ADVERTISEMENT

ರಾಮನಗರ: ಎರಡನೇ ದಿನ ಭಾರತ ಬಂದ್‌ಗೆ ನೀರಸ ಪ್ರತಿಕ್ರಿಯೆ

ಕಲ್ಲು ತೂರಾಟ: ಆರು ಬಸ್‌ಗೆ ಹಾನಿ

​ಪ್ರಜಾವಾಣಿ ವಾರ್ತೆ
Published 9 ಜನವರಿ 2019, 13:26 IST
Last Updated 9 ಜನವರಿ 2019, 13:26 IST
ರಾಮನಗರ ಬಸ್ ನಿಲ್ದಾಣದಲ್ಲಿ ಬುಧವಾರ ವಾಹನ ಸಂಚಾರ ಎಂದಿನಂತಿತ್ತು
ರಾಮನಗರ ಬಸ್ ನಿಲ್ದಾಣದಲ್ಲಿ ಬುಧವಾರ ವಾಹನ ಸಂಚಾರ ಎಂದಿನಂತಿತ್ತು   

ರಾಮನಗರ: ಬಸ್‌ಗಳಿಗೆ ಕಲ್ಲು ತೂರಾಟ ಹೊರತುಪಡಿಸಿ ಬುಧವಾರದ ಬಂದ್‌ ಕರೆಗೆ ಜಿಲ್ಲೆಯಲ್ಲಿ ನೀರಸ ಪ್ರತಿಕ್ರಿಯೆ ವ್ಯಕ್ತವಾಯಿತು. ಜನಜೀವನಕ್ಕೆ ಯಾವುದೇ ತೊಂದರೆ ಆಗಲಿಲ್ಲ.

ಮಾಗಡಿ–ಬೆಂಗಳೂರು ಮಾರ್ಗದಲ್ಲಿ ಸಂಚರಿಸುವ ಕೆಎಸ್‌ಆರ್‌ಟಿಸಿ ಹಾಗೂ ಬಿಎಂಟಿಸಿಯ ಆರು ಬಸ್‌ಗಳಿಗೆ ದುಷ್ಕರ್ಮಿಗಳು ಬೆಳಗ್ಗೆ ಕಲ್ಲು ತೂರಾಟ ನಡೆಸಿದರು. ಬೆಂಗಳೂರು ದಕ್ಷಿಣ ತಾಲ್ಲೂಕಿನ ತಾವರೆಕೆರೆ ಪೊಲೀಸ್ ಠಾಣೆ ವ್ಯಾಪ್ತಿಯ ಚನ್ನೇನಹಳ್ಳಿ, ಸಂಗದಾಸಿಪಾಳ್ಯ, ಲಕ್ಕಪ್ಪನಹಳ್ಳಿ, ಮಾಗಡಿ ತಾಲ್ಲೂಕಿನ ಕಡಬಗೆರೆ ಬಳಿ ದುಷ್ಕರ್ಮಿಗಳು ಬಸ್‌ಗಳ ಗಾಜು ಒಡೆದರು. ಇದರಿಂದಾಗಿ ಈ ಮಾರ್ಗದಲ್ಲಿ ಕೆಲವು ಕಾಲ ಬಸ್‌ಗಳ ಸಂಚಾರಕ್ಕೆ ಅಡ್ಡಿಯಾಯಿತು.

ಉಳಿದಂತೆ ಜಿಲ್ಲೆಯಲ್ಲಿ ಜನಜೀವನ ಎಂದಿನಂತೆ ಇತ್ತು. ಕೆಎಸ್‌ಆರ್‌ಟಿಸಿ ಬಸ್‌ಗಳು, ಆಟೊ, ಟ್ಯಾಕ್ಸಿ ಮೊದಲಾದ ವಾಹನಗಳ ಸಂಚಾರ ಸುಗಮವಾಗಿತ್ತು. ಸರ್ಕಾರಿ, ಶಾಲೆ ಕಾಲೇಜುಗಳು, ಕಚೇರಿಗಳು ಎಂದಿನಂತೆ ಕಾರ್ಯ ನಿರ್ವಹಿಸಿದವು. ವ್ಯಾಪಾರ ವಹಿವಾಟಿಗೂ ಅಡ್ಡಿ ಆಗಲಿಲ್ಲ.

ADVERTISEMENT

ಜಿಲ್ಲೆಯ ಕಾರ್ಮಿಕ ಮುಖಂಡರು ಬೆಂಗಳೂರಿನಲ್ಲಿ ನಡೆದ ಪ್ರತಿಭಟನೆಯಲ್ಲಿ ಪಾಲ್ಗೊಂಡರು. ಹೀಗಾಗಿ ಬಿಡದಿ, ಹಾರೋಹಳ್ಳಿ ಕೈಗಾರಿಕಾ ಪ್ರದೇಶಗಳಲ್ಲಿ ಯಾವುದೇ ಹೋರಾಟ ನಡೆಯಲಿಲ್ಲ. ಕಾರ್ಖಾನೆಗಳು ತೆರೆದಿದ್ದರೂ ಕಾರ್ಮಿಕರ ಸಂಖ್ಯೆ ವಿರಳವಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.