ರಿಕ್ಕಿ ರೈ
ರಾಮನಗರ: ಭೂಗತ ಲೋಕದ ಮಾಜಿ ಡಾನ್ ಮುತ್ತಪ್ಪ ರೈ ಪುತ್ರ ರಿಕ್ಕಿ ರೈ ಮೇಲೆ ನಡೆದಿರುವ ಗುಂಡಿನ ದಾಳಿ ನಿಜಕ್ಕೂ ರಿಕ್ಕಿ ಹತ್ಯೆಗಾಗಿ ನಡೆಸಿರುವುದೇ..? ಎಚ್ಚರಿಕೆ ನೀಡಲು ನಡೆಸಿದ ದಾಳಿಯೇ..? ಅಥವಾ ರಿಕ್ಕಿ ಪೂರ್ವಯೋಜಿತ ನಾಟಕವೇ ಎಂಬ ಪ್ರಶ್ನೆಗಳು ಪೊಲೀಸರನ್ನು ಕಾಡತೊಡಗಿವೆ.
ಪ್ರಕರಣದ ಬೆನ್ನತ್ತಿದ್ದ ಪೊಲೀಸರು, ವಾರದ ಬಳಿಕ ರಿಕ್ಕಿ ಅಂಗರಕ್ಷಕ ಮೊನ್ನಪ್ಪ ವಿಠ್ಠಲನನ್ನು ಬಂಧಿಸಿದ್ದಾರೆ. ಮೂರು ದಶಕದಿಂದ ರೈ ಕುಟುಂಬದ ಅಂಗರಕ್ಷಕನಾಗಿ ಕೆಲಸ ಮಾಡಿಕೊಂಡು ಬಂದಿರುವ ಕೊಡಗು ಮೂಲದ ಮೊನ್ನಪ್ಪ, ರಿಕ್ಕಿಯನ್ನು ಎತ್ತಿ ಆಡಿಸಿ ಬೆಳೆಸಿರುವ ವ್ಯಕ್ತಿ ಕೂಡ. ವಯಸ್ಸು ಮತ್ತು ಅನಾರೋಗ್ಯದ ಕಾರಣಕ್ಕೆ ಬಿಡದಿ ಬಳಿಯ ಮನೆಯ ಭದ್ರತೆಯ ಜವಾಬ್ದಾರಿಯನ್ನು ಮೊನ್ನಪ್ಪಗೆ ರಿಕ್ಕಿ ನೀಡಿದ್ದರು.
ಕಾರಣ ನಿಗೂಢ: ರೈ ಕುಟುಂಬಕ್ಕೆ ಸ್ವಾಮಿನಿಷ್ಠನಾಗಿದ್ದ ಮೊನ್ನಪ್ಪ, ಜೊತೆಯಲ್ಲಿದ್ದುಕೊಂಡೇ ಇಂತಹ ಕೃತ್ಯಕ್ಕೆ ಕೈ ಹಾಕಲು ಕಾರಣವೇನು? ಮುತ್ತಪ್ಪ ರೈ ನಿಧನದ ಬಳಿಕ ಮೊನ್ನಪ್ಪನನ್ನು ರಿಕ್ಕಿ ನಿರ್ಲಕ್ಷ್ಯಿಸಿದ್ದರೇ? ಅವರ ಆರ್ಥಿಕ ಅಗತ್ಯಕ್ಕೆ ಸ್ಪಂದಿಸಿರಲಿಲ್ಲವೇ? ಇದೇ ಕಾರಣಕ್ಕೆ ರಿಕ್ಕಿ ಎದುರಾಳಿಗಳ ಜೊತೆ ಕೈ ಜೋಡಿಸಿ ಕೃತ್ಯ ಎಸಗಿದ್ದಾನೆಯೇ ಎಂಬುದು ಪೊಲೀಸ್ ತನಿಖೆಯಲ್ಲಿ ಗೊತ್ತಾಗಬೇಕಿದೆ.
