ADVERTISEMENT

ಶಾಸನ ವಿಧಿಸಿಕೊಂಡ ಕಾವ್ಯಕ್ಕಿಲ್ಲ ಉಳಿಗಾಲ: ಎಸ್.ಜಿ. ಸಿದ್ಧರಾಮಯ್ಯ

‘ಮಿಥುನ ಪಕ್ಷಿಗಳು’ ಕವನ ಸಂಕಲನ ಬಿಡುಗಡೆಯಲ್ಲಿ ಕವಿ ಎಸ್.ಸಿ. ಸಿದ್ದರಾಮಯ್ಯ ಅಭಿಪ್ರಾಯ

​ಪ್ರಜಾವಾಣಿ ವಾರ್ತೆ
Published 18 ಜೂನ್ 2025, 3:18 IST
Last Updated 18 ಜೂನ್ 2025, 3:18 IST
ಕನಕಪುರದ ರೂರಲ್ ಕಾಲೇಜು ಆವರಣದ ಎಸ್.ಕೆ. ಹಾಲ್‌ನಲ್ಲಿ ಕವಿ ಗಟ್ಟಿಗುಂದ ಮಹದೇವ್ ಅವರ ‘ಮಿಥುನ ಪಕ್ಷಿಗಳು’ ಕವನ ಸಂಕಲನವನ್ನು ಕವಿ ಹಾಗೂ ವಿಮರ್ಶಕ ಎಸ್.ಜಿ. ಸಿದ್ದರಾಮಯ್ಯ ಬಿಡುಗಡೆ ಮಾಡಿದರು. ಜಾನಪದ ವಿದ್ವಾಂಸ ಡಾ. ಎಂ. ಭೈರೇಗೌಡ, ಕಸಾಪ ಜಿಲ್ಲಾಧ್ಯಕ್ಷ ಬಿ.ಟಿ. ನಾಗೇಶ್ ಹಾಗೂ ಮಾಜಿ ಅಧ್ಯಕ್ಷ ಬಿ.ಟಿ. ಚಿಕ್ಕಪುಟ್ಟೆಗೌಡ ಇದ್ದಾರೆ
ಕನಕಪುರದ ರೂರಲ್ ಕಾಲೇಜು ಆವರಣದ ಎಸ್.ಕೆ. ಹಾಲ್‌ನಲ್ಲಿ ಕವಿ ಗಟ್ಟಿಗುಂದ ಮಹದೇವ್ ಅವರ ‘ಮಿಥುನ ಪಕ್ಷಿಗಳು’ ಕವನ ಸಂಕಲನವನ್ನು ಕವಿ ಹಾಗೂ ವಿಮರ್ಶಕ ಎಸ್.ಜಿ. ಸಿದ್ದರಾಮಯ್ಯ ಬಿಡುಗಡೆ ಮಾಡಿದರು. ಜಾನಪದ ವಿದ್ವಾಂಸ ಡಾ. ಎಂ. ಭೈರೇಗೌಡ, ಕಸಾಪ ಜಿಲ್ಲಾಧ್ಯಕ್ಷ ಬಿ.ಟಿ. ನಾಗೇಶ್ ಹಾಗೂ ಮಾಜಿ ಅಧ್ಯಕ್ಷ ಬಿ.ಟಿ. ಚಿಕ್ಕಪುಟ್ಟೆಗೌಡ ಇದ್ದಾರೆ   

ಕನಕಪುರ (ರಾಮನಗರ): ‘ಹೀಯೇ ಇರಬೇಕೆಂದು ಶಾಸನ ವಿಧಿಸಿಕೊಂಡು ಬರೆಯುವ ಕಾವ್ಯಕ್ಕೆ ಯಾವತ್ತೂ ಉಳಿಗಾಲವಿಲ್ಲ. ಪ್ರಾಸಗಳನ್ನು ನೆಚ್ಚಿಸಿಕೊಂಡ ಕವಿತೆಗಳು ಗುಡಿಸುವಿಕೆ ಸರಕಾಗಿ ಪಕ್ಕಕ್ಕೆ ತಳ್ಳಲ್ಪಡುತ್ತವೆ. ಭಾಷಾ ಸೂಕ್ಷ್ಮತೆ, ಸಂವೇದನೆ ಹಾಗೂ ತನ್ನದೇ ಆದ ಪಾರಿಭಾಷಿಕ ಪದಕೋಶಗಳಿಂದ ರಚಿತವಾದ ಕಾವ್ಯ ಸಮೃದ್ಧ ಹಾಗೂ ಸಾರ್ವಕಾಲಿಕವಾಗಿರುತ್ತದೆ’ ಎಂದು ಕವಿ ಹಾಗೂ ವಿಮರ್ಶಕ ಎಸ್.ಜಿ. ಸಿದ್ಧರಾಮಯ್ಯ ಅಭಿಪ್ರಾಯಟಪ್ಟರು.

