
ರಾಮನಗರ: ಇಲ್ಲಿನ ನಗರಸಭೆಯ ಕಂದಾಯ ನಿರೀಕ್ಷಕ ಹಾಗೂ ಕರ್ನಾಟಕ ರಾಜ್ಯ ಪೌರ ನೌಕರರ ಸಂಘದ ರಾಜ್ಯ ಉಪಾಧ್ಯಕ್ಷ ಆರ್. ನಾಗರಾಜು ಅವರನ್ನು ಏಕಾಏಕಿ ವರ್ಗಾವಣೆ ಮಾಡಿರುವುದನ್ನು ಖಂಡಿಸಿರುವ ಸಂಘದ ಜಿಲ್ಲಾ ಘಟಕವು, ಸಕಾರಣವಿಲ್ಲದೆ ಮಾಡಿರುವ ಈ ವರ್ಗಾವಣೆಯನ್ನು ಕೂಡಲೇ ರದ್ದುಪಡಿಸಬೇಕು ಎಂದು ಆಗ್ರಹಿಸಿದೆ.
ಈ ಕುರಿತು ನಗರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಂಘದ ಜಿಲ್ಲಾಧ್ಯಕ್ಷ ವಿ. ವೆಂಕಟೇಶ್, ‘ಪೌರ ನೌಕರರ ನಾಯಕರಾಗಿರುವ ನಾಗರಾಜು ಅವರು, ನೌಕರರು ಮತ್ತು ಕಾರ್ಮಿಕರ ಪರವಾಗಿ ಗಟ್ಟಿ ದನಿ ಎತ್ತುತ್ತಾ ಬಂದಿದ್ದಾರೆ. ನಮ್ಮ ನ್ಯಾಯಯುತ ಬೇಡಿಕೆಗಳ ಈಡೇರಿಕೆಗಾಗಿ ಸರ್ಕಾರದ ಮಟ್ಟದಲ್ಲಿ ಹಲವು ಹೋರಾಟಗಳನ್ನು ಮಾಡುತ್ತಾ ಬಂದಿದ್ದಾರೆ. ಅಂತಹವರನ್ನು ಏಕಾಏಕಿ ವರ್ಗಾವಣೆ ಮಾಡಿರುವುದು ಖಂಡನೀಯ’ ಎಂದರು.
‘ನಾಗರಾಜು ಅವರು ಮಂಡ್ಯ ಜಿಲ್ಲೆಯಿಂದ ರಾಮನಗರಕ್ಕೆ ವರ್ಗಾವಣೆಯಾಗಿ ಬಂದು ಕೇವಲ 5 ತಿಂಗಳು 18 ದಿನಗಳಾಗಿವೆ. ಸರ್ಕಾರದ ಆದೇಶದ ಪ್ರಕಾರ ಯಾವುದೇ ‘ಸಿ’ ದರ್ಜೆಯ ನೌಕರರನ್ನು ಕನಿಷ್ಠ 4 ವರ್ಷದವರೆಗೂ ವರ್ಗಾವಣೆ ಮಾಡುವಂತಿಲ್ಲ. ಆದರೂ, ಕೆಲ ಕಾಣದ ಕೈಗಳು ಕಾನೂನು ಬಾಹಿರವಾಗಿ ವರ್ಗಾವಣೆ ಮಾಡಿಸಿವೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.
‘ನಗರಸಭೆಯಲ್ಲಿ ಅತ್ಯುತ್ತಮವಾಗಿ ಕೆಲಸ ಮಾಡುತ್ತಿರುವ ಅವರ ವಿರುದ್ಧ ಯಾವುದೇ ಭ್ರಷ್ಟಾಚಾರದ ಆರೋಪಗಳಿಲ್ಲ. ಸಾರ್ವಜನಿಕರಿಂದಲೂ ದೂರುಗಳು ಬಂದಿಲ್ಲ. ಕರ್ತವ್ಯಕ್ಕೆ ಸಂಬಂಧಿಸಿದ ಯಾವುದೇ ಕಡತಗಳನ್ನು ವಿಲೇವಾರಿ ಮಾಡದೆ ಬಾಕಿ ಉಳಿಸಿಕೊಂಡಿಲ್ಲ. ಪ್ರಾಮಾಣಿಕವಾಗಿ ಕೆಲಸ ಮಾಡುತ್ತಿರುವ ನಾಗರಾಜು ಅವರ ವರ್ಗಾವಣೆಯು ಹಲವು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ’ ಎಂದರು.
‘ಒಬ್ಬ ಬಡ ಪೌರ ಕಾರ್ಮಿಕನ ಮಗನಾಗಿರುವ ನಾಗರಾಜು ಅವರ ಏಳಿಗೆ ಸಹಿಸದ ಪಟ್ಟಭದ್ರ ಹಿತಾಸಕ್ತಿಗಳು ಒಳಗೊಳಗೆ ಸಂಚು ಮಾಡಿವೆ. ರಾಮನಗರದಿಂದ ಶಿವಮೊಗ್ಗ ಜಿಲ್ಲೆಯ ಆನವಟ್ಟಿ ಪಟ್ಟಣ ಪಂಚಾಯಿತಿಗೆ ವರ್ಗಾವಣೆ ಮಾಡಿಸಿವೆ. ತಳ ಸಮುದಾಯಗಳ ನಾಯಕರು ಹಾಗೂ ನೌಕರರ ದನಿ ಅಡಗಿಸುವ ಈ ನಡೆಯನ್ನು ನಮ್ಮ ಸಂಘ ತೀವ್ರವಾಗಿ ಖಂಡಿಸಲಿದೆ’ ಎಂದು ತಿಳಿಸಿದರು.
‘ನಾಗರಾಜು ಅವರ ವರ್ಗಾವಣೆಯನ್ನು ಕೂಡಲೇ ರದ್ದುಪಡಿಸಬೇಕು. ಈ ಕುರಿತು ಸ್ಥಳೀಯ ಶಾಸಕರು, ಸಚಿವರು, ಪೌರಾಡಳಿತ ಮತ್ತು ನಗರಾಭಿವೃದ್ಧಿ ಇಲಾಖೆಯ ಅಧಿಕಾರಿಗಳಿಗೆ ಮನವಿ ಮಾಡಲಾಗುವುದು. ನಮ್ಮ ಮನವಿಗೆ ಸ್ಪಂದಿಸದಿದ್ದರೆ ಸಂಘದ ಕೇಂದ್ರ ಘಟಕದ ನಿರ್ದೇಶನದಂತೆ ಮುಂದೆ ಹೋರಾಟ ಆರಂಭಿಸಲಾಗುವುದು’ ಎಂದು ಹೇಳಿದರು.
ಸಂಘದ ರಾಮನಗರ ತಾಲ್ಲೂಕು ಶಾಖೆ ಅಧ್ಯಕ್ಷ ದೇವೇಂದ್ರ, ಪ್ರಧಾನ ಕಾರ್ಯದರ್ಶಿ ಕೊಲ್ಲಾಪುರಿ, ಪದಾಧಿಕಾರಿಗಳಾದ ನರಸಿಂಹ, ಮೋಹನ, ವೆಂಕಟರಾಮು, ರಾಜು, ಗಂಗಣ್ಣ ಹಾಗೂ ಇತರರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.