ADVERTISEMENT

ಚನ್ನಪಟ್ಟಣ | ಮಹಿಳೆಯರಿಂದ ‘ಶ್ರೀಕೃಷ್ಣ ಸಂಧಾನ’ ನಾಟಕ

​ಪ್ರಜಾವಾಣಿ ವಾರ್ತೆ
Published 9 ಮಾರ್ಚ್ 2024, 5:47 IST
Last Updated 9 ಮಾರ್ಚ್ 2024, 5:47 IST
ವಿಶ್ವ ಮಹಿಳಾ ದಿನಾಚರಣೆ ಪ್ರಯುಕ್ತ ಭಾವಿಪ ಕಣ್ವ ಶಾಖೆಯ ಮಹಿಳಾ ಸದಸ್ಯರು ನಡೆಸಿಕೊಡುವ ಶ್ರೀಕೃಷ್ಣ ಸಂಧಾನ ನಾಟಕ ಪ್ರದರ್ಶನದ ಕರಪತ್ರವನ್ನು ಭಾವಿಪ ಪದಾಧಿಕಾರಿಗಳು ಪ್ರದರ್ಶಿಸಿದರು
ವಿಶ್ವ ಮಹಿಳಾ ದಿನಾಚರಣೆ ಪ್ರಯುಕ್ತ ಭಾವಿಪ ಕಣ್ವ ಶಾಖೆಯ ಮಹಿಳಾ ಸದಸ್ಯರು ನಡೆಸಿಕೊಡುವ ಶ್ರೀಕೃಷ್ಣ ಸಂಧಾನ ನಾಟಕ ಪ್ರದರ್ಶನದ ಕರಪತ್ರವನ್ನು ಭಾವಿಪ ಪದಾಧಿಕಾರಿಗಳು ಪ್ರದರ್ಶಿಸಿದರು   

ಚನ್ನಪಟ್ಟಣ: ಹಿಂದೆ ಪೌರಾಣಿಕ ನಾಟಕಗಳಲ್ಲಿ ಪುರುಷರೇ ಸ್ತ್ರೀ ಪಾತ್ರಗಳನ್ನು ಅಭಿನಯಿಸುತ್ತಿದ್ದರು. ನಂತರ ಸ್ತ್ರೀ ಪಾತ್ರಕ್ಕೆ ಮಹಿಳಾ ಕಲಾವಿದರನ್ನು ಕರೆತರುವ ವಾಡಿಕೆ ಪ್ರಾರಂಭವಾಯಿತು. ಆದರೆ, ಪುರುಷ ಪಾತ್ರಗಳನ್ನು ಸ್ತ್ರೀಯರು ಅಭಿನಯಿಸುತ್ತಿದ್ದುದ್ದು ವಿರಳವಾಗಿತ್ತು. ಚನ್ನಪಟ್ಟಣದಲ್ಲಿ ಸಂಪೂರ್ಣ ಸ್ತ್ರೀಯರೇ ಪುರುಷ ಹಾಗೂ ಸ್ತ್ರೀ ಪಾತ್ರಗಳನ್ನು ಮಾಡುವ ಮೂಲಕ ಪೌರಾಣಿಕ ನಾಟಕ ಪ್ರದರ್ಶಿಸಿ ಇತಿಹಾಸ ಸೃಷ್ಟಿಸಲು ಮುಂದಾಗಿದ್ದಾರೆ.

ವಿಶ್ವ ಮಹಿಳಾ ದಿನಾಚರಣೆಯನ್ನು ವಿಶೇಷವಾಗಿ ಆಚರಿಸುವ ನಿಟ್ಟಿನಲ್ಲಿ ಭಾರತ್ ವಿಕಾಸ್ ಪರಿಷತ್ತಿನ ಕಣ್ವ ಶಾಖೆಯ ಮಹಿಳಾ ಸದಸ್ಯರು ಮಾರ್ಚ್ 10ರಂದು ಸಂಪೂರ್ಣ ಮಹಿಳೆಯರೇ ಪಾತ್ರಧಾರಿಗಳಾಗಿರುವ ‘ಶ್ರೀಕೃಷ್ಣ ಸಂಧಾನ’ ಪೌರಾಣಿಕ ನಾಟಕವನ್ನು ಅಭಿನಯಿಸಲು ಸಿದ್ಧತೆ ನಡೆಸಿದ್ದಾರೆ.

