
ರಾಮನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಗುರುವಾರ ಹೆಚ್ಚುವರಿ ಜಿಲ್ಲಾಧಿಕಾರಿ ಆರ್. ಚಂದ್ರಯ್ಯ ಅವರ ಅಧ್ಯಕ್ಷತೆಯಲ್ಲಿ ಮಹಿಳಾ ಅಭಿವೃಧ್ಧಿ ನಿಗಮದ ಫಲಾನುಭವಿಗಳ ಆಯ್ಕೆ ಸಮಿತಿ ಸಭೆ ನಡೆಯಿತು.
ರಾಮನಗರ: ‘ಕರ್ನಾಟಕ ರಾಜ್ಯ ಮಹಿಳಾ ಅಭಿವೃಧ್ಧಿ ನಿಗಮದ ವಿವಿಧ ಯೋಜನೆಗಳಡಿ ಸರ್ಕಾರ ನಿಗದಿಪಡಿಸಿದ ಗುರಿಯ ಅನ್ವಯ ಒಟ್ಟು 58 ಫಲಾನುಭವಿಗಳನ್ನು ಆಯ್ಕೆ ಮಾಡಲಾಗಿದೆ’ ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ಆರ್. ಚಂದ್ರಯ್ಯ ಹೇಳಿದರು.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಗುರುವಾರ ನಡೆದ ಮಹಿಳಾ ಅಭಿವೃಧ್ಧಿ ನಿಗಮದ 2025-26ನೇ ಸಾಲಿನ ವಿವಿಧ ಯೋಜನೆಗಳಡಿ ಬೆಂಗಳೂರು ದಕ್ಷಿಣ ಜಿಲ್ಲೆಯ ಫಲಾನುಭವಿಗಳ ಆಯ್ಕೆ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
‘ಲಿಂಗತ್ವ ಅಲ್ಪಸಂಖ್ಯಾತರ ಪುನರ್ವಸತಿ ಯೋಜನೆಯಡಿ 30, ಚೇತನ ಯೋಜನೆಯಡಿ 10, ಧನಶ್ರೀ ಯೋಜನೆಯಡಿ 15 ಹಾಗೂ ಉದ್ಯೋಗಿನಿ ಯೋಜನೆಯಡಿ 3 ಫಲಾನುಭವಿಗಳು ಆಯ್ಕೆಯಾಗಿದ್ದಾರೆ’ ಎಂದರು.
‘ಲಿಂಗತ್ವ ಅಲ್ಪಸಂಖ್ಯಾತರು ಗೌರವಯುತವಾಗಿ ಜೀವನ ನಡೆಸಲು ಸ್ವಯಂ ಉದ್ಯೋಗ ಕೈಗೊಂಡು, ಆರ್ಥಿಕ ಚಟುವಟಿಕೆ ನಡೆಸಲು ₹30 ಸಾವಿರ ಪ್ರೋತ್ಸಾಹಧನ ಸೌಲಭ್ಯವನ್ನು ನಿಗಮದಿಂದ ನೀಡಲಾಗುವುದು. ಜಿಲ್ಲೆಗೆ ಭೌತಿಕ ಗುರಿ 30 ಹಾಗೂ ಆರ್ಥಿಕ ಗುರಿ ₹9 ಲಕ್ಷ ನಿಗದಿಯಾಗಿದೆ. ಜಿಲ್ಲೆಯಲ್ಲಿ ಸೇವಾ ಸಿಂಧು ಪೋರ್ಟಲ್‌ನಲ್ಲಿಲಿ ಒಟ್ಟು 31 ಅರ್ಜಿಗಳು ಸ್ವೀಕೃತವಾಗಿವೆ. ದಾಖಲಾತಿಗಳನ್ನು ಪರಿಶೀಲಿಸಿ 30 ಅರ್ಹರನ್ನು ಆಯ್ಕೆ ಮಾಡಲಾಗಿದೆ’ ಎಂದರು.
