ವಿಶ್ವ ಹಿರಿಯ ನಾಗರಿಕರ ದಿನಾಚರಣೆ ಅಂಗವಾಗಿ ಹಿರಿಯ ನಾಗರಿಕರಿಗೆ ರಾಮನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಕ್ರೀಡಾ ಮತ್ತು ಸಾಂಸ್ಕೃತಿಕ ಸ್ಪರ್ಧೆಗಳಿಗೆ ಹಿರಿಯ ಸಿವಿಲ್ ನ್ಯಾಯಾಧೀಶೆ ಸವಿತಾ ಪಿ.ಆರ್ ಚಾಲನೆ ನೀಡಿ ಮಾತನಾಡಿದರು.
ರಾಮನಗರ: ಅಂಗವಿಕಲರು ಹಾಗೂ ಹಿರಿಯ ನಾಗರಿಕರು ಸರ್ಕಾರದಿಂದ ದೊರಕುವ ಸೌಲಭ್ಯಗಳನ್ನು ಪಡೆದುಕೊಳ್ಳಬೇಕು. ಯಾರೂ ಸೌಲಭ್ಯಗಳಿಂದ ವಂಚಿತರಾಗಬಾರದು ಎಂದು ಹಿರಿಯ ಸಿವಿಲ್ ನ್ಯಾಯಾಧೀಶೆ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಸವಿತಾ ಪಿ.ಆರ್ ಸಲಹೆ ನೀಡಿದರು.
ವಿಶ್ವ ಹಿರಿಯ ನಾಗರಿಕರ ದಿನಾಚರಣೆ ಅಂಗವಾಗಿ ಜಿಲ್ಲೆಯ ಹಿರಿಯ ನಾಗರಿಕರಿಗಾಗಿ ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಕ್ರೀಡಾ ಮತ್ತು ಸಾಂಸ್ಕೃತಿಕ ಸ್ಪರ್ಧೆಗಳಿಗೆ ಚಾಲನೆ ನೀಡಿ ಮಾತನಾಡಿದ ಅವರು, ಹಿರಿಯ ನಾಗರಿಕರ ಆರೋಗ್ಯ ವೃದ್ಧಿಗೆ ಕ್ರೀಡಾ ಕಾರ್ಯಕ್ರಮಗಳು ಸಹಕಾರಿಯಾಗಿವೆ ಎಂದರು.
ಸರ್ಕಾರಿ ಸೌಲಭ್ಯಗಳನ್ನು ಪಡೆಯಲು ಅಂಗವಿಕಲರು ಹಾಗೂ ಹಿರಿಯ ನಾಗರಿಕರು ಗುರುತಿನ ಚೀಟಿ ಪಡೆದುಕೊಳ್ಳಬೇಕು. ಗುರುತಿನ ಚೀಟಿ ಪಡೆದುಕೊಂಡರೆ ಸೌಲಭ್ಯಗಳು ಸುಲಭವಾಗಿ ಸಿಗುತ್ತವೆ. ಇದಕ್ಕೆ ಸಂಬಂಧಿಸಿದಂತೆ ಯಾವುದೇ ರೀತಿಯ ಸಮಸ್ಯೆಗಳು ಎದುರಾದಲ್ಲಿ ಇಲಾಖೆ ಅಧಿಕಾರಿಗಳನ್ನು ಸಂಪರ್ಕಿಸಬೇಕು ಎಂದು ತಿಳಿಸಿದರು.
ಜಗತ್ತು ಬಲಿಷ್ಠವಾಗಿ ಇರಲು ನಮ್ಮ ಹಿರಿಯರು ಕಾರಣ. ನಾವುಗಳು ಅವರನ್ನು ಗೌರವಿಸಬೇಕು. ಒಂದು ಮನೆಯಲ್ಲಿ ಹಿರಿಯರು ಇದ್ದರೆ ನಾವು ಸುಖ ಸಂಸಾರವನ್ನು ನಡೆಸಬಹುದು. ಅವರು ನಡೆದು ಬಂದ ದಾರಿಯಲ್ಲಿ ನಾವುಗಳು ಹೋದರೆ ನಮಗೆ ಯಶಸ್ಸು ಸಿಗುತ್ತದೆ. ಅಂಗವಿಕಲರು ಹಾಗೂ ಹಿರಿಯರ ಮನಸ್ಸು ಮಕ್ಕಳಂತಿರುತ್ತದೆ. ಅವರನ್ನು ಚನ್ನಾಗಿ ನೋಡಿಕೊಳ್ಳಬೇಕು ಎಂದರು.
ಇಲಾಖೆಯ ಕಲ್ಯಾಣಾಧಿಕಾರಿ ಕೆ.ವಿ. ಜ್ಯೋತಿ ಮಾತನಾಡಿ, ಜಿಲ್ಲಾ ಮಟ್ಟದ ಹಿರಿಯ ನಾಗರಿಕರ ಕ್ರೀಡೆ ಹಾಗೂ ಸಾಂಸ್ಕೃತಿಕ ಸ್ಪರ್ಧೆ ಆಯೋಜನೆ ಮೂಲಕ, ಅವರಲ್ಲಿರುವ ಕಲೆಗಳನ್ನು ಗುರುತಿಸಲಾಗುತ್ತಿದೆ. ಅವರ ಮುಖದಲ್ಲಿ ನಗುವನ್ನು ತರಿಸುವ ಸಲುವಾಗಿ ಕ್ರೀಡಾ ಹಾಗೂ ಸಾಂಸ್ಕೃತಿಕ ಸ್ಪರ್ಧೆಗಳನ್ನು ಏರ್ಪಡಿಸಲಾಗಿದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ದಾರಿದೀಪ ವೃದ್ದಾಶ್ರಮದ ಸಂಸ್ಥಾಪಕಿ ಕವಿತಾ ರಾವ್, ಹಿರಿಯ ನಾಗರಿಕರ ಸಹಾಯವಾಣಿ ಕೇಂದ್ರದ ಸಿದ್ದೇಗೌಡ ಹಾಗೂ ಇತರರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.