ADVERTISEMENT

ರಾಮನಗರ: ಗ್ರಾಮೀಣರ ಜ್ಞಾನಾರ್ಜನೆಗೆ ‘ಗ್ರಾಮ ಗ್ರಂಥಾಲಯ’

ಜಿಲ್ಲೆಯ 190 ಗ್ರಾಮಗಳಲ್ಲಿ ಶೀಘ್ರ ಆರಂಭ; ಸ್ವಸಹಾಯ ಸಂಘ, ಶಾಲೆ ಮುಖ್ಯಸ್ಥರಿಗೆ ನಿರ್ವಹಣೆಯ ಹೊಣೆ

ಓದೇಶ ಸಕಲೇಶಪುರ
Published 2 ಆಗಸ್ಟ್ 2025, 4:52 IST
Last Updated 2 ಆಗಸ್ಟ್ 2025, 4:52 IST
<div class="paragraphs"><p>ರಾಮನಗರದಲ್ಲಿರುವ ಜಿಲ್ಲಾ ಪಂಚಾಯಿತಿ ಕಚೇರಿಯಿಂದ ಗ್ರಾಮ ಪಂಚಾಯಿತಿಯೊಂದರ ಸಿಬ್ಬಂದಿ ಗ್ರಾಮ ಗ್ರಂಥಾಲಯಕ್ಕೆ ಪುಸ್ತಕಗಳನ್ನು ವಾಹನದಲ್ಲಿ ಕೊಂಡೊಯ್ದರು</p></div>

ರಾಮನಗರದಲ್ಲಿರುವ ಜಿಲ್ಲಾ ಪಂಚಾಯಿತಿ ಕಚೇರಿಯಿಂದ ಗ್ರಾಮ ಪಂಚಾಯಿತಿಯೊಂದರ ಸಿಬ್ಬಂದಿ ಗ್ರಾಮ ಗ್ರಂಥಾಲಯಕ್ಕೆ ಪುಸ್ತಕಗಳನ್ನು ವಾಹನದಲ್ಲಿ ಕೊಂಡೊಯ್ದರು

   

ರಾಮನಗರ: ಹಳ್ಳಿಗಳಲ್ಲಿರುವ ಪುಸ್ತಕಪ್ರಿಯರಿಗೆ ಹಾಗೂ ವಿದ್ಯಾರ್ಥಿಗಳಿಗೆ ಇಲ್ಲೊಂದು ಒಳ್ಳೆಯ ಸುದ್ದಿ! ಓದಿನ ಅಭಿರುಚಿ ತಣಿಸಲು ಅಥವಾ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸಲು ಜಿಲ್ಲೆ, ತಾಲ್ಲೂಕು, ಹೋಬಳಿ ಅಥವಾ ಪಂಚಾಯಿತಿ ಮಟ್ಟದ ಗ್ರಂಥಾಲಯಗಳಿಗೆ ನೀವು ಬರಬೇಕಿಲ್ಲ. ಇನ್ನು ಮುಂದೆ ನಿಮ್ಮೂರು ಅಥವಾ ಅದರ ಅಕ್ಕಪಕ್ಕದಲ್ಲೇ ಗ್ರಂಥಾಲಯಗಳು ಸ್ಥಾಪನೆಯಾಗಲಿವೆ .

ಕೇಂದ್ರ ಸರ್ಕಾರದ ನೆರವಿನೊಂದಿಗೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ಇಲಾಖೆಯು ಜಿಲ್ಲೆಯಲ್ಲಿ ಹೊಸದಾಗಿ 190 ಗ್ರಾಮ ಗ್ರಂಥಾಲಯಗಳನ್ನು ಆರಂಭಿಸಲು ಮುಂದಾಗಿದೆ. ಈಗಾಗಲೇ ಜಿಲ್ಲೆಯ ಗ್ರಾಮ ಪಂಚಾಯಿತಿ ಮಟ್ಟದಲ್ಲಿರುವ 130 ಗ್ರಂಥಾಲಯಗಳ ಜೊತೆಗೆ, ಗ್ರಾಮ ಗ್ರಂಥಾಲಯಗಳು ಸಹ ಓದುಗರಿಗೆ ಮುಕ್ತವಾಗಲಿವೆ.

ADVERTISEMENT

ಬಂಡವಾಳ ಹೂಡಿಕೆಗಾಗಿ ರಾಜ್ಯಗಳಿಗೆ ವಿಶೇಷ ಸಹಾಯ ಯೋಜನೆಯ (ಎಸ್‌ಎಎಸ್‌ಸಿಐ) ಕೇಂದ್ರ ಸರ್ಕಾರವು ಮಕ್ಕಳು ಮತ್ತು ಹದಿಹರೆಯದವರಿಗಾಗಿ ಗ್ರಂಥಾಲಯಗಳು ಮತ್ತು ಡಿಜಿಟಲ್ ಮೂಲಸೌಕರ್ಯ ಕಾರ್ಯಕ್ರಮದಡಿ, ಈ ಗ್ರಂಥಾಲಯಗಳು ಆರಂಭವಾಗುತ್ತಿವೆ. ಇವುಗಳ ಸಂಪೂರ್ಣ ಉಸ್ತುವಾರಿ ಸ್ಥಳೀಯ ಗ್ರಾಮ ಪಂಚಾಯಿತಿಗಳದ್ದು.

