
ರಾಮನಗರ: ನಗರದ ಅರ್ಚಕರಹಳ್ಳಿಯಲ್ಲಿ ನಿರ್ಮಾಣವಾಗುತ್ತಿರುವ ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದ (ಆರ್‌ಜಿಯುಎಚ್‌ಎಸ್) ನೂತನ ಕ್ಯಾಂಪಸ್‌ನಲ್ಲೇ ವೈದ್ಯಕೀಯ ಕಾಲೇಜು ನಿರ್ಮಾಣವಾಗುತ್ತಿದೆ. ಆದರೆ, ವೈದ್ಯಕೀಯ ಶಿಕ್ಷಣಕ್ಕೆ ಪೂರಕವಾದ ಆಸ್ಪತ್ರೆ ಮಾತ್ರ ಕ್ಯಾಂಪಸ್‌ನಲ್ಲಿಲ್ಲ!
ಅದಕ್ಕಾಗಿ ಪ್ರಾಧ್ಯಾಪಕರು ಮತ್ತು ವಿದ್ಯಾರ್ಥಿಗಳು ನಿತ್ಯ 3 ಕಿ.ಮೀ. ದೂರದಲ್ಲಿರುವ ರಾಮನಗರದಲ್ಲಿರುವ ಜಿಲ್ಲಾಸ್ಪತ್ರೆಗೆ ಬರಬೇಕು. ಹೀಗೆ ಒಂದು ಕಡೆ ಕಾಲೇಜು, ಮತ್ತೊಂದು ಕಡೆ ಆಸ್ಪತ್ರೆ ಇರುವುದಕ್ಕೆ ಬೆಂಗಳೂರು ಗ್ರಾಮಾಂತರ ಸಂಸದ ಡಾ. ಸಿ.ಎನ್. ಮಂಜುನಾಥ್ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ವಿದ್ಯಾರ್ಥಿಗಳ ಶೈಕ್ಷಣಿಕ ಹಿತದೃಷ್ಟಿಯಿಂದ ಕಾಲೇಜು ಕ್ಯಾಂಪಸ್‌ನಲ್ಲೇ ಆಸ್ಪತ್ರೆಯೂ ಇರಬೇಕು ಎಂದಿರುವ ಅವರು, ಈ ಕುರಿತು ವೈದ್ಯಕೀಯ ಶಿಕ್ಷಣ ಸಚಿವ ಡಾ. ಶರಣಪ್ರಕಾಶ ಆರ್. ಪಾಟೀಲ ಮತ್ತು ವಿಶ್ವವಿದ್ಯಾಲಯದ ಕುಲಪತಿ ಡಾ. ಬಿ.ಸಿ. ಭಗವಾನ್ ಅವರಿಗೆ ಪತ್ರ ಬರೆದಿದ್ದಾರೆ.
ಪತ್ರದಲ್ಲೇನಿದೆ?: ವಿವಿ ಕ್ಯಾಂಪಸ್‌ನಲ್ಲಿ ಕೇವಲ ಆಡಳಿತ ಭವನ ಮತ್ತು ವೈದ್ಯಕೀಯ ಕಾಲೇಜು ಕಟ್ಟಡ ನಿರ್ಮಾಣ ಮಾತ್ರ ನಡೆಯುತ್ತಿರುವುದು ತಿಳಿದು ಬಂದಿದೆ. ಕಾಲೇಜು ಆವರಣದಲ್ಲೇ ಆಸ್ಪತ್ರೆ ನಿರ್ಮಾಣವನ್ನು ಪ್ರಸ್ತಾವಿತ ಯೋಜನೆಯಲ್ಲಿ ಸೇರಿಸದಿದ್ದರೆ ಈ ಯೋಜನೆ ಪೂರ್ಣ ಎನಿಸುವುದಿಲ್ಲ.
