ADVERTISEMENT

2025 ಹಿಂದಣ ಹೆಜ್ಜೆ | ಜಿಲ್ಲೆ ಹೆಸರು ಮರು ನಾಮಕರಣ; ಕಾಡಾನೆ ಸಂಘರ್ಷಕ್ಕಿಲ್ಲ ಕೊನೆ

ಓದೇಶ ಸಕಲೇಶಪುರ
Published 31 ಡಿಸೆಂಬರ್ 2025, 2:44 IST
Last Updated 31 ಡಿಸೆಂಬರ್ 2025, 2:44 IST
ಬಿಡದಿ ಕೈಗಾರಿಕಾ ಪ್ರದೇಶದಲ್ಲಿ ಐವರನ್ನು ಬಲಿ ಪಡೆದ ತ್ಯಾಜ್ಯದಿಂದ ವಿದ್ಯುತ್ ಉತ್ಪಾದಿಸುವ ಸ್ಥಾವರದಲ್ಲಿ ಅವಘಡ ಸಂಭವಿಸಿದ ಸ್ಥಳ ದೃಶ್ಯ
– ಪ್ರಜಾವಾಣಿ ಚಿತ್ರ
ಬಿಡದಿ ಕೈಗಾರಿಕಾ ಪ್ರದೇಶದಲ್ಲಿ ಐವರನ್ನು ಬಲಿ ಪಡೆದ ತ್ಯಾಜ್ಯದಿಂದ ವಿದ್ಯುತ್ ಉತ್ಪಾದಿಸುವ ಸ್ಥಾವರದಲ್ಲಿ ಅವಘಡ ಸಂಭವಿಸಿದ ಸ್ಥಳ ದೃಶ್ಯ – ಪ್ರಜಾವಾಣಿ ಚಿತ್ರ   

ರಾಮನಗರ: ತೆರೆಗೆ ಸರಿಯುತ್ತಿರುವ 2025ನೇ ವರ್ಷವು ಬೆಂಗಳೂರು ದಕ್ಷಿಣ ಜಿಲ್ಲೆಯಲ್ಲಿ ಅಮಾಯಕರ ಬಲಿ ಪಡೆದ ಅವಘಡ, ಸಂಭ್ರಮ, ರಾಜಕೀಯ ಮೇಲಾಟ, ಬಿಗ್‌ಬಾಸ್ ರಿಯಾಲಿಟಿ ಷೋ ಹೈಡ್ರಾಮ, ಸಾಧನೆ, ಹೋರಾಟ, ಮೇರು ನಟಿ ಬಿ. ಸರೋಜಾ ದೇವಿ, ‘ವೃಕ್ಷಮಾತೆ’ ಸಾಲುಮರದ ತಿಮ್ಮಕ್ಕ ನಿಧನ, ಮಾಗಡಿಗೆ ಹರಿದ ಹೇಮಾವತಿ, ವಿವಿಧ ಉತ್ಸವಗಳು, ಕೆಲ ಹೀನ ಅಪರಾಧ ಕೃತ್ಯಗಳ ಜೊತೆಗೆ ಮಾನವ– ವನ್ಯಜೀವಿ ಸಂಘರ್ಷದ ಸಾವು–ನೋವಿಗೂ ಸಾಕ್ಷಿಯಾಯಿತು.

ಈ ವರ್ಷಾರಂಭವೇ ಅವಘಡದೊಂದಿಗೆ ಶುರುವಾಯಿತು. ಬಿಡದಿ ಕೈಗಾರಿಕಾ ಪ್ರದೇಶದಲ್ಲಿರುವ ಕೆಪಿಸಿಎಲ್‌ನ ತ್ಯಾಜ್ಯದಿಂದ ವಿದ್ಯುತ್ ಉತ್ಪಾದಿಸುವ ಸ್ಥಾವರದಲ್ಲಿ ಜ. 4ರಂದು ಚಿಮಣಿಯಲ್ಲಿ ಕಸ ಕಟ್ಟಿಕೊಂಡಿದ್ದ ಸ್ಥಳದಲ್ಲಿದ್ದ ಐವರು ಕಾರ್ಮಿಕರು ಸುರಕ್ಷಾ ಪರಿಕರಗಳಿಲ್ಲದೆ ಕಸ ತೆರವಿಗೆ ಮುಂದಾಗಿದ್ದರು.

ಆಗ ಬಿಸಿ ಬೂದಿ ಸಿಡಿದಿದ್ದರಿಂದ ಐವರೂ ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದರು. ಘಟನೆಗೆ ಸಂಬಂಧಿಸಿದಂತೆ ಕೆಪಿಸಿಎಲ್ ಅಧಿಕಾರಿಗಳು ಹಾಗೂ ಸ್ಥಾವರದ ನಿರ್ವಹಣೆ ಹೊಣೆ ಹೊತ್ತಿದ್ದ ಸಂಸ್ಥೆ ಅಧಿಕಾರಿಗಳ ವಿರುದ್ಧ ಪ್ರಕರಣ ದಾಖಲಾಗಿತ್ತು. ಎಂಜಿನಿಯರ್ ಒಬ್ಬರು ಅಮಾನತುಗೊಂಡಿದ್ದರು. ಪೊಲೀಸ್ ತನಿಖೆಗೆ ಹೈಕೋರ್ಟ್‌ನಿಂದ ತಡೆಯಾಜ್ಞೆ ತಂದ ಬಳಿಕ, ಪ್ರಕರಣ ನನೆಗುದಿಗೆ ಬಿದ್ದಿದೆ.

ADVERTISEMENT

ರಘುಗೆ ‘ಪದ್ಮಶ್ರೀ’ ಪ್ರಶಸ್ತಿ ಸಿರಿ: ಸಾಂಪ್ರದಾಯಿಕ ದೇಶಿ ಸಾಹಸ ಕಲೆಗಳಿಗೆ ಉತ್ತೇಜನ ನೀಡುತ್ತಾ ಬಂದಿರುವ ರಾಮನಗರ ತಾಲ್ಲೂಕಿನ ಸಾಹಸ ನಿರ್ದೇಶಕ ಹಾಸನ ರಘು ಅವರಿಗೆ ಭಾರತ ಸರ್ಕಾರ ಜ. 25ರಂದು ಪ್ರತಿಷ್ಠಿತ ಪದ್ಮಶ್ರೀ ಪ್ರಶಸ್ತಿ ಘೋಷಿಸಿತು. ಮೂಲತಃ ಹಾಸನ ಜಿಲ್ಲೆಯವರಾದ ರಘು ಅವರು ಸಾಹಸ ಕಲಾವಿದನಾಗಿ ವೃತ್ತಿ ಬದುಕು ಆರಂಭಿಸಿ, ಅದರ ಮೂಲಕವೇ ನಾಡಿಗೆ ಪರಿಚಿತರಾದವರು.

