ಚನ್ನಪಟ್ಟಣ: ಕಳೆದ ಇಪ್ಪತ್ತು ವರ್ಷಗಳ ಹಿಂದೆ ಮುಚ್ಚಿದ್ದ ನಗರದ ರೇಷ್ಮೆ ಜೂಟು ತಯಾರಿಕಾ ಘಟಕಕ್ಕೆ (ಸ್ಪನ್ ಸಿಲ್ಕ್ ಮಿಲ್) ಮರುಜೀವ ಕೊಡುವಂತೆ ಸಂಸದ ಡಾ.ಸಿ.ಎನ್. ಮಂಜುನಾಥ್ ಕೇಂದ್ರ ಸರ್ಕಾರವನ್ನು ಒತ್ತಾಯಿಸಿದ್ದು, ಶತಮಾನಗಳ ಇತಿಹಾಸವುಳ್ಳ ಘಟಕ ಪುನರಾರಂಭವಾಗುವ ನಿರೀಕ್ಷೆ ಗರಿಗೆದರುತ್ತಿದೆ.
1926ರಲ್ಲಿ ಮೈಸೂರು ಮಹಾರಾಜರು ಸ್ಥಾಪಿಸಿದ್ದ ಸ್ಪನ್ ಸಿಲ್ಕ್ ಮಿಲ್ ಅನ್ನು 2004ರಲ್ಲಿ ನಷ್ಟದ ಕಾರಣ ನೀಡಿ ಸರ್ಕಾರ ಮುಚ್ಚಿತ್ತು. ಸರ್ಕಾರಿ ಸ್ವಾಮ್ಯದಲ್ಲಿ ನಡೆಯುತ್ತಿದ್ದ ರಾಜ್ಯದ ಏಕೈಕ ಸಂಸ್ಥೆ ಎಂಬ ಖ್ಯಾತಿ ಹೊಂದಿದ್ದ ಸ್ಪನ್ ಸಿಲ್ಕ್ ಮಿಲ್‌ನ ಲಾಕ್ ಔಟ್‌ನಿಂದ ಮಿಲ್‌ನಲ್ಲಿ ಕೆಲಸ ಮಾಡುತ್ತಿದ್ದ ನೂರಾರು ಮಂದಿ ಕೆಲಸ ಕಳೆದುಕೊಂಡಿದ್ದರು. ಮಿಲ್ ಲಾಕ್ ಔಟ್‌ನಿಂದ ಸ್ಥಳೀಯ ರೈತರಿಗೂ ತೊಂದರೆ ಎದುರಾಗಿತ್ತು. ಇದಾದ ನಂತರ ಮಿಲ್‌ನ ಕಟ್ಟಡ ಹಾವು ಹಲ್ಲಿಗಳ ಆವಾಸ ಸ್ಥಾನವಾಗಿ ಮಾರ್ಪಟ್ಟಿತ್ತು.
ಇದಾದ ನಂತರ 2010ರಲ್ಲಿ ಮಿಲ್ ಆವರಣದಲ್ಲಿ ಮೈಸೂರು ರೇಷ್ಮೆ ಸೀರೆ ಷೋರೂಂ ಸ್ಥಾಪನೆ ಮಾಡಲಾಯಿತು. ಆ ನಂತರ ₹6 ಕೋಟಿ ವೆಚ್ಚದಲ್ಲಿ ಸಾಫ್ಟ್ ಸಿಲ್ಕ್ ಉತ್ಪಾದನೆಯ ಒಂದು ಘಟಕ ಸ್ಥಾಪಿಸಲಾಯಿತು. ಇದು ಕೇವಲ ಬಣ್ಣವಿಲ್ಲದ ರೇಷ್ಮೆಸೀರೆಗಳ ನೇಯ್ಗೆಗೆ ಮಾತ್ರ ಸೀಮಿತವಾಯಿತು. ಆದರೆ, ಪೂರ್ಣ ಪ್ರಮಾಣದ ಉತ್ಪಾದನಾ ಘಟಕ ಪ್ರಾರಂಭಿಸಲಿಲ್ಲ. ಕಳೆದ 15 ವರ್ಷಗಳಿಂದಲೂ ಈ ಒಂದು ಘಟಕ ಮಾತ್ರ ಇಲ್ಲಿ ಕಾರ್ಯನಿರ್ವಹಿಸುತ್ತಿದೆ. ಗುತ್ತಿಗೆ ಆಧಾರದ ಕಾರ್ಮಿಕರು ಇಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಇವರಿಗೆ ಉದ್ಯೋಗದ ಖಾಯಂ ಭರವಸೆ ಈವರೆಗೆ ಸಿಕ್ಕಿಲ್ಲ.