ಯಾವುದೇ ವೈದ್ಯಕೀಯ ಕಾಲೇಜಿಗೆ ಶೈಕ್ಷಣಿಕ, ಸಾರ್ವಜನಿಕ ಆರೋಗ್ಯ ಹಾಗೂ ರಾಷ್ಟ್ರೀಯ ವೈದ್ಯಕೀಯ ಆಯೋಗದ (ಎನ್‌ಎಂಸಿ) ಮಾನ್ಯತೆ ದೃಷ್ಟಿಯಿಂದ 650 ಹಾಸಿಗೆಗಳ ಸಂಪೂರ್ಣ ಕಾರ್ಯನಿರ್ವಹಣೆಯ ಆಸ್ಪತ್ರೆ ಅನಿವಾರ್ಯವಾಗಿರುತ್ತದೆ. ವಿವಿಯ ಸಂಪೂರ್ಣ ಅನುದಾನದಡಿ ಸುಮಾರು ₹1600 ಕೋಟಿ ವೆಚ್ಚದಲ್ಲಿ ತಲೆ ಎತ್ತುತ್ತಿರುವ ಕ್ಯಾಂಪಸ್ ಮತ್ತು ಕಾಲೇಜಿಗೆ 650 ಹಾಸಿಗೆಗಳ ಆಸ್ಪತ್ರೆ ಅಗತ್ಯವಿದೆ ಎಂದು ತಮ್ಮ ಪತ್ರದಲ್ಲಿ ಡಾ. ಮಂಜುನಾಥ್ ಗಮನ ಸೆಳೆದಿದ್ದಾರೆ.
ಮಾನದಂಡಕ್ಕೆ ಪೂರಕ: ಸುಸಜ್ಜಿತ ಆಸ್ಪತ್ರೆ ಸ್ಥಾಪನೆಯು ವೈದ್ಯಕೀಯ ಮಂಡಳಿ ಮತ್ತು ಎನ್‌ಎಂಸಿ ಕ್ಲಿನಿಕಲ್ ತರಬೇತಿ ಮಾನದಂಡಗಳನ್ನು ಪೂರೈಸಲಿದೆ. ಜೊತೆಗೆ, ಜಿಲ್ಲಾ ಕೇಂದ್ರವಾಗಿರುವ ರಾಮನಗರ ಹಾಗೂ ಸುತ್ತಮುತ್ತಲಿನ ಗ್ರಾಮೀಣ ಪ್ರದೇಶದ ಜನರಿಗೆ ದ್ವಿತೀಯ ಮತ್ತು ತೃತೀಯ ಮಟ್ಟದ ಆರೋಗ್ಯ ಸೇವೆಗಳು ಸುಲಭವಾಗಿ ಕೈಗೆಟುಕಲಿವೆ.
ರಾಜ್ಯ ಸರ್ಕಾರ ಹಾಗೂ ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನ ವಿಶ್ವವಿದ್ಯಾಲಯವು ಈ ಯೋಜನೆಯನ್ನು ಮತ್ತೆ ಪರಿಶೀಲಿಸಬೇಕು. ವೈದ್ಯಕೀಯ ಕಾಲೇಜು ಆವರಣದಲ್ಲಿಯೇ ಸುಸಜ್ಜಿತ ಆಸ್ಪತ್ರೆ ನಿರ್ಮಾಣ ಮಾಡಲು ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಸಂಸದು ಪತ್ರದಲ್ಲಿ ಒತ್ತಾಯಿಸಿದ್ದಾರೆ.