ಕನ್ನಡದ ಜೊತೆಗೆ ಹಿಂದಿ, ಇಂಗ್ಲಿಷ್‌ ಸೇರಿದಂತೆ ವಿವಿಧ ಭಾಷೆಗಳ ನೂರಕ್ಕೂ ಹೆಚ್ಚು ಚಲನಚಿತ್ರ ಹಾಗೂ ಕಿರುತೆರೆ ಕಾರ್ಯಕ್ರಮಗಳಿಗೆ ಸಾಹಸ ಸಂಯೋಜನೆ ಮಾಡಿದ್ದಾರೆ. ಕಲೆಗಳನ್ನು ಉಳಿಸುವ ಜೊತೆಗೆ ಮುಂದಿನ ಪೀಳಿಗೆಗೆ ಪರಿಚಯಿಸುವ ಸಲುವಾಗಿ ಕಳೆದ 15 ವರ್ಷಗಳಿಂದ ರಾಮದೇವರ ಬೆಟ್ಟದ ಬಳಿ ಸಾಹಸ ಕಲೆಗಳ ಪ್ರದರ್ಶನ ಕೇಂದ್ರವನ್ನು ತೆರೆದು ಆಸಕ್ತರಿಗೆ ಸಾಂಪ್ರದಾಯಿಕ ವೀರಕಲೆಗಳ ತರಬೇತಿ ನೀಡುತ್ತಿದ್ದಾರೆ.

ಫೈನಾನ್ಸ್‌ ಕಿರುಕುಳ; ಮೊದಲ ಪ್ರಕರಣ: ಬಡವರಿಗೆ ತಕ್ಷಣಕ್ಕೆ ಸಾಲ ನೀಡುತ್ತಿದ್ದ ಮೈಕ್ರೊ ಫೈನಾನ್ಸ್ ಕಂಪನಿಗಳು, ಸಾಲ ವಸೂಲಿಗೆ ನೀಡುತ್ತಿದ್ದ ಕಿರುಕುಳ ವಿಪರೀತವಾಗಿ ಕೆಲವೆಡೆ ಸಾಲ ಪಡೆದವರು ಆತ್ಮಹತ್ಯೆಗೆ ಶರಣಾಗಿದ್ದರು. ಜಿಲ್ಲೆ ಸೇರಿದಂತೆ ರಾಜ್ಯದಾದ್ಯಂತ ಇಂತಹ ಪ್ರಕರಣಗಳು ಬೆಳಕಿಗೆ ಬಂದಿದ್ದವು.

ಅದರ ಬೆನ್ನಲ್ಲೇ, ರಾಮನಗರ ತಾಲ್ಲೂಕಿನ ಕೂನಮುದ್ದನಹಳ್ಳಿಯಲ್ಲಿರುವ ಇರುಳಿಗ ಕಾಲೊನಿ ಮಹಿಳೆಯೊಬ್ಬರಿಗೆ ಸಾಲ ಪಾವತಿಸುವಂತೆ ಕಿರುಕುಳ ನೀಡಿದ್ದ ಮೈಕ್ರೊ ಫೈನಾನ್ಸ್‌ ಕಂಪನಿಯ ವ್ಯವಸ್ಥಾಪಕನ ವಿರುದ್ಧ ರಾಮನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿ, ಪೊಲೀಸರು ಜ. 20ರಂದು ಆತನನ್ನು ಬಂಧಿಸಿದ್ದರು. ರಾಜ್ಯದಲ್ಲಿ ದಾಖಲಾಗಿದ್ದ ಮೊದಲ ಪ್ರಕರಣ ಹಾಗೂ ಬಂಧನ ಇದಾಗಿತ್ತು.

ಎಚ್‌ಡಿಕೆಗೆ ಒತ್ತುವರಿ ಸಂಕಟ: ರಾಮನಗರ ತಾಲ್ಲೂಕಿನ ಬಿಡದಿಯ ಕೇತಗಾನಹಳ್ಳಿಯಲ್ಲಿರುವ ತೋಟದ ಮನೆ ಜಾಗದಲ್ಲಿ ಸರ್ಕಾರಿ ಜಾಗ ಒತ್ತುವರಿ ಆರೋಪ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ, ಅವರ ಸಂಬಂಧಿಕರು ಸೇರಿದಂತೆ 11 ಮಂದಿ ವಿರುದ್ಧ ಕೇಳಿ ಬಂದಿತ್ತು. ಆರೋಪದ ಬೆನ್ನಲ್ಲೇ, ಕೋರ್ಟ್ ಸೂಚನೆ ಮೇರೆಗೆ ಕಂದಾಯ ಇಲಾಖೆ ಎಲ್ಲರಿಗೂ ನೋಟಿಸ್ ನೀಡಿ, ತೋಟದ ಮನೆ ಜಾಗ ಹಾಗೂ ಸಂಬಂಧಿಕರ ಜಾಗದಲ್ಲಿ ಡಿ. 18ರಿಂದ ಸರ್ವೆ ಕಾರ್ಯ ನಡೆದಿತ್ತು.

ಈ ಘಟನೆಯು ರಾಜಕೀಯ ಕೆಸರೆರಚಾಟಕ್ಕೂ ಕಾರಣವಾಗಿತ್ತು. ಮೂರ್ನಾಲ್ಕು ದಿನ ನಡೆದಿದ್ದ ಸರ್ವೇ ಕಾರ್ಯದ ಬಳಿಕ ಒತ್ತುವರಿ ಮಾಡಲಾಗಿದೆ ಎಂಬ ಜಾಗದಲ್ಲಿ ಕಲ್ಲು ಕಂಬಗಳನ್ನು ಕಂದಾಯ ಇಲಾಖೆ ನೆಟ್ಟಿತ್ತು. ನಂತರ, ಎಚ್‌ಡಿಕೆ ಅವರು ಕೋರ್ಟ್ ಮೆಟ್ಟಿಲೇರಿದಾಗ ತಡೆಯಾಜ್ಞೆ ಸಿಕ್ಕಿತ್ತು. ಬಳಿಕ, ಪ್ರಕರಣ ಅಲ್ಲಿಗೇ ನಿಂತಿದೆ.

ಮುತ್ತಪ್ಪ ರೈ ಪುತ್ರನಿಗೆ ಗುಂಡೇಟು: ಭೂಗತ ಲೋಕದ ಮಾಜಿ ಡಾನ್ ಮುತ್ತಪ್ಪ ರೈ ಪುತ್ರ ರಿಕ್ಕಿ ರೈ ಮೇಲೆ ಬಿಡದಿ ಬಳಿಯ ದೊಡ್ಡ ಮರಳವಾಡಿ ರಸ್ತೆಯಲ್ಲಿರುವ ಕರಿಯಪ್ಪನದೊಡ್ಡಿಯಲ್ಲಿರುವ ರೈ ಮನೆ ಬಳಿಯೇ ಆತನ ಅಂಗರಕ್ಷಕ ಮೊನ್ನಪ್ಪ ವಿಠ್ಠಲ ಎಂಬಾತ ಏ. 19ರಂದು ಗುಂಡಿನ ದಾಳಿ ನಡೆಸಿದ್ದ. ಘಟನೆಯಲ್ಲಿ ರಿಕ್ಕಿ ಮೂಗು ಮತ್ತು ಕೈಗೆ ಗಾಯವಾಗಿತ್ತು.

