ADVERTISEMENT

ರಾಮನಗರ ಜಿಲ್ಲೆ ಮರುನಾಮಕರಣ: ಎಚ್‌ಡಿಕೆ ವಿರುದ್ಧ ಡಿಕೆಶಿ ಮೇಲುಗೈ

ಓದೇಶ ಸಕಲೇಶಪುರ
Published 27 ಜುಲೈ 2024, 4:37 IST
Last Updated 27 ಜುಲೈ 2024, 4:37 IST
ರಾಮನಗರ ಜಿಲ್ಲೆಯ ನಕ್ಷೆ
ರಾಮನಗರ ಜಿಲ್ಲೆಯ ನಕ್ಷೆ   

ರಾಮನಗರ: ‘ಜಿಲ್ಲೆ ಹೆಸರನ್ನು ಬೆಂಗಳೂರು ದಕ್ಷಿಣ ಎಂದು ಬದಲಾವಣೆ ಮಾಡುವುದು ನಿಶ್ಚಿತ’; ಜಿಲ್ಲೆಯ ಚನ್ನಪಟ್ಟಣದಲ್ಲಿ ವಾರದ ಹಿಂದೆ ನಡೆದಿದ್ದ ಸರ್ಕಾರಿ ನೌಕರರ ಸಮ್ಮೇಳನದಲ್ಲಿ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ರಾಮನಗರ ಜಿಲ್ಲೆ ಹೆಸರು ಬದಲಾವಣೆ ಕುರಿತು ಆಡಿದ ಮಾತುಗಳಿವು. ಅದಾದ ಒಂದು ವಾರದಲ್ಲಿ ಮರು ನಾಮಕರಣಕ್ಕೆ ಸಚಿವ ಸಂಪುಟದ ಒಪ್ಪಿಗೆ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.

ಇದರೊಂದಿಗೆ ಜಿಲ್ಲೆ ರಚನೆಯಾದಾಗಿನಿಂದ ಆರಂಭಗೊಂಡಿದ್ದ ಡಿಕೆಶಿ ಮತ್ತು ಜೆಡಿಎಸ್‌ ನಾಯಕ ಎಚ್‌.ಡಿ.ಕುಮಾರಸ್ವಾಮಿ ನಡುವಣ ರಾಜಕೀಯ ಮೇಲಾಟವು ಇದೀಗ ಮರುನಾಮಕರಣದೊಂದಿಗೆ ಮತ್ತೊಂದು ಆಯಾಮ ಪಡೆದಿದೆ. ಚನ್ನಪಟ್ಟಣ ಉಪ ಚುನಾವಣೆ ಬೆನ್ನಲ್ಲೇ ಹೊರಬಿದ್ದಿರುವ ಈ ನಿರ್ಧಾರ ಜಿಲ್ಲೆಯ ಮುಂದಿನ ರಾಜಕಾರಣದ ದಿಕ್ಸೂಚಿಯಾಗುವ ಸಾಧ್ಯತೆ ಇದೆ.

ಸರಿಯಾಗಿ 17 ವರ್ಷಗಳ ಹಿಂದೆ, 2007ರ ಆಗಸ್ಟ್ 27ರಲ್ಲಿ ಬಿಜೆಪಿ–ಜೆಡಿಎಸ್ ಸಮ್ಮಿಶ್ರ ಸರ್ಕಾರದಲ್ಲಿ ಮುಖ್ಯಮಂತ್ರಿಯಾಗಿದ್ದ ಎಚ್‌ಡಿಕೆ ರಾಮನಗರ ಜಿಲ್ಲೆ ರಚಿಸಿದ್ದರು. ಬೆಂಗಳೂರು ಗ್ರಾಮಾಂತರದ ಇಬ್ಬಾಗಗೊಂಡು ಉದಯವಾಗಿದ್ದ ರಾಮನಗರ ಅಂದು 4 ತಾಲ್ಲೂಕುಗಳನ್ನೊಳಗೊಂಡ (ಈಗ ಹಾರೋಹಳ್ಳಿ ಸೇರಿ 5 ಇವೆ) ಜಿಲ್ಲೆಯಾಗಿ ರೂಪುಗೊಂಡಿತ್ತು.