2 ಲಕ್ಷ ಪುಸ್ತಕ: ‘ನ್ಯಾಷನಲ್ ಬುಕ್ ಟ್ರಸ್ಟ್ ಇಂಡಿಯಾದಿಂದ ಪ್ರತಿ ಗ್ರಾಮ ಗ್ರಂಥಾಲಯಕ್ಕೆ ತಲಾ ₹2 ಲಕ್ಷ ಮೊತ್ತದ ಪುಸ್ತಕಗಳನ್ನು ಟೆಂಡರ್ ಮೂಲಕ ಖರೀದಿಸಲಾಗಿದೆ. ಅದರಲ್ಲಿ 2,040 ಕನ್ನಡ, 627 ಇಂಗ್ಲಿಷ್ ಹಾಗೂ 20 ಕಲಿಕಾ ವಿಜ್ಞಾನ ಪುಸ್ತಕಗಳು ಸೇರಿದಂತೆ ಒಟ್ಟು 2,687 ಕೃತಿಗಳು ಸೇರಿವೆ’ ಎಂದು ಜಿಲ್ಲಾ
ಪಂಚಾಯಿತಿ ಸಹಾಯಕ ಕಾರ್ಯದರ್ಶಿ ಶಿವಕುಮಾರ್ ‘ಪ್ರಜಾವಾಣಿ’ಗೆ ತಿಳಿಸಿದರು.

‘ಮಕ್ಕಳ ಕತೆ, ವಿಜ್ಞಾನ, ಮಹನೀಯರ ಜೀವನ ಚರಿತ್ರೆ, ಮಕ್ಕಳು ಮತ್ತು ಸಮುದಾಯ ಚಟುವಟಿಕೆಗಳು ಸೇರಿದಂತೆ ವೈವಿಧ್ಯಮಯ ವಿಷಯಗಳ ಪುಸ್ತಕಗಳು ಸದ್ಯದಲ್ಲೇ ಗ್ರಂಥಾಲಯ ತಲುಪಲಿವೆ. ಗ್ರಾಮೀಣ ಭಾಗದ ವಿದ್ಯಾರ್ಥಿಗಳು ಮತ್ತು ಹದಿಹರೆಯದವರನ್ನು ಗಮನದಲ್ಲಿಟ್ಟುಕೊಂಡು ಗ್ರಂಥಾಲಯಗಳನ್ನು
ಸ್ಥಾಪಿಸಲಾಗುತ್ತಿದೆ’ ಎಂದು ಹೇಳಿದರು.

ಪಟ್ಟಿ ಅಂತಿಮ: ‘ಈಗಾಗಲೇ 190 ಗ್ರಾಮಗಳ ಪಟ್ಟಿಯನ್ನು ಅಂತಿಮಗೊಳಿಸಲಾಗಿದೆ. ಗ್ರಂಥಾಲಯಕ್ಕೆ ಅಗತ್ಯವಿರುವ ಕಂಪ್ಯೂಟರ್, ಪೀಠೋಪಕರಣ, ಯುಪಿಎಸ್ ಸೇರಿದಂತೆ ಇತರ ಅಗತ್ಯ ಪರಿಕರಗಳನ್ನು ₹1 ಲಕ್ಷದಲ್ಲಿ ಖರೀದಿಗೆ ಜಿ.ಪಂ.ನಿಂದ ಅನುದಾನ ಬಿಡುಗಡೆಯಾಗಿದೆ. ಮಕ್ಕಳಲ್ಲಿ ಓದುವ ಹವ್ಯಾಸ ಬೆಳೆಸುವುದು ಮತ್ತು ಡಿಜಿಟಲ್ ಕೌಶಲ ಬೆಳೆಸಲು ಡಿಜಿಟಲ್ ಸಂಪನ್ಮೂಲಗಳನ್ನು ಒದಗಿಸಲಾಗುತ್ತಿದೆ’ ಎಂದು ಶಿವಕುಮಾರ್ ತಿಳಿಸಿದರು.

ಗ್ರಾಮ ಗ್ರಂಥಾಲಯಗಳು ಗ್ರಾಮಮಟ್ಟದಲ್ಲಿರುವ ಸರ್ಕಾರಿ ಶಾಲೆ, ಗ್ರಂಥಾಲಯ, ಸಮುದಾಯ ಭವನ ಸೇರಿದಂತೆ ಸಾರ್ವಜನಿಕ ಬಳಕೆಯ ಕಟ್ಟಡಗಳಲ್ಲಿ ಕಾರ್ಯನಿರ್ವಹಿಸಲಿವೆ. ಈಗಾಗಲೇ ಗುರುತಿಸಿರುವ ಕಟ್ಟಡದ ದುರಸ್ತಿ, ನವೀಕರಣ, ವಿದ್ಯುತ್ ಸಂಪರ್ಕ, ಅಂತರ್ಜಾಲ, ಕುಡಿಯುವ ನೀರು, ಫ್ಯಾನ್ ಸೇರಿದಂತೆ ಇತರ ವೆಚ್ಚವನ್ನು ಸ್ಥಳೀಯ ಗ್ರಾಮ ಪಂಚಾಯಿತಿಯೇ ತನ್ನ ಸಂಪನ್ಮೂಲದಿಂದ ಭರಿಸಬೇಕು ಎಂದು ಇಲಾಖೆ ನಿರ್ದೇಶನ ನೀಡಿದೆ.