ಪಟ್ಟಣದ ರೂರಲ್ ಕಾಲೇಜು ಆವರಣದ ಎಸ್.ಕೆ. ಹಾಲ್‌ನಲ್ಲಿ ಕೃಷ್ಣಾಪುರದೊಡ್ಡಿಯ ಕೆ.ಎಸ್. ಮುದ್ದಪ್ಪ ಸ್ಮಾರಕ ಟ್ರಸ್ಟ್ ಹಾಗೂ ರೂರಲ್ ಎಜುಕೇಷನ್ ಸೊಸೈಟಿ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಬೆಂಗಳೂರಿನ ಪ್ರಗತಿ ಗ್ರಾಫಿಕ್ಸ್ ಪ್ರಕಟಿತ ಕವಿ ಗಟ್ಟಿಗುಂದ ಮಹದೇವ್ ಅವರ ‘ಮಿಥುನ ಪಕ್ಷಿಗಳು’ ಕವನ ಸಂಕಲನ ಬಿಡುಗಡೆ ಮಾಡಿ ಅವರು ಮಾತನಾಡಿದರು.

ಪದಾರ್ಥ ಕಾವ್ಯ: ‘ಪದಗಳ ಅರ್ಥಕ್ಕೆ ಸೀಮಿತಗೊಳಿಸಿಕೊಂಡು ರಚನೆಯಾಗುವ ಕಾವ್ಯವು ಪದಾರ್ಥ ಕಾವ್ಯವಾಗುತ್ತದೆ. ಬದಲಿಗೆ ಬಹು ಅರ್ಥಸಾಧ್ಯತೆಗಳೊಂದಿಗೆ ರಚನೆಯಾಗುವ ಕಾವ್ಯ ಮಾತ್ರ ಪದಕಾವ್ಯವಾಗುತ್ತದೆ. ವಿಮರ್ಶಾ ಪ್ರಜ್ಞೆಯುಳ್ಳ ಕವಿಯಿಂದ ಮಾತ್ರ ಉತ್ಕೃಷ್ಟ ಪದಗಳ ಸಾಲುಗಳು ಮೂಡುತ್ತವೆ. ಗಟ್ಟಿಗುಂದ ಮಹದೇವು ಅವರ ಮಿಥುನ ಪಕ್ಷಿಗಳು ಕೃತಿಯಲ್ಲಿ ಅಂತಹ ಪದಸಾಲುಗಳನ್ನು ಕಾಣಬಹುದು’ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ADVERTISEMENT

ಕವಿತೆಗಳಲ್ಲಿನ ವಿಶೇಷತೆಗಳನ್ನು ದೀರ್ಘವಾಗಿ ವಿವರಿಸಿದ ಸಿದ್ಧರಾಮಯ್ಯ ಆಕೃತಿಗಳ ಸರಳ ವ್ಯಾಖ್ಯಾನ ಕವಿತೆಯನ್ನು ಉದಾಹರಿಸುತ್ತಾ, ‘ಬಹುಶಃ ಯಾವ ಪಂಡಿತ ಕವಿಯೂ ರೇಖಾಗಣಿತದ ಸಂಕೇತಗಳನ್ನು ಬಳಸಿಕೊಂಡು ಈ ಬಗೆಯ ಕವಿತೆಯೊಂದನ್ನು ರಚಿಸಿಲ್ಲ. ಬಿಂದು, ವಕ್ರರೇಖೆ, ಸರಳರೇಖೆ ಇತ್ಯಾದಿ ಇಪ್ಪತ್ತೆರಡು ರೇಖಾಗಣಿತದ ಸಂಕೇತಗಳನ್ನು ಕಾವ್ಯದೊಳಗೆ ತಂದು ಹೆಣ್ಣಿನ ಚಿತ್ರವೊಂದನ್ನು ಕಟ್ಟಿಕೊಟ್ಟಿರುವ ಅವರ ಪ್ರತಿಭೆಗೆ ಸಲಾಂ’ ಎಂದು ಶ್ಲಾಘಿಸಿದರು.