ರಾಜ್ಯದ ಗಮನ ಸೆಳೆದಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು, ರಿಕ್ಕಿ ಮಲತಾಯಿ ಸೇರಿದಂತೆ ನಾಲ್ವರ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದರು. ಎಲ್ಲರನ್ನೂ ಠಾಣೆಗೆ ಕರೆದು ವಿಚಾರಣೆ ನಡೆಸಿದ್ದರು. ಕಡೆಗೆ ಕೃತ್ಯ ಎಸಗಿದ್ದು ಜೊತೆಗಿದ್ದ ಮೊನ್ನಪ್ಪ ವಿಠ್ಠಲ ಎಂಬುದು ಪೊಲೀಸ್ ತನಿಖೆಯಲ್ಲಿ ಗೊತ್ತಾಗಿತ್ತು.

ಗಮನ ಸೆಳೆದಿದ್ದ ಬಾಲಕಿ ಸಾವು: ಬಿಡದಿ ಬಳಿಯ ಭದ್ರಾಪುರದ ರೈಲು ಹಳಿ ಪಕ್ಕ ಹಕ್ಕಿಪಿಕ್ಕಿ ಕಾಲೊನಿಯ ಮಾತು ಬಾರದ ಮತ್ತು ಕಿವಿ ಕೇಳದ ಬಾಲಕಿಯ ಶವವು ಮೇ 15ರಂದು ಸಂಶಯಾಸ್ಪದವಾಗಿ ಪತ್ತೆಯಾಗಿತ್ತು. ದುಷ್ಕರ್ಮಿಗಳು ಬಾಲಕಿ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿ ಕೊಲೆ ಮಾಡಿ, ಬಳಿಕ ಶವವನ್ನು ರೈಲ್ವೆ ಹಳಿ ಬಳಿ ಎಸೆದಿದ್ದಾರೆ ಎಂಬ ಸುದ್ದಿ ಹರಿದಾಡಿತ್ತು.

ಪೊಲೀಸರ ತಲೆ ಹುಳು ಬಿಟ್ಟಿದ್ದ ಈ ಪ್ರಕರಣ ರಾಜ್ಯದ ಗಮನ ಸೆಳದಿತ್ತು. ಕುಟುಂಬದವರು ನ್ಯಾಯಕ್ಕೆ ಆಗ್ರಹಿಸಿ, ಮೂರು ದಿನ ಶವ ಸಂಸ್ಕಾರ ಮಾಡದೆ ಪ್ರತಿಭಟನೆ ನಡೆಸಿದ್ದರು. ಕಡೆಗೆ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಸಹ ಕಾಲೊನಿಗೆ ಭೇಟಿ ನೀಡಿ, ನ್ಯಾಯದ ಭರವಸೆ ನೀಡಿದ ಬಳಿಕ ಅಂತ್ಯಸಂಸ್ಕಾರ ಮಾಡಿದ್ದರು. ಅದಾದ ವಾರದ ಬಳಿಕ, ಬಾಲಕಿ ರೈಲು ಅಪಘಾತದಿಂದ ಮೃತಪಟ್ಟಿರುವುದು ಪೊಲೀಸ್ ತನಿಖೆಯಲ್ಲಿ ಗೊತ್ತಾಗಿತ್ತು.

ಜಿಲ್ಲೆ ಹೆಸರು ಮರುನಾಮಕರಣ: ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಬಂದಾಗಿನಿಂದಲೂ ಜಿಲ್ಲೆಯವರೇ ಆದ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ರಾಮನಗರ ಜಿಲ್ಲೆ ಹೆಸರನ್ನು ‘ಬೆಂಗಳೂರು ದಕ್ಷಿಣ’ ಎಂದು ಬದಲಾಯಿಸುವುದಾಗಿ ಪ್ರತಿಪಾದಿಸುತ್ತಿದ್ದರು. ಅದರಂತೆ ಮೇ 22ರಂದು ಜಿಲ್ಲೆ ಹೆಸರನ್ನು ಬೆಂಗಳೂರು ದಕ್ಷಿಣ ಎಂದು ಮರು ನಾಮಕರಣ ಮಾಡುವಲ್ಲಿ ಯಶಸ್ವಿಯಾದರು.

18 ವರ್ಷಗಳ ಹಿಂದೆ 2007ರ ಆಗಸ್ಟ್ 27ರಲ್ಲಿ ಬಿಜೆಪಿ–ಜೆಡಿಎಸ್ ಸಮ್ಮಿಶ್ರ ಸರ್ಕಾರದಲ್ಲಿ ಮುಖ್ಯಮಂತ್ರಿಯಾಗಿದ್ದ ಕುಮಾರಸ್ವಾಮಿ ಅವರು, ರಾಮನಗರವನ್ನು ಜಿಲ್ಲೆಯಾಗಿ ಘೋಷಣೆ ಮಾಡಿದ್ದರು. ಬೆಂಗಳೂರು ಗ್ರಾಮಾಂತರದಿಂದ ಇಬ್ಬಾಗಗೊಂಡ ಹೊಸ ಜಿಲ್ಲೆಯು ರಾಮನಗರ, ಕನಕಪುರ, ಮಾಗಡಿ, ಚನ್ನಪಟ್ಟಣ ಒಳಗೊಂಡ 4 ತಾಲ್ಲೂಕುಗಳ (ಈಗ ಹಾರೋಹಳ್ಳಿ ಸೇರಿ 5 ಇವೆ) ಜಿಲ್ಲೆಯಾಗಿ ರೂಪುಗೊಂಡಿತ್ತು.

ಹೇಮಾವತಿ ಹೋರಾಟದ ಕಿಚ್ಚು: ಮಾಗಡಿ ತಾಲ್ಲೂಕಿಗೆ ನೀರು ಹರಿಸುವ ಹೇಮಾವತಿ ಎಕ್ಸ್‌ಪ್ರೆಸ್ ಲಿಂಕ್ ಕೆನಾಲ್ ಯೋಜನೆ ವಿರುದ್ಧ ತುಮಕೂರಿನಲ್ಲಿ ದೊಡ್ಡ ಮಟ್ಟದಲ್ಲಿ ಸ್ವಾಮೀಜಿಗಳು ಹಾಗೂ ಜನಪ್ರತಿನಿಧಿಗಳ ನೇತೃತ್ವದಲ್ಲಿ ಹೋರಾಟ ನಡೆದಿತ್ತು. ಯೋಜನೆ ಪರವಾಗಿ ಮಾಗಡಿಯಲ್ಲೂ ಜನಪ್ರತಿನಿಧಿಗಳು ಹಾಗೂ ವಿವಿಧ ಸಂಘಟನೆಗಳ ನೇತೃತ್ವದಲ್ಲಿ ಹೋರಾಟದ ಕಿಚ್ಚು ಹೊತ್ತಿಕೊಂಡಿತ್ತು.

ಯೋಜನೆ ಪರವಾಗಿ ಸ್ಥಳೀಯ ಶಾಸಕ ಎಚ್.ಸಿ. ಬಾಲಕೃಷ್ಣ ಅವರು ಜೂನ್ 6ರಂದು ಗುರುವಾರ ಬೆಂಗಳೂರು–ಮಂಗಳೂರು ರಾಷ್ಟ್ರೀಯ ಹೆದ್ದಾರಿ –75ರ ಮರೂರು ಹ್ಯಾಂಡ್‌ಪೋಸ್ಟ್ ಬಳಿ ಹೆದ್ದಾರಿ ತಡೆದು ರೈತರೊಂದಿಗೆ ಪಾದಯಾತ್ರೆ ನಡೆಸಿದ್ದರು. ಈ ವೇಳೆ, ಪೊಲೀಸರು ಶಾಸಕರನ್ನು ವಶಕ್ಕೆ ಪಡೆದು, ನಂತರ ಬಿಟ್ಟಿದ್ದರು.

