ADVERTISEMENT

‘ಪೌರಾಣಿಕ ನಾಟಕ ಕಲೆ ಉಳಿಸಿ’

ಸಂಘ – ಸಂಸ್ಥೆಗಳಿಂದ ಹಣ ದುರುಪಯೋಗ: ವಿಷಾದ

​ಪ್ರಜಾವಾಣಿ ವಾರ್ತೆ
Published 5 ಸೆಪ್ಟೆಂಬರ್ 2018, 14:07 IST
Last Updated 5 ಸೆಪ್ಟೆಂಬರ್ 2018, 14:07 IST
ಕೆಂಗಲ್ ಆಂಜನೇಯ ಸಾಂಸ್ಕೃತಿಕ ಕಲಾ ಟ್ರಸ್ಟ್ ನ ನೂತನ ಕಚೇರಿಯನ್ನು ಗೋಪಾಲ ಗೌಡ ಉದ್ಘಾಟಿಸಿದರು
ಕೆಂಗಲ್ ಆಂಜನೇಯ ಸಾಂಸ್ಕೃತಿಕ ಕಲಾ ಟ್ರಸ್ಟ್ ನ ನೂತನ ಕಚೇರಿಯನ್ನು ಗೋಪಾಲ ಗೌಡ ಉದ್ಘಾಟಿಸಿದರು   

ಚನ್ನಪಟ್ಟಣ: ಆಧುನಿಕ ಭರಾಟೆಗೆ ಸಿಲುಕಿ ಪೌರಾಣಿಕ ನಾಟಕಗಳ ಸಂಸ್ಕೃತಿ ನೇಪಥ್ಯಕ್ಕೆ ಸರಿಯುತ್ತಿದ್ದು, ಅದನ್ನು ಉಳಿಸಿಕೊಂಡು ಮುಂದಿನ ಪೀಳಿಗೆಗೆ ಕೊಡುಗೆಯಾಗಿ ನೀಡಬೇಕಾದ ಜವಾಬ್ದಾರಿ ಪ್ರತಿಯೊಬ್ಬರ ಮೇಲಿದೆ ಎಂದು ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ಘಟಕದ ಅಧ್ಯಕ್ಷ ಸಿಂ.ಲಿಂ.ನಾಗರಾಜು ಅಭಿಪ್ರಾಯಪಟ್ಟರು.

ಪಟ್ಟಣದಲ್ಲಿ ನಡೆದ ಶ್ರೀಕೆಂಗಲ್ ಆಂಜನೇಯ ಸಾಂಸ್ಕೃತಿಕ ಕಲಾ ಟ್ರಸ್ಟ್‌ನ ನೂತನ ಕಚೇರಿ ಉದ್ಘಾಟನೆ ಸಮಾರಂಭದಲ್ಲಿ ಮಾತನಾಡಿದರು.

ನಾಟಕಗಳು ಈ ಹಿಂದೆ ಹೆಚ್ಚು ಪ್ರದರ್ಶನಗೊಂಡು ಜನಮಾನಸದಲ್ಲಿ ಉಳಿಯುತ್ತಿದ್ದವು. ನಾಟಕಗಳ ಪಾತ್ರಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳುತ್ತಿದ್ದ ಸಂದರ್ಭವೂ ಇದ್ದವು. ಆದರೆ, ಇಂದು ಪ್ರದರ್ಶನವೇ ಕ್ಷೀಣಿಸುತ್ತಿದೆ ಎಂದು ವಿಷಾದಿಸಿದರು.

ADVERTISEMENT

ಇತ್ತೀಚಿನ ದಿನಗಳಲ್ಲಿ ಸಂಘ ಸಂಸ್ಥೆಗಳು ನಾಯಿ ಕೊಡೆಗಳಂತೆ ಹುಟ್ಟಿಕೊಳ್ಳುತ್ತಿವೆ. ಇಲಾಖೆಯಿಂದ ಬರುವ ಹಣ ದುರುಪಯೋಗವಾಗುತ್ತಿದೆ. ಕಲೆಯನ್ನು ಕಾಟಾಚಾರಕ್ಕೆ ಪ್ರದರ್ಶನ ಮಾಡುವ ಸಂದರ್ಭ ನಡೆಯುತ್ತಿದೆ. ಸಂಘ ಸಂಸ್ಥೆಗಳು ನಾಡಿನ ಕಲೆ, ಸಂಸ್ಕೃತಿ, ಸಾಹಿತ್ಯ ಉಳಿಸುವಂತಹ ನಿಟ್ಟಿನಲ್ಲಿ ಯುವ ಪೀಳಿಗೆಗೆ ಮಾದರಿಯಾಗಬೇಕು ಎಂದರು.