ಸಮಾಜ ಕೇಂದ್ರಿತವಾಗಲಿ: ‘ಭಾಷಾ ಅಸ್ಮಿತೆಯಿಂದ ಮಹದೇವು ಅವರು ಸಮೃದ್ಧ ಕಾವ್ಯ ರಚಿಸಿದ್ದಾರೆ. ಮುಂದಿನ ದಿನಗಳಲ್ಲಿ ಅವರು ವ್ಯಕ್ತಿ ಕೇಂದ್ರಿತ ನೆಲೆಯಿಂದ ಸಮಾಜದ ಆಗುಹೋಗುಗಳನ್ನು ಕೇಂದ್ರವಾಗಿಸಿಕೊಂಡು ಕಾವ್ಯ ರಚಿಸುವಂತಾಗಲಿ. ಕವಿಯಾದವನು ಸಮಾಜಕ್ಕೆ ಮುಖಾಮುಖಿಯಾಗಿ ಕಾವ್ಯ ರಚಿಸಿದಾಗ ಮಾತ್ರ ಪರಿಪೂರ್ಣನಾಗುತ್ತಾನೆ’ ಎಂದು ಕಿವಿಮಾತು ಹೇಳಿದರು.

ಕೃತಿ ಪರಿಚಯಿಸಿದ ಕವಿ ಅರುಣ್ ಕವಣಾಪುರ, ‘ಮಹದೇವ್ ಅವರು ತಮ್ಮ ಕೃತಿಯಲ್ಲಿ ಶೀಲ-ಅಶ್ಲೀಲದ ಹಂಗು ತೊರೆದು, ಧ್ಯಾನಸ್ಥ ಸ್ಥಿತಿ ಮತ್ತು ತಾಧ್ಯಾತ್ಮತೆಯನ್ನು ಮಿಳಿತಗೊಳಿಸಿ ಹದವಾದ ಕವಿತೆಗಳನ್ನು ಭಟ್ಟಿ ಇಳಿಸಿದ್ದಾರೆ. ಪ್ರತಿ ಕವಿತೆಯನ್ನು ಓದುತ್ತಿದ್ದಂತೆ ಅದರ ಅನುಭವವಾಗುತ್ತದೆ’ ಎಂದು ತಿಳಿಸಿದರು.

ದೀಕ್ಷಾ ಮತ್ತು ದೀಪ್ತಿ ಪೊನ್ನಾಚಿ ಅವರ ಶಿವತಾಂಡವ ನೃತ್ಯ ಗಮನ ಸೆಳೆಯಿತು. ಗಾಯಕರಾದ ಚಂದ್ರಾಜ್, ಶಿವವೆಂಕಟಯ್ಯ, ಹೊಳಸಾಲಯ್ಯ ಅವರು ಮಹದೇವು ಅವರ ಕವಿತೆಗಳಿಗೆ ಸಂಗೀತ ಸಂಯೋಜಿಸಿ ಹಾಡಿದರು.

ಆರ್.ಇ.ಎಸ್ ಆಡಳಿತ ಮಂಡಳಿ ಅಧ್ಯಕ್ಷ ಎಚ್.ಸಿ. ಶ್ರೀಕಂಠಯ್ಯ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ತಾಲ್ಲೂಕಿನ ವಿವಿಧ ಕ್ಷೇತ್ರಗಳ 10 ಸಾಧಕರನ್ನು ಸನ್ಮಾನಿಸಲಾಯಿತು. ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಕೀರಣಗೆರೆ ಜಗದೀಶ್, ಕತೆಗಾರ ಸ್ವಾಮಿ ಪೊನ್ನಾಚಿ, ರಾಮನಗರ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಬಿ.ಟಿ. ನಾಗೇಶ್, ಮಾಜಿ ಅಧ್ಯಕ್ಷ ಬಿ.ಟಿ. ಚಿಕ್ಕಪುಟ್ಟೆಗೌಡ ಇದ್ದರು. ಉಪನ್ಯಾಸಕ ತುಳಸಿರಾಮ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು. 

