಲ್ಲಿ ಭಾಗವಹಿಸಿ ಪದಕ ಗಳಿಸಿದ ರಾಮನಗರ ಜಿಲ್ಲಾ ಟೇಕ್ವಾಂಡೊ ಸಂಸ್ಥೆಯ ಕ್ರೀಡಾಪಟುಗಳಿಗೆ ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಹಮ್ಮಿಕೊಂಡಿದ್ದ ಸನ್ಮಾನ ಸಮಾರಂಭದಲ್ಲಿ ಅವರು ಮಾತನಾಡಿದರು.

‘ಕ್ರೀಡಾಪಟುಗಳಿಗೆ ಅನುಕೂಲವಾಗುವ ದೃಷ್ಟಿಯಿಂದ ಜಿಲ್ಲಾ ಕ್ರೀಡಾಂಗಣವನ್ನು ಅಭಿವೃದ್ಧಿಪಡಿಸಿ, ಮೇಲ್ದರ್ಜೆಗೇರಿಸುವ ಕೆಲಸಕ್ಕೆ ಚಾಲನೆ ನೀಡಲಾಗಿದೆ. ಇನ್ನು ಮುಂದೆ, ಕ್ರೀಡಾಪಟುಗಳು ಅಭ್ಯಾಸಕ್ಕಾಗಿ ಬೆಂಗಳೂರಿಗೆ ಹೋಗುವ ಬದಲು, ಇಲ್ಲಿಯೇ ಅಭ್ಯಾಸ ಮಾಡಬಹುದು. ಇದರಿಂದಾಗಿ ಜಿಲ್ಲೆಯು ಭವಿಷ್ಯದಲ್ಲಿ ಹೆಚ್ಚಿನ ಕ್ರೀಡಾಪಟುಗಳಿಗೆ ವೇದಿಕೆಯಾಗಲಿದೆ’ ಎಂದರು.

ADVERTISEMENT

ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕಿ ಅನಿತಾ ಮಾತನಾಡಿ, ‘ ಜಿಲ್ಲೆಯಲ್ಲಿ ಒಂದೇ ಕ್ರೀಡಾಂಗಣ ಇರುವುದರಿಂದ ಎಲ್ಲಾ ಕ್ರೀಡೆಗಳಿಗೂ ಅವಕಾಶವನ್ನು ಕಲ್ಪಿಸಬೇಕಾಗಿದೆ. ಟೇಕ್ವಾಂಡೊ ಒಂದು ಕ್ರೀಡೆಯಾಗಿ ಮಕ್ಕಳ ಅತ್ಮ ರಕ್ಷಣೆಗೆ ತುಂಬಾ ಸಹಾಕಾರಿಯಾಗಿದೆ. ಇದರ ಜೊತೆಗೆ ಜೂಡೊ, ಕರಾಟೆಯಂತಹ ಕ್ರೀಡೆಗಳಿಗೆ ನಮ್ಮಲ್ಲಿ ಉನ್ನತ ಸ್ಥಾನವಿದೆ’ ಎಂದು ಹೇಳಿದರು.

ರಾಷ್ಟ್ರಮಟ್ಟದ ಸ್ಪರ್ಧೆಯಲ್ಲಿ ಚಿನ್ನದ ಪದಕ ವಿಜೇತರಾದ ಭೂಮಿಕಾ ಎಂ, ಬೆಳ್ಳಿ ಪದಕ ಗಳಿಸಿದ ಸಾನ್ವಿ ಎಸ್, ಕಂಚಿನ ಪದಕ ವಿಜೇತರಾದ ಪೂರ್ವಿಕ ಎಂ, ದೀಪ್ತಿ, ಸಮುದ್ರ ಗೌಡ, ರಕ್ಷಕ್ ಗೌಡ ಹಾಗೂ ಫಿರ್ದೋಷ್ ಸುಲ್ತಾನ ಅವರನ್ನು ಗಣ್ಯರು ಸನ್ಮಾನಿಸಿದರು. ಗೌತಮ್ ಡೆವಲಪರ್ಸ್‍ನ ಹರ್ಷ ಮತ್ತು ಮಹೇಶ್ ಕ್ರೀಡಾಪಟುಗಳಿಗೆ ಪ್ರೋತ್ಸಾಹಧನ ನೀಡಿದರು.

ಜಿಲ್ಲಾ ಕಲಾಬಳಗಗಳ ಒಕ್ಕೂಟದ ಅಧ್ಯಕ್ಷ ಬೈರೇಗೌಡ, ನಗರಸಭೆ ಸದಸ್ಯೆ ಮಹಾಲಕ್ಷ್ಮಿ ಗೂಳಿಗೌಡ, ರಾಮನಗರ ಜಿಲ್ಲಾ ಟೇಕ್ವಾಂಡೊ ಸಂಸ್ಥೆ ಅಧ್ಯಕ್ಷ ಮಾಸ್ಟರ್ ಕೃಷ್ಣಮೂರ್ತಿ, ಸಂಸ್ಥೆಯ ಕಾರ್ಯದರ್ಶಿ ಎಂ. ಗೋವಿಂದ ಹಾಗೂ ಇನ್‌ಸ್ಪೆಕ್ಟರ್ ಶೋಭಾ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.