ವೈದ್ಯಕೀಯ ಶಿಕ್ಷಣಕ್ಕೆ ಪೂರಕವಾಗಿ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆ ಒಟ್ಟಿಗೆ ಇರಬೇಕು. ಸದ್ಯ ಎಲ್ಲಾ ಕಡೆ ಇದೇ ರೀತಿ ಇದೆ. ಆದರೆ ರಾಮನಗರದಲ್ಲಿ ಮಾತ್ರ ಕಾಲೇಜು ಒಂದು ಕಡೆ ಆಸ್ಪತ್ರೆ ಮತ್ತೊಂದು ಕಡೆಯಾದರೆ ಹಲವು ಪ್ರಾಯೋಗಿಕ ತೊಂದರೆಗಳಾಗಲಿವೆಡಾ. ಸಿ.ಎನ್. ಮಂಜುನಾಥ್ ಸಂಸದ
150 ವೈದ್ಯಕೀಯ ಸೀಟುಗಳ ಸಾಮರ್ಥ್ಯದ ರಾಮನಗರ ವೈದ್ಯಕೀಯ ಕಾಲೇಜಿಗೆ 650 ಹಾಸಿಗೆಗಳ ಸಾಮರ್ಥ್ಯದ ಆಸ್ಪತ್ರೆ ಬೇಕು. ಇನ್ನೂ ಹೆಚ್ಚಿನ ಹಾಸಿಗೆಗಳ ಸಾಮರ್ಥ್ಯದ ಆಸ್ಪತ್ರೆಯನ್ನು ನಿರ್ಮಿಸಲು ಕ್ರಮ ಕೈಗೊಳ್ಳಲಾಗುವುದುಡಾ. ಬಿ.ಸಿ. ಭಗವಾನ್ ಕುಲಪತಿ ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯ
ಹಲವು ಪ್ರಾಯೋಗಿಕ ಅಡಚಣೆ
ರಾಮನಗರದಲ್ಲಿರುವ ಜಿಲ್ಲಾಸ್ಪತ್ರೆ ಕೇವಲ 250 ಹಾಸಿಗೆಗಳ ಸಾಮರ್ಥ್ಯ ಹೊಂದಿದೆ. ಅದು ವೈದ್ಯಕೀಯ ಕಾಲೇಜು ಆವರಣದಿಂದ ಸುಮಾರು 3 ಕಿ.ಮೀ. ದೂರದಲ್ಲಿದೆ. ಇದರಿಂದ ಶೈಕ್ಷಣಿಕ ಸಮನ್ವಯ ರೋಗಿಗಳ ಆರೈಕೆ ತುರ್ತು ಸೇವೆಗಳು ಮೂಲಸೌಕರ್ಯ ಹಾಗೂ ಮಾನವ ಸಂಪನ್ಮೂಲಗಳ ಸಮರ್ಪಕ ಬಳಕೆಗೆ ಗಂಭೀರವಾದ ಪ್ರಾಯೋಗಿಕ ಅಡಚಣೆಗಳು ಎದುರಾಗುತ್ತವೆ. ಹಾಗಾಗಿ ಕ್ಯಾಂಪಪ್ ಆವರಣದಲ್ಲಿ ಲಭ್ಯವಿರುವ ಜಾಗದಲ್ಲೇ 650 ಹಾಸಿಗೆಗಳ ಸಾಮರ್ಥ್ಯದ ಆಸ್ಪತ್ರೆ ನಿರ್ಮಿಸಬೇಕು. ಇಲ್ಲದಿದ್ದಲ್ಲಿ ರೋಗಿಗಳು ಹಾಗೂ ಪ್ರಾಧ್ಯಾಪಕರು ಜಿಲ್ಲಾಸ್ಪತ್ರೆ ಮತ್ತು ವೈದ್ಯಕೀಯ ಕಾಲೇಜು ಮಧ್ಯೆ ನಿತ್ಯ ಓಡಾಡಬೇಕಾಗುತ್ತದೆ. ಇದರಿಂದ ಅನಾನುಕೂಲದ ಜೊತೆಗೆ ಕಾರ್ಯಕ್ಷಮತೆಯ ಕೊರತೆ ಉಂಟಾಗಲಿದೆ. ವೈದ್ಯಕೀಯ ಕಾಲೇಜು ಸ್ಥಾಪನೆಯ ಮೂಲ ಉದ್ದೇಶವೇ ಈಡೇರಿದಂತಾಗುವುದಿಲ್ಲ ಎಂದು ಡಾ. ಸಿ.ಎನ್. ಮಂಜುನಾಥ್ ಪತ್ರದಲ್ಲಿ ತಿಳಿಸಿದ್ದಾರೆ.
