ರಾಮನಗರದ ಕೆ.ಪಿ. ದೊಡ್ಡಿಯ ಶಾಂತಲಾ ಚಾರಿಟೇಬಲ್ ಟ್ರಸ್ಟ್ ತನ್ನ 20ನೇ ವಾರ್ಷಿಕೋತ್ಸವದ ಪ್ರಯುಕ್ತ ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಹಮ್ಮಿಕೊಂಡಿದ್ದ ನೃತ್ಯ ಬಾಗಿನ ಕಾರ್ಯಕ್ರಮವನ್ನು ಗಣ್ಯರು ಉದ್ಘಾಟಿಸಿದರು.
ರಾಮನಗರ: ‘ಕಲೆ ಮತ್ತು ಕಲಾವಿದರಿಗೆ ಯಾವುದೇ ಗಡಿಗಳಿಲ್ಲ. ರಾಮನಗರ ಜಿಲ್ಲೆಯಲ್ಲಿ ಜನ್ಮ ತಾಳಿದ ಶಾಂತಲಾ ಚಾರಿಟೇಬಲ್ ಟ್ರಸ್ಟ್ ಸಹ ಗಡಿ ಮೀರಿ, ತನ್ನದೇ ಸಾಂಸ್ಕೃತಿಕ ಚಹರೆಯನ್ನು ರಾಜ್ಯದಲ್ಲಿ ಮೂಡಿಸಿದೆ. ಅದಕ್ಕೆ ಈ ನೃತ್ಯ ಬಾಗಿನವೇ ಸಾಕ್ಷಿ. ಕಲೆಯು ಮನುಷ್ಯನನ್ನು ಚಿಂತನೆಗೆ ಹಚ್ಚುತ್ತಲೇ ಅವನೊಳಗೆ ಬದಲಾವಣೆ ತರುವ ಸಾಮರ್ಥ್ಯ ಹೊಂದಿದೆ’ ಎಂದು ರಂಗಕರ್ಮಿ ಮಾಲತೇಶ ಬಡಿಗೇರ ಮೆಚ್ಚುಗೆ ವ್ಯಕ್ತಪಡಿಸಿದರು.
ಶಾಂತಲಾ ಚಾರಿಟೇಬಲ್ ಟ್ರಸ್ಟ್ ಮತ್ತು ಶಾಂತಲಾ ಕಲಾ ಕೇಂದ್ರ ತನ್ನ ಇಪ್ಪತ್ತನೇ ವಾರ್ಷಿಕೋತ್ಸವದ ಅಂಗವಾಗಿ, ಬೆಂಗಳೂರಿನ ಕಲಾಕ್ಷೇತ್ರದಲ್ಲಿ ಇತ್ತೀಚೆಗೆ ಹಮ್ಮಿಕೊಂಡಿದ್ದ ‘ನೃತ್ಯ ಬಾಗಿನ’ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ‘ಗ್ರಾಮೀಣ ಭಾಗದಲ್ಲಿ ಸಾಂಸ್ಕೃತಿಕ ಸಂಸ್ಥೆ ಕಟ್ಟಿ, ಇಪ್ಪತ್ತು ವರ್ಷ ನಿರಂತರವಾಗಿ ಕಾರ್ಯಕ್ರಮಗಳನ್ನು ಆಯೋಜಿಸಿಕೊಂಡು ಬರುವುದು ಸಾಮಾನ್ಯವಲ್ಲ’ ಎಂದರು.
ಹಿರಿಯ ಪತ್ರಕರ್ತ ಸು.ತ. ರಾಮೇಗೌಡ, ‘ಕವಿತಾ ರಾವ್ ಅವರ ಶಾಂತಲಾ ಟ್ರಸ್ಟ್ ಕಲೆಯನ್ನು ಪೋಷಿಸುವ ಜೊತೆಗೆ, ಕಲಾವಿದರನ್ನು ಸಹ ಬೆಳೆಸಿದೆ. ಕಲೆಯು, ರಂಜನೆ ಜೊತೆಗೆ ಸಮಾಜದ ಅಂಕುಡೊಂಕುಗಳಿಗೂ ಕನ್ನಡಿ ಹಿಡಿಯುತ್ತದೆ’ ಎಂದು ಅಭಿಪ್ರಾಯಪಟ್ಟರು.
ಪ್ರಾಸ್ತಾವಿಕ ಮಾತುಗಳನ್ನಾಡಿದ ಟ್ರಸ್ಟ್ ಕಾರ್ಯದರ್ಶಿ ಕವಿತಾ ರಾವ್, ‘ಹಿತೈಷಿಗಳ ಮಾರ್ಗದರ್ಶನದಲ್ಲಿ ಶುರುವಾದ ಟ್ರಸ್ಟ್, ಎರಡು ದಶಕದಿಂದ ಕಲಾ ಸೇವೆ ಮಾಡುತ್ತಾ ಬಂದಿದೆ. ರಾಜ್ಯ–ರಾಷ್ಟ್ರೀಯ ಮಟ್ಟದವರೆಗೆ ಕಾರ್ಯಕ್ರಮಗಳನ್ನು ಮಕ್ಕಳು ನಡೆಸಿಕೊಟ್ಟಿದ್ದಾರೆ. ಕಲೆಯು ನೆಮ್ಮದಿ, ಆರೋಗ್ಯದ ಜೊತೆಗೆ ಹಣವನ್ನು ಸಹ ಕೊಡುತ್ತದೆ’ ಎಂದರು.
