ADVERTISEMENT

ಸಾಗುವಳಿ ಚೀಟಿ ವಿಚಾರದಲ್ಲಿ ರಾಜಕೀಯ ಸಲ್ಲ: ಶಾಸಕ ಇಕ್ಬಾಲ್‌ ಹುಸೇನ್‌

​ಪ್ರಜಾವಾಣಿ ವಾರ್ತೆ
Published 11 ನವೆಂಬರ್ 2025, 2:18 IST
Last Updated 11 ನವೆಂಬರ್ 2025, 2:18 IST
ಹಾರೋಹಳ್ಳಿ ಬೆಸ್ಕಾಂ ಕಚೇರಿಯಲ್ಲಿ ಬಗರ್ ಹುಕುಂ ಸಮಿತಿ ಸಭೆ ನಡೆಯಿತು
ಹಾರೋಹಳ್ಳಿ ಬೆಸ್ಕಾಂ ಕಚೇರಿಯಲ್ಲಿ ಬಗರ್ ಹುಕುಂ ಸಮಿತಿ ಸಭೆ ನಡೆಯಿತು   

ಹಾರೋಹಳ್ಳಿ: ಕ್ಷೇತ್ರದಲ್ಲಿ ಈ ಹಿಂದೆ ಆಡಳಿತ ನಡೆಸಿದವರು ಸಾಗುವಳಿ ಚೀಟಿ ವಿಚಾರದಲ್ಲಿ ರಾಜಕೀಯ ನಡೆಸಿದ್ದಾರೆ. ಬಡವರ ಹಕ್ಕುಗಳನ್ನು ಕಲ್ಪಿಸುವುದರಲ್ಲಿ ರಾಜಕೀಯ ಮಾಡಿರುವುದು ಖಂಡನೀಯ ಎಂದು ಶಾಸಕ ಇಕ್ಬಾಲ್ ಹುಸೇನ್ ಹೇಳಿದರು.

ತಾಲ್ಲೂಕಿನ ಬೆಸ್ಕಾಂ ಕಚೇರಿಯಲ್ಲಿ ನಡೆದ ಬಗರ್ ಹುಕುಂ ಸಾಗುವಳಿ ಸಮಿತಿ ಸಭೆ ನಡೆಸಿ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಾಗುವಳಿ ಚೀಟಿಗಾಗಿ ಅರ್ಜಿ ಸಲ್ಲಿಸಿದ ಹಲವು ಅರ್ಜಿಗಳನ್ನು ರಾಜಕೀಯ ನಡೆಸಿ ವಜಾಗೊಳಿಸಲಾಗಿದೆ. ಅವುಗಳನ್ನು ಪುನರ್ ಪರಿಶೀಲಿಸಲು ಕಾನೂನಿನಲ್ಲಿ ಅವಕಾಶವಿಲ್ಲ. ಈ ಬಗ್ಗೆ ಕಂದಾಯ ಸಚಿವರಲ್ಲಿ ಮನವಿ ಮಾಡಲಾಗುವುದು. ರೈತರಿಗೆ ಸಾಗುವಳಿ ಚೀಟಿ ನೀಡಲು ಪ್ರಾಮಾಣಿಕವಾಗಿ ಪ್ರಯತ್ನಿಸಲಾಗುವುದು ಎಂದು ಹೇಳಿದರು.

ಸಾಗುವಳಿ ಚೀಟಿಗಾಗಿ ಸಾವಿರಾರು ರೈತರು ಅರ್ಜಿ ಸಲ್ಲಿಸಿದ್ದಾರೆ. ಇದೀಗ ಸಾಗುವಳಿ ಚೀಟಿಗೆ ಕಾನೂನು ತೊಡಕುಂಟಾಗಿದೆ. ಬಗರ್ ಹುಕುಂ ಸಾಗುವಳಿ ಚೀಟಿ ವಿಚಾರವಾಗಿ ಹಲವು ಸಮಸ್ಯೆಗಳಿವೆ. ಕೆಲವು ಅರ್ಜಿಗಳು ಒ.ಎಂ.ಆಗಿದೆ. ಕೆಲವು ಷರಾ ಬರೆಯಲಾಗಿದೆ. ಈ ರೀತಿಯ ಅಡಚಣೆ ಇರುವ 350 ಅರ್ಜಿಗಳನ್ನು ಪರಿಶೀಲಿಸಿ ಅಡಚಣೆ ನಿವಾರಿಸಿ ಖಾತೆ ಮಾಡಿ ಪಹಣಿ ಮಾಡಿಕೊಡುವ ಕೆಲಸವನ್ನು ಮೊದಲಿಗೆ ಮಾಡಲಾಗುತ್ತಿದೆ. ಸಾಗುವಳಿ ವಿಚಾರವಾಗಿ ಹತ್ತು ಹಲವು ಸಮಸ್ಯೆಗಳು ಕಾಡುತ್ತಿವೆ. ಬಡವರಿಗೆ ಅವರ ಹಕ್ಕು ನೀಡಲು ಶಕ್ತಿಮೀರಿ ಸಮಿತಿ ಪ್ರಯತ್ನಿಸುತ್ತಿದೆ ಎಂದು ಹೇಳಿದರು.

