ಹಾರೋಹಳ್ಳಿ: ಗ್ರಾಮದ ಮಾರಮ್ಮನ ಹಬ್ಬದಲ್ಲಿ ಭಾಗವಹಿಸಲು ತಮಗೂ ಸಮಾನ ಅವಕಾಶ ನೀಡಬೇಕು ಎಂದು ಕೇಳಿದ ತಾಲ್ಲೂಕಿನ ಬನವಾಸಿ ಗ್ರಾಮದ ದಲಿತರಿಗೆ ಸವರ್ಣೀಯರು ಸಾಮಾಜಿಕ ಬಹಿಷ್ಕಾರ ಹಾಕಿದ ಘಟನೆಗೆ ಸಂಬಂಧಿಸಿದಂತೆ, ದಲಿತರು ಹಾರೋಹಳ್ಳಿ ಪೊಲೀಸ್ ಠಾಣೆಗೆ ಏಳು ಮಂದಿ ವಿರುದ್ಧ ದೂರು ನೀಡಿ ಎರಡು ದಿನವಾದರೂ ಪ್ರಕರಣ ದಾಖಲಾಗಿಲ್ಲ.
ಗ್ರಾಮದ ಅಂಗಡಿಗಳಲ್ಲಿ ದಲಿತರಿಗೆ ದಿನಸಿ ಸಾಮಾನು ಕೊಡಬಾರದು, ಡೇರಿಗಳಲ್ಲಿ ಹಾಲು ಹಾಕಿಸಿಕೊಳ್ಳಬಾರದು ಮತ್ತು ನೀಡಬಾರದು, ಶುದ್ಧ ಕುಡಿಯುವ ನೀರು ಮುಟ್ಟಲು ಬಿಡಬಾರದು ಹಾಗೂ ಕೃಷಿ ಕೆಲಸಗಳಿಗೆ ದಲಿತರನ್ನು ಕರೆಯಬಾರದು ಎಂಬ ಷರತ್ತು ಹಾಕಿದ್ದ ಸವರ್ಣೀಯರು, ಉಲ್ಲಂಘಿಸಿದವರು ₹10 ಸಾವಿರ ದಂಡ ಕಟ್ಟಬೇಕು ಎಂದು ದಲಿತ ವ್ಯಕ್ತಿಯಿಂದಲೇ ಗ್ರಾಮದಲ್ಲಿ ಡಂಗೂರ ಸಾರಿಸಿದ್ದರು.
ಮೇ 18ರಂದು ನಡೆದಿದ್ದ ಘಟನೆ ಕುರಿತು, ತಹಶೀಲ್ದಾರ್ ಮತ್ತು ಪೊಲೀಸರಿಗೆ ದಲಿತರು ದೂರು ನೀಡಿ ಎರಡು ದಿನವಾದರೂ ಪ್ರಕರಣ ದಾಖಲಾಗಿಲ್ಲ. ವಿಷಯ ತಿಳಿದು ಗ್ರಾಮಕ್ಕೆ ದಲಿತ ಮುಖಂಡರು ಮಂಗಳವಾರ ಭೇಟಿ ನೀಡುತ್ತಿದ್ದಂತೆ, ಸಮಾಜ ಕಲ್ಯಾಣ ಇಲಾಖೆಯ ಕನಕಪುರ ತಾಲ್ಲೂಕಿನ ಸಹಾಯಕ ನಿರ್ದೇಶಕರು ಸಹ ಗ್ರಾಮಕ್ಕೆ ದೌಡಾಯಿಸಿ ದಲಿತರ ಅಹವಾಲು ಆಲಿಸಿದ್ದಾರೆ.
