ADVERTISEMENT

ಹಾರೋಹಳ್ಳಿ | ಮಣ್ಣು ಮಾರಾಟ ದಂಧೆಗಿಲ್ಲ ಕಡಿವಾಣ

​ಪ್ರಜಾವಾಣಿ ವಾರ್ತೆ
Published 3 ಮಾರ್ಚ್ 2025, 4:11 IST
Last Updated 3 ಮಾರ್ಚ್ 2025, 4:11 IST
<div class="paragraphs"><p>ಹಾರೋಹಳ್ಳಿ ಕೈಗಾರಿಕಾ ಪ್ರದೇಶದಲ್ಲಿ ಅಕ್ರಮವಾಗಿ ಮಣ್ಣು ತುಂಬುತ್ತಿರುವುದು</p></div>

ಹಾರೋಹಳ್ಳಿ ಕೈಗಾರಿಕಾ ಪ್ರದೇಶದಲ್ಲಿ ಅಕ್ರಮವಾಗಿ ಮಣ್ಣು ತುಂಬುತ್ತಿರುವುದು

   

ಹಾರೋಹಳ್ಳಿ: ಮಣ್ಣಿಗೆ ಭಾರಿ ಬೇಡಿಕೆ ಇರುವುದರಿಂದ ಈ ಭಾಗದಲ್ಲಿ ಎಲ್ಲೆಂದರಲ್ಲಿ ಮಣ್ಣಿನ ಗುಡ್ಡಗಳನ್ನು ಅಕ್ರಮವಾಗಿ ಕೊರೆದು ಮಣ್ಣು ಮಾರಾಟ ಮಾಡಲಾಗುತ್ತಿದೆ. ಕೈಗಾರಿಕಾ ಪ್ರದೇಶದಲ್ಲಿ ಈಚೆಗೆ ಮಣ್ಣು ಮಾರಾಟ ಅಕ್ರಮ ದಂಧೆ ರಾಜಾರೋಷವಾಗಿ ನಡೆಯುತ್ತಿದೆ.

ಪಟ್ಟಣದ ಎಲ್ಲಿಯೇ ಖಾಲಿ ಭೂಮಿ, ನಿವೇಶನ, ಗೋಮಾಳ ಜಮೀನು ಕಣ್ಣಿಗೆ ಬಿದ್ದರೆ ಸಾಕು ರಾತ್ರೋರಾತ್ರಿ ಮಣ್ಣು ಅಗೆದು ಮಾರಾಟ ಮಾಡಲಾಗುತ್ತದೆ. ಸರ್ಕಾರಿ ಭೂಮಿಯನ್ನೂ ಬಿಡುತ್ತಿಲ್ಲ. 

ADVERTISEMENT

ಹಾರೋಹಳ್ಳಿ ಕೈಗಾರಿಕಾ ಪ್ರದೇಶದಲ್ಲಿ ಕಾರ್ಖಾನೆ ನಿರ್ಮಾಣವಾಗದ ಖಾಲಿ ಜಾಗಗಳಲ್ಲಿಯ ಮಣ್ಣು ಅಗೆದು ಮಾರಾಟ ಮಾಡುವ ದಂಧೆ ಬೃಹತ್‌ ಪ್ರಮಾಣದಲ್ಲಿ ನಡೆಯುತ್ತಿದೆ. 

ಬೃಹತ್‌ ಯಂತ್ರ (ಜೆಸಿಬಿ), ಮಣ್ಣು ಸಾಗಿಸುತ್ತಿರುವ ವಾಹನಗಳ ಭರಾಟೆ ಎಲ್ಲೆಡೆ ಜೋರಾಗಿದೆ. ರಾತ್ರಿಯಿಂದ ಬೆಳಗಿನ ಜಾವದವರೆಗೂ ಮಣ್ಣು ಅಗೆಯುವ ದಂಧೆ ಜೋರಾಗಿ ನಡೆಯುತ್ತದೆ. 