ರೈಲು ಎಂಜಿನ್‌ನಲ್ಲಿ ಬೆಂಕಿ: ಚನ್ನಪಟ್ಟಣ ತಾಲ್ಲೂಕಿನ ವಂದಾರಗುಪ್ಪೆ ಗೇಟ್‌ ಬಳಿ ಮೈಸೂರು- ಉದಯಪುರ ನಡುವೆ ಸಂಚರಿಸುವ ಹಮ್‌ಸಫರ್ ಎಕ್ಸ್‌ಪ್ರೆಸ್‌ (ರೈಲು ಸಂಖ್ಯೆ: 19668) ರೈಲಿನ ಎಂಜಿನ್‌ನಲ್ಲಿ ಜುಲೈ 3ರಂದು ಬೆಂಕಿ‌ ಕಾಣಿಸಿಕೊಂಡಿತು. ಬೆಂಕಿ ಗಮನಿಸಿದ ಗೇಟ್‌ಮ್ಯಾನ್‌ ಕೆಂಪು ಬಾವುಟ ಪ್ರದರ್ಶಿಸಿ ಕೂಗಿ ಹೇಳಿದ್ದರಿಂದ ಲೋಕೊಪೈಲಟ್ ರೈಲು ನಿಲ್ಲಿಸಿದರು. ಸ್ಥಳಕ್ಕೆ ಬಂದ ಅಗ್ನಿಶಾಮಕ ಸಿಬ್ಬಂದಿ ಬೆಂಕಿ ನಂದಿಸಿ ಅನಾಹುತ ತಪ್ಪಿಸಿದರು. ಘಟನೆಯಲ್ಲಿ ಯಾರಿಗೂ ತೊಂದರೆಯಾಗಿಲ್ಲ.

ಕಾಡಾನೆಗೆ ಇಟಿಎಫ್‌ ಸಿಬ್ಬಂದಿ ಬಲಿ: ಕನಕಪುರ ತಾಲ್ಲೂಕಿನ ಕಬ್ಬಾಳು ವ್ಯಾಪ್ತಿಯ ಕಂಚನಹಳ್ಳಿ ಅರಣ್ಯ ಪ್ರದೇಶದಲ್ಲಿ ಆ. 12ರಂದು ರೈತರ ಜಮೀನಿಗೆ ನುಗ್ಗಿದ್ದ ಕಾಡಾನೆಗಳನ್ನು ಓಡಿಸುವ ಕಾರ್ಯಾಚರಣೆ ಸಂದರ್ಭದಲ್ಲಿ ಕಾಡಾನೆಯೊಂದು ನಡೆಸಿದ ದಾಳಿಗೆ ಆನೆ ಕಾರ್ಯಪಡೆ ಸಿಬ್ಬಂದಿ ಶ್ರೇಯಸ್ (20) ಮೃತಪಟ್ಟಿದ್ದರು. ಚನ್ನಪಟ್ಟಣದ ಎಲೆಕೇರಿಯ ಅವರು, ಡಿಪ್ಲೊಮೊ ಮುಗಿಸಿ ಸಾತನೂರು ಪ್ರಾದೇಶಿಕ ಅರಣ್ಯ ವಲಯದಲ್ಲಿ ಒಂದು ವರ್ಷದಿಂದ ಆನೆ ಕಾರ್ಯಪಡೆಯಲ್ಲಿ ಕೆಲಸ ಮಾಡುತ್ತಿದ್ದರು.

ಲಾಕಪ್ ಡೆತ್; ಮೂವರ ಅಮಾನತು: ಚನ್ನಪಟ್ಟಣ ತಾಲ್ಲೂಕಿನ ಎಂ.ಕೆ. ದೊಡ್ಡಿ ಪೊಲೀಸ್‌ ಠಾಣೆಯಲ್ಲಿ ಕಳ್ಳತನ ಪ್ರಕರಣದ ಆರೋಪಿ ಮಂಡ್ಯ ಜಿಲ್ಲೆಯ ಮದ್ದೂರು ತಾಲ್ಲೂಕಿನ ದುಂಡನಹಳ್ಳಿಯ ರಮೇಶ್ (59) ಅವರು ಆ. 20ರಂದು ಲಾಕಪ್‌ ಡೆತ್ ಆಗಿದ್ದರು. ಈ ಘಟನೆ ರಾಜ್ಯದ ಗಮನ ಸೆಳೆದಿತ್ತು.

ಪ್ರಕರಣಕ್ಕೆ ಸಂಬಂಧಿಸಿದಂತೆ ಕರ್ತವ್ಯಲೋಪದ ಆರೋಪದ ಮೇಲೆ ಠಾಣೆಯ ಎಎಸ್‌ಐ ನಾಗರಾಜು, ಕಾನ್‌ಸ್ಟೆಬಲ್‌ಗಳಾದ ಲಕ್ಷ್ಮಿನಾರಾಯಾಣ, ಪ್ರತಾಪ್ ಹಾಗೂ ಸೋಮನಾಥ್ ಅವರನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಆರ್. ಶ್ರೀನಿವಾಸ ಗೌಡ ಅಮಾನತುಗೊಳಿಸಿದ್ದರು. ಪ್ರಕರಣದ ತನಿಖೆಯನ್ನು ಸಿಐಡಿಗೆ ವಹಿಸಲಾಗಿತ್ತು.

ಜಿಲ್ಲಾಸ್ಪತ್ರೆಯಲ್ಲೇ ಭ್ರೂಣಲಿಂಗ ಪತ್ತೆ!:ಕಾನೂನು ಪ್ರಕಾರ ಭ್ರೂಣಲಿಂಗ ಪತ್ತೆಗೆ ನಿಷೇಧವಿದ್ದರೂ ರಾಮನಗರ ಜಿಲ್ಲಾಸ್ಪತ್ರೆಯ ಸ್ಕಾನಿಂಗ್ ವಿಭಾಗದಲ್ಲಿ ಗರ್ಭಿಣಿಯೊಬ್ಬರಿಗೆ ಭ್ರೂಣಲಿಂಗ ಪತ್ತೆ ಮಾಡಿದ್ದ ಘಟನೆ ಆಗಸ್ಟ್‌ನಲ್ಲಿ ಬೆಳಕಿಗೆ ಬಂದಿತ್ತು. ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸ್ ಪ್ರಕರಣ ದಾಖಲಾಗಿ, ಆಸ್ಪತ್ರೆಯ ರೆಡಿಯಾಲಜಿಸ್ಟ್‌ ಅಮಾನತುಗೊಂಡಿದ್ದರು.

ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಸ್ಕ್ಯಾನಿಂಗ್ ಸೆಂಟರ್‌ಗೆ ಬೀಗ ಜಡಿದಿದ್ದರು. ಪ್ರಕರಣದ ತನಿಖೆ ನಡೆಸಿದ್ದ ಪೊಲೀಸರು, ಹಣಕ್ಕಾಗಿ ಭ್ರೂಣಲಿಂಗ ಪತ್ತೆ ಮಾಡುವ ವೈದ್ಯರು, ಏಜೆಂಟರನ್ನು ಒಳಗೊಂಡ ವ್ಯವಸ್ಥಿತವಾದ ಜಾಲವನ್ನು ಬೇಧಿಸಿ ಕೆಲವರನ್ನು ಬಂಧಿಸಿದ್ದರು.

