ಚನ್ನಪಟ್ಟಣ: ಸಮಾಜ ಹಾಗೂ ಸಾರ್ವಜನಿಕರ ಆಸ್ತಿ ರಕ್ಷಿಸುವಾಗ ತಮ್ಮ ಪ್ರಾಣ ತ್ಯಾಗ ಮಾಡಿ ಹುತಾತ್ಮರಾದ ಪೊಲೀಸರ ಸೇವೆ ಸ್ಮರಿಸುವುದು ಅವಶ್ಯ ಎಂದು ಜಿಲ್ಲಾಧಿಕಾರಿ ಯಶವಂತ್ ಜಿ.ಗುರುಕರ್ ಅಭಿಪ್ರಾಯಪಟ್ಟರು.
ನಗರದ ಜಿಲ್ಲಾ ಸಶಸ್ತ್ರ ಮೀಸಲು ಪಡೆ ಮೈದಾನದಲ್ಲಿ ಜಿಲ್ಲಾ ಪೊಲೀಸ್ ಇಲಾಖೆಯಿಂದ ಸೋಮವಾರ ಏರ್ಪಡಿಸಿದ್ದ ಪೊಲೀಸ್ ಹುತಾತ್ಮರ ದಿನಾಚರಣೆಯಲ್ಲಿ ಮಾತನಾಡಿದರು.
ದಿನದ ಇಪ್ಪತ್ನಾಲ್ಕು ಗಂಟೆಗಳ ಕಾಲ ಸಾರ್ವಜನಿಕರ ಕೆಲಸದಲ್ಲಿ ನಿರತವಾಗುವ ಪೊಲೀಸರು ಕರ್ತವ್ಯ ಸಂದರ್ಭದಲ್ಲಿ ಹಲವು ತೊಂದರೆಗಳಿಗೆ ಒಳಗಾಗುತ್ತಾರೆ. ಇಂತಹ ಸಂದರ್ಭದಲ್ಲಿ ಪ್ರಾಣಾಪಾಯವಾಗುವ ಸಂದರ್ಭವೂ ಇರುತ್ತದೆ. ಸಮಾಜದ ರಕ್ಷಣೆಗಾಗಿ ಕರ್ತವ್ಯನಿರತ ಪೊಲೀಸರ ತ್ಯಾಗ–ಬಲಿದಾನ ನಿಜಕೂ ಸ್ಮರಣೀಯ ಎಂದರು.
ಸಾರ್ವಜನಿಕರ ರಕ್ಷಣೆ ಮಾಡುವ ಪೊಲೀಸರು ಗಡಿಯಲ್ಲಿ ದೇಶ ಕಾಯುವ ಯೋಧರಂತೆ ಎಂದು ಶ್ಲಾಘಿಸಿದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಾರ್ತಿಕ್ ರೆಡ್ಡಿ ಮಾತನಾಡಿ, ಸಾರ್ವಜನಿಕ ಸೇವೆಯಲ್ಲಿ ತಮ್ಮನ್ನು ತಾವು ಅರ್ಪಿಸಿಕೊಂಡು ಹುತಾತ್ಮರ ಪೊಲೀಸರ ನೆನಪಿಗಾಗಿ ಪ್ರತಿ ವರ್ಷ ಅಕ್ಟೋಬರ್ 21ರಂದು ಪೊಲೀಸ್ ಹುತಾತ್ಮರ ದಿನಾಚರಣೆ ಆಚರಿಸಿಕೊಂಡು ಬರಲಾಗುತ್ತಿದೆ ಎಂದು ತಿಳಿಸಿದರು.
ಜಿ.ಪಂ ಸಿಇಒ ದಿಗ್ವಿಜಯ್ ಬೊಡ್ಕೆ, ಸಹಾಯಕ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸುರೇಶ್, ರಾಮಚಂದ್ರಯ್ಯ, ಚನ್ನಪಟ್ಟಣ ಉಪವಿಭಾಗದ ಡಿ.ವೈ.ಎಸ್.ಪಿ ಗಿರಿ, ಮಾಗಡಿ ಉಪ ವಿಭಾಗದ ಡಿ.ವೈ.ಎಸ್.ಪಿ ಪ್ರದೀಪ್, ರಾಮನಗರ ಉಪವಿಭಾಗದ ಡಿ.ವೈ.ಎಸ್.ಪಿ ದಿನಕರ್ ಶೆಟ್ಟಿ, ಹಿರಿಯ ಪತ್ರಕರ್ತ ಸು.ತ.ರಾಮೇಗೌಡ, ದಲಿತ ಸಮಾಜದ ಮುಖಂಡ ಕೋಟೆ ಸಿದ್ದರಾಮಯ್ಯ, ಸರ್ಕಲ್ ಇನ್‌ಸ್ಪೆಕ್ಟರ್‌ಗಳಾದ ಟಿ.ಟಿ.ಕೃಷ್ಣ, ರವಿಕಿರಣ್, ಜಿಲ್ಲೆಯ ವಿವಿಧ ಠಾಣೆಗಳ ಸಬ್‌ಇನ್ ಸ್ಪೆಕ್ಟರ್‌ಗಳು, ಸಿಬ್ಬಂದಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.