ಅನುಕರಣೆಯ ಕಾವ್ಯಕ್ಕೆ ಆಯಸ್ಸು ಕಮ್ಮಿ. ಅದು ಮೇರು ಕವಿಗಳದ್ದೇ ಆಗಿದ್ದರೂ ಕೆಲವೇ ಕವಿತೆಗಳಿಗೆ ಸೀಮಿತವಾಗಿ ಬರವಣಿಗೆಯೇ ನಿಂತು ಹೋಗುತ್ತದೆ. ತನ್ನೊಳಗೆ ಅಂತರ್ಗತವಾಗಿರುವ ಶೈಲಿಯಲ್ಲಿ ಬರೆಯಬಲ್ಲವನು ಮಾತ್ರ ಕಾವ್ಯ ಜಗತ್ತಿನಲ್ಲಿ ಗಟ್ಟಿಯಾಗಿ ನಿಲ್ಲಬಲ್ಲ
– ಎಸ್.ಜಿ. ಸಿದ್ದರಾಮಯ್ಯ ವಿಮರ್ಶಕ
ನಾನು ಹೆಚ್ಚು ಓದಿಕೊಂಡವನಲ್ಲ. ಯಾವುದೋ ಘಳಿಗೆಯಲ್ಲಿ ಉಂಟಾಗುವ ನನ್ನೊಳಗಿನ ತುಮುಲಗಳಿಗೆ ಪದಗಳ ಮಾಲೆ ಕಟ್ಟುತ್ತೇನೆ. ಅದು ಕಾವ್ಯವೆಂದು ಪರಿಗಣಿತವಾಗಿ ಈ ಬಗೆಯ ವಿಶ್ಲೇಷಣೆ ಮೆಚ್ಚುಗೆಗೆ ಒಳಗಾಗುತ್ತದೆ ಎಂಬ ಯಾವ ಕಲ್ಪನೆಯೂ ಇರುವುದಿಲ್ಲ
– ಜಿ.ಡಿ. ಮಹದೇವ್ ಗಟ್ಟಿಗುಂದ ಕವಿ

‘ಪ್ರಾಸಕ್ಕಾಗಿ ತ್ರಾಸಪಡಬಾರದು’

‘ಪದಗಳೊಡನೆ ಆಟವಾಡುತ್ತ ಕಾವ್ಯ ಕಟ್ಟುತ್ತಿದ್ದ ಪೂರ್ವಸೂರಿಗಳನ್ನು ನಾವು ನೆನಪಿಸಿಕೊಳ್ಳಬೇಕಿದೆ. ಅವರ ಕಾವ್ಯಗಳನ್ನು ಓದಿ ಮನನ ಮಾಡಿಕೊಂಡು ತಮ್ಮ ಕವಿತೆಗಳು ಹೇಗಿರಬೇಕೆಂಬ ನಿಲುವಿಗೆ ಬರಬೇಕಾಗುತ್ತದೆ. ಪ್ರಾಸಕ್ಕಾಗಿ ತ್ರಾಸಪಡಬಾರದು. ಅದರ ಬಳಕೆ ಹೇಗಿರಬೇಕೆಂದರೆ ‘ದುಶ್ಯಂತನ ಬರವಿಗೆ ಆಮೇಲಿನ ಮರವಿಗೆ ಕಾದು ಕುಂತಳೆ ನಿಂತಳೆ ಶಕುಂತಳೆ’ ಎಂಬ ವೈ.ಎನ್.ಕೆ ಅವರ ಸಾಲುಗಳಂತಿರಬೇಕು. ಇಡೀ ಪುರಾಣದ ಕತೆ ಮತ್ತು ಸ್ತ್ರೀ ಸಂವೇದನೆಗಳನ್ನು ಅಡಕಗೊಳಸಿದ ಈ ಬಗೆಯ ಕಾವ್ಯ ಬರುತ್ತಿದೆಯೇ ಎಂಬುದರ ಆತ್ಮಾವಲೋಕನ ಮಾಡಿಕೊಳ್ಳಬೇಕು. ಮಹದೇವ್ ಅವರ ಮಿಥುನ ಪಕ್ಷಿಗಳು ಸಹ ಅಂತಹ ಸಾಲಿಗೆ ಸೇರುವ ಗಟ್ಟಿ ಕೃತಿ’ ಎಂದು ಪ್ರಾಸ್ತಾವಿಕ ಮಾತುಗಳನ್ನಾಡಿದ ಜಾನಪದ ವಿದ್ವಾಂಸ ಡಾ. ಎಂ. ಬೈರೇಗೌಡ ಅಭಿಪ್ರಾಯಪಟ್ಟರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.