ಎತ್ತರದ ಚಾಮುಂಡೇಶ್ವರಿ ವಿಗ್ರಹ: ಚನ್ನಪಟ್ಟಣ ತಾಲ್ಲೂಕಿನ ಗೌಡಗೆರೆ ಗ್ರಾಮದಲ್ಲಿ 68 ಅಡಿ ಎತ್ತರದ ಪಂಚಲೋಹದ ವಿಗ್ರಹವು ಏಷ್ಯಾದಲ್ಲೇ ಅತಿ ಎತ್ತರದ ಚಾಮುಂಡೇಶ್ವರಿ ವಿಗ್ರಹ ಎಂಬ ಹೆಗ್ಗಳಿಕೆಗೆ ಪಾತ್ರವಾಯಿತು. ಈ ದಾಖಲೆಯು ಏಷ್ಯಾ ಬುಕ್ ಆಫ್ ರೆಕಾರ್ಡ್‌ನಲ್ಲಿ ಸೇರಿಕೊಂಡಿದ್ದು, ಅ. 26ರಂದು ಸಂಸ್ಥೆಯು ಗೌಡಗೆರೆ ಕ್ಷೇತ್ರದ ಮಲ್ಲೇಶ ಗುರೂಜಿ ಅವರಿಗೆ ಪ್ರಮಾಣಪತ್ರ ಹಸ್ತಾಂತರಿಸಿದ್ದರು.

ನಿಷೇಧಾಜ್ಞೆ ವಿರುದ್ಧ ಪ್ರತಿಭಟನೆ ಕಿಚ್ಚು: ಜಿಲ್ಲಾಧಿಕಾರಿ ಯಶವಂತ್ ವಿ. ಗುರುಕರ್ ಅವರು ಡಿ.ಸಿ ಕಚೇರಿ ಆವರಣದಲ್ಲಿ ಪ್ರತಿಭಟನೆ ನಡೆಸದಂತೆ ನಿಷೇದಾಜ್ಞೆ ಹೊರಡಿಸಿದ ಆದೇಶವು ಪ್ರತಿಭಟನೆಯ ಕಿಚ್ಚು ಹಚ್ಚಿತು. ನಿಷೇದಾಜ್ಞೆ ರದ್ದುಪಡಿಸುವಂತೆ ಆಗ್ರಹಿಸಿ ರೈತಪರ ಸಂಘಟನೆಗಳು ಪ್ರತಿಭಟನೆ ನಡೆಸಿದವು. ರೈತಪರ ಸಂಘಟನೆಗಳ ಪದಾಧಿಕಾರಿಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದರು. ಹಲವು ಪ್ರತಿಭಟನೆ ನಡೆದರೂ ಜಿಲ್ಲಾಧಿಕಾರಿ ಮಾತ್ರ ತಮ್ಮ ಆದೇಶ ಹಿಂಪಡೆಯದೆ, ಪ್ರತಿಭಟನೆಗಾಗಿ ಪ್ರತ್ಯೇಕ ಸ್ಥಳ ನಿಗದಿಪಡಿಸಿದರು. ಕಡೆಗೆ ಹೋರಾಟವೂ ತಣ್ಣಗಾಯಿತು.

ಮೇಕೆದಾಟು ಅಡ್ಡಿ ನಿವಾರಣೆ: ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾಗಿರುವ ಜಿಲ್ಲೆಯ ಕನಕಪುರ ತಾಲ್ಲೂಕಿನಲ್ಲಿ ಮೇಕೆದಾಟು ಸಮತೋಲನ ಅಣೆಕಟ್ಟೆ ನಿರ್ಮಾಣ ಯೋಜನೆ ವಿರುದ್ಧ, ತಮಿಳುನಾಡು ಸರ್ಕಾರ ಸುಪ್ರೀಂ ಕೋರ್ಟ್‌ನಲ್ಲಿ ಹೂಡಿದ್ದ ದಾವೆಯನ್ನು ಕೋರ್ಟ್ ವಜಾಗೊಳಿಸಿತು. ಆ ಮೂಲಕ, ಯೋಜನೆ ವಿರುದ್ಧದ ಕಾನೂನು ಹೋರಾಟವನ್ನು ರಾಜ್ಯ ಸರ್ಕಾರ ಜಯಿಸಿತ್ತು. ಯೋಜನೆ ಕಾರ್ಯಗತಕ್ಕೆ ಇದು ಶಕ್ತಿ ತುಂಬಿತು. ಯೋಜನೆಗೆ ಸಂಬಂಧಿಸಿದಂತೆ ಜಿಲ್ಲೆಯಲ್ಲಿ ಉಸ್ತುವಾರಿ ಕಚೇರಿ ತೆರೆಯಲು ಸರ್ಕಾರ ನಿರ್ಧರಿಸಿದೆ.

ಡಿ.ಕೆ. ಸುರೇಶ್‌ಗೆ ಬಮೂಲ್ ಅಧ್ಯಕ್ಷಗಿರಿ: ಲೋಕಸಭಾ ಚುನಾವಣೆ ಸೋಲಿನ ಬಳಿಕ ಡಿ.ಕೆ. ಸುರೇಶ್ ಅವರು, ಕೆಎಂಎಫ್ ಅಧ್ಯಕ್ಷ ಸ್ಥಾನದ ಮೇಲೆ ಕಣ್ಣಿಟ್ಟಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿದ್ದವು. ಅದರ ಬೆನ್ನಲ್ಲೇ ಸುರೇಶ್, ಬೆಂಗಳೂರು ಹಾಲು ಉತ್ಪಾದಕರ ಒಕ್ಕೂಟದ ಆಡಳಿತ ಮಂಡಳಿ ನಿರ್ದೇಶಕ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಕನಕಪುರ ತಾಲ್ಲೂಕಿನಿಂದ ಅವಿರೋಧವಾಗಿ ಆಯ್ಕೆಯಾಗಿ, ಅಧ್ಯಕ್ಷರೂ ಆದರು.