ಆಸ್ಪತ್ರೆ ಒಳಗೊಂಡ ಮಾಸ್ಟರ್ ಪ್ಲಾನ್‌ಗೆ ಶೀಘ್ರ ಟೆಂಡರ್
‘ಅರ್ಚಕರಹಳ್ಳಿಯಲ್ಲಿ ನಿರ್ಮಾಣವಾಗುತ್ತಿರುವ ವಿವಿ ಕ್ಯಾಂಪಸ್‌ನಲ್ಲೇ ಆಸ್ಪತ್ರೆ ಸೇರಿದಂತೆ ವಿವಿಧ ಸೌಕರ್ಯಗಳನ್ನು ಒಳಗೊಂಡ ಸಮಗ್ರ ಯೋಜನಾ ವರದಿ (ಮಾಸ್ಟರ್ ಪ್ಲಾನ್) ಸಿದ್ದಪಡಿಸಲು ಸದ್ಯದಲ್ಲೇ ಟೆಂಡರ್ ಕರೆಯಲಾಗುವುದು. ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಈ ಕುರಿತು ಸೂಚನೆ ನೀಡಿದ್ದು ವಿವಿ ಸಿಂಡಿಕೇಟ್ ಸಭೆಯೂ ಒಪ್ಪಿದೆ. ಸದ್ಯ ವಿವಿ ಬಿಡುಗಡೆ ಮಾಡಿರುವ ₹600 ಕೋಟಿ ವೆಚ್ಚದಲ್ಲಿ ಆಡಳಿತ ಭವನ ಮತ್ತು ವೈದ್ಯಕೀಯ ಕಾಲೇಜು ಮಾತ್ರ ನಿರ್ಮಾಣವಾಗುತ್ತಿದೆ. ಕುಲಪತಿ ಕುಲಸಚಿವರು ಸೇರಿದಂತೆ ಪ್ರಮುಖ ಅಧಿಕಾರಿಗಳಿಗೆ ಮತ್ತು ಕಾಲೇಜು ನೌಕರರಿಗೆ ವಸತಿ ಗೃಹ ನಿರ್ಮಾಣ ಹಾಲಿ ಯೋಜನೆಯಲ್ಲಿಲ್ಲ. ಹಾಗಾಗಿ 650 ಹಾಸಿಗೆಗಳ ಸಾಮರ್ಥ್ಯದ ಜನರಲ್ ಮತ್ತು ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ವಿವಿ ಮತ್ತು ಆಸ್ಪತ್ರೆ ನೌಕರರಿಗೆ ವಸತಿ ಗೃಹಗಳು ಕಾಲೇಜು ಸಭಾಂಗಣ ಕ್ರೀಡಾ ಸಂಕೀರ್ಣ ಸೇರಿದಂತೆ ಇತರ ಮೂಲಸೌಕರ್ಯ ಒಳಗೊಂಡ ಪ್ಲಾನ್‌ಗೆ ಟೆಂಡರ್ ಕರೆಯಲು ಸಿದ್ಧತೆ ನಡೆಯುತ್ತಿದೆ. ವಿವಿ ಕೈಗೊಂಡಿರುವ ಕ್ರಮಗಳ ಕುರಿತು ಸಂಸದ ಡಾ. ಸಿ.ಎನ್. ಮಂಜುನಾಥ್ ಅವರಿಗೆ ಪತ್ರ ಬರೆಯಲಾಗುವುದು’ ಎಂದು ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದ ಕುಲಪತಿ ಡಾ. ಬಿ.ಸಿ. ಭಗವಾನ್ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.
ಅಂಕಿಅಂಶ
200 - ಎಕರೆಪ್ರದೇಶದಲ್ಲಿ ವಿವಿ ಕ್ಯಾಂಪಸ್, ಕಾಲೇಜು, ಆಸ್ಪತ್ರೆ ನಿರ್ಮಾಣ
₹600 - ಕೋಟಿ ಕಾಮಗಾರಿಗೆ ಆರೋಗ್ಯ ವಿವಿ ಬಿಡುಗಡೆ ಮಾಡಿರುವ ಅನುದಾನ
150 - ವೈದ್ಯಕೀಯ ಕಾಲೇಜಿನ ಸೀಟುಗಳು ಸಾಮರ್ಥ್ಯ
605 - ಕಾಲೇಜಿಗೆ ಪೂರಕವಾದ ಆಸ್ಪತ್ರೆ ಹೊಂದಿಬೇಕಾದ ಹಾಸಿಗೆಗಳು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.