ADVERTISEMENT

ರಸ್ತೆ ಸುರಕ್ಷತಾ ಮಾಸಾಚರಣೆ| ಚಾಲಕರ ನಿರ್ಲಕ್ಷ್ಯದಿಂದ ಬದುಕು ದುಸ್ತರ: ಡಿ.ಸಿ

​ಪ್ರಜಾವಾಣಿ ವಾರ್ತೆ
Published 1 ಫೆಬ್ರುವರಿ 2026, 6:00 IST
Last Updated 1 ಫೆಬ್ರುವರಿ 2026, 6:00 IST
<div class="paragraphs"><p>ರಾಷ್ಟ್ರೀಯ ರಸ್ತೆ ಸುರಕ್ಷತಾ ಮಾಸಾಚರಣೆ ಕಾರ್ಯಕ್ರಮದ ಅಂಗವಾಗಿ ರಾಮನಗರದ ಜಿಲ್ಲಾಧಿಕಾರಿ ಕಚೇರಿ ಮುಂಭಾಗದಲ್ಲಿ ಜಿಲ್ಲಾಡಳಿತ ಹಾಗೂ ಜಿಲ್ಲಾ ಪ್ರಾದೇಶಿಕ ಸಾರಿಗೆ ಕಚೇರಿ ವತಿಯಿಂದ ಶನಿವಾರ ಹಮ್ಮಿಕೊಂಡಿದ್ದ ಜಾಗೃತಿ ಜಾಥಾ ಹಾಗೂ ಹೆಲ್ಮೆಟ್ ವಿತರಣೆ ಕಾರ್ಯಕ್ರಮಕ್ಕೆ&nbsp;ಜಿಲ್ಲಾಧಿಕಾರಿ ಯಶವಂತ್ ವಿ. ಗುರುಕರ್ ಚಾಲನೆ ನೀಡಿದರು.&nbsp;</p></div>

ರಾಷ್ಟ್ರೀಯ ರಸ್ತೆ ಸುರಕ್ಷತಾ ಮಾಸಾಚರಣೆ ಕಾರ್ಯಕ್ರಮದ ಅಂಗವಾಗಿ ರಾಮನಗರದ ಜಿಲ್ಲಾಧಿಕಾರಿ ಕಚೇರಿ ಮುಂಭಾಗದಲ್ಲಿ ಜಿಲ್ಲಾಡಳಿತ ಹಾಗೂ ಜಿಲ್ಲಾ ಪ್ರಾದೇಶಿಕ ಸಾರಿಗೆ ಕಚೇರಿ ವತಿಯಿಂದ ಶನಿವಾರ ಹಮ್ಮಿಕೊಂಡಿದ್ದ ಜಾಗೃತಿ ಜಾಥಾ ಹಾಗೂ ಹೆಲ್ಮೆಟ್ ವಿತರಣೆ ಕಾರ್ಯಕ್ರಮಕ್ಕೆ ಜಿಲ್ಲಾಧಿಕಾರಿ ಯಶವಂತ್ ವಿ. ಗುರುಕರ್ ಚಾಲನೆ ನೀಡಿದರು. 

   

ರಾಮನಗರ: ‘ಒಂದು ಕ್ಷಣದ ನಿರ್ಲಕ್ಷ್ಯವು ಇಡೀ ಬದುಕನ್ನೇ ದುಸ್ತರ ಮಾಡುತ್ತದೆ. ಮದ್ಯಪಾನ ಮಾಡಿ ವಾಹನ ಚಾಲನೆ ಮಾಡುವುದು ಚಾಲಕರಿಗಷ್ಟೇ ಅಲ್ಲದೆ, ಅವರನ್ನು ಅವಲಂಬಿಸಿರುವವರನ್ನು ಅನಾಥವಾಗಿಸುತ್ತದೆ. ಹಾಗಾಗಿ, ಸಂಚಾರ ನಿಯಮಗಳನ್ನು ತಪ್ಪದೆ ಪಾಲಿಸಬೇಕು’ ಎಂದು ಜಿಲ್ಲಾಧಿಕಾರಿ ಯಶವಂತ್ ವಿ. ಗುರುಕರ್ ಸಲಹೆ ನೀಡಿದರು.