ನಗರದ ಕೊಲ್ಲಾಪುರದಮ್ಮ ದೇವಸ್ಥಾನದ ಆವರಣದಲ್ಲಿರುವ ಡಾ.ರಾಜ್ ಬಯಲು ರಂಗಮಂದಿರದಲ್ಲಿ ಅಂದು ನಡೆಯುವ ನಾಟಕಕ್ಕೆ ಕಳೆದ ನಾಲ್ಕು ಐದು ತಿಂಗಳಿನಿಂದ ನಾಟಕಕ್ಕೆ ಬೇಕಾದ ಪೂರ್ಣ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿರುವ ಮಹಿಳೆಯರು ನಾಟಕದ ಎಲ್ಲಾ ಪಾತ್ರಗಳನ್ನು ತಾವೇ ನಿರ್ವಹಿಸುವ ನಿಟ್ಟಿನಲ್ಲಿ ಕಠಿಣ ಪರಿಶ್ರಮ ಹಾಕುತ್ತಿದ್ದಾರೆ. ಸತತವಾಗಿ ಪ್ರತಿದಿನ ನಾಲ್ಕು ಐದು ಗಂಟೆಗಳ ಕಾಲ ಪಾತ್ರಗಳ ತರಬೇತಿ ಪಡೆಯುತ್ತಿದ್ದಾರೆ.

ADVERTISEMENT

ಭಾವಿಪದ ಮಹಿಳಾ ಸದಸ್ಯರಾಗಿರುವ ಗೃಹಿಣಿಯರು, ಶಿಕ್ಷಕಿಯರು, ಕಲಾವಿದರು, ವಿವಿಧ ಕ್ಷೇತ್ರಗಳಲ್ಲಿ ತೊಡಗಿಕೊಂಡಿರುವ ಮಹಿಳೆಯರು ಸೇರಿದಂತೆ ಸುಮಾರು 24 ಮಂದಿ ಕಲಾವಿದೆಯರು ನಾಟಕ ಪ್ರದರ್ಶಿಸಲಿದ್ದಾರೆ. 

ನಿರ್ದೇಶಕ ಆರ್. ಲೋಕೇಶ್ವರ್ ನಿರ್ದೇಶನದಲ್ಲಿ ಮೂಡಿಬರುತ್ತಿರುವ ಈ ಪೌರಾಣಿಕ ನಾಟಕಕ್ಕೆ ಮೂಲತಃ ರಂಗಭೂಮಿ ಕಲಾವಿದರಲ್ಲದ ಮಹಿಳೆಯರು ಪಾತ್ರಧಾರಿಗಳಾಗಿರುವುದು ವಿಶೇಷ. ಈಗಾಗಲೇ ರಂಗ ತಾಲೀಮ ಮುಗಿಸಿ ಶತಮಾನೋತ್ಸವ ಭವನದಲ್ಲಿ ಒಂದು ಸುತ್ತು ಪೂರ್ವಸಿದ್ಧತಾ ಪ್ರದರ್ಶನವನ್ನು ಪೂರ್ಣಗೊಳಿಸಿದ್ದಾರೆ. ಅಂದು ನಡೆಸಿಕೊಟ್ಟ ಪ್ರದರ್ಶನ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದ್ದು, ಮಾರ್ಚ್‌ 10ರಂದು ನಡೆಯುವ ನಾಟಕ ಪ್ರದರ್ಶನ ಹೆಚ್ಚಿನ ನಿರೀಕ್ಷೆ ಹುಟ್ಟಿಸಿದೆ.

ಚನ್ನಪಟ್ಟಣವು ಪೌರಾಣಿಕ ನಾಟಕ ಕಲಾವಿದರ ತವರೂರಾಗಿದ್ದು, ಕೊಲ್ಲಾಪುರದಮ್ಮ ದೇವಸ್ಥಾನದ ಆವರಣದಲ್ಲಿ ತಿಂಗಳಿಗೆ ಕನಿಷ್ಠ ನಾಲ್ಕು ಪೌರಾಣಿಕ ನಾಟಕಗಳ ಪ್ರದರ್ಶನ ಇರುತ್ತದೆ. ಇದಲ್ಲದೆ ಗ್ರಾಮೀಣ ಪ್ರದೇಶದಲ್ಲಿ ಅಲ್ಲಲ್ಲಿ ಪೌರಾಣಿಕ ನಾಟಕಗಳು, ಸಾಮಾಜಿಕ ನಾಟಕಗಳ ಪ್ರದರ್ಶನ ನಡೆಯುತ್ತಿರುತ್ತದೆ. ಆದರೆ ಮಹಿಳೆಯರೇ ಪಾತ್ರಧಾರಿಗಳಾಗಿ ಪೌರಾಣಿಕ ನಾಟಕ ಪ್ರದರ್ಶನ ಕೊಟ್ಟ ಉದಾಹರಣೆ ತಾಲ್ಲೂಕಿನಲ್ಲಿ ಇಲ್ಲ. ಈಗ ನಡೆಯುತ್ತಿರುವ ಮಹಿಳೆಯರ ಶ್ರೀಕೃಷ್ಣ ಸಂಧಾನ ನಾಟಕ ಇತಿಹಾಸ ಸೃಷ್ಟಿ ಮಾಡಲಿದೆ ಎನ್ನುವುದು ಭಾವಿಪ ಪದಾಧಿಕಾರಿಗಳ ಅಭಿಪ್ರಾಯ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.