ADVERTISEMENT

ಸಿದ್ಧರಾಮೇಶ್ವರ ಸ್ವಾಮಿ ಜಯಂತಿ

ಸಂಘಟಿತರಾಗಲು ಸಮುದಾಯಕ್ಕೆ ಶ್ರೀಗಳ ಸಲಹೆ

​ಪ್ರಜಾವಾಣಿ ವಾರ್ತೆ
Published 14 ಜನವರಿ 2022, 7:04 IST
Last Updated 14 ಜನವರಿ 2022, 7:04 IST
ಮಾಗಡಿ ತಾಲ್ಲೂಕಿನ ಸಿಡಗನಹಳ್ಳಿ ಸಿದ್ಧರಾಮೇಶ್ವರ ದೇವಾಲಯದಲ್ಲಿ ಭೋವಿ ಗುರುಪೀಠಾಧ್ಯಕ್ಷ ಇಮ್ಮಡಿ ಸಿದ್ಧರಾಮೇಶ್ವರ ಸ್ವಾಮೀಜಿ ಅವರು ಸಿದ್ಧರಾಮೇಶ್ವರ ಜಯಂತಿ ಅಂಗವಾಗಿ ಭಾವಚಿತ್ರ ವಿತರಿಸಿದರು
ಮಾಗಡಿ ತಾಲ್ಲೂಕಿನ ಸಿಡಗನಹಳ್ಳಿ ಸಿದ್ಧರಾಮೇಶ್ವರ ದೇವಾಲಯದಲ್ಲಿ ಭೋವಿ ಗುರುಪೀಠಾಧ್ಯಕ್ಷ ಇಮ್ಮಡಿ ಸಿದ್ಧರಾಮೇಶ್ವರ ಸ್ವಾಮೀಜಿ ಅವರು ಸಿದ್ಧರಾಮೇಶ್ವರ ಜಯಂತಿ ಅಂಗವಾಗಿ ಭಾವಚಿತ್ರ ವಿತರಿಸಿದರು   

ಮಾಗಡಿ: ‘ಸೊನ್ನಲಿಗೆಯಲ್ಲಿ ಕೆರೆ ಕಟ್ಟಿ ಜೀವಜಲದ ಸಂರಕ್ಷಣೆಗೆ ಶ್ರಮಿಸಿದ್ದ ಕಾಯಕಯೋಗಿ ಸಿದ್ಧರಾಮೇಶ್ವರರ ಆದರ್ಶಗಳು ಮುನುಕುಲದ ಏಳಿಗೆಗೆ ಸಹಕಾರಿಯಾಗಿವೆ’ ಎಂದು ಚಿತ್ರದುರ್ಗದ ಸಿದ್ಧರಾಮೇಶ್ವರ ಭೋವಿ ಗುರುಪೀಠದ ಅಧ್ಯಕ್ಷ ಇಮ್ಮಡಿ ಸಿದ್ಧರಾಮೇಶ್ವರ ಸ್ವಾಮೀಜಿ ತಿಳಿಸಿದರು.

ತಾಲ್ಲೂಕಿನ ಸಿಡಗನಹಳ್ಳಿ ಸಿದ್ಧರಾಮೇಶ್ವರ ದೇವಾಲಯದ ಆವರಣದಲ್ಲಿ ಬುಧವಾರ ನಡೆದ ಸಿದ್ಧರಾಮೇಶ್ವರ ಸ್ವಾಮಿ ಜಯಂತಿ ಅಂಗವಾಗಿ ಕಾಯಕ ಯೋಗಿ ಭಾವಚಿತ್ರ ವಿತರಿಸಿ ಅವರು ಮಾತನಾಡಿದರು.

ಭೋಮಿ ಸಮಾಜದವರು ಕೆರೆ, ಕಟ್ಟೆ, ಕೋಟೆ ಕೊತ್ತಲ, ಗುಡಿ ಗೋಪುರ, ಅರಮನೆ, ಗುರುಮನೆ, ಸೆರೆಮನೆ ನಿರ್ಮಾಣ ಸೇರಿದಂತೆ ವೀರಗಲ್ಲು, ಶಿಲಾಶಾಸನಗಳನ್ನು ಬರೆಯಲು ನೆರವಾಗಿದ್ದಾರೆ. ಜಲಾಶಯಗಳನ್ನು ಕಟ್ಟಿ ನಾಡಿನ ಏಳಿಗೆಗೆ ತಮ್ಮ ಜೀವನ ಸವೆಸಿದ್ದಾರೆ ಎಂದರು.

ADVERTISEMENT

ಆರೋಗ್ಯವಂತ ಮತ್ತು ಧೈರ್ಯವಂತ ಸಮುದಾಯ ನಮ್ಮದು. ನಮ್ಮ ಸಮಾಜದ ಕುಶಲಕರ್ಮಿಗಳನ್ನು ಗುರುತಿಸಿ ಶೌರ್ಯ ಪ್ರಶಸ್ತಿ ನೀಡಬೇಕು. ಭೋವಿ ಸಮಾಜದವರು ಪ್ರತಿಯೊಂದು ಮನೆಯಲ್ಲೂ ಸಿದ್ದರಾಮೇಶ್ವರರ ವಚನಗಳನ್ನು ನಿತ್ಯ ಓದಿಕೊಳ್ಳಬೇಕು. ಮಕ್ಕಳಿಗೆ ದೇಶ ಕಟ್ಟುವಲ್ಲಿ ಶ್ರಮಿಸಿ ಹುತಾತ್ಮರಾಗಿರುವ ಭೋವಿ ಸಮಾಜದ ಗಣ್ಯರ ಬಗ್ಗೆ ತಿಳಿಸಿ ಕೊಡಬೇಕು. ಸಂಘಟಿತರಾಗಿ ಸಮಾಜದಲ್ಲಿ ಮುಂದೆ ಬರಬೇಕು ಎಂದು ಸಲಹೆ ನೀಡಿದರು.

ಸಮಾಜದ ಮುಖಂಡರಾದ ಮಾಕಳಿ ರವಿ, ಸಿಡಗನಹಳ್ಳಿ ವೆಂಕಟೇಶ್‌, ಸೋಮೇಶ್ವರ ಕಾಲೊನಿ ನಾಗರಾಜು, ರಂಗನಾಥ ಸ್ವಾಮಿ ಭೋವಿ ಅರವಟಿಕೆ ಸಮಿತಿ ಅಧ್ಯಕ್ಷ ಎಚ್‌.ಆರ್‌. ವೆಂಕಟೇಶ್‌, ಗ್ರಾಮ ಪಂಚಾಯಿತಿ ಸದಸ್ಯೆ ಚಂದ್ರಕಲಾ ವೆಂಕಟೇಶ್‌, ಗುತ್ತಿಗೆದಾರರಾದ ಕೆಂಪರಾಜು, ನಂಜಪ್ಪ, ಶಂಕರ್‌, ಜಿ.ಪಂ. ಮಾಜಿ ಸದಸ್ಯೆ ಚಂದ್ರಮ್ಮ ನಂಜಯ್ಯ, ಚನ್ನಮ್ಮನಪಾಳ್ಯದ ಗಿರೀಶ್‌, ಕೋರಮಂಗಲದ ಶ್ರೀನಿವಾಸ್‌, ತಾಲ್ಲೂಕು ಭೋವಿ ಸಂಘದ ಅಧ್ಯಕ್ಷ ವೆಂಕಟರಮಣಪ್ಪ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.