ADVERTISEMENT

ಗಿರೀಶ್ ವರ್ಗಾವಣೆ: ಸಂತೋಷ್ ಬಾಬು ರಾಮನಗರದ ಹೊಸ ಎಸ್ಪಿ

​ಪ್ರಜಾವಾಣಿ ವಾರ್ತೆ
Published 19 ಜನವರಿ 2022, 15:09 IST
Last Updated 19 ಜನವರಿ 2022, 15:09 IST
   

ರಾಮನಗರ: ಇಲ್ಲಿನ ಜಿಲ್ಲಾ ಪೊಲೀಸ್‌ ವರಿಷ್ಟಾಧಿಕಾರಿ ಎಸ್‌. ಗಿರೀಶ್ ಅವರನ್ನು ಬುಧವಾರ ಸರ್ಕಾರ ವರ್ಗಾವಣೆ ಮಾಡಿದ್ದು, ಅವರ ಜಾಗಕ್ಕೆ ಮತ್ತೊಬ್ಬ ಐಪಿಎಸ್ ಅಧಿಕಾರಿ ಸಂತೋಷ್‌ ಬಾಬು ಅವರನ್ನು ನೇಮಿಸಿದೆ.

ಗಿರೀಶ್ ಬೆಂಗಳೂರಿನ ವೈಟ್‌ಫೀಲ್ಡ್‌ ವಿಭಾಗದ ಡಿಸಿಪಿಯಾಗಿ ತೆರಳಲಿದ್ದು, ಬೆಂಗಳೂರಿನಲ್ಲಿ ಗುಪ್ತಚರ ವಿಭಾಗದ ಡಿಸಿಪಿಯಾಗಿ ಕಾರ್ಯ ನಿರ್ವಹಿಸುತ್ತಿದ್ದ ಸಂತೋಷ್‌ ರಾಮನಗರ ಎಸ್ಪಿಯಾಗಿ ಬರಲಿದ್ದಾರೆ. ಸಂತೋಷ್ ಮೂಲತಃ ರಾಮನಗರ ಜಿಲ್ಲೆಯ ಚನ್ನಪಟ್ಟಣ ತಾಲ್ಲೂಕಿನವರೇ ಆಗಿರುವುದು ವಿಶೇಷ.

ಇದೇ ತಿಂಗಳ 3ರಂದು ರಾಮನಗರದ ಜಿಲ್ಲಾ ಕಚೇರಿಗಳ ಸಂಕೀರ್ಣದ ಆವರಣದಲ್ಲಿ ನಡೆದ ಪ್ರತಿಮೆ ಅನಾವರಣ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಎದುರೇ ಸಚಿವರು–ಸಂಸದರ ನಡುವೆ ಜಟಾಪಟಿ ನಡೆದಿತ್ತು. ಇದರ ಭದ್ರತೆಯ ನೇತೃತ್ವವನ್ನು ಗಿರೀಶ್ ವಹಿಸಿದ್ದರು. ಗಲಾಟೆಗೆ ಪೊಲೀಸ್‌ ವೈಫಲ್ಯವೂ ಕಾರಣ ಎಂಬ ಆರೋಪ ಕೇಳಿಬಂದಿತ್ತು.

ADVERTISEMENT

ಇದೇ 9ರಿಂದ 13ರವರೆಗೆ ಜಿಲ್ಲೆಯಲ್ಲಿ ಮೇಕೆದಾಟು ಪಾದಯಾತ್ರೆಯ ಭದ್ರತೆ ಉಸ್ತುವಾರಿಯನ್ನು ಗಿರೀಶ್‌ ವಹಿಸಿದ್ದರು. ಪಾದಯಾತ್ರೆಯ ಐದು ದಿನವೂ ಯಾವುದೇ ಗದ್ದಲಗಳಿಗೆ ಆಸ್ಪದ ಕೊಡದಂತೆ ಪರಿಸ್ಥಿತಿ ನಿರ್ವಹಿಸಿದ್ದರು. ಮಂಗಳವಾರವಷ್ಟೇ ಅವರಿಗೆ ಕೋವಿಡ್ ಸೋಂಕು ದೃಢಪಟ್ಟಿತ್ತು. ಈ ಎಲ್ಲದರ ನಡುವೆ ವರ್ಗಾವಣೆ ಆದೇಶ ಹೊರಬಿದ್ದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.