ADVERTISEMENT

ಹಿರಿಯ ಕಾಂಗ್ರೆಸ್ಸಿಗ ಸಯ್ಯದ್‌ ಮುನೀರ್‌ ನಿಧನ

​ಪ್ರಜಾವಾಣಿ ವಾರ್ತೆ
Published 16 ಅಕ್ಟೋಬರ್ 2019, 15:44 IST
Last Updated 16 ಅಕ್ಟೋಬರ್ 2019, 15:44 IST
ಹಾಜಿ ಸಯ್ಯರ್ ಮುನೀರ್
ಹಾಜಿ ಸಯ್ಯರ್ ಮುನೀರ್   

ರಾಮನಗರ: ಜಿಲ್ಲೆಯ ಶೈಕ್ಷಣಿಕ ಕ್ಷೇತ್ರಕ್ಕೆ ತನ್ನದೇ ಆದ ಕೊಡುಗೆ ನೀಡಿದ್ದ ಹಾಜಿ ಸಯ್ಯದ್ ಮುನೀರ್ (88) ಬುಧವಾರ ಬೆಳಿಗ್ಗೆ ನಿಧನರಾದರು.

ಅವರು ನಗರದ ರೆಹಮಾನಿಯ ಪ್ರೌಢಶಾಲೆ, ಎಂ.ಎಂ.ಯು ಫಾರ್ಮಸಿ ಕಾಲೇಜುಗಳ ಸಂಸ್ಥಾಪಕ ಅಧ್ಯಕ್ಷರಾಗಿದ್ದರು. ಪದವಿ ತರಗತಿಗಳಿಗಾಗಿ ಬೆಂಗಳೂರಿಗೆ ಹೋಗಬೇಕಾದ ಪರಿಸ್ಥಿತಿ ರಾಮನಗರದಲ್ಲಿತ್ತು. ಇವರು ಪುರಸಭೆಯ ಅಧ್ಯಕ್ಷರಾಗಿದ್ದಾಗ ಪುರಸಭೆಯ ವತಿಯಿಂದ ಅದರ ಕಟ್ಟಡದಲ್ಲಿಯೇ 'ಮುನ್ಸಿಪಲ್ ಫಸ್ಟ್ ಗ್ರೇಡ್ ಪದವಿ ಕಾಲೇಜು' ಸ್ಥಾಪನೆಗೂ ಮುಂದಾಳತ್ವ ವಹಿಸಿ, ಪದವಿ ತರಗತಿಗಳ ಕೊರತೆಯನ್ನು ನೀಗಿಸಿದರು. ಗೌಸಿಯಾ ಎಂಜಿನಿಯರಿಂಗ್ ಕಾಲೇಜು ಸ್ಥಾಪನೆಗೆ ಸಹಕಾರ ನೀಡಿದ್ದರು.

ಕಾಂಗ್ರೆಸ್ ನಾಯಕರಾಗಿ ಪಕ್ಷ ಸಂಘಟನೆಗೆ ತಮ್ಮನ್ನು ತೊಡಗಿಸಿಕೊಂಡಿದ್ದರು. 60 ವರ್ಷಗಳಿಂದ ಕಾಂಗ್ರೆಸ್ ಪಕ್ಷದ ಸಕ್ರಿಯ ಕಾರ್ಯಕರ್ತರಾಗಿದ್ದರು. 7 ಬಾರಿ ಪುರಸಭೆಗೆ ಸದಸ್ಯರಾಗಿ, ಸತತ 3 ಅವಧಿಗೆ 12 ವರ್ಷಗಳ ಕಾಲ ಪುರಸಭೆ ಅಧ್ಯಕ್ಷರಾಗಿ ಜನಮನ್ನಣೆ ಗಳಿಸಿದ್ದರು. ರಾಜಕೀಯ ಕ್ಷೇತ್ರದ ಜತೆಗೆ ಶಿಕ್ಷಣ ಕ್ಷೇತ್ರದಲ್ಲೂ ತಮ್ಮನ್ನು ತೊಡಗಿಸಿಕೊಂಡಿದ್ದರು.

ADVERTISEMENT

ಎಂಎಂಯು ಶಿಕ್ಷಣ ಸಂಸ್ಥೆ ಮತ್ತು ಅರ್ಬನ್ ಕೋ-ಆಪರೇಟಿವ್‌ ಬ್ಯಾಂಕಿನ ಸಂಸ್ಥಾಪಕ ಅದ್ಯಕ್ಷರಾಗಿ, ಗೌಸಿಯಾ ಎಂಜಿನಿಯರಿಂಗ್ ಕಾಲೇಜಿನ ಪ್ರಮೋಟರ್ ಆಗಿ, ಎರಡು ಬಾರಿ ವಕ್ಫ್ ಬೋರ್ಡ್ ಮಂಡಳಿ ಸದಸ್ಯರಾಗಿ, ಕೇಂದ್ರ ರೇಷ್ಮೆ ಮಂಡಳಿಯ ನೇಮಕಾತಿ ಸಮಿತಿ ಸದಸ್ಯರಾಗಿ ಸೇವೆ ಸಲ್ಲಿಸಿದ್ದರು.

ಅವರಿಗೆ ಪತ್ನಿ, ನಗರಸಭೆಯ ಮಾಜಿ ಸದಸ್ಯರಾದ ಸಯ್ಯದ್ ಉಮರ್, ಸಯ್ಯದ್ ತಲ್ಹಾಪಾಷಾ ಸೇರಿದಂತೆ ನಾಲ್ವರು ಪುತ್ರರು, ಮೂವರು ಪುತ್ರಿಯರು ಇದ್ದಾರೆ. ಅಂತ್ಯಕ್ರಿಯೆ ಬುಧವಾರ ಸಂಜೆ ನೆರವೇರಿತು.

ವಿಧಾನ ಪರಿಷತ್‌ ಸದಸ್ಯ ಸಿಂ.ಎಂ. ಲಿಂಗಪ್ಪ, ಶಾಸಕ ಎ. ಮಂಜುನಾಥ್, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಸಯ್ಯದ್ ಜಿಯಾವುಲ್ಲಾ, ಹಿರಿಯ ಮುಖಂಡ ಸಾದತ್ ಆಲಿಖಾನ್, ಮುಖಂಡ ಕೆ. ಶೇಷಾದ್ರಿ ಸೇರಿದಂತೆ ವಿವಿಧ ರಾಜಕೀಯ ಪಕ್ಷಗಳ ಮುಖಂಡರು, ಸಂಘಸಂಸ್ಥೆಗಳ ಪದಾಧಿಕಾರಿಗಳು, ವಿವಿಧ ಶಾಲಾ-ಕಾಲೇಜುಗಳ ಮುಖ್ಯಸ್ಥರು ಮುನೀರ್ ಅವರ ಅಂತಿಮ ದರ್ಶನ ಪಡೆದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.