ADVERTISEMENT

ಆರಂಭದಿಂದಲೂ ವಿರೋಧ: ಜಿಲ್ಲೆ ರಚನೆಯನ್ನು ಆರಂಭದಿಂದಲೂ ಜಿಲ್ಲೆಯ ಕಾಂಗ್ರೆಸ್‌ ನಾಯಕರು ವಿರೋಧಿಸುತ್ತಲೇ ಬರುತ್ತಿದ್ದಾರೆ. ‘ಬೆಂಗಳೂರು’ ಹೆಸರು ಉಳಿಸಿಕೊಂಡೇ ಜಿಲ್ಲೆ ರಚಿಸಬೇಕಿತ್ತು ಎಂಬುದು ಡಿಕೆಶಿ ಸೇರಿದಂತೆ ಈ ಭಾಗದ ಕೈ ನಾಯಕರ ವಾದ. ಜಿಲ್ಲೆಯ ಹೆಸರಿನ ಚರ್ಚೆ ಬಂದಾಗಲೆಲ್ಲ ಡಿಕೆಶಿ ಈ ನಿಲುವು ಪ್ರಕಟಿಸುತ್ತಲೇ ಬಂದಿದ್ದಾರೆ.

ಕಳೆದ 17 ವರ್ಷಗಳಿಂದ ಡಿಕೆಶಿ ನಿಲುವಿನಲ್ಲಿ ಬದಲಾವಣೆಯಾಗಿಲ್ಲ. 2023ರಲ್ಲಿ ಕಾಂಗ್ರೆಸ್ ಪೂರ್ಣ ಬಹುಮತದೊಂದಿಗೆ ರಾಜ್ಯಾಧಿಕಾರ ಹಿಡಿಯಿತು. ಮುಖ್ಯಮಂತ್ರಿ ಹುದ್ದೆ ರೇಸ್‌ನಲ್ಲಿದ್ದ ಡಿಕೆಶಿ ಉಪ ಮುಖ್ಯಮಂತ್ರಿಯಾಗಿ ಸರ್ಕಾರದ ಎರಡನೇ ಶಕ್ತಿ ಕೇಂದ್ರವಾಗುತ್ತಿದ್ದಂತೆ ಜಿಲ್ಲೆಯ ಮರುನಾಮಕರಣದ ಚರ್ಚೆ ಗರಿಗೆದರಿತು.

ಬದಲಾವಣೆ ಸುಳಿವು: ‘ನಾವು ಬೆಂಗಳೂರು ಜಿಲ್ಲೆಯವರು’ ಎಂದು ಸಾರ್ವಜನಿಕ ಭಾಷಣದಲ್ಲಿ ಡಿಕೆಶಿ ತಮ್ಮ ನಿಲುವು ಪುನರುಚ್ಚರಿಸುತ್ತಾ ಅಭಿವೃದ್ಧಿಗಾಗಿ ಹೆಸರು ಬದಲಾವಣೆ ಅಗತ್ಯವನ್ನು ಪ್ರತಿಪಾದಿಸುತ್ತಾ ಬದಲಾವಣೆ ಸುಳಿವು ನೀಡಿದ್ದರು. ಜಿಲ್ಲೆಯಲ್ಲಿ ರಾಜಕೀಯ ಬಲ ಹೆಚ್ಚಿಸಿಕೊಂಡಿರುವ ಅವರಿಗೆ ಎಚ್‌ಡಿಕೆಗೆ ಟಾಂಗ್ ನೀಡಲು ಇದೂ ಒಂದು ಅಸ್ತ್ರ ಎಂಬುದರಲ್ಲಿ ಎರಡು ಮಾತಿಲ್ಲ.

