
ರಾಮನಗರದ ಗುರುಭವನದಲ್ಲಿ ಧಾನ್ ಫೌಂಡೇಷನ್ ಶನಿವಾರ ಹಮ್ಮಿಕೊಂಡಿದ್ದ ಸುಸ್ಥಿರ ಆರ್ಥಿಕ ಸೇರ್ಪಡೆಗಾಗಿ ಜಾಗೃತಿ ಜಾಥಾ ವಾಕಥಾನ್ ಕಾರ್ಯಕ್ರಮವನ್ನು ಕೆನರಾ ಬ್ಯಾಂಕ್ ಪ್ರಾದೇಶಿಕ ವ್ಯವಸ್ಥಾಪಕಿ ಅನುರಾಧ ಉದ್ಘಾಟಿಸಿದರು.
ರಾಮನಗರ: ಗ್ರಾಮೀಣ ಪ್ರದೇಶದ ಮಹಿಳೆಯರು ತಮ್ಮ ಕಸುಬುಗಳನ್ನು ಸುಧಾರಿಸಿಕೊಂಡು ತಾವು ತಯಾರಿಸುವ ಉತ್ಪನ್ನಗಳ ಮೌಲ್ಯವರ್ಧನ ಮಾಡಿಕೊಂಡು ಉದ್ಯಮಿಗಳಾಗಬೇಕು ಎಂದು ಕೆನರಾ ಬ್ಯಾಂಕ್ ಪ್ರಾದೇಶಿಕ ವ್ಯವಸ್ಥಾಪಕಿ ಅನುರಾಧ ಸಲಹೆ ನೀಡಿದರು.
ನಗರದ ಗುರುಭವನದಲ್ಲಿ ಧಾನ್ ಫೌಂಡೇಷನ್ ಶನಿವಾರ ಹಮ್ಮಿಕೊಂಡಿದ್ದ ಸುಸ್ಥಿರ ಆರ್ಥಿಕ ಸೇರ್ಪಡೆಗಾಗಿ ಜಾಗೃತಿ ಜಾಥಾ ವಾಕಥಾನ್ -2026 ಉದ್ಘಾಟಿಸಿ ಮಾತನಾಡಿದ ಅವರು, ಗ್ರಾಮೀಣ ಮಹಿಳೆಯರು ಕೇವಲ ಕೆಲಸಗಾರರಾಗಿ ಉಳಿಯದೆ, ಬ್ಯಾಂಕ್ ಸೌಲಭ್ಯ ಬಳಸಿಕೊಂಡು ಉದ್ಯಮಿಗಳಾಗಿ ಆರ್ಥಿಕ ಸ್ವಾವಲಂಬನೆ ಸಾಧಿಸಬೇಕು ಎಂದರು.
ಧಾನ್ ಫೌಂಡೇಷನ್ ರಾಮನಗರ ವಲಯ ಸಂಯೋಜಕ ಕೆ.ಟಿ. ರಾಘವೇಂದ್ರ ಮಾತನಾಡಿ, ಫೌಂಡೇಷನ್ ವತಿಯಿಂದ ದೇಶದ್ಯಾಂತ 60 ಜಿಲ್ಲೆಗಳಲ್ಲಿ ಜಾಗೃತಿ ಜಾಥಾ ನಡೆಯುತ್ತಿದೆ. ಎಲ್ಲರೂ ಆರ್ಥಿಕವಾಗಿ ಸಬಲರಾಗಬೇಕು ಎಂಬುದು ನಮ್ಮ ಉದ್ದೇಶವಾಗಿದೆ ಎಂದು ಹೇಳಿದರು.
ಜಿಲ್ಲೆಯಲ್ಲಿ 2000ರಲ್ಲಿ ಹಾರೋಹಳ್ಳಿಯಲ್ಲಿ ಫೌಂಡೇಷನ್‌ನ ಮೊದಲ ಮಹಿಳಾ ಒಕ್ಕೂಟ ಪ್ರಾರಂಭಿಸಲಾಯಿತು. ಇದೀಗ ನಮ್ಮರ ವಲಯದಲ್ಲಿ 1,750 ಸಂಘಗಳಿದ್ದು, 37 ಸಾವಿರ ಮಹಿಳಾ ಸದಸ್ಯರೊಂದಿಗೆ ಕಾರ್ಯನಿರ್ವಹಿಸುತ್ತಿದ್ದೇವೆ ಎಂದು ತಿಳಿಸಿದರು.
ರಾಮನಗರ ಲೀಡ್ ಬ್ಯಾಂಕ್ ಮ್ಯಾನೇಜರ್ ಮೋಹನ್ ಕುಮಾರ್, ‘ಮಹಿಳೆಯರಿಂದ ಬ್ಯಾಂಕಿಂಗ್ ಕ್ಷೇತ್ರ ಅಭಿವೃದ್ಧಿಯಾಗುತ್ತಿದೆ. ಸ್ವಸಹಾಯ ಸಂಘದ ಮೂಲಕ ಸಿಗುವ ಸಾಲ ಸದ್ಭಳಕೆ ಮಾಡಿಕೊಂಡು ತಮ್ಮ ಕುಟುಂಬವನ್ನು ಆರ್ಥಿಕವಾಗಿ ಸಧೃಡ ಮಾಡುತ್ತಿದ್ದಾರೆ ಎಂದರು.
ರಾಮನಗರದ ಜೂನಿಯರ್ ಕಾಲೇಜು ಆವರಣದಿಂದ ಶುರುವಾದ ಜಾಥಾ ಬಿ.ಎಂ. ರಸ್ತೆ, ಆಂಜನೇಯ ಗೋಪುರ ಹಾದು ಎಸ್‌ಪಿ ಕಚೇರಿ ವೃತ್ತ, ಜೂನಿಯರ್ ಕಾಲೇಜು ರಸ್ತೆ ಹಾದು ಗುರುಭವನದಲ್ಲಿ ಅಂತ್ಯಗೊಂಡಿತು. ನಂತರ ವೇದಿಕೆ ಕಾರ್ಯಕ್ರಮ ಶುರುವಾಯಿತು.
ಕೆನರ್ ಬ್ಯಾಂಕ್ ವೃತ್ತ ಅಧಿಕಾರಿ ಅಖಿಲ್ ದೇವ್, ರಂಗನಾಯಕ್, ವೀರಾಂಜನೇಯ, ಫೌಂಡೇಷನ್ ಸಿಬ್ಬಂದಿ ಗಿರೀಶ್, ಶೋಭಾರಾಣಿ, ತನುಜಾ, ಮಂಜುನಾಥ ಶೆಟ್ಟಿ, ಅಭಿಷೇಕ್, ವಲಯದ ಅಧ್ಯಕ್ಷೆ ಅನುಸೂಯ ಇದ್ದರು. ಜಿಲ್ಲೆಯ ವಿವಿಧ ಭಾಗದಿಂದ ಮಹಿಳೆಯರು ಬಂದಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.