
ಚನ್ನಪಟ್ಟಣ: ನಗರದ ಹೃದಯ ಭಾಗದಲ್ಲಿರುವ ಶೆಟ್ಟಿಹಳ್ಳಿ ಕೆರೆಯ ಪುನಶ್ಚೇತನ ಕಾಮಗಾರಿಗೆ ಗ್ರಹಣ ಹಿಡಿದಿದೆ. ₹1.25 ಕೋಟಿ ವೆಚ್ಚದಲ್ಲಿ ಅಭಿವೃದ್ಧಿ ಕಾಮಗಾರಿ ಆರಂಭಗೊಂಡ ಎರಡು ತಿಂಗಳಿನಲ್ಲೇ ಸ್ಥಗಿತಗೊಂಡಿದೆ.
ಕಳೆದ ವರ್ಷ ಜುಲೈ 14ರಂದು ಜಿಲ್ಲಾಧಿಕಾರಿ ಯಶವಂತ್ ವಿ. ಗುರುಕರ್ ಹಾಗೂ ಶಾಸಕ ಸಿ.ಪಿ. ಯೋಗೇಶ್ವರ್ ಸಮ್ಮುಖದಲ್ಲಿ ಕೆರೆ ಪುನಶ್ಚೇತನ ಕಾಮಗಾರಿಗೆ ಚಾಲನೆ ನೀಡಲಾಗಿತ್ತು.
ಕೆರೆಯಲ್ಲಿದ್ದ ಜೋಂಡು ತೆರವು, ಕೊಳಚೆ ನೀರು ಸ್ವಚ್ಛಗೊಳಿಸಿ ಕೆರೆ ಸುತ್ತಲೂ ಉದ್ಯಾನ ನಿರ್ಮಾಣ ಹಾಗೂ ಕೆರೆಯಲ್ಲಿ ಬೋಟಿಂಗ್ ವ್ಯವಸ್ಥೆ ಮಾಡುವ ಮೂಲಕ ಪ್ರವಾಸಿ ತಾಣದಂತೆ ಮಾಡಲು ಯೋಜನೆ ರೂಪಿಸಲಾಗಿತ್ತು.
ಹುಸಿಯಾದ ಭರವಸೆ:
ನಗರಸಭೆ ಹಾಗೂ ಕಂಪನಿಯೊಂದರ ಸಿಎಸ್‌ಆರ್ ಅನುದಾನದಲ್ಲಿ ಲೇಕ್‌ಮ್ಯಾನ್ ಖ್ಯಾತಿಯ ಕೊಪ್ಪಳ ಮೂಲದ ಆನಂದ್ ನೇತೃತ್ವದಲ್ಲಿ ಕೆರೆ ಪುನಶ್ಚೇತನ ಕಾಮಗಾರಿ ಆರಂಭವಾಗಿತ್ತು. ಒಂದು ತಿಂಗಳಲ್ಲಿ ಕಾಮಗಾರಿ ಪೂರ್ಣಗೊಳಿಸುವ ಭರವಸೆಯೊಂದಿಗೆ ಕಾಮಗಾರಿ ಶುರುವಾಗಿತ್ತು.
ಎರಡು ತಿಂಗಳು ಬಿರುಸಿನಿಂದ ಕಾಮಗಾರಿ ನಡೆಯಿತು. ಕೆರೆ ಪುನಶ್ಚೇತನಕ್ಕೆ ಚಾಲನೆ ನೀಡಿದ ದಿನದಿಂದಲೇ ಜೆಸಿಬಿ, ಹಿಟಾಚಿ, ಟ್ರ್ಯಾಕ್ಟರ್ ಸೇರಿದಂತೆ ವಾಹನಗಳ ಸದ್ದು ಕೆರೆ ಆವರಣದಲ್ಲಿ ಕೇಳಿಬಂತು. ಆದರೆ, ಇದೀಗ ಕಾಮಗಾರಿ ಏಕಾಏಕಿ ಸ್ಥಗಿತವಾಗಿದೆ. ವಾಹನಗಳು ಸೇರಿದಂತೆ ಕಾರ್ಮಿಕರು ಸಹ ಜಾಗ ಖಾಲಿ ಮಾಡಿದ್ದಾರೆ.