ಘಟನೆ ನಡೆದ ಏ. 18ರಂದು ರಾತ್ರಿ 11ರ ಸುಮಾರಿಗೆ ಫಾರ್ಚ್ಯೂನರ್ ಕಾರಿನಲ್ಲಿ ಚಾಲಕ ಬಸವರಾಜು ಹಾಗೂ ಅಂಗರಕ್ಷಕ ರಾಜ್‌ಪಾಲ್ ಜೊತೆ ರಿಕ್ಕಿ ಹೊರಟ್ಟಿದ್ದರು. ರೈಲ್ವೆ ಗೇಟ್‌ವರೆಗೆ ಹೋದ ಬಳಿಕ ಪರ್ಸ್ ಮರೆತಿರುವುದಾಗಿ ವಾಪಸ್ ಬಂದವರು, ರಾತ್ರಿ 12.45ಕ್ಕೆ ಮತ್ತೆ ಹೊರಟ್ಟಿದ್ದರು. ಈ ಎಲ್ಲಾ ಚಲನವಲನಗಳನ್ನು ಗಮನಿಸಿಯೇ ಮೊನ್ನಪ್ಪ ರಸ್ತೆ ಪಕ್ಕದ ಕಾಂಪೌಂಡ್ ಬಳಿ ಕುಳಿತು ಕೃತ್ಯ ಎಸಗಿರಬಹುದು ಎಂದು ಮೂಲಗಳು ತಿಳಿಸಿವೆ.
ಬೇರೆಯವರ ಸಾಥ್?: ಮೊನ್ನಪ್ಪನಿಗೆ ನಿಜಕ್ಕೂ ರಿಕ್ಕಿ ಅವರನ್ನು ಕೊಲ್ಲುವ ಉದ್ದೇಶವಿತ್ತೇ ಅಥವಾ ಬೆದರಿಸಲು ಶೂಟ್ ಮಾಡಿದ್ದಾನೆಯೇ ಎಂಬುದನ್ನು ವಿಚಾರಣೆಯಲ್ಲಿ ಬಾಯಿ ಬಿಡಬೇಕಿದೆ. ಅಲ್ಲದೆ, ಮಧ್ಯರಾತ್ರಿಯಲ್ಲಿ ಆತನೊಬ್ಬನೇ ಕೃತ್ಯ ಎಸಗಿದ್ದಾನೆಯೇ ಅಥವಾ ಬೇರೆಯವರು ಜೊತೆಗಿದ್ದು ಸಾಥ್ ನೀಡಿದ್ದಾರೆಯೇ ಎಂಬುದು ಇನ್ನೂ ಗೊತ್ತಾಗಬೇಕಿದೆ.
ಕೊಲ್ಲುವ ಉದ್ದೇಶವಿದ್ದಿದ್ದರೆ ಗುಂಡಿನ ದಾಳಿಯಲ್ಲಿ ಗಾಯಗೊಂಡು ಕಾರಿನಿಂದ ಕೆಳಕ್ಕಿಳಿದಿದ್ದ ರಿಕ್ಕಿ ಮೇಲೆ ಮತ್ತೆ ಗುಂಡು ಹಾರಿಸಬಹುದಿತ್ತು. ಆದರೆ, ಹಾಗೆ ಮಾಡದೆ ಸ್ಥಳದಿಂದ ಪರಾರಿಯಾಗಿ ಮೊನ್ನಪ್ಪ ಮನೆ ಸೇರಿಕೊಂಡಿದ್ದಾನೆ. ಘಟನೆಗೂ ಮುಂಚೆ ಆತ ಮನೆಯಿಂದ ಹೊರಗೆ ಬಂದಿರುವುದು ತನಿಖೆಯಲ್ಲಿ ಗೊತ್ತಾಗಿದೆ. ಆತನ ಮೇಲೆ ಅನುಮಾನ ಬಂದು ವಿಚಾರಣೆಗೆ ಒಳಪಡಿಸಿದಾಗ ಈತನೇ ದಾಳಿ ನಡೆಸಿರುವುದು ಖಚಿತವಾಗಿದೆ ಎಂದು ಪೊಲೀಸ್ ಮೂಲಗಳು ಹೇಳಿವೆ.
ಶೀತಲ ಸಮರ: ಮುತ್ತಪ್ಪ ರೈ ನೂರಾರು ಕೋಟಿ ಆಸ್ತಿ, ಐಷರಾಮಿ ಕಾರುಗಳು, ತೋಟಗಳು, ಮನೆಗಳು, ಪಾಲುದಾರಿಕೆಯಲ್ಲಿ ವಿವಿಧ ವ್ಯವಹಾರಗಳು ಹಾಗೂ ರಿಯಲ್ ಎಸ್ಟೇಟ್ ವ್ಯವಹಾರ ಹೊಂದಿದ್ದರು. ಸದ್ಯ ಪ್ರಕರಣದ ಆರೋಪಿಗಳಾಗಿರುವ ರಾಕೇಶ್ ಮಲ್ಲಿ, ಎರಡನೇ ಪತ್ನಿ ಅನುರಾಧ, ರಿಯಲ್ ಎಸ್ಟೇಟ್ ಉದ್ಯಮಿಗಳಾದ ನಿತೇಶ್ ಎಸ್ಟೇಟ್ ಮಾಲೀಕರಾದ ನಿತೇಶ್ ಶೆಟ್ಟಿ, ವೈದ್ಯನಾಥನ್ ನಡುವೆ ರೈ ಹೊಂದಿದ್ದ ಸಂಬಂಧ ಕಡೆಯ ದಿನಗಳಲ್ಲಿ ಹಳಸಿತ್ತು.