‘ಚೇತನ ಯೋಜನೆಯಡಿ ದಮನಿತ ಮಹಿಳೆಯರು ಹಾಗೂ ಲೈಂಗಿಕ ಶೋಷಣೆಗೆ ಒಳಗಾದ ಮಹಿಳೆಯರಿಗೆ ಮಾನಸಿಕವಾಗಿ ಆತ್ಮಸ್ಥೈರ್ಯ ನೀಡಿ ಸಮಾಜದಲ್ಲಿ ಮುಖ್ಯವಾಹಿನಿಗೆ ತರುವ ಉದ್ದೇಶವಿದೆ. ಅದಕ್ಕಾಗಿ ಆರ್ಥಿಕ ಚಟುವಟಿಕೆ ನಡೆಸಲು ₹30 ಸಾವಿರ ಪ್ರೋತ್ಸಾಹಧನ ಸೌಲಭ್ಯ ನೀಡಲಾಗುವುದು’ ಎಂದು ತಿಳಿಸಿದರು.
‘ಈ ಯೋಜನೆಯಡಿ ಜಿಲ್ಲೆಗೆ ಭೌತಿಕ ಗುರಿ 10 ಹಾಗೂ ಆರ್ಥಿಕ ಗುರಿ ₹3 ಲಕ್ಷ ನಿಗದಿಯಾಗಿದೆ. ಜಿಲ್ಲೆಯಲ್ಲಿ ಸೇವಾ ಸಿಂಧು ಪೋರ್ಟಲ್‌ನಲ್ಲಿ ಒಟ್ಟು 15 ಅರ್ಜಿಗಳು ಸ್ವೀಕೃತವಾಗಿವೆ. ದಾಖಲಾತಿಗಳನ್ನು ಪರಿಶೀಲಿಸಿ 10 (ಪರಿಶಿಷ್ಟ ಜಾತಿ 7, ಪರಿಶಿಷ್ಟ ಪಂಗಡ 2 ಹಾಗೂ ಇತರೆ ವರ್ಗ 1) ಅರ್ಹ ಅರ್ಜಿಗಳನ್ನು ಆಯ್ಕೆ ಮಾಡಲಾಗಿದೆ’ ಎಂದು ಹೇಳಿದರು.
‘ಧನಶ್ರೀ ಯೋಜನೆಯಡಿ ಎಚ್ಐವಿ ಸೋಂಕಿನ ಹಾಗೂ ಬಾಧಿತ ಮಹಿಳೆಯರಿಗೆ ₹30 ಸಾವಿರ ಪ್ರೋತ್ಸಾಹಧನ ಸೌಲಭ್ಯ ನೀಡಲಾಗುವುದು. ಜಿಲ್ಲೆಗೆ ಭೌತಿಕ ಗುರಿ 15 ಹಾಗೂ ಆರ್ಥಿಕ ಗುರಿ ₹4.50 ಲಕ್ಷ ನಿಗದಿಯಾಗಿದೆ. ಜಿಲ್ಲೆಯಲ್ಲಿ ಸೇವಾ ಸಿಂಧು ಪೋರ್ಟಲ್‌ನಲ್ಲಿ 17 ಅರ್ಜಿಗಳು ಸ್ವೀಕೃತವಾಗಿವೆ. ದಾಖಲಾತಿಗಳನ್ನು ಪರಿಶೀಲಿಸಿ ಐದು ತಾಲ್ಲೂಕುಗಳಿಂದ 15 ಅರ್ಜಿಗಳನ್ನು ಆಯ್ಕೆ ಮಾಡಲಾಗಿದೆ’ ಎಂದರು.