ಹಿರಿಯ ಪತ್ರಕರ್ತ ಸು.ತ.ರಾಮೇಗೌಡ ಮಾತನಾಡಿ, ಹಿಂದೆ ಗ್ರಾಮೀಣ ಪ್ರದೇಶಗಳಲ್ಲಿ ನಾಟಕಗಳು ಯಶಸ್ವಿಯಾಗಿ ಪ್ರದರ್ಶನಗೊಳ್ಳುತ್ತಿದ್ದವು. ಆದರೆ, ಇಂದು ನಾಟಕಗಳು ಪ್ರದರ್ಶನವಾದರೂ ಪ್ರೇಕ್ಷಕರ ಸಂಖ್ಯೆ ಕ್ಷೀಣಿಸುತ್ತಿದೆ. ಭಾರತೀಯ ಸಂಸ್ಕೃತಿ ಬಿಂಬಿಸುವ ಹಾಗೂ ಪ್ರೇಕ್ಷಕರನ್ನು ತನ್ನತ್ತ ಸೆಳೆಯುವ ನಾಟಕಗಳು ಹೆಚ್ಚು ಪ್ರದರ್ಶನವಾಗಬೇಕು ಎಂದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಎಂ.ರಾಜು ಮಾತನಾಡಿ, ರಾಮನಗರ ಜಿಲ್ಲೆಯಲ್ಲಿ ಹೆಚ್ಚಿನ ಕಲಾಸಂಘ, ಸಂಸ್ಥೆ, ಟ್ರಸ್ಟ್‌ಗಳಿದ್ದು, ಪೌರಾಣಿಕ ನಾಟಕ, ರಂಗಗೀತೆ ಕಲಾತಂಡಗಳು ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತಾ ಬಂದಿವೆ. ಕಲೆಯನ್ನು ಬಿಂಬಿಸುವ ಕಲಾ ಟ್ರಸ್ಟ್‌ಗಳಿಗೆ ಇಲಾಖಾ ನಿಯಮನುಸಾರ ಸಹಕಾರ ನೀಡುತ್ತಿರುವುದಾಗಿ ತಿಳಿಸಿದರು.

ಹಿರಿಯ ಕಲಾವಿದ ಗೋಪಾಲಗೌಡ ಕಚೇರಿ ಉದ್ಘಾಟನೆ ಮಾಡಿದರು. ಜಿಲ್ಲಾ ಪಂಚಾಯಿತಿ ಸದಸ್ಯೆ ವೀಣಾಕುಮಾರಿ, ಭಾರತ್ ವಿಕಾಸ್ ಪರಿಷತ್ ತಾಲ್ಲೂಕು ಘಟಕದ ಅಧ್ಯಕ್ಷ ವಸಂತಕುಮಾರ್, ಡಾ.ರಾಜ್ ಕಲಾಬಳಗದ ಅಧ್ಯಕ್ಷ ಮಂಜುನಾಥ್, ಮುಖಂಡರಾದ ಚಂದ್ರಸಾಗರ್, ಮಹೇಶ್ ಕುಮಾರ್, ಪದ್ಮಭೂಷಣ ಡಾ. ರಾಜ್ ಕಲಾ ಬಳಗದ ನಾರಾಯಣಪ್ಪ, ಟ್ರಸ್ಟಿನ ಅಧ್ಯಕ್ಷ ಪಿ. ವಿಜೇಂದ್ರ, ರಂಗ ನಿರ್ದೇಶಕರಾದ ಕೃಷ್ಣಮ್ ರಾಜು, ಶಿವಾನಂದಮೂರ್ತಿ, ಅಶೋಕಪ್ರಭು, ಸಿದ್ಧರಾಜು, ವೆಂಕಟೇಶ್, ತಬಲವಾದಕರಾದ ಬಾಲು, ನಟರಾಜು ಭಾಗವಹಿಸಿದ್ದರು.

ವೀರಶೈವ ಸಂಘದ ಗುರುಮಾದಯ್ಯ ಸ್ವಾಗತಿಸಿದರು. ರಂಗ ನಿರ್ದೇಶಕ ಎಚ್.ಆರ್.ರಾಮಣ್ಣ ನಿರೂಪಿಸಿದರು. ಟ್ರಸ್ಟ್ ಉಪಾಧ್ಯಕ್ಷ ಬಿ.ಕೆ.ತೇಜಸ್ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.