ADVERTISEMENT

ಒತ್ತುವರಿ ಜಮೀನು ಹಿಂದಿರುಗಿಸಿ; ಇಲ್ಲದಿದ್ದರೆ ಪ್ರಕರಣ ಎದುರಿಸಿ: ಶಾಸಕ ಬಾಲಕೃಷ್ಣ

ಕಂದಾಯ, ಸರ್ವೇ ಅದಾಲತ್ ಕಾರ್ಯಕ್ರಮದಲ್ಲಿ ಶಾಸಕ ಎಚ್.ಸಿ. ಬಾಲಕೃಷ್ಣ ಸೂಚನೆ; ಅದಾಲತ್‌ಗೆ ಉತ್ತಮ ಸ್ಪಂದನೆ

​ಪ್ರಜಾವಾಣಿ ವಾರ್ತೆ
Published 22 ಜನವರಿ 2026, 4:10 IST
Last Updated 22 ಜನವರಿ 2026, 4:10 IST
ಮಾಗಡಿ ಪಟ್ಟಣದ ತಾಲ್ಲೂಕು ಕಚೇರಿ ಆವರಣದಲ್ಲಿ ನಡೆದ ಕಂದಾಯ ಮತ್ತು ಸರ್ವೇ ಅದಾಲತ್ ಕಾರ್ಯಕ್ರಮದಲ್ಲಿ ಶಾಸಕ ಎಚ್.ಸಿ. ಬಾಲಕೃಷ್ಣ ಅವರು ಸಾರ್ವಜನಿಕರಿಂದ ಅರ್ಜಿ ಸ್ವೀಕರಿಸಿದರು
ಮಾಗಡಿ ಪಟ್ಟಣದ ತಾಲ್ಲೂಕು ಕಚೇರಿ ಆವರಣದಲ್ಲಿ ನಡೆದ ಕಂದಾಯ ಮತ್ತು ಸರ್ವೇ ಅದಾಲತ್ ಕಾರ್ಯಕ್ರಮದಲ್ಲಿ ಶಾಸಕ ಎಚ್.ಸಿ. ಬಾಲಕೃಷ್ಣ ಅವರು ಸಾರ್ವಜನಿಕರಿಂದ ಅರ್ಜಿ ಸ್ವೀಕರಿಸಿದರು   

ಮಾಗಡಿ: ಪಿತ್ರಾರ್ಜಿತ ಆಸ್ತಿ ಮತ್ತು ಅಣ್ಣ ತಮ್ಮಂದಿರ ಆಸ್ತಿಯನ್ನು ಒತ್ತುವರಿ ಮಾಡಿಕೊಂಡು ಯಾರಾದರೂ ಸ್ವಾಧೀನದಲ್ಲಿದ್ದರೆ ಅಂತವರ ವಿರುದ್ಧ ಠಾಣೆಯಲ್ಲಿ ಒತ್ತುವರಿ ಆರೋಪದಡಿ ದೂರು ನೀಡಿ ಮುಲಾಜಿ ಇಲ್ಲದೆ ತೆರವು ಮಾಡಲಾಗುವುದು ಎಂದು ಶಾಸಕ ಎಚ್.ಸಿ. ಬಾಲಕೃಷ್ಣ ಎಚ್ಚರಿಕೆ ನೀಡಿದರು.

ಪಟ್ಟಣದ ತಾಲ್ಲೂಕು ಕಚೇರಿಯಲ್ಲಿ ಕಂದಾಯ ಮತ್ತು ಸರ್ವೇ ಅದಾಲತ್ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ‘ಬಲಾಡ್ಯರು ಜಮೀನು ಒತ್ತುವರಿ ಮಾಡಿಕೊಂಡು ಬಡವರಿಗೆ ತೊಂದರೆ ಕೊಡುತ್ತಿದ್ದರೆ, ಅಂತಹ ವ್ಯಕ್ತಿಗಳ ವಿರುದ್ಧ ಕಾನೂನು ರೀತಿ ಕ್ರಮ ಕೈಗೊಳ್ಳಲಾಗುತ್ತದೆ’ ಎಂದು ಹೇಳಿದರು.