ADVERTISEMENT

ರೈತರು ಸಾಗುವಳಿ ಚೀಟಿಗಾಗಿ ಅರ್ಜಿ ಸಲ್ಲಿಸಿದ್ದಾರೆ. ಆದರೆ, ಬಿಬಿಎಂಪಿ, ನಗರಸಭೆ, ಪುರಸಭೆಗಳಾಗಿ ವಿಂಗಡಿಸಿರುವುದು 2021-22ರಲ್ಲಿ ಹಾಗಾಗಿ ರೈತರಿಗೆ ತೊಂದರೆಯಾಗಿದೆ. ಈ ಬಗ್ಗೆ ಕಂದಾಯ ಸಚಿವರ ಬಳಿ ಚರ್ಚಿಸಲಾಗಿದೆ. ಪ್ರಾಮಾಣಿಕವಾಗಿ ಪ್ರಯತ್ನಿಸಿ ರೈತರಿಗೆ ಸಾಗುವಳಿ ಚೀಟಿ ನೀಡಲಾಗುವುದು ಎಂದರು.

ಕುಮಾರಸ್ವಾಮಿಗೆ ಗೊತ್ತು: ಕೇಂದ್ರ ಸಚಿವ ಕುಮಾರಸ್ವಾಮಿ ಅವರು 2006ರಿಂದಲೂ ಶಾಸಕರಾಗಿದ್ದಾರೆ. ವಿಧಾನಸೌಧದಲ್ಲಿ ಹೆಚ್ಚು ಇದ್ದವರೇ ಅವರು. ಹೀಗಿರುವಾಗ ವಿಧಾನಸೌಧದಲ್ಲಿರುವ ಉಗ್ರರು ಯಾರೆಂದು ಅವರೇ ಹೇಳಬೇಕು ಎಂದು ಶಾಸಕ ಇಕ್ಬಾಲ್ ಹುಸೇನ್ ಪ್ರತಿಕ್ರಿಯಿಸಿದರು.

ವಿಧಾನಸೌಧದಲ್ಲಿ ಇರುವ ಉಗ್ರರ ಬಗ್ಗೆ ಹೇಳಿ ಎಂಬ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ವಿಧಾನಸೌಧದಲ್ಲಿ ಉಗ್ರರಿರಲು ಸಾಧ್ಯವೇ? ಅವರ ಕಣ್ಣಿಗೆ ಉಗ್ರರ ರೀತಿ ಯಾರು ಕಾಣುತ್ತಿದ್ದಾರೆ. ಮೊದಲು ಕುಮರಸ್ವಾಮಿ ಈ ರೀತಿ ಹೇಳಿಕೆ ನೀಡುವುದನ್ನು ಬಿಡಬೇಕು ಎಂದರು.

ತಹಶೀಲ್ದಾರ್ ಹರ್ಷವರ್ಧನ್, ಬಮೂಲ್ ನಿರ್ದೇಶಕ ಹರೀಶ್ ಕುಮಾರ್, ಜೆಸಿಬಿ ಅಶೋಕ್, ಪುಟ್ಟಸ್ವಾಮಿ, ನಾಗೇಶ್, ಬಾಲಾಜಿ, ರುದ್ರೇಶ್ ಸೇರಿದಂತೆ ಬಗರ್ ಹುಕುಂ ಸಮಿತಿ ಸದಸ್ಯರು ಮತ್ತು ಅಧಿಕಾರಿಗಳು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.