ADVERTISEMENT

ರಾಮನಗರ | ಹಣಕ್ಕಾಗಿ ಮಗು ಅಪಹರಣ: ಸ್ಥಳೀಯರಿಂದ ರಕ್ಷಣೆ

​ಪ್ರಜಾವಾಣಿ ವಾರ್ತೆ
Published 9 ಸೆಪ್ಟೆಂಬರ್ 2024, 15:32 IST
Last Updated 9 ಸೆಪ್ಟೆಂಬರ್ 2024, 15:32 IST
ದರ್ಶನ್
ದರ್ಶನ್   

ರಾಮನಗರ: ಪಕ್ಕದ ಮನೆಯ ಐದು ವರ್ಷದ ಹೆಣ್ಣು ಮಗುವನ್ನು ಅಪಹರಿಸಿ ಹಣಕ್ಕೆ ಬ್ಲ್ಯಾಕ್‌ಮೇಲ್ ಮಾಡಿದ ಚಿತ್ರಕಲಾವಿದನನ್ನು ಭಾನುವಾರ ರಾತ್ರಿ ಸ್ಥಳೀಯರ ನೆರವಿನಿಂದ ಕುಟುಂಬದವರೇ ಹಿಡಿದು ಪೊಲೀಸರಿಗೆ ಒಪ್ಪಿಸಿ, ಮಗುವನ್ನು ರಕ್ಷಿಸಿದ್ದಾರೆ.

ಇಲ್ಲಿಯ ಮಂಜುನಾಥನಗರದಲ್ಲಿ ಕೈ, ಕಾಲು, ಬಾಯಿ ಹಾಗೂ ದೇಹಕ್ಕೆ ಗಮ್ ಟೇಪಿನಿಂದ ಸುತ್ತಿದ್ದ ಸ್ಥಿತಿಯಲ್ಲಿದ್ದ ಮಗುವನ್ನು ಸ್ಥಳೀಯರು ಪತ್ತೆಹಚ್ಚಿ ರಕ್ಷಿಸುತ್ತಿರುವ ಹಾಗೂ ಆರೋಪಿಯನ್ನು ಹಿಡಿದು ವಿಚಾರಿಸುತ್ತಿರುವ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

ಆರೋಪಿ ದರ್ಶನ್(24) ಎಂಬಾತನನ್ನು ಬಂಧಿಸಿದ ಐಜೂರು ಠಾಣೆ ಪೊಲೀಸರು ಆತನ ವಿರುದ್ಧ ಮಗು ಅಪಹರಣ ಹಾಗೂ ಎಸ್‌ಸಿ, ಎಸ್‌ಟಿ ದೌರ್ಜನ್ಯ ತಡೆ ಕಾಯ್ದೆ ಅಡಿ ಪ್ರಕರಣ ದಾಖಲಿಸಿದ್ದಾರೆ.

ADVERTISEMENT

ಚಿತ್ರಕಲಾವಿದನಾಗಿದ್ದ ದರ್ಶನ್ ಬಾಡಿಗೆ ಮನೆಯಲ್ಲಿ ತಾಯಿ ಮತ್ತು ತಂಗಿಯೊಂದಿಗೆ ವಾಸವಾಗಿದ್ದ. ಕೆಲಸಕ್ಕೆ ಸರಿಯಾಗಿ ಹೋಗದ ಕಾರಣ ಆದಾಯ ಇಲ್ಲದೆ ಮನೆ ಬಾಡಿಗೆ ಸಹ ಪಾವತಿಸಿರಲಿಲ್ಲ. ಸುಮಾರು ₹2 ಲಕ್ಷದವರೆಗೆ ಕೈ ಸಾಲ ಮಾಡಿಕೊಂಡಿದ್ದ. ಸಾಲ ತೀರಿಸುವುದಕ್ಕಾಗಿ ಪಕ್ಕದ ಮನೆಯ ಮಗುವನ್ನೇ ಅಪಹರಿಸಿ ಹಣಕ್ಕೆ ಬೇಡಿಕೆ ಇಡಲು ಸಂಚು ರೂಪಿಸಿದ್ದ ಎಂದು ಪೊಲೀಸರು ತಿಳಿಸಿದರು.