‘ಅದಾಲತ್‌ನಲ್ಲಿ ಇಂತಹ ದೂರುಗಳು ಬಂದರೆ ಸರ್ವೇ ಅಧಿಕಾರಿಗಳು ಒತ್ತುವರಿ ಜಾಗ ಗುರುತಿಸಿ, ಅದನ್ನು ಬಿಡಿಸುವ ಕೆಲಸವನ್ನು ಪ್ರಾಮಾಣಿಕವಾಗಿ ಮಾಡಬೇಕು. ಈ ವೇಳೆ ಯಾರಾದರೂ ತೊಂದರೆ ನೀಡಿದರೆ, ಅವರ ವಿರುದ್ಧ ಪೊಲೀಸ್ ಠಾಣೆಯಲ್ಲಿ ಸೆಕ್ಷನ್ 107ರಡಿ ದೂರು ದಾಖಲಿಸಿ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುತ್ತದೆ’ ಎಂದರು.

ADVERTISEMENT

‘ಕಂದಾಯ ಅದಾಲತ್ ಅನ್ನು ವರ್ಷಕ್ಕೆ ಎರಡು ಬಾರಿ ಮಾಡುವ ಮೂಲಕ, ತಮ್ಮ ಅರ್ಜಿಗಳನ್ನು ಜಿಲ್ಲಾಧಿಕಾರಿಗಳು ಮತ್ತು ಉಪ ವಿಭಾಗಾಧಿಕಾರಿ ಅವರ ಸಮ್ಮುಖದಲ್ಲಿ ಅರ್ಜಿಗಳನ್ನು ನೇರವಾಗಿ ವಿಲೇವಾರಿ ಮಾಡುವ ಕೆಲಸವಾಗಲಿದೆ. ಜನವರಿ ಮತ್ತು ಜುಲೈ ತಿಂಗಳಲ್ಲಿ ಈ ಕಾರ್ಯಕ್ರಮ ಮಾಡಿ ಈ ಸಮಸ್ಯೆಯನ್ನು ಬಗೆಹರಿಸಲಾಗುವುದು’ ಎಂದು ಭರವಸೆ ನೀಡಿದರು.

‘ತಾವು ಕೊಟ್ಟ ಅರ್ಜಿಗಳನ್ನು ಆನ್‌ಲೈನ್ ಮುಖಾಂತರ ತಮ್ಮ ಮೊಬೈಲ್‌ನಲ್ಲೇ ಯಾವ ಹಂತದಲ್ಲಿದೆ ಎಂಬುದನ್ನು ಪರಿಶೀಲಿಸಬಹುದು. ಕಾನೂನು ಬಾಹಿರವಾದ ಪ್ರಕರಣಗಳಿಗೆ ಹಿಂಬರಹವನ್ನು ಕೂಡಲೇ ಕೊಡುತ್ತೇವೆ. ಒಂದು ವೇಳೆ ಕಾನೂನು ಪ್ರಕಾರ ಹಿಂಬರಹ ಕೊಟ್ಟು ರೈತರನ್ನು ಅಲೆದಾಡಿಸುತ್ತಿದ್ದರೆ ಜಿಲ್ಲಾಧಿಕಾರಿಳ ಸಮ್ಮುಖದಲ್ಲೇ ಅಂತಹ ಅಧಿಕಾರಿಗಳನ್ನು ಅಮಾನತು ಮಾಡಲಾಗುವುದು’ ಎಂದು ಹೇಳಿದರು.