ಮಳೆಗಾಲದ ನೆಪ:
ನಾಲ್ಕು ತಿಂಗಳಾದರೂ ಮತ್ತೆ ಕಾಮಗಾರಿ ಆರಂಭವಾಗಿಲ್ಲ. ಆರಂಭವಾಗುವ ಲಕ್ಷಣವೂ ಕಾಣಿಸುತ್ತಿಲ್ಲ. ಮಳೆಗಾಲ ಆರಂಭವಾದ ಕಾರಣ ಕಾಮಗಾರಿ ನಿಲ್ಲಿಸಲಾಗಿದೆ. ಸ್ಪಲ್ಷ ದಿನಗಳ ಬಳಿಕ ಕಾಮಗಾರಿ ಪ್ರಾರಂಭಿಸುತ್ತೇವೆ ಎಂದು ನಗರಸಭೆ ಅಧಿಕಾರಿಗಳು ಸಬೂಬು ಹೇಳಿದ್ದರು.
ಮಳೆಗಾಲ ನಿಂತು ತಿಂಗುಳುಗಳೆ ಕಳೆದಿದ್ದರೂ, ಕಾಮಗಾರಿ ಯಾಕೆ ಆರಂಭಿಸಿಲ್ಲ ಎಂದು ಸಾರ್ವಜನಿಕರು ಪ್ರಶ್ನಿಸುತ್ತಿದ್ದಾರೆ. ಕೆಲಸ ಸ್ಥಗಿತದಿಂದ ಮತ್ತೆ ಕೊಳಚೆ ನೀರು ಕೆರೆಯ ಅಂಗಳದಲ್ಲಿ ನಿಲ್ಲಲಾರಂಭಿಸಿದೆ. ಜೋಂಡು ಮತ್ತೆ ಬೆಳೆಯಲಾರಂಭಿಸಿದೆ. ಹಾವು ಹಲ್ಲಿಗಳು ಸೇರಿಕೊಳ್ಳುತ್ತಿವೆ. ಸೊಳ್ಳೆ ಕಾಟ ಹೆಚ್ಚಾಗಿದ್ದು, ಈ ಭಾಗದ ನಿವಾಸಿಗಳ ನಿದ್ದೆಗೆಡಿಸಿದೆ.
ನಗರದ ಮಧ್ಯಭಾಗದಲ್ಲಿ ಕೊಳಚೆ ನೀರು ತುಂಬಿಕೊಂಡು, ಜೋಂಡು ಬೆಳೆಸಿಕೊಂಡು, ಹಾವು ಹಲ್ಲಿಗಳ ಆವಾಸಸ್ಥಾನವಾಗಿ ದುರ್ವಾಸನೆ ಬೀರುತ್ತಿದ್ದ ಶೆಟ್ಟಿಹಳ್ಳಿ ಕೆರೆಯ ಪುನಶ್ಚೇತನ ಮಾಡಲು ನಗರಸಭೆ ವತಿಯಿಂದ ಯೋಜನೆ ರೂಪಿಸಿ ಕಾಮಗಾರಿ ಆರಂಭವಾದಾಗ ಈ ಭಾಗದ ನಾಗರಿಕರು ಸಂತಸಗೊಂಡಿದ್ದರು.
ಕೆರೆ ಅಂಗಳ ಸುತ್ತಮುತ್ತ ಒತ್ತುವರಿಯಾಗಿದ್ದ ಕಾರಣ, ಅದಲ್ಲೆವೂ ತೆರವಾಗಿ ಸುಂದರ ಪರಿಸರವೊಂದು ನಿರ್ಮಾಣವಾಗುತ್ತದೆ ಎಂಬ ನಂಬಿಕೆ ಮೂಡಿತ್ತು. ಆದರೆ ಈಗ ಅದು ಹುಸಿಯಾದಂತಾಗಿದೆ. ಕಾಮಗಾರಿ ನಿಂತು ನಾಲ್ಕು ತಿಂಗಳು ಕಳೆಯುತ್ತಿದ್ದರೂ ನಗರಸಭೆ ಅಧಿಕಾರಿಗಳು ಈ ಬಗ್ಗೆ ಎಲ್ಲೂ ಸೊಲ್ಲೆತ್ತುತ್ತಿಲ್ಲ ಎಂದು ಇಲ್ಲಿನ ನಿವಾಸಿಗಳು ನೋವು ತೋಡಿಕೊಂಡಿದ್ದಾರೆ.
ಸ್ಥಳೀಯ ನಗರಸಭೆ ಅಧಿಕಾರಿಗಳು, ಶಾಸಕರು ಈ ಬಗ್ಗೆ ಶೀಘ್ರ ಗಮನಹರಿಸಿ ಕೆರೆ ಪುನಶ್ಚೇತನ ಕಾಮಗಾರಿಯನ್ನು ಪುನರಾರಂಭಿಸಬೇಕು. ಈ ಭಾಗದಲ್ಲಿ ವಾಸಿಸುವ ನಮ್ಮ ಬಹುದಿನಗಳ ಸಮಸ್ಯೆಯನ್ನು ಬಗೆಹರಿಸಬೇಕು. ಕೆರೆಯ ಪುನಶ್ಚೇತನವಾಗಿ ಉತ್ತಮ ಪರಿಸರ ನಿರ್ಮಾಣವಾಗಬೇಕು ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.