ಆಟದ ನೆಪದಲ್ಲಿ ಅಪಹರಣ: ನೆರೆ ಮನೆಗೆ ಆಗಾಗ ಹೋಗಿ ಮಗುವನ್ನು ಆಟವಾಡಿಸುತ್ತಿದ್ದ ದರ್ಶನ್ ಭಾನುವಾರ ಸಂಜೆ 7.30ಕ್ಕೆ ಆಟವಾಡಿಸುವ ನೆಪದಲ್ಲಿ ಮಗುವನ್ನು ಹೊರಗೆ ಕರೆದೊಯ್ದಿದ್ದಾನೆ. ಮಗು ಕಾಣದಿದ್ದಾಗ ಆತಂಕಗೊಂಡ ಪೋಷಕರು ಸ್ನೇಹಿತರೊಂದಿಗೆ ಸುತ್ತುಮುತ್ತ ಹುಡುಕಾಟ ರಾತ್ರಿ 8 ಗಂಟೆಯವರೆಗೆ ಹುಡುಕಾಡಿದ್ದಾರೆ. 

ರಾತ್ರಿ 9ರ ಸುಮಾರಿಗೆ ಅಪರಿಚಿತ ಮೊಬೈಲ್ ಸಂಖ್ಯೆಯಿಂದ ಮಗುವಿನ ತಂದೆಗೆ ಕರೆ ಮಾಡಿದ ದರ್ಶನ್, ‘ನಿಮ್ಮ ಮಗಳು ನನ್ನ ಬಳಿ ಇದ್ದಾಳೆ. ಈ ವಿಷಯವನ್ನು ಯಾರಿಗೂ ತಿಳಿಸಬೇಡಿ’ ಎಂದು ಕರೆ ಸ್ಥಗಿತಗೊಳಿಸಿದ್ದಾನೆ. 

ಹಣಕ್ಕೆ ಬೇಡಿಕೆ: ಕೆಲ ಹೊತ್ತಿನ ಬಳಿಕ ಮತ್ತೆ ಕರೆ ಮಾಡಿ, ‘ಈ ವಿಷಯವನ್ನು ಪೊಲೀಸರಿಗೆ ತಿಳಿಸಬೇಡಿ. ನನಗೆ ₹2 ಲಕ್ಷ ಹಣ ಕೊಡಬೇಕು. ಇಲ್ಲದಿದ್ದರೆ, ನಿಮ್ಮ ಮಗಳನ್ನು ಸಾಯಿಸುತ್ತೇನೆ’ ಎಂದು ಬೆದರಿಕೆ ಹಾಕಿ ಕರೆ ಕಟ್ ಮಾಡಿದ್ದಾನೆ.

ಇದೇ ರೀತಿ, ಮತ್ತೆರಡು ಸಲ ಕರೆ ಮಾಡಿ ಹಣ ಕೊಡದಿದ್ದರೆ ಮಗಳನ್ನು ಕೊಲ್ಲುವುದಾಗಿ ಬೆದರಿಕೆ ಒಡ್ಡಿದ್ದಾನೆ. ಆತನ ಹೇಳಿಕೆಯಿಂದ ಗಾಬರಿಗೊಂಡ ಕುಟುಂಬದವರು ಹಾಗೂ ಸ್ಥಳೀಯರು ಸೇರಿ ಸುತ್ತಮುತ್ತ ಹುಡುಕಾಟ ಶುರು ಮಾಡಿದ್ದಾರೆ. 

ರಾತ್ರಿ 9.45ರ ಸುಮಾರಿಗೆ ಸಮೀಪದಲ್ಲಿರುವ ಸಿಮೆಂಟ್ ಗೋದಾಮಿನ ಬಳಿ ಕೆಲವರು ಹುಡುಕಲು ಹೋದಾಗ ಕೈ–ಕಾಲು, ಬಾಯಿ ಕಟ್ಟಿದ ಸ್ಥಿತಿಯಲ್ಲಿ ಮಗು ಗೋದಾಮಿನೊಳಗೆ ಪತ್ತೆಯಾಗಿದೆ.