ರಾಷ್ಟ್ರೀಯ ರಸ್ತೆ ಸುರಕ್ಷತಾ ಮಾಸಾಚರಣೆ ಕಾರ್ಯಕ್ರಮದ ಅಂಗವಾಗಿ ನಗರದ ಜಿಲ್ಲಾಧಿಕಾರಿ ಕಚೇರಿಯ ಮುಂಭಾಗದಲ್ಲಿ ಜಿಲ್ಲಾಡಳಿತ ಹಾಗೂ ಜಿಲ್ಲಾ ಪ್ರಾದೇಶಿಕ ಸಾರಿಗೆ ಕಚೇರಿ ವತಿಯಿಂದ ಶನಿವಾರ ಹಮ್ಮಿಕೊಂಡಿದ್ದ ಜಾಗೃತಿ ಜಾಥಾ ಹಾಗೂ ಹೆಲ್ಮೆಟ್ ವಿತರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ADVERTISEMENT

‘ವಾಹನ ಚಾಲನೆ ಮಾಡುವಾಗ ಮೊಬೈಲ್ ಬಳಸಬಾರದು. ವೇಗದ ಮಿತಿ ಅನುಸರಿಸಿ, ರಸ್ತೆ ಸುರಕ್ಷತೆ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಬೇಕು. ಅಪಘಾತವು ವಾಹನ ಚಾಲನೆ ಮಾಡುವವರ ಬದುಕನ್ನಷ್ಟೇ ಅಲ್ಲದೆ, ಅಮಾಯಕರ ಜೀವವನ್ನೂ ತೆಗೆಯುತ್ತದೆ’ ಎಂದರು.

‘ಶಾಲಾ ಹಾಗೂ ಕಾಲೇಜು ಮಕ್ಕಳಿಗೆ ರಸ್ತೆ ಸುರಕ್ಷತೆಯ ಬಗ್ಗೆ ಜಾಗೃತಿ ಮೂಡಿಸಬೇಕು. ವಾಹನ ಚಾಲನೆಯ ವೇಗದ ಮಿತಿ, ಸೀಟ್ ಬೆಲ್ಟ್ ಹಾಗೂ ಹೆಲ್ಮೆಟ್‌ ಧರಿಸಿವುದರಿಂದ ಆಗುವ ಪ್ರಯೋಜನಗಳು ಬಗ್ಗೆ ತಿಳಿಸಿಕೊಡಬೇಕು. ರಸ್ತೆ ಸುರಕ್ಷತಾ ಮಾಸಾಚರಣೆ ಕಾರ್ಯಕ್ರಮವು ಅರಿವು ಮೂಡಿಸುವಲ್ಲಿ ಪ್ರಮುಖವಾಗಿದೆ’ ಎಂದು ಹೇಳಿದರು.

ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ರಾಜೇಂದ್ರ ಮಾತನಾಡಿ, ‘ಸ್ಟೇಜ್ ಯೂನಿಟ್‌ಗಳಲ್ಲಿ ವಾಹನ ಚಲಾಯಿಸುವಾಗ ಎಲ್ಲರನ್ನೂ ಗಮನಿಸಬೇಕು. ಅತಿ ವೇಗದಲ್ಲಿ ವಾಹನ ಚಲಾಯಿಸುವಾಗ ಸಾವು-ನೋವು ಸಂಭವಿಸುವ ಸಾಧ್ಯತೆಯೇ ಹೆಚ್ಚು. ಹಾಗಾಗಿ, ರಸ್ತೆ ಸುರಕ್ಷತೆ ನಿಯಮಗಳನ್ನು ಪಾಲಿಸಿ ವಾಹನ ಚಲಾಯಿಸಬೇಕು’ ಎಂದು ಸಲಹೆ ನೀಡಿದರು.

ಪ್ರಾದೇಶಿಕ ಸಾರಿಗೆ ಅಧಿಕಾರಿ ಸತೀಶ್ ಬಾಬು ಮಾತನಾಡಿ, ‘37ನೇ ರಾಷ್ಟ್ರೀಯ ರಸ್ತೆ ಸುರಕ್ಷತಾ ಮಾಸಾಚರಣೆ ಅಂಗವಾಗಿ ಜಿಲ್ಲೆಯ ಹಲವು ಶಾಲಾ0 ಕಾಲೇಜುಗಳಲ್ಲಿ ರಸ್ತೆ ಸುರಕ್ಷತಾ ಕಾರ್ಯಕ್ರಮಗಳನ್ನು ಇಲಾಖೆ ವತಿಯಿಂದ ಆಯೋಜಿಸಿ, ವಿದ್ಯಾರ್ಥಿಗಳಲ್ಲಿ ರಸ್ತೆ ಸುರಕ್ಷತೆಯ ಬಗ್ಗೆ ಅರಿವು ಮೂಡಿಸಲಾಗಿದೆ’ ಎಂದು ತಿಳಿಸಿದರು.

