ADVERTISEMENT

ರವಿಶಂಕರ್ ಗುರೂಜಿ ಆಶ್ರಮದವರಿಗೆ ವಂಚನೆ; ನಕಲಿ ಐಎಎಸ್ ಅಧಿಕಾರಿ ಬಂಧನ

​ಪ್ರಜಾವಾಣಿ ವಾರ್ತೆ
Published 8 ಸೆಪ್ಟೆಂಬರ್ 2021, 6:46 IST
Last Updated 8 ಸೆಪ್ಟೆಂಬರ್ 2021, 6:46 IST
ಶಿಶಿರ್‌ ಬಾಳಾಸಾಹೇಬ್‌
ಶಿಶಿರ್‌ ಬಾಳಾಸಾಹೇಬ್‌    

ರಾಮನಗರ: ತಾನು ವಿಶೇಷ ಐಎಎಸ್‌ ಅಧಿಕಾರಿ ಎಂದು ನಂಬಿಸಿ ರವಿಶಂಕರ್ ಗುರೂಜಿ ಆಶ್ರಮ ಸೇರಿದಂತೆ ಹಲವರಿಗೆ ವಂಚಿಸುತ್ತಿದ್ದ ವ್ಯಕ್ತಿಯನ್ನು ಕಗ್ಗಲೀಪುರ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಬೆಂಗಳೂರು ದಕ್ಷಿಣ ತಾಲ್ಲೂಕಿನ ಸಾಲುಹುಣಸೆ ಪ್ರದೇಶದ ನಿವಾಸಿ ಶಿಶಿರ್‌ ಬಾಳಾಸಾಹೇಬ್‌ (24) ಬಂಧಿತ ವ್ಯಕ್ತಿ. ಮೂಲತಃ ಮಹಾರಾಷ್ಟ್ರದ ಜಲಗಾವ್‌ ಜಿಲ್ಲೆಯವನಾದ ಈತ ಡಿಪ್ಲೊಮಾ ಪದವೀಧರನಾಗಿದ್ದು, ಬೆಂಗಳೂರಿನಲ್ಲಿ ನೆಲೆಸಿದ್ದ. ನಿರುದ್ಯೋಗಿಯಾಗಿದ್ದ ಶಿಶಿರ್‌ ತಾನು ಕೇಂದ್ರ ಗೃಹ ಇಲಾಖೆಯಲ್ಲಿ ಐಎಎಸ್‌ ಅಧಿಕಾರಿಯಾಗಿದ್ದು, ದಕ್ಷಿಣ ವಲಯದ ವಿಶೇಷ ಕರ್ತವ್ಯ ಅಧಿಕಾರಿ (ಆಫೀಸರ್ ಆನ್‌ ಸ್ಪೆಷಲ್‌ ಡ್ಯೂಟಿ) ಎಂದು ನಕಲಿ ಐ.ಡಿ. ಕಾರ್ಡ್ ಮಾಡಿಸಿಕೊಂಡಿದ್ದ.

ಇದನ್ನೇ ಹಣ ವಸೂಲಿಗೆ ಅಸ್ತ್ರವನ್ನಾಗಿ ಮಾಡಿಕೊಂಡಿದ್ದ ಆರೋಪಿ ಊದಿಪಾಳ್ಯದಲ್ಲಿರುವ ರವಿಶಂಕರ್ ಗುರೂಜಿ ಆಶ್ರಮದವರಿಗೂ ಮಂಕುಬೂದಿ ಎರಚಿದ್ದ. ತಾನು ಐಎಎಸ್‌ ಅಧಿಕಾರಿಯಾಗಿದ್ದು, ಆಶ್ರಮಕ್ಕೆ ಸೇರಿದ ಸಿವಿಲ್‌ ವ್ಯಾಜ್ಯಗಳನ್ನು ಪರಿಹರಿಸಿಕೊಡುವುದಾಗಿ ನಂಬಿಸಿ ಹಣ ಸಹ ಪಡೆದಿದ್ದ ಎಂದು ಆರೋಪಿಸಲಾಗಿದೆ.

ADVERTISEMENT

ಬಂಧಿತನಿಂದ ಒಂದು ಇನೋವಾ ಕ್ರಿಸ್ಟಾ ಕಾರು, ನಕಲಿ ಐ.ಡಿ. ಕಾರ್ಡ್ ಹಾಗೂ ಮೊಬೈಲ್‌ಗಳನ್ನು ವಶಕ್ಕೆ ಪಡೆಲಾಗಿದೆ. ಆರೋಪಿ ವಿರುದ್ಧ ಐಪಿಸಿ ಸೆಕ್ಷನ್‌ 170, 171, 182, 186, 419, 420 ಅಡಿ ಪ್ರಕರಣ ದಾಖಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.