ಯಾರು ಹೀಗೆ ಮಾಡಿರಬಹುದು ಎಂದು ಸ್ಥಳೀಯರು ವಿಚಾರಣೆ ಆರಂಭಿಸಿದಾಗ ದರ್ಶನ್ ಅನುಮಾನಾಸ್ಪದ ರೀತಿಯಲ್ಲಿ ಅವಿತುಕೊಂಡಿರುವುದು ಗೊತ್ತಾಗಿದೆ. ಆತನನ್ನು ಹಿಡಿದು ವಿಚಾರಿಸಿದಾಗ ಹಣಕ್ಕಾಗಿ ಕೃತ್ಯ ಎಸಗಿದ್ದಾಗಿ ಒಪ್ಪಿಕೊಂಡಿದ್ದಾನೆ ಎಂದು ಪೊಲೀಸರು ಮಾಹಿತಿ ನೀಡಿದರು.

ಮಗುವನ್ನು ರಕ್ಷಿಸಿದ ಸ್ಥಳೀಯರು ಮೈಗೆ ಸುತ್ತಿದ್ದ ಟೇಪು ಕತ್ತರಿಸಿ ಆರೈಕೆ ಮಾಡಿ ಕುಟುಂಬದವರಿಗೆ ಒಪ್ಪಿಸಿದ್ದಾರೆ. ಠಾಣೆಗೆ ಕರೆ ಮಾಡಿ ವಿಷಯ ತಿಳಿಸಿದರು.

ಸ್ಥಳಕ್ಕೆ ತೆರಳಿದ ಪೊಲೀಸರು ದರ್ಶನ್‌ನನ್ನು ವಶಕ್ಕೆ ಪಡೆದು ಸೋಮವಾರ ಕೋರ್ಟ್‌ಗೆ ಹಾಜರುಪಡಿಸಿದ್ದಾರೆ. ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. 

ನಿತ್ರಾಣ ಸ್ಥಿತಿಯಲ್ಲಿದ್ದ ಮಗು

ಮಗುವನ್ನು ಅಪಹರಿಸಿದ್ದ ದರ್ಶನ್ ಸಿಮೆಂಟ್ ಗೋದಾಮಿಗೆ ಕರೆದೊಯ್ದಿದ್ದ. ಗಮ್‌ ಟೇಪಿನಿಂದ ಮಗುವಿನ ಕೈ ಕಾಲು ಬಾಯಿ ಹಾಗೂ ದೇಹ ಸುತ್ತಿ ಅಲುಗಾಡದಂತೆ ಮಾಡಿ ಬೆಡ್‌ಶೀಟ್‌ ಮುಚ್ಚಿ ಕತ್ತಲಲ್ಲಿ ಮಲಗಿಸಿದ್ದ. ಸ್ಥಳದಿಂದಲೇ ಮಗು ತಂದೆಗೆ ಕರೆ ಮಾಡಿ ಹಣಕ್ಕೆ ಬೇಡಿಕೆ ಇಟ್ಟಿದ್ದ. ಸ್ಥಳೀಯರು ಗೋದಾಮಿಗೆ ಮಗು ಹುಡುಕಿಕೊಂಡು ಹೋದಾಗ ಅಲ್ಲಿಂದ ಕಾಲ್ಕಿತ್ತು ಸಮೀಪದಲ್ಲೇ ಅವಿತುಕೊಂಡಿದ್ದ. ಯಾರು ಕೃತ್ಯ ಎಸಗಿರಬಹುದೆಂದು ಸ್ಥಳೀಯರು ಸುತ್ತಮುತ್ತ ಹುಡುಕಾಡಿದಾಗ ದರ್ಶನ್‌ ಅವರ ಕಣ್ಣಿಗೆ ಬಿದ್ದ. ಅನುಮಾನಾಸ್ಪದ ರೀತಿಯಲ್ಲಿದ್ದ ವರ್ತಿಸುತ್ತಿದ್ದ ಆತನನ್ನು ಹಿಡಿದು ವಿಚಾರಿಸಿದಾಗ ಕೃತ್ಯ ಒಪ್ಪಿಕೊಂಡ. ಕೆಲಸಕ್ಕೆ ಹೋಗದೆ ಸೋಮಾರಿಯಾಗಿದ್ದ ದರ್ಶನ್ ಮಾದಕವಸ್ತು ವ್ಯಸನಿಯಾಗಿದ್ದ ಎಂದು ಪೊಲೀಸರು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.