‘ವಾಹನ ಚಲಾಯಿಸುವಾಗ ಕೈನಲ್ಲಿ ಯಾವ ರೀತಿ ಸಿಗ್ನಲ್‌ಗಳನ್ನು ತೋರಿಸಬೇಕು. ಹೆಲ್ಮೆಟ್ ಧರಿಸದೇ ಹಾಗೂ ಮದ್ಯಪಾನ ಮಾಡಿ ವಾಹನ ಚಲಾಯಿಸಿದರೆ ಅನ್ವಯವಾಗುವ ಕಾನೂನು ನಿಯಮಗಳ ಬಗ್ಗೆ, ವಾಹನಕ್ಕೆ ಸಂಬಂಧಿಸಿದ ದಾಖಲಾತಿಗಳ ಬಗ್ಗೆ ಹಾಗೂ ಒಂದು ವಾಹನದಿಂದ ಮತ್ತೊಂದು ವಾಹನಕ್ಕೆ ಅಂತರ ಕಾಯ್ದುಕೊಂಡು ಸುರಕ್ಷಿತವಾಗಿರುವ ಕುರಿತು, ಸೇಫ್ಟಿ ಬೆಲ್ಟ್ ಧರಿಸುವ ಬಗ್ಗೆ ಜಾಗೃತಿ ಮೂಡಿಸಲಾಗಿದೆ. ಜೊತೆಗೆ ಟೊಯೊಟಾ, ಬಾಷ್ ಕಂಪನಿಗಳಲ್ಲಿ ಕೆಲಸ ಮಾಡುವ 300ಕ್ಕೂ ನೌಕರರಿಗೆ ರಾಷ್ಟ್ರೀಯ ರಸ್ತೆ ಸುರಕ್ಷತಾ ಕಾರ್ಯಕ್ರಮದ ಕುರಿತು ಮಾಹಿತಿ ನೀಡಲಾಗಿದೆ’ ಎಂದು ಹೇಳಿದರು.

ಹೆಚ್ಚುವರಿ ಜಿಲ್ಲಾಧಿಕಾರಿ ಆರ್. ಚಂದ್ರಯ್ಯ, ನಿವೃತ್ತ ಸಾರಿಗೆ ಅಧೀಕ್ಷಕ ಎಂ.ಜಿ.ಎಂ. ಪ್ರಸಾದ್, ಆರ್‌ಟಿಒ ಇನ್‌ಸ್ಪೆಕ್ಟರ್‌ಗಳಾದ ವಿದ್ಯಾ, ಕುಮಾರಸ್ವಾಮಿ, ಬಾಲಾಜಿ ಡ್ರೈವಿಂಗ್ ಸ್ಕೂಲ್‌ ಪ್ರಾಂಶುಪಾಲ ವಾಸುದೇವ್, ವಂಡರ್‌ಲಾ ಸಿಬ್ಬಂದಿ, ಪ್ರಾದೇಶಿಕ ಸಾರಿಗೆ ಇಲಾಖೆಯ ಅಧಿಕಾರಿಗಳು ಹಾಗೂ ಸಾರ್ವಜನಿಕರು ಇದ್ದರು.

ಸಾರ್ವಜನಿಕರಿಗೆ 100 ಹೆಲ್ಮೆಟ್ ವಿತರಣೆ

ರಸ್ತೆ ಸುರಕ್ಷತಾ ಮಾಸಾಚರಣೆ ಅಂಗವಾಗಿ ನಗರದಲ್ಲಿ ಬೈಕ್ ಹಾಗೂ ಕಾರು ಜಾಥಾ ಜರುಗಿತು. ಜಿಲ್ಲಾಧಿಕಾರಿ ಕಚೇರಿಯಲ್ಲಿ ಡಿ.ಸಿ ಯಶವಂತ್ ವಿ. ಗುರುಕರ್ ಅವರು ಜಾಥಾಗೆ ಚಾಲನೆ ನೀಡಿದರು. ಅಲ್ಲಿಂದ ಹೊರಟ ಜಾಥಾ ಬಿ.ಎಂ. ರಸ್ತೆ ಮಾರ್ಗವಾಗಿ ಸಾಗಿ ಐಜೂರು ವೃತ್ತ ಹಾದು ಮರಳಿ ಆರ್‌ಟಿಒ ಕಚೇರಿ ತಲುಪಿತು. ಜಾಥಾದಲ್ಲಿ ಪಾಲ್ಗೊಂಡವರಿಗೆ ಬಾಲಾಜಿ ಡ್ರೈವಿಂಗ್ ಸ್ಕೂಲ್‌ನಿಂದ ಉಚಿತವಾಗಿ ಟೀ ಶರ್ಟ್ ಟೋಪಿಗಳನ್ನು ಹಾಗೂ ವಂಡರ್ ಲಾ ವತಿಯಿಂದ ಉಚಿತವಾಗಿ 100 ಹೆಲ್ಮೆಟ್‌ಗಳನ್ನು ವಿತರಿಸಲಾಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.