ಮುತ್ತಪ್ಪ ರೈ ವಿರುದ್ಧ ಕಡೆಯ ದಿನಗಳಲ್ಲಿ ವಂಚನೆ ಮತ್ತು ಜೀವ ಬೆದರಿಕೆ ಆರೋಪದಡಿ ಮಲ್ಲಿ ಪೊಲೀಸರಿಗೆ ದೂರು ಕೊಟ್ಟಿದ್ದರು. ನಿಧನದ ಬಳಿಕ, ಪತಿ ಆಸ್ತಿಯಲ್ಲಿ ಮೂರನೇ ಒಂದು ಭಾಗಕ್ಕಾಗಿ ಅನುರಾಧ ಕೋರ್ಟ್ ಮೆಟ್ಟಿಲೇರಿದ್ದರು. ದೇವನಹಳ್ಳಿ ಜಮೀನು ಅಭಿವೃದ್ಧಿಗೆ ಸಂಬಂಧಿಸಿದಂತೆ ನಿತೇಶ್ ಕೂಡ ಕೋರ್ಟ್ ಮೊರೆ ಹೋಗಿದ್ದರು. ಇದೇ ಕಾರಣಕ್ಕೆ ರಿಕ್ಕಿ ಮತ್ತು ನಾಲ್ವರ ನಡುವೆ ಶೀತಲ ಸಮರ ಮುಂದುವರಿದಿತ್ತು ಎನ್ನುತ್ತವೆ ಮೂಲಗಳು.
ಪೂರ್ವಯೋಜಿತವೇ?
ರಿಕ್ಕಿ ತನ್ನ ಎದುರಾಳಿಗಳನ್ನು ಹಣಿಯಲು ಶೂಟೌಟ್ ನಾಟಕವಾಡಿದ್ದಾರೆಯೇ? ಎಂಬ ಆಯಾಮದಲ್ಲೂ ತನಿಖೆ ಸಾಗುತ್ತಿದೆ. ಘಟನಾ ಸ್ಥಳ ದೂರಿನಲ್ಲಿರುವ ಅಂಶಗಳು ವಿಚಾರಣೆ ಸಂದರ್ಭದಲ್ಲಿ ದೂರುದಾರರು ಅಂಗರಕ್ಷಕರು ಸೇರಿದಂತೆ ಹಲವರು ನೀಡಿರುವ ಹೇಳಿಕೆಗಳು ಘಟನಾ ಸ್ಥಳದ ಚಿತ್ರಣ ಪರಿಶೀಲನೆ ವೇಳೆ ಸಿಕ್ಕ ಸಾಕ್ಷ್ಯಾಧಾರಗಳು ಪೊಲೀಸರಿಗೆ ಇಂತಹದ್ದೊಂದು ಅನುಮಾನ ಬರಲು ಕಾರಣವಾಗಿದೆ. ಮನೆಗೆ ವಾಪಸ್ ಬಂದ ರಿಕ್ಕಿ ತಡವಾಗಿ ಹೊರಟಿದ್ದೇಕೆ? ಕಾರಿನ ಮೇಲೆ ಗುಂಡಿನ ದಾಳಿ ನಡೆದಾಗ ಜೊತೆಗಿದ್ದ ಅಂಗರಕ್ಷಕ ಪ್ರತಿದಾಳಿ ನಡೆಸಲಿಲ್ಲವೇಕೆ? ಎಂಬುದು ಸೇರಿದಂತೆ ಹಲವು ಅನುಮಾನಗಳಿವೆ. ಆಸ್ಪತ್ರೆಯಲ್ಲಿರುವ ರಿಕ್ಕಿ ಚೇರಿಸಿಕೊಂಡು ವಿಚಾರಣೆಗೆ ಹಾಜರಾದ ಬಳಿಕ ಘಟನೆಯು ಪೂರ್ವಯೋಜಿತ ನಾಟಕವೇ? ಅಥವಾ ಎದುರಾಳಿಗಳಿಂದ ನಡೆದಿರುವ ಹತ್ಯೆ ಯತ್ನವೇ? ಎಂಬ ಅನುಮಾನಗಳು ಬಗೆಹರಿಯಲಿವೆ ಎನ್ನುತ್ತವೆ ಪೊಲೀಸ್ ಮೂಲಗಳು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.