ಕಾಂಗ್ರೆಸ್ ಮೇಲುಗೈ: ಜಿಲ್ಲೆಯ ನಾಲ್ಕೂ ವಿಧಾನಸಭಾ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಪಕ್ಷವು ಪಾರಮ್ಯ ಮೆರೆಯುವ ಮೂಲಕ ಡಿ.ಕೆ ಸಹೋದರರ ಹಿಡಿತವೂ ಹೆಚ್ಚಾಗಿದೆ. ಅದರ ಬೆನ್ನಲ್ಲೇ ನಡೆದ ಬಮೂಲ್ ಹಾಗೂ ಬಿಡಿಸಿಸಿ ಬ್ಯಾಂಕ್ ಚುನಾವಣೆಯಲ್ಲಿ ಪಕ್ಷವು ಜಿಲ್ಲೆಯಲ್ಲಿ ಕ್ಲೀನ್ ಸ್ವೀಪ್ ಸಾಧಿಸಿದೆ. ಆ ಮೂಲಕ ಸಾಂಪ್ರದಾಯಿಕ ಎದುರಾಳಿಯಾದ ಜೆಡಿಎಸ್ ಅನ್ನು ಮೂಲೆಗುಂಪು ಮಾಡಿದೆ. 7 ನಿರ್ದೇಶಕ ಸ್ಥಾನಗಳ ಪೈಕಿ 6ರಲ್ಲಿ ಕಾಂಗ್ರೆಸ್ ಬೆಂಬಲಿಗರು ಹಾಗೂ 1ರಲ್ಲಿ ಮಾತ್ರ ಜೆಡಿಎಸ್ ಗೆದ್ದಿದೆ. ಮಾಗಡಿ ಶಾಸಕ ಎಚ್.ಸಿ. ಬಾಲಕೃಷ್ಣ ಸಹೋದರ ಎಚ್.ಎನ್. ಅಶೋಕ್ ಬಿಡಿಸಿಸಿ ಬ್ಯಾಂಕ್ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.

ಉತ್ಸವಗಳ ಸಂಭ್ರಮ: ವರ್ಷಾಂತ್ಯದಲ್ಲಿ ಜಿಲ್ಲೆಯಲ್ಲೀಗ ಉತ್ಸವಗಳ ಸಂಭ್ರಮ ಮನೆ ಮಾಡಿದೆ. ಉಪ ಮುಖ್ಯಂತ್ರಿ ತವರು ಕ್ಷೇತ್ರವಾದ ಕನಕಪುರದಲ್ಲಿ ನಡೆಯುವ ಕನಕೋತ್ಸವವು ಇತರ ತಾಲ್ಲೂಕಿಗಳಿಗೆ ವಿಸ್ತರಣೆಯಾಗಿದೆ. ಚನ್ನಪಟ್ಟಣದಲ್ಲಿ ಬೊಂಬೆನಾಡ ಗಂಗೋತ್ಸವ, ರಾಮನಗರ– ಹಾರೋಹಳ್ಳಿಯಲ್ಲಿ ರಾಮೋತ್ಸವ ಹಾಗೂ ಮಾಗಡಿಯಲ್ಲಿ ಕೆಂಪೇಗೌಡ ಉತ್ಸವ ನಡೆಯುತ್ತಿದೆ. ಸ್ಥಳೀಯ ಶಾಸಕರ ನೇತೃತ್ವದಲ್ಲಿ ನಡೆಯುತ್ತಿರುವ ಈ ಉತ್ಸವದಲ್ಲಿ ತಾಲ್ಲೂಕಿನಾದ್ಯಂತ ಯುವಜನರು ಮತ್ತು ಮಹಿಳೆಯರಿಗೆ ಸಾಂಸ್ಕೃತಿಕ, ಕ್ರೀಡೆ ಸೇರಿದಂತೆ ವಿವಿಧ ಸ್ಪರ್ಧೆಗಳನ್ನು ಆಯೋಜಿಸಲಾಗಿದೆ. ಸಂಗೀತ ಸಂಜೆ ಸೇರಿದಂತೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಉತ್ಸವಕ್ಕೆ ಮೆರಗು ತಂದಿವೆ.

ಹಿಂದೂ ದೇಗಲು ನಿರ್ಮಿಸಿದ ಮುಸ್ಲಿಂ ಉದ್ಯಮಿ: ಚನ್ನಪಟ್ಟಣದ ಮುಸ್ಲಿಂ ಉದ್ಯಮಿ ಸೈಯ್ಯದ್ ಸಾದತ್‌ವುಲ್ಲಾ ಸಕಾಫ್ ಅವರು ಪಟ್ಟಣದ ಮಂಗಳವಾರಪೇಟೆಯಲ್ಲಿ ಬಸವೇಶ್ವರ ದೇವಾಲಯವನ್ನು ಸುಮಾರು ₹2 ಕೋಟಿ ವೆಚ್ಚದಲ್ಲಿ ನಿರ್ಮಾಣ ಮಾಡುವ ಮೂಲಕ ಹಿಂದೂ–ಮುಸ್ಲಿಂ ಸೌಹಾರ್ದ ಮೆರೆದರು. ಕೊಡುಗೈ ದಾನಿ ಎನಿಸಿಕೊಂಡಿರುವ ಸಕಾಫ್ ಅವರು, ತಾಲ್ಲೂಕಿನ ಎಸ್.ಎಂ. ಹಳ್ಳಿ ಗ್ರಾಮದಲ್ಲಿ ವೀರಭದ್ರೇಶ್ವರ ಸ್ವಾಮಿ ದೇವಾಲಯವನ್ನು ಸಹ ಜೀರ್ಣೋದ್ದಾರ ಮಾಡಿಸಿ ಮೆಚ್ಚುಗೆಗೆ ಪಾತ್ರರಾಗಿದ್ದರು.

ನೆಲಮಂಗಲಕ್ಕೆ ಸೋಲೂರು ಹೋಬಳಿ: ಬೆಂಗಳೂರು–ಮಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿರುವ ಮಾಗಡಿ ತಾಲ್ಲೂಕಿನ ಸೋಲೂರು ಹೋಬಳಿಯನ್ನು ನೆಲಮಂಗಲ ತಾಲ್ಲೂಕಿಗೆ ಸೇರಿಸುವ ಕುರಿತು ರಾಜ್ಯ ಸರ್ಕಾರ ಆದೇಶ ಹೊರಡಿಸಿತು. ಇದು ಎರಡೂ ತಾಲ್ಲೂಕುಗಳಲ್ಲಿ ಪರ ಮತ್ತು ವಿರೋಧದ ಹೋರಾಟ ಹಾಗೂ ಚರ್ಚೆಗೆ ಕಾರಣವಾಯಿತು. ಮಾಗಡಿ ಶಾಸಕ ಬಾಲಕೃಷ್ಣ ಮತ್ತು ನೆಲಮಂಗಲ ಶಾಸಕ ಶ್ರೀನಿವಾಸ್ ಅವರು ತಮ್ಮ ತಾಲ್ಲೂಕುಗಳ ಜನರ ಪರವಾಗಿ ದನಿ ಎತ್ತುತ್ತಲೇ ಬಂದಿದ್ದಾರೆ. ಇದೆಲ್ಲದರ ನಡುವೆಯೂ ಸೋಲೂರು ನೆಲಮಂಗಲಕ್ಕೆ ಸೇರ್ಪಡೆಯಾಗಿದೆ.