ರಾಜಕೀಯ ಎದುರಾಳಿಗಳ ವಿರೋಧ ಲೆಕ್ಕಿಸದ ಡಿಕೆಶಿ ಕಡೆಗೂ ತಾವು ಅಂದುಕೊಂಡಂತೆ ಜಿಲ್ಲೆಯನ್ನು ಬೆಂಗಳೂರು ದಕ್ಷಿಣ ಎಂದು ಮರುನಾಮಕರಣ ಮಾಡಿದ್ದಾರೆ. ಚನ್ನಪಟ್ಟಣ ಉಪ ಚುನಾವಣೆಯು ಹತ್ತಿರವಾಗುತ್ತಿದ್ದಂತೆ ಬದಲಾಗಿರುವ ಜಿಲ್ಲೆಯ ಹೆಸರು, ಸ್ಥಳೀಯ ರಾಜಕಾರಣದ ಮೇಲೆ ಯಾವ ರೀತಿಯ ಪರಿಣಾಮ ಬೀರಲಿದೆ ಎಂಬ ಕುತೂಹಲ ಹೆಚ್ಚಿಸಿದೆ.

ಪರ–ವಿರೋಧ ಇರುವವರ ವಾದವೇನು?

ಜಾಗತಿಕ ಸೆಳೆತವಿರುವ ‘ಬೆಂಗಳೂರು’ ಹೆಸರು ಜಿಲ್ಲೆ ಅಭಿವೃದ್ಧಿಗೆ ವೇಗ ನೀಡಲಿದೆ. ರಾಜಧಾನಿಗೆ ಕೂಗಳತೆ ದೂರದಲ್ಲಿದ್ದರೂ ಅಭಿವೃದ್ಧಿ ಕಾಣದ ಜಿಲ್ಲೆಗೆ ‘ಬೆಂಗಳೂರು ದಕ್ಷಿಣ’ ಹೆಸರು ಪ್ರಗತಿ ಬಾಗಿಲು ತೆರೆಯಲಿದೆ. ‘ಬಿಯಾಂಡ್ ಬೆಂಗಳೂರು’ ಅಭಿವೃದ್ಧಿಗೆ ಜಿಲ್ಲೆ ನೆಲೆಯಾಗಲಿದೆ. ಬಂಡವಾಳ ಹೂಡಿಕೆ ಕೈಗಾರಿಕೆ ಸ್ಥಾಪನೆ ಮೂಲಸೌಕರ್ಯ ಅಭಿವೃದ್ಧಿ ಭೂಮಿ ಮೌಲ್ಯ ಹೆಚ್ಚಳ ಜಿಲ್ಲೆ ಅಭಿವೃದ್ಧಿಗೆ ಮುನ್ನುಡಿ ಬರೆಯಲಿದೆ ಎಂಬುದು ಮರುನಾಮಕರಣ ಪರವಿರುವವರ ವಾದ.

ಆಡಳಿತಾತ್ಮಕ ದೃಷ್ಟಿಯಿಂದ ರಾಮನಗರವನ್ನು ಜಿಲ್ಲೆ ಮಾಡಲಾಗಿದೆ. ಮರುನಾಮಕರಣದಿಂದ ರಾಮನಗರ ಜಿಲ್ಲೆ ಹೆಸರಿನೊಂದಿಗೆ ಬೆಸೆದುಕೊಂಡಿರುವ ಸ್ಥಳೀಯ ಅಸ್ಮಿತೆ ಅಳಿಸಿ ಹೋಗಲಿದೆ. ಬೆಂಗಳೂರು ಹೆಸರಿನಲ್ಲಿ ಈಗಾಗಲೇ ಜಿಲ್ಲೆ ತಾಲ್ಲೂಕು ವಿಧಾನಸಭಾ/ಲೋಕಸಭಾ ಕ್ಷೇತ್ರದ ಹೆಸರುಗಳಿವೆ. ನಗರ ಮತ್ತು ಗ್ರಾಮೀಣ ಸೊಗಡಿನ ರಾಮನಗರವನ್ನು ಅಭಿವೃದ್ಧಿ ‘ಬ್ರಾಂಡ್‌‘ಗಾಗಿ ‘ಬೆಂಗಳೂರು ದಕ್ಷಿಣ’ ಮಾಡುವ ಬದಲು ರಾಮನಗರವನ್ನೇ ಬ್ರಾಂಡ್‌ ಮಾಡಿಕೊಂಡು ಅಭಿವೃದ್ಧಿಗೆ ಮುಂದಾಗಿ ಎಂಬುದು ಮರುನಾಮಕರಣ ವಿರೋಧಿಸುವವರ ವಾದ.

