ADVERTISEMENT

‘ಸೌರಶಕ್ತಿ ಬಳಕೆಗೆ ಇದು ಸಕಾಲ’

ಸೆಲ್ಕೋ ವತಿಯಿಂದ ಇಂಧನ ಆಧಾರಿತ ಸಾಮಾಜಿಕ ಅಭಿವೃದ್ಧಿ ಕಾರ್ಯಾಗಾರ

​ಪ್ರಜಾವಾಣಿ ವಾರ್ತೆ
Published 30 ಜೂನ್ 2022, 5:33 IST
Last Updated 30 ಜೂನ್ 2022, 5:33 IST
ಕಾರ್ಯಾಗಾರವನ್ನು ನಬಾರ್ಡ್‌ ಅಧಿಕಾರಿ ಹರ್ಷಿತಾ ಉದ್ಘಾಟಿಸಿದರು. ಸೆಲ್ಕೋ ಕಂಪನಿಯ ಉಪ ಮಹಾಪ್ರಬಂಧಕ ಗುರುಪ್ರಕಾಶ ಶೆಟ್ಟಿ ಇದ್ದರು
ಕಾರ್ಯಾಗಾರವನ್ನು ನಬಾರ್ಡ್‌ ಅಧಿಕಾರಿ ಹರ್ಷಿತಾ ಉದ್ಘಾಟಿಸಿದರು. ಸೆಲ್ಕೋ ಕಂಪನಿಯ ಉಪ ಮಹಾಪ್ರಬಂಧಕ ಗುರುಪ್ರಕಾಶ ಶೆಟ್ಟಿ ಇದ್ದರು   

ರಾಮನಗರ: ದೇಶದಲ್ಲಿ ಪೆಟ್ರೋಲಿಯಂ ಉತ್ಪನ್ನಗಳ ಭಂಡಾರ ಬರಿದಾಗುತ್ತಿದ್ದು, ನವೀಕರಿಸಬಹುದಾದ ಇಂಧನಗಳ ಬಳಕೆ ಮತ್ತು ಪ್ರೋತ್ಸಾಹಕ್ಕೆ ಇದು ಸಕಾಲ ಎಂದು ನಬಾರ್ಡ್‍ನ ಮಂಡ್ಯ ಹಾಗೂ ರಾಮನಗರ ಜಿಲ್ಲಾ ಅಭಿವೃದ್ಧಿ ವ್ಯವಸ್ಥಾಪಕಿ ಹರ್ಷಿತಾ
ಅಭಿಪ್ರಾಯಪಟ್ಟರು.

ಸೆಲ್ಕೋ ಸೋಲಾರ್ ಲೈಟ್ ಪ್ರೈವೇಟ್ ಲಿಮಿಟೆಡ್ ವತಿಯಿಂದ ಮಂಗಳವಾರ ನಗರದ ರಾಮಘಡ್ ಹೋಟೆಲ್ ನಲ್ಲಿ ಆಯೋಜಿಸಿದ್ದ ಇಂಧನ ಆಧಾರಿತ ಸಾಮಾಜಿಕ ಅಭಿವೃದ್ಧಿ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಕರ್ನಾಟಕದಲ್ಲಿ ಪೆಟ್ರೋಲ್‌ ಇಂಧನ ಮೂಲಗಳೇ ಇಲ್ಲ. ನಾವದನ್ನು ಹೊರ ರಾಜ್ಯ–ದೇಶಗಳಿಂದ ತರಿಸಿಕೊಳ್ಳುತ್ತಿದ್ದೇವೆ. ಇಂಧನ ಮೂಲ ಬರಿದಾಗುತ್ತಿದ್ದರೂ ವಿದ್ಯುತ್ ಗೆ ದಿ‌ನ ಕಳೆದಂತೆಲ್ಲ‌ ಬೇಡಿಕೆ ಹೆಚ್ಚುತ್ತಲೇ ಇದೆ. ಹೀಗಾಗಿ ಪರ್ಯಾಯ ಮಾರ್ಗಗಳತ್ತ ಆಲೋಚನೆ ಮಾಡುವುದು ಅನಿವಾರ್ಯ ಆಗಿದೆ. ರಾಜ್ಯದಲ್ಲಿ ಪ್ರಸ್ತುತ 8758 ಮೆಗಾ ವ್ಯಾಟ್ ನಷ್ಟು ವಿದ್ಯುತ್‌ ನವೀಕರಿಸಲಾಗದ ಶಕ್ತಿ ಮೂಲಗಳಿಂದ ಉತ್ಪಾದನೆ ಆಗುತ್ತಿದ್ದರೆ, 7600 ಮೆಗಾ ವ್ಯಾಟ್‌ನಷ್ಟು ವಿದ್ಯುತ್‌ ಸೌರಶಕ್ತಿ ರೂಪದಲ್ಲಿ ದೊರೆಯುತ್ತಿದೆ. ಇದನ್ನು ಇನ್ನಷ್ಟು ಪರಿಣಾಮಕಾರಿಯಾಗಿ ಬಳಸಿಕೊಳ್ಳಬೇಕಿದೆ ಎಂದು ಹೇಳಿದರು.