ಜಿಲ್ಲೆಯ ಪಯಣ ಸ್ವಯಂ ಸೇವಾ ಸಂಸ್ಥೆಯ ಸಿಬ್ಬಂದಿಯಿಂದ ಲಿಂಗತ್ವ ಅಲ್ಪಸಂಖ್ಯಾತ ಹಾಗೂ ದಮನಿತ ಮಹಿಳಾ ಫಲಾನುಭವಿಗಳು ನೋಂದಣಿಯಾಗಿರುವ ಬಗ್ಗೆ ಹಾಗೂ ಧನಶ್ರೀ ಯೋಜನೆಯಡಿ ಜಿಲ್ಲಾ ಎಆರ್‌ಟಿ ವಿಭಾಗದಲ್ಲಿ ಫಲಾನುಭವಿಗಳು ನೋಂದಣಿಯಾಗಿರುವ ಬಗ್ಗೆ ಮಾಹಿತಿ ಪಡೆದು, ಅರ್ಜಿಗಳನ್ನು ಪರಿಶೀಲಿಸಿ ಆಯ್ಕೆಯಾದ ಅರ್ಜಿಗಳಿಗೆ ಅನುಮೋದನೆ ನೀಡಿದರು.
ಸಭೆಯಲ್ಲಿ ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ ಧನರಾಜ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕ ದಿನೇಶ್, ಲೀಡ್ ಬ್ಯಾಂಕ್ ಮ್ಯಾನೇಜರ್ ಮೋಹನ್ ಕುಮಾರ್, ಜಿಲ್ಲಾ ಮಹಿಳಾ ಅಭಿವೃದ್ಧಿ ನಿಗಮದ ಅಭಿವೃದ್ಧಿ ನಿರೀಕ್ಷಕಿ ಬಿ. ಗಾಯತ್ರಿ ದೇವಿ, ಸಂಬಂಧಿಸಿದ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು, ಎಲ್ಲಾ ತಾಲ್ಲೂಕುಗಳ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳು ಹಾಗೂ ಇತರರು ಇದ್ದರು.
ಸ್ವಯಂ ಉದ್ಯೋಗಕ್ಕೆ ₹3 ಲಕ್ಷ ಸಾಲ
‘ಉದ್ಯೋಗಿನಿ ಯೋಜನೆಯಡಿ ಲಿಂಗತ್ವ ಅಲ್ಪಸಂಖ್ಯಾತರು ದಮನಿತ ಮಹಿಳೆಯರು ಎಚ್.ಐ.ವಿ ಸೋಂಕಿತ ಹಾಗೂ ಬಾಧಿತ ಮಹಿಳೆಯರಿಗೆ ತಮ್ಮ ಆಸಕ್ತಿಗನುಗುಣವಾಗಿ ಸ್ವಯಂ ಉದ್ಯೋಗ ಕೈಗೊಳ್ಳಲು ಬ್ಯಾಂಕಿನಿಂದ ಗರಿಷ್ಠ ಸಾಲ ₹3 ಲಕ್ಷ ಹಾಗೂ ಮಹಿಳಾ ಅಭಿವೃದ್ಧಿ ನಿಗಮದಿಂದ ಶೇ 30ರಷ್ಟು ಸಹಾಯಧನ ಸೌಲಭ್ಯ ನೀಡಲಾಗುವುದು. ಸೇವಾಸಿಂಧು ಪೋರ್ಟಲ್ ಆನ್‌ಲೈನ್ ಮೂಲಕ ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಿದ್ದು ಲಿಂಗತ್ವ ಅಲ್ಪಸಂಖ್ಯಾತರ ಫಲಾನುಭವಿಗಳಿಂದ 3 ಅರ್ಜಿಗಳು ಸ್ವೀಕೃತವಾಗಿವೆ. ದಾಖಲಾತಿಗಳನ್ನು ಪರಿಶೀಲಿಸಲಾಗಿದೆ. ಉದ್ಯೋಗಿನಿ ಯೋಜನೆಯಡಿ ಧನಶ್ರೀ ಯೋಜನೆ ಹಾಗೂ ಚೇತನ ಯೋಜನೆಗೆ ಅರ್ಜಿಗಳು ಸ್ವೀಕೃತವಾಗಿಲ್ಲ’ ಎಂದು ಚಂದ್ರಯ್ಯ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.