‘ಡಿ.ಸಿ ಶಾಸಕರು ಗಮನ ಹರಿಸಲಿ’
ಕೆರೆ ಪುನಶ್ಚೇತನ ಮಾಡುತ್ತೇವೆ ಎಂದು ಕೆರೆಯ ಅಂಗಳದಲ್ಲಿದ್ದ ಕೊಳಚೆ ಮಣ್ಣನ್ನು ತೆರವು ಮಾಡಿದ್ದು ಬಿಟ್ಟರೆ ಹೇಳಿಕೊಳ್ಳುವಂತಹ ಅಭಿವೃದ್ಧಿ ಕೆಲಸ ಆಗಿಲ್ಲ. ಕಾಮಗಾರಿ ಜವಾಬ್ದಾರಿ ಹೊತ್ತಿರುವ ಅಧಿಕಾರಿಗಳು ಕಾಮಗಾರಿ ಸ್ಥಗಿತಗೊಂಡಿರುವ ಬಗ್ಗೆ ಸಮರ್ಪಕ ಉತ್ತರ ನೀಡುತ್ತಿಲ್ಲ. ಕಾಮಗಾರಿಗೆ ಚಾಲನೆ ನೀಡಿದ ಜಿಲ್ಲಾಧಿಕಾರಿ ಮತ್ತು ಶಾಸಕರು ಈ ಬಗ್ಗೆ ಗಮನ ನೀಡಬೇಕು. ಅನುದಾನ ಬಿಡುಗಡೆಯಾದ ಮೇಲೂ ಕಾಮಗಾರಿ ನಿಲ್ಲಿಸಲು ಕಾರಣವೇನು ಎಂಬುದನ್ನು ತಿಳಿಸಬೇಕು. ಶೀಘ್ರ ಕಾಮಗಾರಿ ಪುನರಾರಂಭಿಸಬೇಕು’ ಎಂದು ಸ್ಥಳೀಯರಾದ ಎನ್.ಎಂ. ಶಂಭೂಗೌಡ ಆಗ್ರಹಿಸಿದರು.
‘ಅನುಮಾನಕ್ಕೆ ಎಡೆಮಾಡಿದ ಸ್ಥಗಿತ’
ನಗರದ ಮಧ್ಯಭಾಗದಲ್ಲಿರುವ ಕೆರೆಯೊಂದು ಒತ್ತುವರಿ ತನ್ನ ಸ್ವರೂಪ ಕಳೆದುಕೊಳ್ಳುತ್ತಿದೆ. ಇದರ ನಡುವೆಯೇ ಕೆರೆ ಪುನಶ್ಚೇತನ ಕಾಮಗಾರಿ ಆರಂಭಿಸಿ ಸ್ಥಗಿತಗೊಳಿಸಿರುವುದು ಅನುಮಾನಕ್ಕೆ ಕಾರಣವಾಗಿದೆ. ಇದನ್ನು ನೋಡಿಕೊಂಡು ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಸುಮ್ಮನಿರುವುದರಲ್ಲಿ ಅರ್ಥವಿಲ್ಲ. ಒಂದು ತಿಂಗಳಲ್ಲಿ ಕಾಮಗಾರಿ ಪೂರ್ಣ ಮಾಡುವ ಭರವಸೆ ನೀಡಿದ್ದ ಅಧಿಕಾರಿಗಳು ಈಗ ಏನೂ ಗೊತ್ತಿಲ್ಲದವರಂತೆ ಇದ್ದಾರೆ. ಕಾಮಗಾರಿಗೆ ಬೇಕಿರುವ ಅನುದಾನವನ್ನು ನೀಡಿ ಶೀಘ್ರ ಕಾಮಗಾರಿ ಆರಂಭಿಸಬೇಕು. ಕೆರೆಯಿಂದಾಗಿ ಸ್ಥಳೀಯರು ಅನುಭವಿಸುತ್ತಿರುವ ತೊಂದರೆ ನಿವಾರಿಸಬೇಕು’ ಎಂದು ಸ್ಥಳೀಯ ನಿವಾಸಿ ಎಚ್.ಎಂ. ಚಿಕ್ಕಣ್ಣ ಒತ್ತಾಯಿಸಿದರು.