ಏನಿದು ಘಟನೆ?:
ಹಬ್ಬ ಆಚರಣೆ ಕುರಿತು ಬನವಾಸಿ, ಜುಟ್ಟೇಗೌಡನವಲಸೆ ಹಾಗೂ ವಡೇರಹಳ್ಳಿ ಗ್ರಾಮದ ಮುಖಂಡರ ಸಭೆ ನಡೆದಿತ್ತು. ಸಭೆಯಲ್ಲಿ ಭಾಗವಹಿಸಿದ್ದ ಸವರ್ಣೀಯ ಮುಖಂಡರು, ‘ಹಿಂದಿನಿಂದ ನಡೆದುಕೊಂಡು ಬಂದಿರುವಂತೆ ದಲಿತರು ಹಬ್ಬದಲ್ಲಿ ಭಾಗವಹಿಸಬಾರದು’ ಎಂದು ತಾಕೀತು ಮಾಡಿದ್ದರು.
ಅದಕ್ಕೆ ಆಕ್ಷೇಪಿಸಿದ್ದ ದಲಿತರು, ‘ಹೀಗೆ ಹೇಳುವುದು ಕಾನೂನಿಗೆ ವಿರುದ್ಧವಾಗುತ್ತದೆ. ನಾವು ಸಹ ನಿಮ್ಮೊಂದಿಗೆ ಸಾಮರಸ್ಯದಿಂದ ಹಬ್ಬದಲ್ಲಿ ಪಾಲ್ಗೊಳ್ಳಲು ಅವಕಾಶ ಕೊಡಿ’ ಎಂದಿದ್ದರು. ಇದರಿಂದ ಕೆರಳಿದ ಸವರ್ಣೀಯರು, ‘ಮಾದಿಗ ನನ್ನ ಮಕ್ಕಳಾ, ನಮಗೆ ಎದುರು ಮಾತನಾಡುತ್ತೀರಾ’ ಎಂದು ನಿಂದಿಸಿದ್ದರು. ಇದರಿಂದ ನೊಂದ ದಲಿತರು ಸಭೆಯಿಂದ ಹೊರನಡೆದಿದ್ದರು.
ಸಭೆ ಮುಗಿದ ಬಳಿಕ ಮೂರು ಗ್ರಾಮಗಳ ಸವರ್ಣೀಯ ಮುಖಂಡರು, ಬನವಾಸಿಯ 12 ದಲಿತ ಕುಟುಂಬಗಳಿಗೆ ಸಾಮಾಜಿಕ ಬಹಿಷ್ಕಾರ ಹಾಕಿದ್ದರು. ಬಳಿಕ ದಲಿತರು ಅದೇ ಗ್ರಾಮದ ತಾಲ್ಲೂಕು ಪಂಚಾಯಿತಿ ಮಾಜಿ ಸದಸ್ಯ ರವಿಕುಮಾರ್ ಸೇರಿದಂತೆ 7 ಸವರ್ಣೀಯ ಮುಖಂಡರ ವಿರುದ್ಧ ತಹಶೀಲ್ದಾರ್ ಮತ್ತು ಹಾರೋಹಳ್ಳಿ ಪೊಲೀಸ್ ಠಾಣೆಗೆ ದೂರು ಕೊಟ್ಟಿದ್ದರು.