ಹಾರೋಹಳ್ಳಿ ಕೈಗಾರಿಕಾ ಪ್ರದೇಶದಲ್ಲಿ ರಾತ್ರಿ ವೇಳೆ ಯಂತ್ರಗಳನ್ನು ಬಳಸಿ ಕನಿಷ್ಠ 12 ಅಡಿ ಆಳದವರೆಗೆ ಮಣ್ಣು ಅಗೆಯಲಾಗುತ್ತಿದೆ. ನಿತ್ಯ ನೂರಾರು ಲಾರಿಗಳಲ್ಲಿ ಮಣ್ಣನ್ನು ಇಲ್ಲಿಂದ ಹೊರಗೆ ಸಾಗಿಸಲಾಗುತ್ತಿದೆ. 

ಗೋಮಾಳ, ಖಾಲಿ ಜಾಗಗಳೇ ಮಣ್ಣು ಅಕ್ರಮ ಸಾಗಣೆದಾರರಿಗೆ ಟಾರ್ಗೆಟ್‌. ಯಾರ ಭಯವಿಲ್ಲದೆ ದಂಧೆ ರಾಜಾರೋಷವಾಗಿ ನಡೆಯುತ್ತಿದೆ. 

ಇಲಾಖೆ ಅಧಿಕಾರಿಗಳ ಮೌನ: ಸಂಬಂಧಿಸಿದ ಇಲಾಖೆ ಅಧಿಕಾರಿಗಳು ಇದೆಲ್ಲವನ್ನೂ ಕಂಡು ಕಾಣದಂತೆ ವರ್ತಿಸುತ್ತಿದ್ದಾರೆ. ಕೇಳಿದರೆ, ತಮ್ಮ ಗಮನಕ್ಕೆ ಬಂದಿಲ್ಲ, ಯಾವ ದೂರು ಬಂದಿಲ್ಲ, ದೂರು ಬಂದರೆ ಕ್ರಮ ಜರುಗಿಸುವುದಾಗಿ ಜಾರಿಕೊಳ್ಳುತ್ತಿದ್ದಾರೆ. ದೂರು ನೀಡಿದರೂ ಕಾನೂನು ಕ್ರಮ ಜರುಗಿಸುತ್ತಿಲ್ಲ ಎಂದು ಸ್ಥಳೀಯರು ಆರೋಪಿಸುತ್ತಿದ್ದಾರೆ.

ಕೈಗಾರಿಕಾ ಪ್ರದೇಶದಲ್ಲಿ ಅಕ್ರಮವಾಗಿ ಮಣ್ಣನ್ನು ಸಾಗಿಸುತ್ತಿದ್ದರೂ ಕಂದಾಯ ಇಲಾಖೆ ಮೌನ ವಹಿಸಿದೆ. ಟ್ರ್ಯಾಕ್ಟರ್ ಹಾಗೂ ಜೆಸಿಬಿ ಯಂತ್ರಗಳು ಅಕ್ರಮವಾಗಿ ಮಣ್ಣನ್ನು ಲೂಟಿ ಮಾಡುವುದು ಅಧಿಕಾರಿಗಳ ಗಮನಕ್ಕೆ ಬಂದರೂ ಯಾವುದೇ ಕ್ರಮ ಕೈಗೊಂಡಿಲ್ಲ.

ಮಣ್ಣನ್ನು ಸಾಗಿಸಿ ಮಾರಾಟ ಮಾಡುವ ದಂಧೆ ಅವ್ಯಾಹತವಾಗಿ ನಡೆದಿದ್ದರೂ ಸಂಬಂಧಪಟ್ಟ ಇಲಾಖೆ ಅಧಿಕಾರಿ, ಸಿಬ್ಬಂದಿಗಳು ಇದನ್ನು ತಡೆಯಲು ಯಾವುದೇ ಕ್ರಮ ಕೈಗೊಳ್ಳದೆ ಕಂಡೂ ಕಾಣದಂತೆ ಕಣ್ಣು ಮುಚ್ಚಿಕೊಂಡು ಕುಳಿತಿದ್ದಾರೆ. ಮಣ್ಣು ಅಕ್ರಮ ಮಾರಾಟ ದಂಧೆ ವರದಿ ಮಾಡಲು ಹೋದ ಮಾಧ್ಯಮದವರಿಗೂ ಬೆದರಿಕೆ ಒಡ್ಡಲಾಗುತ್ತಿದೆ.