ವಾರಾಂತ್ಯ 4 ತಾಸು ಕಾರ್ಯನಿರ್ವಹಣೆ

‘ಗ್ರಂಥಾಲಯಗಳು ಪ್ರತಿ ವಾರಾಂತ್ಯದ ಶನಿವಾರ ಹಾಗೂ ಭಾನುವಾರ ಮಧ್ಯಾಹ್ನ 2 ಗಂಟೆಯಿಂದ ಸಂಜೆ 6 ಗಂಟೆವರೆಗೆ ಕನಿಷ್ಠ 4 ತಾಸು ಕಾರ್ಯನಿರ್ವಹಿಸಲಿವೆ. ಗ್ರಂಥಾಲಯಗಳನ್ನು ಜಿಪಿಎಲ್‌ಎಫ್ ಅಡಿಯ ಸ್ವಸಹಾಯ ಸಂಘ ನಿರ್ವಹಿಸಬೇಕು. ಯಾವುದೇ ಹೊಸ ಸಿಬ್ಬಂದಿ ನೇಮಕಕ್ಕೆ ಅವಕಾಶವಿಲ್ಲ. ಗ್ರಂಥಾಲಯ ಮೇಲ್ವಿಚಾರಣೆಗೆ ಸಂಘ ಅಥವಾ ಅದರ ಯಾರಾದರೂ ಒಬ್ಬರನ್ನು ನಿಯೋಜಿಸಲಾಗುವುದು. ಅವರಿಗೆ ಗ್ರಾಮ ಪಂಚಾಯಿತಿಯಿಂದ ದಿನಕ್ಕೆ ₹350 ಗೌರವಧನ ಪಾವತಿಸಲಾಗುವುದು. ಒಂದು ವೇಳೆ ಶಾಲಾ ಕಟ್ಟಡದಲ್ಲಿ ಗ್ರಂಥಾಲಯ ಶುರುವಾದರೆ ಎಸ್‌ಡಿಎಂಸಿ ಒಪ್ಪಿಗೆ ಪತ್ರವನ್ನು ಗ್ರಾ.ಪಂ. ಪಡೆಯಬೇಕು. ಶಾಲಾ ಕೊಠಡಿಯಲ್ಲಿ ಪ್ರಾರಂಭಿಸಿದರೆ ಶನಿವಾರ ಮತ್ತು ಭಾನುವಾರ ಹೊರತುಪಡಿಸಿ ಉಳಿದ ದಿನಗಳಲ್ಲಿ ಶಾಲಾ ಮಕ್ಕಳು ಗ್ರಂಥಾಲಯ ಬಳಸಲು ಅನುಕೂಲವಾಗುವಂತೆ ಗ್ರಂಥಾಲಯದ ಕೀಲಿಕೈಯನ್ನು ಶಾಲೆಯ ಮುಖ್ಯ ಶಿಕ್ಷಕರಿಗೆ ಹಸ್ತಾಂತರಿಸಲಾಗುತ್ತದೆ’ ಎಂದು ಜಿ.‌ಪಂ. ಸಿಪಿಒ ಸಿಕ್ಕಸುಬ್ಬಯ್ಯ ‘ಪ್ರಜಾವಾಣಿ’ಗೆ ತಿಳಿಸಿದರು.

ಗ್ರಾಮಮಟ್ಟದಲ್ಲೂ ಪುಸಕ್ತ ಓದುವ ಹವ್ಯಾಸ ಬೆಳೆಸುವ ಹಿನ್ನೆಲೆಯಲ್ಲಿ ಗ್ರಾಮ ಗ್ರಂಥಾಲಯಗಳನ್ನು ಆರಂಭಿಸಲಾಗುತ್ತಿದೆ. ಈಗಾಗಲೇ ಜಿಲ್ಲೆಯಾದ್ಯಂತ ಕಟ್ಟಡಗಳನ್ನು ಗುರುತಿಸಲಾಗಿದೆ. ಪುಸ್ತಕಗಳು, ಪಿಠೋಪಕರಣ ಸೇರಿದಂತೆ ಅಗತ್ಯ ಪರಿಕರಗಳನ್ನು ಪೂರೈಸಲಾಗುತ್ತಿದೆ.
-ಅನ್ಮೋಲ್ ಜೈನ್, ಸಿಇಒ, ಜಿಲ್ಲಾ ಪಂಚಾಯಿತಿ, ಬೆಂಗಳೂರು ದಕ್ಷಿಣ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.