ಉಪ ಚುನಾವಣೆಗೆ ವರವಾಗುವುದೇ?

ಲೋಕಸಭಾ ಚುನಾವಣೆ ಸಂದರ್ಭದಲ್ಲಿ ಮುನ್ನೆಲೆಗೆ ಬಂದು ತಣ್ಣಗಾಗಿದ್ದ ಜಿಲ್ಲೆ ಹೆಸರು ಬದಲಾವಣೆ ನಂತರ ಚನ್ನಪಟ್ಟಣ ಉಪ ಚುನಾವಣೆಯಲ್ಲಿ ಮುನ್ನೆಲೆಗೆ ಬಂದು ಅಂತಿಮಗೊಂಡಿದೆ. ಲೋಕ ಸಮರದಲ್ಲಿ ಸಹೋದರನ ಸೋಲಿನಿಂದ ಆಘಾತಕ್ಕೊಳಗಾಗಿದ್ದ ಡಿಕೆಶಿ ಎಚ್‌ಡಿಕೆ ವಿರುದ್ಧ ಸೋಲಿನ ಸೇಡು ತೀರಿಸಿಕೊಳ್ಳಲು ಚನ್ನಪಟ್ಟಣ ಅಖಾಡಕ್ಕೆ ಧುಮುಕಿದ್ದಾರೆ.

‘ಅಭಿವೃದ್ಧಿ’ ಹೆಸರಿನಲ್ಲಿ ಕ್ಷೇತ್ರದಲ್ಲಿ ಸಕ್ರಿಯವಾಗಿರುವ ಅವರು ಮರುನಾಮಕರಣವನ್ನು ಪ್ರಸ್ತಾಪಿಸಿದ್ದರು. ಮರುನಾಮಕರಣ ದಾಳ ಚುನಾವಣೆಯಲ್ಲಿ ಅವರಿಗೆ ವರವಾಗುವುದೇ ಎಂಬುದನ್ನು ಕಾದು ನೋಡಬೇಕಿದೆ. ಹೆಸರಿಗೆ ಒಂದೂರು; ಆಡಳಿತಕ್ಕೆ ಮತ್ತೊಂದೂರು ಜಿಲ್ಲೆಯ ಹೆಸರೊಂದಿದ್ದರೆ ಜಿಲ್ಲಾ ಕೇಂದ್ರವೇ ಬೇರೆ ಇರುವ 4 ಜಿಲ್ಲೆಗಳು ರಾಜ್ಯದಲ್ಲಿವೆ. ಆ ಸಾಲಿಗೆ ರಾಮನಗರವೀಗ ಹೊಸ ಸೇರ್ಪಡೆ.

ಈಗಾಗಲೇ ‘ದಕ್ಷಿಣ ಕನ್ನಡ’ ಜಿಲ್ಲೆಗೆ ಮಂಗಳೂರು ‘ಉತ್ತರ ಕನ್ನಡ’ ಜಿಲ್ಲೆಗೆ ಕಾರವಾರ ‘ಕೊಡಗು’ ಜಿಲ್ಲೆಗೆ ಮಡಿಕೇರಿ ಹಾಗೂ ‘ಬೆಂಗಳೂರು ಗ್ರಾಮಾಂತರ’ಕ್ಕೆ ಬೆಂಗಳೂರು ನಗರ ಜಿಲ್ಲಾ ಕೇಂದ್ರಗಳಾಗಿವೆ. ಇದೀಗ ರಾಮನಗರ ಜಿಲ್ಲೆಯ ಹಣೆಪಟ್ಟಿ ಕಳಚಿಕೊಂಡು ‘ಬೆಂಗಳೂರು ದಕ್ಷಿಣ’ದ ಜಿಲ್ಲಾ ಕೇಂದ್ರವಾಗಿ ಉಳಿಯಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.