ರಾಮನಗರ: ತಮ್ಮ ಕಾದಂಬರಿಗಳ ಮೂಲಕ ಓದುಗರನ್ನು ಸೆಳೆದಿಟ್ಟುಕೊಂಡಿದ್ದ ಖ್ಯಾತ ಕಾದಂಬರಿಕಾರ ಪ್ರೊ. ಎಸ್.ಎಲ್. ಭೈರಪ್ಪ ಅವರು, ಕನಕಪುರದಲ್ಲಿ 1999ರಲ್ಲಿ ಫೆ. 11ರಿಂದ 13ರವರೆಗೆ ಮೂರು ದಿನ ನಡೆದಿದ್ದ ಅಖಿಲ ಭಾರತ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷತೆ ವಹಿಸುವ ಮೂಲಕ, ಕನ್ನಡ ನುಡಿ ತೇರು ಎಳೆದಿದ್ದರು.
ಅಂದಿನ ಬೆಂಗಳೂರು ಗ್ರಾಮಾಂತರ ಜಿಲ್ಲೆಗೆ ಸೇರಿದ್ದ ಕನಕಪುರದಲ್ಲಿ ನಡೆದಿದ್ದ 67ನೇ ಸಮ್ಮೇಳನಾಧ್ಯತೆ ವಹಿಸಿದ್ದ ಅವರು, ಕನ್ನಡ ಸಾಹಿತ್ಯ ಪರಿಷತ್ತು ನೀಡಿದ್ದ ₹1 ಲಕ್ಷ ಗೌರವಧನವನ್ನು ನಯವಾಗಿಯೇ ಹಿಂದಿರುಗಿಸಿದ್ದರು. ‘ನನಗೆ ಈ ಹಣ ಬೇಡ. ಇದನ್ನು ಕನ್ನಡ ಸಾಹಿತ್ಯ ಪರಿಷತ್ತಿನ ಸಾಹಿತ್ಯ ಚಟುವಟಿಕೆಗಳಿಗೆ ಬಳಸಿ’ ಎಂದಿದ್ದರು.
ಸ್ನೇಹಿತನ ಮನೆಯಲ್ಲಿ ವಾಸ್ತವ್ಯ: ಸಮ್ಮೇಳನದ ಸಂದರ್ಭದಲ್ಲಿ ಕನಕಪುರವು ಈಗಿನಷ್ಟು ದೊಡ್ಡ ಪಟ್ಟಣವಾಗಿರಲಿಲ್ಲ. ಸಮ್ಮೇಳನದ ನೇತೃತ್ವ ವಹಿಸಿದ್ದ ಅಂದಿನ ಸಾರಿಗೆ ಸಚಿವ ಪಿ.ಜಿ.ಆರ್. ಸಿಂಧ್ಯಾ ಅವರು ಅತಿಥಿಗಳು ಹಾಗೂ ಸಾಹಿತಿಗಳಿಗೆ ಬೆಂಗಳೂರಿನಲ್ಲೇ ಉಳಿಯಲು ವ್ಯವಸ್ಥೆ ಮಾಡಿದ್ದರು.
‘ಭೈರಪ್ಪನವರು ಬೆಂಗಳೂರಿನಲ್ಲಿ ತಮಗೆ ವಾಸ್ತವ್ಯ ವ್ಯವಸ್ಥೆ ಬೇಡ ಎಂದಿದ್ದರು. ಬದಲಿಗೆ ತಮಗೆ ಪರಿಚಿತರಾಗಿದ್ದ ಕನಕಪುರದ ಕೋಟೆ ನಿವಾಸಿ ನಾಗರಾಜಪ್ಪ ಎಂಬುವರ ಮನೆಯಲ್ಲಿ ನಾಲ್ಕು ದಿನ ಸಾಮಾನ್ಯ ಅತಿಥಿಯಂತೆ ಉಳಿದು ಸರಳತೆ ಮೆರೆದಿದ್ದರು. ಅವರ ಆತ್ಮೀಯ ಸ್ನೇಹಿತರಾಗಿದ್ದ ಹಾ.ಮಾ. ನಾಯಕ್ ಅವರನ್ನು ಸಹ ತಮ್ಮೊಂದಿಗೆ ಉಳಿಸಿಕೊಂಡಿದ್ದರು’ ಎಂದು ಎಲ್ಲೇಗೌಡ ನೆನೆದರು.
ಒಮ್ಮತದ ಆಯ್ಕೆ
‘ಕನಕಪುರದಲ್ಲಿ ಸಾಹಿತ್ಯ ಸಮ್ಮೇಳನ ನಿಗದಿಯಾಗುತ್ತಿದ್ದಂತೆ ಅಧ್ಯಕ್ಷರು ಯಾರಾಗಬೇಕೆಂಬ ಪ್ರಶ್ನೆ ಎದುರಾಯಿತು. ಆಗ ಪರಿಷತ್ತಿನ ಕಾರ್ಯಕಾರಣಿ ಸಭೆಯಲ್ಲಿದ್ದವರು ಒಬ್ಬೊಬ್ಬ ಸಾಹಿತಿಗಳ ಹೆಸರು ಹೇಳತೊಡಗಿದರು. ಆಗ ನಾನು, ಎಸ್.ಎಲ್. ಬೈರಪ್ಪ ಅವರ ಹೆಸರು ಪ್ರಸ್ತಾಪಿಸಿದೆ. ಅದಕ್ಕೆ ಎಲ್ಲರೂ ಸಹಮತ ವ್ಯಕ್ತಪಡಿಸಿದರು’ ಎಂದು ಹೇಳಿದರು.
‘ಅಂದು ಸಮ್ಮೇಳನವು ಅತ್ಯಂತ ಯಶಸ್ವಿಯಾಗಲು ಭೈರಪ್ಪ ಅವರು ಸರ್ವಾಧ್ಯಕ್ಷರಾಗಿದ್ದು ಸಹ ಒಂದು ಕಾರಣ. ಮೂರು ದಿನಗಳ ಸಮ್ಮೇಳನಕ್ಕೆ 50 ಸಾವಿರಕ್ಕೂ ಹೆಚ್ಚು ಸಾಹಿತ್ಯಾಭಿಮಾನಿಗಳು ಸಾಕ್ಷಿಯಾಗಿದ್ದರು. ರಾಜ್ಯವಷ್ಟೇ ಅಲ್ಲದೆ ಹೊರ ರಾಜ್ಯಗಳಿಂದಲೂ ಬಂದಿದ್ದರು’ ಎಂದು ಮೆಲುಕು ಹಾಕಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.