ಸಾಮಾಜಿಕ ಬಹಿಷ್ಕಾರದ ಕುರಿತು ಈಗಾಗಲೇ ದೂರು ಕೊಟ್ಟಿದ್ದೇವೆ. ಗ್ರಾಮಕ್ಕೆ ಬುಧವಾರ ಪೊಲೀಸರು ಹಾಗೂ ಜಿಲ್ಲಾಮಟ್ಟದ ಅಧಿಕಾರಿಗಳು ಭೇಟಿ ನೀಡಲಿದ್ದಾರೆ. ಆಗ ಏನು ಬೆಳವಣಿಗೆಯಾಗಲಿದೆ ಎಂಬುದನ್ನು ನೋಡಿಕೊಂಡು ಮುಂದಿನ ನಡೆಯನ್ನು ನಿರ್ಧರಿಸಲಾಗುವುದು.ಗೋಪಾಲ್ ಬನವಾಸಿ, ಗ್ರಾಮಸ್ಥ
ಸಾಮಾಜಿಕ ಬಹಿಷ್ಕಾರ ಹಾಕಿರುವ ಗ್ರಾಮಕ್ಕೆ ಭೇಟಿ ನೀಡಿ ದಲಿತ ಸಮುದಾಯದವರ ಜೊತೆ ಸಭೆ ನಡೆಸಿದ್ದೇನೆ. ಅಲ್ಲಿನ ವಾಸ್ತವ ಸ್ಥಿತಿ ಕುರಿತು ಮೇಲಧಿಕಾರಿಗಳ ಗಮನಕ್ಕೆ ತಂದಿರುವೆ. ನಾಳೆ ಪೊಲೀಸರು ಹಾಗೂ ಹಿರಿಯ ಅಧಿಕಾರಿಗಳು ಗ್ರಾಮಕ್ಕೆ ಭೇಟಿ ನೀಡಲಿದ್ದಾರೆ –ಜೈಪ್ರಕಾಶ್, ಸಹಾಯಕ ನಿರ್ದೇಶಕ, ಸಮಾಜ ಕಲ್ಯಾಣ ಇಲಾಖೆ ಕನಕಪುರ
ಘಟನೆ ಕುರಿತು ಸಂಬಂಧಪಟ್ಟವರು ಬಂದು ಹಾರೋಹಳ್ಳಿ ಠಾಣೆಗೆ ದೂರು ಕೊಟ್ಟರೆ ತಕ್ಷಣ ಪ್ರಕರಣ ದಾಖಲಿಸಿಕೊಳ್ಳಲಾಗುವುದು. ಸಂತ್ರಸ್ತರು ಬಂದು ದೂರನ್ನೇ ನೀಡದಿದ್ದರೆ ನಾವು ಪ್ರಕರಣ ದಾಖಲಿಸಿಕೊಳ್ಳುವುದಾದರೂ ಹೇಗೆ?ಆರ್. ಶ್ರೀನಿವಾಸ ಗೌಡ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ
ದಲಿತರ ವಿರುದ್ಧ ಸಾಮಾಜಿಕ ಬಹಿಷ್ಕಾರ ಹಾಕಿದವರ ವಿರುದ್ಧ ದೂರು ಕೊಟ್ಟರೂ ಪೊಲೀಸರು ಪ್ರಕರಣ ದಾಖಲಿಸಿಕೊಳ್ಳದೆ ನಿರ್ಲಕ್ಷ್ಯ ತೋರಿದ್ದಾರೆ. ತಕ್ಷಣ ಪ್ರಕರಣ ದಾಖಲಿಸಿಕೊಂಡು ಕಾನೂನು ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದರೆ ಎಸ್‌ಪಿ ಕಚೇರಿ ಎದುರು ಪ್ರತಿಭಟಿಸಲಾಗುವುದು.ಎಂ. ನಾಗೇಶ್, ರಾಜ್ಯ ಪ್ರಧಾನ ಕಾರ್ಯದರ್ಶಿ, ಅಖಿಲ ಭಾರತ ಬಹುಜನ ಸಮಾಜ ಪಕ್ಷ
ದಲಿತ ಯುವಕರ ಮೇಲೆ ಸವರ್ಣೀಯರಿಂದ ಹಲ್ಲೆ
ಹಾರೋಹಳ್ಳಿ: ದಲಿತ ಯುವಕರಿಬ್ಬರ ಜೊತೆ ಜಗಳ ತೆಗೆದ ಸವರ್ಣೀಯ ಯುವಕರ ಗುಂಪೊಂದು ಲಾಂಗ್ ಮತ್ತು ರಾಡುಗಳಿಂದ ಹಲ್ಲೆ ಮಾಡಿರುವ ಘಟನೆ ತಾಲ್ಲೂಕಿನ ದೇವರಹಳ್ಳಿಯಲ್ಲಿ ನಡೆದಿದೆ.