ಮಾಗಡಿ ತಾಲ್ಲೂಕಿನ ಮರೂರು ಹ್ಯಾಂಡ್ ಪೋಸ್ಟ್ ಬಳಿ ಹೇಮಾವತಿ ಲಿಂಕ್ ಕೆನಾಲ್ ಯೋಜನೆ ಪರವಾಗಿ ಹೆದ್ದಾರಿ ತಡೆ ನಡೆಸಿದ ಶಾಸಕ ಎಚ್‌.ಸಿ. ಬಾಲಕೃಷ್ಣ ಸೇರಿದಂತೆ ಹಲವು ಮುಖಂಡರು ಪೊಲೀಸರು ವಶಕ್ಕೆ ಪಡೆದು ವಾಹನದಲ್ಲಿ ಕರೆದೊಯ್ದರು
ಚನ್ನಪಟ್ಟಣ ತಾಲ್ಲೂಕಿನ ವಂದಾರಗುಪ್ಪೆ ಗೇಟ್‌ ಬಳಿ ಮೈಸೂರು- ಉದಯಪುರ ನಡುವೆ ಸಂಚರಿಸುತ್ತಿದ್ದ ಹಮ್‌ಸಫರ್ ಎಕ್ಸ್‌ಪ್ರೆಸ್‌ ರೈಲಿನ ಎಂಜಿನ್‌ನಲ್ಲಿ ಬೆಂಕಿ‌ ಕಾಣಿಸಿಕೊಂಡಿದ್ದ ದೃಶ್ಯ
ಸಾಹಸ ನಿರ್ದೇಶಕ ಹಾಸನ ರಘು ಅವರು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಂದ ಭಾರತ ಸರ್ಕಾರದ ಪ್ರತಿಷ್ಠಿತ ಪದ್ಮಶ್ರೀ ಪ್ರಶಸ್ತಿ ಸ್ವೀಕರಿಸಿದ ಕ್ಷಣ
ಸಾಲುಮರದ ತಿಮ್ಮಕ್ಕ
ಬಿ. ಸರೋಜಾ ದೇವಿ
ಬಿಡದಿಯ ಕೆಐಎಡಿಬಿ ಕೈಗಾರಿಕಾ ಪ್ರದೇಶದಲ್ಲಿರುವ ಜಾಲಿವುಡ್ ಪಾರ್ಕ್
ರಾಮನಗರ ತಾಲ್ಲೂಕಿನ ಬಿಡದಿ ಕೈಗಾರಿಕಾ ಪ್ರದೇಶದಲ್ಲಿರುವ ಜಾಲಿವುಡ್ ಸ್ಟುಡಿಯೋಸ್ ಆ್ಯಂಡ್ ಅಡ್ವೆಂಚರ್ಸ್ ಪಾರ್ಕ್‌ಗೆ ತಹಶೀಲ್ದಾರ್ ತೇಜಸ್ವಿನಿ ನೇತೃತ್ವದಲ್ಲಿ ಬೀಗಮುದ್ರೆ ಹಾಕಿದ್ದ ಕ್ಷಣ
ಚನ್ನಪಟ್ಟಣ ತಾಲ್ಲೂಕಿನ ಗೌಡಗೆರೆಯಲ್ಲಿರುವ ಚಾಮುಂಡೇಶ್ವರಿ ಮೂರ್ತಿಯ ವಿಗ್ರಹ
ಬಿಡದಿ ಸಮಗ್ರ ಉಪನಗರ ಯೋಜನೆ ವಿರೋಧಿಸಿ ಇತ್ತೀಚೆಗೆ ರಾಮನಗರದಲ್ಲಿ ನಡೆದಿದ್ದ ಪಾದಯಾತ್ರೆಯಲ್ಲಿ ಪಾಲ್ಗೊಂಡಿದ್ದ ರೈತರು

ರಾತ್ರೋರಾತ್ರಿ ಬಿಗ್‌ಬಾಸ್ ಮನೆಗೆ ಬೀಗ ಕನ್ನಡದ ಜನಪ್ರಿಯಯ ರಿಯಾಲಿಟಿ ಷೋ ‘ಬಿಗ್ ಬಾಸ್’ ಶೂಟಿಂಗ್ ನಡೆಯುತ್ತಿರುವ ಬಿಡದಿಯ ಜಾಲಿವುಡ್ ಸ್ಟುಡಿಯೋಸ್ ಆ್ಯಂಡ್ ಅಡ್ವೆಂಚರ್ಸ್ ಪಾರ್ಕ್‌ಗೆ ತಾಲ್ಲೂಕು ಆಡಳಿತ ಅ. 7ರಂದು ರಾತ್ರಿ ಬೀಗಮುದ್ರೆ ಹಾಕಿತ್ತು. ಈ ದಿಢೀರ್ ಬೆಳವಣಿಗೆಯಿಂದಾಗಿ ಬಿಗ್ ಬಾಸ್ ಷೋ ಅತಂತ್ರ ಸ್ಥಿತಿ ತಲುಪಿತ್ತು. ಮನರಂಜನೆ ಸಾಹಸ ಚಟುವಟಿಕೆಗಳಿಗೆ ಜಾಲಿವುಡ್ ಪಾರ್ಕ್ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿಯ ಅನುಮತಿ ಪಡೆದಿರಲಿಲ್ಲ. ಪಾರ್ಕ್‌ ಕೊಳಚೆ ನೀರನ್ನು ಸಂಸ್ಕರಿಸದೆ ಹಾಗೆಯೇ ಹೊರಕ್ಕೆ ಬಿಡಲಾಗುತ್ತಿತ್ತು. ತ್ಯಾಜ್ಯವನ್ನು ಸಹ ಸರಿಯಾಗಿ ವಿಲೇವಾರಿ ಮಾಡುತ್ತಿರಲಿಲ್ಲ ಎಂಬ ಆರೋಪದ ಮೇಲೆ ಸ್ಟುಡಿಯೊಗೆ ಬೀಗ ಹಾಕಿದ್ದ ಈ ಘಟನೆಯು ಹೈಡ್ರಾಮದ ಜೊತೆಗೆ ರಾಜಕೀಯ ಕೆಸರೆರಚಾಟಕ್ಕೂ ಕಾರಣವಾಗಿತ್ತು. ಕಡೆಗೆ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಗೆ ಷೋ ನಿರೂಪಕನಾದ ನಟ ಕಿಚ್ಚ ಸುದೀಪ್ ಅವರು ಮನವಿ ಮಾಡಿದ ಬಳಿಕ ರಾತ್ರೋರಾತ್ರಿ ಜಿಲ್ಲಾಧಿಕಾರಿ ಸ್ಥಳಕ್ಕೆ ತೆರಳಿ ಸ್ಟುಡಿಯೊದ ಬೀಗ ತೆಗೆಸಿದ್ದರು. ಇದರಿಂದಾಗಿ ಎರಡು ದಿನದ ಹೈಡ್ರಾಮ ಕೊನೆಗೊಂಡು ಷೋ ನಡೆಯುತ್ತಿದ್ದ ಸ್ಥಳದಕ್ಕ ಶೂಟಿಂಗ್‌ಗೆ ಅನುಮತಿ ಸಿಕ್ಕಿತ್ತು. ಇತ್ತೀಚೆಗೆ ಸ್ಟುಡಿಯೊ ಅಗತ್ಯ ಅನುಮತಿ ಪಡೆದು ಸಂಪೂರ್ಣ ಕಾರ್ಯಾಚರಣೆ ನಡೆಸುತ್ತಿದೆ.

