
ರಾಮನಗರ: ತಾಲ್ಲೂಕಿನ ಮಾಯಗಾನಹಳ್ಳಿ, ಸಂಗಬಸವನದೊಡ್ಡಿ, ವಿಭೂತಿಕೆರೆ ಗ್ರಾಮದಲ್ಲಿ ಕಾಡಾನೆ ಹಾವಳಿಗೆ ರೈತರ ಅಪಾರ ಪ್ರಮಾಣದ ಬೆಳೆ ನಾಶವಾಗಿದೆ. ಸಂಗಬಸವನದೊಡ್ಡಿ ಗ್ರಾಮದ ಮಹದೇವಸ್ವಾಮಿ ಅವರ ತೋಟಕ್ಕೆ ಬಂದಿರುವ ಕಾಡಾನೆಗಳ ಹಿಂಡು ಐದು ವರ್ಷದ 40ಕ್ಕೂ ಹೆಚ್ಚು ತೆಂಗಿನಮರಗಳ ಸುಳಿ ಕಿತ್ತು ಹಾಕಿವೆ.
ಮಾಯಗಾನಹಳ್ಳಿ ಗ್ರಾಮದ ರೈತ ಮಂಜು ಅವರ ಬಾಳೆತೋಟ, ರೇವಣ್ಣ ರೈತರ ತೆಂಗಿನ ತೋಟ, ಸಪೋಟ ತೋಟ ಹಾಗೂ ನೀರಾವರಿ ಪರಿಕರಗಳನ್ನು ಸಹ ಹಾನಿಗೊಳಿಸಿವೆ. ವಿಷಯ ತಿಳಿದು ವಲಯ ಅರಣ್ಯಾಧಿಕಾರಿ ಮಹಮ್ಮದ್ ಮನ್ಸೂರ್ ಅವರು ರೈತರ ಜಮೀನಿಗೆ ಭೇಟಿ ನೀಡಿ ಬೆಳೆಹಾನಿ ಪರಿಶೀಲನೆ ನಡೆಸಿದರು.
ಕಷ್ಟಪಟ್ಟು ಬೆಳೆದ ಬೆಳೆಯನ್ನು ಕಾಡಾನೆಗಳು ನಾಶಪಡಿಸಿರುವುದರಿಂದ ಲಕ್ಷಾಂತರ ರೂಪಾಯಿ ನಷ್ಟವಾಗಿದೆ. ಕಳೆದ 15 ವರ್ಷಗಳಿಂದ ಕಾಡಾನೆಗಳ ಹಾವಳಿ ವಿಪರೀತವಾಗಿವೆ. ಜಮೀನಿನಲ್ಲಿ ಯಾವ ಬೆಳೆಯನ್ನೂ ಆನೆಗಳು ಬಿಡದೆ ನಾಶಪಡಿಸುತ್ತಿವೆ. ಇದರಿಂದಾಗಿ, ನಾವು ನಷ್ಟದ ಸುಳಿಗೆ ಸಿಲುಕಿದ್ದೇವೆ. ಅರಣ್ಯ ಇಲಾಖೆ ಸೂಕ್ತ ಪರಿಹಾರ ನೀಡಬೇಕು. ಕಾಡಾನೆ ಹಾವಳಿಗೆ ಕಡಿವಾಣ ಹಾಕಬೇಕು ಎಂದು ರೈತರು ಒತ್ತಾಯಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.