ಘಟನೆಯಲ್ಲಿ ನಾಗರಾಜ್ ಎಂಬವರ ಕೈ ಮತ್ತು ಅಂಜನ್ ಎಂಬುವರ ಕುತ್ತಿಗೆಗೆ ಲಾಂಗ್ ಏಟು ಬಿದ್ದಿದ್ದು ಇಬ್ಬರೂ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಘಟನೆಗೆ ಸಂಬಂಧಿಸಿದಂತೆ ದೊಡ್ಡಮರಳವಾಡಿಯ ಪವನ್ ಹರ್ಷ ಚಿಕ್ಕಮರಳವಾಡಿಯ ಹರೀಶ್ ಪುನೀತ್ ಗಣೇಶ್ ಹಾಗೂ ಇತರ ಮೂವರ ವಿರುದ್ಧ ಹಾರೋಹಳ್ಳಿ ಪೊಲೀಸ್ ಠಾಣೆಯಲ್ಲಿ ಎಸ್‌ಸಿ ಮತ್ತು ಎಸ್‌ಟಿ ದೌರ್ಜನ್ಯ ಪ್ರತಿಬಂಧಕ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ.
ದೇವರಹಳ್ಳಿಯಲ್ಲಿ ಮೇ 15ರಂದು ಗ್ರಾಮದೇವತೆ ಜಾತ್ರೆ ನಡೆದಿತ್ತು. ಜಾತ್ರೆ ಮುಗಿಸಿ ಸಂಜೆ 6.30ರ ಸುಮಾರಿಗೆ ಬೈಕ್‌ನಲ್ಲಿ ಹೋಗುತ್ತಿದ್ದ ದಲಿತ ಯುವಕರ ಜೊತೆ ಆರೋಪಿಗಳು ಜಗಳ ತೆಗೆದಾಗ ಗ್ರಾಮದ ಮುಖಂಡರು ಸಮಾಧಾನಪಡಿಸಿ ಕಳಿಸಿದ್ದರು. ಜಾತ್ರೆ ಸಲುವಾಗಿ ಊರಿಗೆ ಬಂದಿದ್ದ ನಾಗರಾಜ್ ಮತ್ತು ಅಂಜನ್ ಅದೇ ದಿನ ರಾತ್ರಿ 7.30ರ ಸುಮಾರಿಗೆ ಬೆಂಗಳೂರಿಗೆ ಕಾರಿನಲ್ಲಿ ಹೋಗುವಾಗ ಆರೋಪಿಗಳು ಮರಳವಾಡಿ ಬಳಿ ಅಡ್ಡ ಹಾಕಿದ್ದರು. ಕಾರಿನ ಗಾಜು ಒಡೆದು ಜಖಂಗೊಳಿಸಿದ್ದರು. ಲಾಂಗ್ ಚಾಕು ಹಾಗೂ ಕಬ್ಬಿಣದ ರಾಡುಗಳಿಂದ ಹಲ್ಲೆ ನಡೆಸಿ ಜಾತಿ ನಿಂದನೆ ಮಾಡಿ ಜೀವ ಬೆದರಿಕೆ ಹಾಕಿದ್ದರು.
ಹಲ್ಲೆ ವಿಷಯ ತಿಳಿದು ಗ್ರಾಮಸ್ಥರು ಸ್ಥಳಕ್ಕೆ ಬರುತ್ತಿದ್ದಂತೆ ಆರೋಪಿಗಳು ಪರಾರಿಯಾಗಿದ್ದರು. ಆರೋಪಿಗಳು ತಲೆಮರೆಸಿಕೊಂಡಿದ್ದು ಬಂಧನಕ್ಕೆ ಕ್ರಮ ಕೈಗೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.