ನಿಧನರಾದ ಪ್ರಮುಖರು ನಟಿ ಸರೋಜಾ ದೇವಿ ದಕ್ಷಿಣ ಭಾರತದ ಬಹುಭಾಷಾ ಸೂಪರ್ ಸ್ಟಾರ್ ನಟಿ ಮೂಲತಃ ಚನ್ನಪಟ್ಟಣ ತಾಲ್ಲೂಕಿನ ದಶಾವರ ಗ್ರಾಮದ ಬಿ. ಸರೋಜಾ ದೇವಿ ಅವರು ಜುಲೈ 14ರಂದು ಬೆಂಗಳೂರಿನಲ್ಲಿ ನಿಧನರಾದರು. ಮೇರು ನಟಿ ಸಾವಿಗೆ ಇಡೀ ಚಿತ್ರರಂಗ ಮಿಡಿದಿತ್ತು. ಸಿನಿಮಾ ರಂಗಕ್ಕೆ ನಟಿಯ ಕೊಡುಗೆ ಪರಿಗಣಿಸಿದ್ದ ಸರ್ಕಾರವು ದಶಾವರದಲ್ಲಿ ನಟಿಯ ಅಂತ್ಯಕ್ರಿಯೆಯನ್ನು ಸರ್ಕಾರಿ ಗೌರವದೊಂದಿಗೆ ನೆರವೇರಿಸಿತ್ತು. ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಸೇರಿದಂತೆ ಹಲವು ಗಣ್ಯರು ಗ್ರಾಮಕ್ಕೆ ಬಂದು ಅಗಲಿದ ನಟಿಯ ಅಂತಿಮ ದರ್ಶನ ಪಡೆದಿದ್ದರು. ಸಾಲುಮರದ ತಿಮ್ಮಕ್ಕ ‘ವೃಕ್ಷಮಾತೆ’ ಎಂದೇ ಹೆಸರಾಗಿದ್ದ ಮಾಗಡಿ ತಾಲ್ಲೂಕಿನ ಕುದೂರು ಹೋಬಳಿಯ ಹುಲಿಕಲ್ ಗ್ರಾಮದ ಸಾಲುಮರದ ತಿಮ್ಮಕ್ಕ ಅವರು ನ. 15ರಂದು ತಮ್ಮ 114ನೇ ವಯಸ್ಸಿನಲ್ಲಿ ನಿಧನರಾದರು. ತಮ್ಮ ಸ್ವಗ್ರಾಮದಿಂದ ಕುದೂರು ಗ್ರಾಮದವರೆಗೆ ರಸ್ತೆ ಪಕ್ಕ ಸಾಲುಮರಗಳನ್ನು ಬೆಳೆಸುವ ಮೂಲಕ ವಿಶ್ವದ ಗಮನ ಸೆಳೆದಿದ್ದ ತಿಮ್ಮಕ್ಕ ಅವರು ರಾಜ್ಯ ಸರ್ಕಾರದ ಪರಿಸರ ರಾಯಭಾರಿಯೂ ಆಗಿದ್ದರು. ದೇಶದ ಪ್ರತಿಷ್ಠಿತ ಪದ್ಮಶ್ರಿ ಪ್ರಶಸ್ತಿ ಸೇರಿದಂತೆ ದೇಶ–ವಿದೇಶಗಳ ಹಲವು ಪ್ರಶಸ್ತಿ–ಪುರಸ್ಕಾರಗಳು ಅವರಿಗೆ ಸಂದಿದ್ದವು. ಬೆಂಗಳೂರಿನ ಜ್ಞಾನಭಾರತಿ ವಿಶ್ವವಿದ್ಯಾಲಯದ ಆವರಣದಲ್ಲಿರುವ ಕಲಾಗ್ರಾಮದಲ್ಲಿ ಸರ್ಕಾರಿ ಗೌರವದೊಂದಿಗೆ ಅವರ ಅಂತ್ಯಕ್ರಿಯೆ ನೆರವೇರಿತ್ತು.

ಬಿಡದಿ ಟೌನ್‌ಶಿಪ್‌ಗೆ ಅಧಿಸೂಚನೆ; ಎ.ಐ ನಗರ ಘೋಷಣೆ ನನೆಗುದಿಗೆ ಬಿದ್ದಿದ್ದ ಬಿಡದಿ ಸಮಗ್ರ ಉಪನಗರ ಯೋಜನೆಗೆ ಕಾಂಗ್ರೆಸ್ ಸರ್ಕಾರ ಚಾಲನೆ ಕೊಟ್ಟಿತು. ಗ್ರೇಟರ್ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಮೂಲಕ ಅದಾಗಲೇ ಗುರುತಿಸಿದ್ದ ಒಂಬತ್ತು ಹಳ್ಳಿಗಳಲ್ಲಿ ಉಪನಗರಕ್ಕಾಗಿ 9600 ಎಕರೆ ಭೂ ಸ್ವಾಧೀನಕ್ಕೆ ಮಾರ್ಚ್‌ನಲ್ಲಿ ಅಧಿಸೂಚನೆ ಹೊರಡಿಸಿತು. ಯೋಜನೆ ವಿರುದ್ಧ ರೈತರು ಅಂದಿನಿಂದಲೂ ಅನಿರ್ದಿಷ್ಟಾವಧಿ ಧರಣಿ ನಡೆಸುತ್ತಲೇ ಇದ್ದಾರೆ. ಇದರ ನಡುವೆಯೇ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಉಪನಗರ ವ್ಯಾಪ್ತಿಯ 2000 ಎಕರೆಗೂ ಹೆಚ್ಚು ಜಾಗದಲ್ಲಿ ದೇಶದ ಮೊದಲ ಅತ್ಯಾಧುನಿಕ ಕೃತಕ ಬುದ್ಧಿಮತ್ತೆ ಆಧರಿತ ವಿಶ್ವದರ್ಜೆಯ ಎ.ಐ ನಗರ ನಿರ್ಮಾಣದ ಘೋಷಣೆ ಮಾಡಿದರು. ಆಗಾಗ ಧರಣಿಯ ಉಗ್ರ ಸ್ವರೂಪದ ಪಡೆದು ರೈತರ ಮೇಲೆ ಪ್ರಕರಣಗಳು ಸಹ ದಾಖಲಾಗಿವೆ. ಬಿಜೆಪಿ ಜೆಡಿಎಸ್ ಸಹ ಯೋಜನೆ ವಿರೋಧಿಸಿ ರೈತರ ಧರಣಿಗೆ ಸಾಥ್ ನೀಡಿವೆ. ಎರಡೂ ಪಕ್ಷಗಳ ಘಟಾನುಘಟಿ ನಾಯಕರು ಸಹ ಸ್ಥಳಕ್ಕೆ ಭೇಟಿ ನೀಡಿ ಹೋರಾಟಕ್ಕೆ ಬೆಂಬಲ ನೀಡಿದ್ದಾರೆ. ಇದೆಲ್ಲದವರ ನಡುವೆಯೇ ಪ್ರಾಧಿಕಾರವು ಜಂಟಿ ಅಳತೆ ಪ್ರಮಾಣೀಕರಣ ನಡೆಸಿದೆ. ಜಿಲ್ಲಾಧಿಕಾರಿ ಸಹ ಭೂ ಸ್ವಾಧೀನಕ್ಕೆ ಪರಿಹಾರ ದರ ಘೋಷಣೆ ಮಾಡಿದ್ದಾರೆ. ಸದ್ಯದಲ್ಲೇ ಪರಿಹಾರ ಪಾವತಿ ಪ್ರಕ್ರಿಯೆ ನಡೆಯಲಿದೆ ಎನ್ನುತ್ತವೆ ಮೂಲಗಳು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.