 ‘ಕಂದಾಯ ಅದಾಲತ್‌ನಿಂದ ಜನರಿಗೆ ಸಾಕಷ್ಟು ಅನುಕೂಲವಾಗುತ್ತದೆ. ಇನ್ನು ಮುಂದೆ ಶಾಸಕರ ಅಥವಾ ಅಧಿಕಾರಿಗಳ ವಿರುದ್ಧ ತಾಲ್ಲೂಕು ಕಚೇರಿ ಮುಂದೆ ಪ್ರತಿಭಟನೆ ಮಾಡುವುದು ನಿಲ್ಲುತ್ತದೆ. ಅರ್ಜಿಗಳಿಗೆ ಅಧಿಕಾರಿಗಳಿಂದ ಉತ್ತರ ನೀಡುವ ಕೆಲಸವಾಗಲಿದೆ. ಪ್ರತಿಯೊಂದು ಹೋಬಳಿಯ ಅರ್ಜಿಗಳ ವಿಲೇವಾರಿಗೆ ಒಂದು ದಿನ ಮೀಸಲಿಟ್ಟು, ಅದನ್ನು ಬಗೆಹರಿಸುವ ಕೆಲಸ ಮಾಡಲಾಗುತ್ತದೆ’ ಎಂದು ತಿಳಿಸಿದರು.

‘ನಂ. 50–53ರಲ್ಲಿ ಅರ್ಜಿ ಸಲ್ಲಿಸಿರುವವರಿಗೆ ಕಾನೂನಿನ ಪ್ರಕಾರ ಹಕ್ಕುಪತ್ರ ಕೊಡುವ ಕೆಲಸ ಮಾಡಲಾಗುತ್ತದೆ. ಸರ್ಕಾರ 57ರ ಅರ್ಜಿ ಬಗ್ಗೆ ಇನ್ನೂ ಕ್ರಮ ಕೈಗೊಂಡಿಲ್ಲ. ಉಪ ಗ್ರಾಮಗಳನ್ನು ಮಾಡಿ ಸರ್ಕಾರಿ ಜಮೀನಿನಲ್ಲಿ ಮನೆ ಕಟ್ಟಿಕೊಂಡಿರುವವರಿಗೆ ಇ-ಸ್ವತ್ತು ಕೊಡುವ ಮೂಲಕ, ಸರ್ಕಾರದ ಸೌಲಭ್ಯಗಳನ್ನು ಒದಗಿಸಲಾಗುವುದು’ ಎಂದು ಹೇಳಿದರು. 

ಏಕಕಾಲದಲ್ಲಿ ತಾಲ್ಲೂಕಿನ ಎಲ್ಲಾ ಹೋಬಳಿಗಳ ಕಂದಾಯ ಮತ್ತು ಸರ್ವೇ ಅದಾಲತ್ ಗೆ ಚಾಲನೆ ಕೊಡಲಾಯಿತು. ಕಾರ್ಯಕ್ರಮದಲ್ಲಿ ಕಂದಾಯ ಇಲಾಖೆ ಅಧಿಕಾರಿಗಳು, ಸರ್ವೇ ಇಲಾಖೆ ಅಧಿಕಾರಿಗಳು ಹಾಗೂ ಸಿಬ್ಬಂದಿ ಇದ್ದರು.

ಹೋಬಳಿವಾರು ಅರ್ಜಿ ಸ್ವೀಕಾರ: ಕಂದಾಯ ಮತ್ತು ಸರ್ವೇ ಇಲಾಖೆ ಅದಾಲತ್‌ನಲ್ಲಿ ಮಾಡಬಾಳ್‌ ಹೋಬಳಿಯಲ್ಲಿ ಕಂದಾಯ ಇಲಾಖೆಗೆ ಸಂಬಂಧಿಸಿದಂತೆ 405 ಅರ್ಜಿ, ಸರ್ವೇ ಇಲಾಖೆಯ 29, ಕಸಬಾ ಹೋಬಳಿು ಸರ್ವೇ ಇಲಾಖೆಯ- 48, ಕಂದಾಯ ಇಲಾಖೆಯ 673, ಕುದೂರು ಹೋಬಳಿಯ ಕಂದಾಯ ಇಲಾಖೆಯ 392, ಸರ್ವೇ ಇಲಾಖೆಯ 52, ತಿಪ್ಪಸಂದ್ರ ಹೋಬಳಿಯ ಕಂದಾಯ ಇಲಾಖೆಯ 331, ಸರ್ವೇ ಇಲಾಖೆಯ 27 ಅರ್ಜಿಗಳನ್ನು ಸ್ವೀಕರಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.