‘ನನ್ನ ಮಕ್ಕಳು ಕಲೆಯಿಂದ ದುಡಿದ ಹಣದಿಂದ ನಮ್ಮೂರಿನಲ್ಲಿ ದಾರಿದೀಪ ವೃದ್ಧಾಶ್ರಮ ಆರಂಭಿಸಿ ವಯಸ್ಕರಿಗೆ ಆಸರೆಯಾಗಿದ್ದಾರೆ. ಸ್ಥಳೀಯ ಸರ್ಕಾರಿ ಶಾಲೆಯನ್ನು ದತ್ತು ಪಡೆದು ಪೋಷಿಸುತ್ತಿದ್ದಾರೆ. ಸಾಂಸ್ಕೃತಿಕ ಕಾರ್ಯಕ್ರಮಗಳಿಗಾಗಿ ‘ತಾನಿನಾ-ರಂಗದಂಗಳ’ಕ್ಕೆ ಕಲಾವಿದರನ್ನು ಕರೆಯಿಸಿ ಗೌರವ ಸಲ್ಲಿಸಲಾಗುತ್ತಿದೆ’ ಎಂದು ಹೇಳಿದರು.
ಪ್ರಶಸ್ತಿ ಪ್ರದಾನ: ನೃತ್ಯಗುರು ಡಾ. ಸುಪರ್ಣ ವೆಂಕಟೇಶ್, ಬಾಲಾ ವಿಶ್ವನಾಥ್ ಹಾಗೂ ಸ್ನೇಹ ಕಪ್ಪಣ್ಣ ಅವರಿಗೆ ಗಣ್ಯರು ‘ನಾಟ್ಯರಾಣಿ ಶಾಂತಲಾ’ ಪ್ರಶಸ್ತಿ ಪ್ರದಾನ ಮಾಡಿದರು. ಕೇಂದ್ರದ ವಿದ್ಯಾರ್ಥಿಗಳು ಕಾವ್ಯಾ ರಾವ್ ಮತ್ತು ಚಿತ್ರಾ ರಾವ್ ಮಾರ್ಗದರ್ಶನದಲ್ಲಿ ಪ್ರದರ್ಶಿಸಿದ ನೃತ್ಯ ಗಮನ ಸೆಳೆಯಿತು. ನೃತ್ಯಗುರು ಡಾ. ಎ.ಎನ್. ಸುಧೀರ್, ಹೇಮಾದ್ರಿ ಸ್ಟುಡಿಯೊ ಸಂಸ್ಥಾಪಕ ಪ್ರಜ್ವಲ್ ಗೌಡ, ಟ್ರಸ್ಟ್‌ನ ಮಹೇಶ್ ಹಾಗೂ ಇತರರು ಇದ್ದರು. ರಾಜಶೇಖರ್ ನಿರೂಪಣೆ ಮಾಡಿದರು.
ಸಾಂಸ್ಕೃತಿಕ ಕ್ಷೇತ್ರದಲ್ಲಿ ತೊಡಗಿಸಿಕೊಂಡು ಶಾಂತಲಾ ಚಾರಿಟೇಬಲ್ ಟ್ರಸ್ಟ್ ಕಲಾ ಸೇವೆ ಮಾಡುತ್ತಿರುವವರನ್ನು ಗುರುತಿಸಿ ತನ್ನ ವಾರ್ಷಿಕೋತ್ಸವ ಸಮಾರಂಭದಲ್ಲಿ ಪ್ರಶಸ್ತಿ ನೀಡಿ ಗೌರವಿಸಿರುವುದು ಶ್ಲಾಘನೀಯಶ್ರೀನಿವಾಸ್ ಜಿ. ಕಪ್ಪಣ್ಣ ರಂಗಕರ್ಮಿ
‘ಜಿಲ್ಲೆಗೆ ಹೆಮ್ಮೆ ತಂದ ಸಹೋದರಿಯರು’
ಅಧ್ಯಕ್ಷತೆ ವಹಿಸಿದ್ದ ಜನ ಜಾಗೃತಿ ವೇದಿಕೆ ಅಧ್ಯಕ್ಷ ಕೆ. ಶೇಷಾದ್ರಿ ಶಶಿ ‘ರಾಮನಗರದ ಸಾಂಸ್ಕೃತಿಕ ಹಿರಿಮೆಯನ್ನು ಸಹೋದರಿಯರಾದ ಕಾವ್ಯಾ ರಾವ್ ಮತ್ತು ಚಿತ್ರಾ ರಾವ್ ರಾಜ್ಯದಾದ್ಯಂತ ಪಸರಿಸಿ ಜಿಲ್ಲೆಗೆ ಕೀರ್ತಿ ತಂದಿದ್ದಾರೆ. ಇದೀಗ ಅವರೇ ಹಲವರನ್ನು ಬೆಳೆಸುವ ಮಟ್ಟಕ್ಕೆ ಬೆಳೆದಿದ್ದಾರೆ. ಹಿರಿಯರ ಕಾಳಜಿ ಸಂದೇಶದೊಂದಿಗೆ ಚಿತ್ರಾ ರಾವ್ ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ಏಕಾಂಗಿಯಾಗಿ ಬೈಕ್ ಯಾನ ಕೈಗೊಂಡು ಜಾಗೃತಿ ಮೂಡಿಸಿ ದೇಶದ ಗಮನ ಸೆಳೆದರು. ಅವರ ಕುಟುಂಬದ ಕಲಾ ಹಾಗೂ ಸಾಮಾಜಿಕ ಸೇವೆಗೆ ದೇವರು ಮತ್ತಷ್ಟು ಶಕ್ತಿ ತುಂಬಲಿ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.