ಸೆಲ್ಕೋ ಕಳೆದ ಐದಾರು ವರ್ಷದಲ್ಲಿ 3.5 ಲಕ್ಷ ಮನೆಗಳಿಗೆ ಸೋಲಾರ್ ವಿದ್ಯುತ್ ಒದಗಿಸಿರುವುದು ಖುಷಿಯ ವಿಚಾರ. ಸೆಲ್ಕೋ ಹಾಗೂ ನಬಾರ್ಡ್ ಸಹಯೋಗದಲ್ಲಿ ಮಹಿಳಾ ಸ್ವಸಹಾಯ ಸಂಘಗಳಿಗೆ ಮಂಡ್ಯದಲ್ಲಿ ಸೌರ ಕುಟೀರಗಳನ್ನು ತೆರೆಯುವ ಯೋಜನೆ ಇದೆ ಎಂದರು.

ADVERTISEMENT

ಸೆಲ್ಕೊ ಕಂಪನಿಯ ಉಪ ಮಹಾ ಪ್ರಬಂಧಕ ಸುದೀಪ್ತ ಘೋಷ್‌ ‘ಸಂಪನ್ಮೂಲ ಮಿತ ಬಳಕೆ ಹಾಗೂ ಸದ್ಬಳಕೆ ನಮ್ಮ ಮುಂದೆ ಇರುವ ಸವಾಲು. ನವೀಕರಿಸಲಾದ ಇಂಧನ ಮೂಲಗಳನ್ನು ಬಳಸಿದಷ್ಟೂ ಪರಿಸರಕ್ಕೆ ಹಾನಿ.‌ ಪೆಟ್ರೋಲ್ ಇನ್ನು 30 ವರ್ಷ ಸಿಕ್ಕರೆ ಹೆಚ್ಚು. ಹೀಗಾಗಿ ನವೀಕೃತ ಇಂಧನ ಬಳಕೆ ಇಂದಿನ ಅನಿವಾರ್ಯ’ ಎಂದರು.

ಎಲ್ಲ ರಂಗಗಳಲ್ಲೂ ಸೌರಶಕ್ತಿ ಬಳಕೆ ಆಗಬೇಕು. ದ್ವಿತೀಯ ದರ್ಜೆ ನಗರಗಳು ಹಾಗೂ ಗ್ರಾಮೀಣರಿಗೂ ಈ ಸೌಲಭ್ಯಗಳು ಸಿಗಬೇಕು. ಈ‌ ನಿಟ್ಟಿನಲ್ಲಿ ಸೆಲ್ಕೋ ಹಲವು ಆವಿಷ್ಕಾರಗಳನ್ನು ಮಾಡಿದ್ದು, ಜನಸಾಮಾನ್ಯರಿಗೆ ಅದನ್ನು ತಲುಪಿಸಲಾಗುತ್ತಿದೆ ಎಂದು ಅವರು ತಿಳಿಸಿದರು.

ಸೆಲ್ಕೋ ಕಂಪನಿಯ ಉಪ ಮಹಾಪ್ರಬಂಧಕ ಗುರುಪ್ರಕಾಶ ಶೆಟ್ಟಿ ‘ ಪ್ರತಿ‌ ಮನೆಯ ಮಹಡಿ‌ ಮೇಲೂ ವಿದ್ಯುತ್ ಉತ್ಪಾದನೆ ಸಾಧ್ಯ. ಕೇಂದ್ರೀಕೃತ ವ್ಯವಸ್ಥೆಯಿಂದ ಸೌರಶಕ್ತಿ ಉತ್ಪಾದನೆ ಮಾಡಿದರೆ ಪೂರೈಕೆಯಲ್ಲೇ ಶೇ 30ರಷ್ಟು ವಿದ್ಯುತ್ ಪೋಲಾಗುತ್ತದೆ. ಅದರ ಬದಲಿಗೆ ಸರ್ಕಾರ ವಿಕೇಂದ್ರೀಕೃತ ವ್ಯವಸ್ಥೆ ಗೆ ಆದ್ಯತೆ ನೀಡಿ, ಮನೆಗಳಲ್ಲಿ ಸೌರಶಕ್ತಿ‌ ವಿದ್ಯುತ್ ಉತ್ಪಾದನೆಗೆ ಪ್ರೋತ್ಸಾಹಿಸಬೇಕಿದೆ’ ಎಂದು ಸಲಹೆ ನೀಡಿದರು.

ಸೆಲ್ಕೋ ಫೌಂಡೇಷನ್ ಸಮಾನ ಮನಸ್ಕ ಸಂಘಟನೆಗಳ ಜೊತೆಗೂಡಿ ಸಿಎಸ್ ಆರ್ ಚಟುವಟಿಕೆ ಅಡಿ ದುರ್ಬಲ ವರ್ಗದವರಿಗೂ ಸೌರಶಕ್ತಿ ಆಧಾರಿತ ಸಾಧನಗಳನ್ನು ತಲುಪಿಸುವ ಕೆಲಸ ಮಾಡುತ್ತಿದೆ ಎಂದರು.

ಸೆಲ್ಕೊ ಕಂಪನಿಯ ಎಜಿಎಂ ಕೆ. ಕರಿಸ್ವಾಮಿ, ಮೈಸೂರು ವಿಭಾಗೀಯ ವ್ಯವಸ್ಥಾಪಕ ಸುಕುಮಾರ್, ರಾಮನಗರ ಶಾಖೆ ವ್ಯವಸ್ಥಾಪಕ ಶಂಕರ್, ಸೆಲ್ಕೋ ಸಂಸ್ಥೆಯ ಪ್ರತಿನಿಧಿಗಳು ಹಾಗೂ ವಿವಿಧ ಜಿಲ್ಲೆಗಳ ಪತ್ರಕರ್ತರು ಕಾರ್ಯಾಗಾರದಲ್ಲಿ ಪಾಲ್ಗೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.