ಮಣ್ಣು ತೆಗೆಯಲು ಇರುವ ನಿಯಮಗಳೇನು?

  • ಕಂದಾಯ ಇಲಾಖೆ ನಿಯಮಗಳ ಪ್ರಕಾರ ಕೆರೆಗಳಲ್ಲಿ ನಾಲ್ಕು ಅಡಿಗಿಂತಲೂ ಹೆಚ್ಚು ಆಳವಾಗಿ ಹಾಗೂ ನೇರವಾಗಿ ಮಣ್ಣು ತೆಗೆಯುವಂತಿಲ್ಲ.

  • ಸರ್ಕಾರದ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ಅನುಮತಿ ಹಾಗೂ ಪರವಾನಗಿ ಪಡೆಯದೆ ಮಣ್ಣು ತೆಗೆಯುವಂತಿಲ್ಲ.

  • ಜೆಸಿಬಿಯಂತಹ ಭಾರಿ ಯಂತ್ರಗಳನ್ನು ಕೆರೆಗಳಿಗೆ ಇಳಿಸುವಂತಿಲ್ಲ.

  • ಇಷ್ಟೆಲ್ಲಾ ನಿಯಮಗಳಿದ್ದರೂ ಕೆಲ ಪ್ರಭಾವಿಗಳಿಂದ ಅವ್ಯಾಹತವಾಗಿ ಮಣ್ಣು ದಂಧೆ ನಡೆಯುತ್ತಿದೆ.

ಅಕ್ರಮವಾಗಿ ಮಣ್ಣು ಸಾಗಿಸುವವರ ವಿರುದ್ಧ ಯಾವುದೇ ಮುಲಾಜಿಲ್ಲದೆ ಕ್ರಮ ಜರುಗಿಸಲಾಗುವುದು.
ಲೀಲಾವತಿ, ಕಾರ್ಯನಿರ್ವಾಹಕ ಅಭಿಯಂತರರು ಹಾರೋಹಳ್ಳಿ ಕೈಗಾರಿಕಾ ಪ್ರದೇಶ
ಹಾರೋಹಳ್ಳಿ ಕೈಗಾರಿಕಾ ಪ್ರದೇಶ ಸೇರಿದಂತೆ ಗೋಮಾಳದಲ್ಲೂ ಮಣ್ಣು ಮಾರಾಟ ದಂಧೆ ನಡೆದಿದೆ. ಸಂಬಂಧಪಟ್ಟ ಅಧಿಕಾರಿಗಳು ಕಡಿವಾಣ ಹಾಕಬೇಕು.
ಪ್ರಶಾಂತ್, ಸಾಮಾಜಿಕ ಕಾರ್ಯಕರ್ತ
ಹಾರೋಹಳ್ಳಿ ಕೈಗಾರಿಕಾ ಪ್ರದೇಶದ ವಿವಿಧೆಡೆ ಮಣ್ಣು ದಂಧೆ ಯಾವುದೇ ಭಯವಿಲ್ಲದೆ ನಡೆಯುತ್ತಿದ್ದು ಅಧಿಕಾರಿಗಳು ಕಠಿಣ ಕ್ರಮ ತೆಗೆದುಕೊಳ್ಳಬೇಕು.
ನವೀನ್ ಮೇಡಮಾರನಹಳ್ಳಿ, ಗ್ರಾಮಸ್ಥ
ಹಾರೋಹಳ್ಳಿ ಕೈಗಾರಿಕಾ ಪ್ರದೇಶದ ಗಿರೇನಹಳ್ಳಿ ಬಳಿ ರಾತ್ರಿ ವೇಳೆ ಮಣ್ಣು ತುಂಬಿರುವುದು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.