ಈಗ ಸಂಸದ ಡಾ.ಮಂಜುನಾಥ್ ಅವರು ಈ ಮಿಲ್‌ಗೆ ಮುರುಜೀವ ನೀಡುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರದ ಜವಳಿ ಖಾತೆ ಸಚಿವರ ಜೊತೆ ಚರ್ಚಿಸಿದ್ದು, ಅವರಿಂದ ಸಕಾರಾತ್ಮಕ ಸ್ಪಂದನೆ ದೊರೆತಿರುವ ಕಾರಣ ಮತ್ತೆ ಮಿಲ್ ಪುನರಾರಂಭದ ಬಗ್ಗೆ ನಿರೀಕ್ಷೆ ಗರಿಗೆದರಿದೆ. ಮುಚ್ಚಿರುವ ಮಿಲ್ ಅನ್ನು ಪುನರಾರಂಭಿಸಿ ಮತ್ತೆ ರೇಷ್ಮೆ ಜೂಟು ತಯಾರಿಕಾ ಘಟಕ ಆರಂಭಿಸುವುದರಿಂದ ಸ್ಥಳೀಯರಿಗೆ ಉದ್ಯೋಗ ಸಿಗುವುದಲ್ಲದೆ, ಸ್ಥಳೀಯ ರೈತರ ರೇಷ್ಮೆ ಬೆಳೆಗೆ ಉತ್ತೇಜನ ಸಿಗುತ್ತದೆ ಎಂಬುದು ಸಂಸದರ ಅಭಿಲಾಷೆಯಾಗಿದೆ.
ದೇಶದಲ್ಲೇ ಅತಿ ಹೆಚ್ಚು ರೇಷ್ಮೆಯನ್ನು ರಾಜ್ಯದಲ್ಲಿ ಉತ್ಪಾದನೆ ಮಾಡಲಾಗುತ್ತಿದೆ. ದೇಶದಲ್ಲಿ ಉತ್ಪಾದನೆಯಾಗುವ ಶೇ 45ರಷ್ಟು ರೇಷ್ಮೆ ರಾಜ್ಯದಲ್ಲಿ ಉತ್ಪಾದನೆಯಾಗುತ್ತಿದೆ. ಇದರಲ್ಲಿ ಅರ್ಧದಷ್ಟು ರಾಮನಗರ ಜಿಲ್ಲೆಯ ಆಸುಪಾಸಿನಲ್ಲೇ ಉತ್ಪಾದನೆಯಾಗುತ್ತಿದೆ. ಈ ಕಾರಣದಿಂದ ಮೈಸೂರು ಮಹಾರಾಜರು ಇಲ್ಲಿ ಕೆಎಸ್‌ಐಸಿ ಮಿಲ್ ಆರಂಭಿಸಿದ್ದರು. ಈಗಲೂ ರೇಷ್ಮೆಗೂಡು ಉತ್ಪಾದನೆ ಕಡಿಮೆಯಾಗಿಲ್ಲ. ಇಡೀ ಏಷ್ಯಾದಲ್ಲೇ ದೊಡ್ಡ ರೇಷ್ಮೆ ಮಾರುಕಟ್ಟೆ ಎಂಬ ಖ್ಯಾತಿ ಈಗಲೂ ರಾಮನಗರ ಮಾರುಕಟ್ಟೆಗೆ ಇದೆ. ಈ ಉದ್ದೇಶದಿಂದ ಈ ಮಿಲ್‌ಗೆ ಮತ್ತೆ ಮರುಜೀವ ನೀಡಬೇಕು ಎನ್ನುವುದು ಸಂಸದರ ಅಭಿಪ್ರಾಯವಾಗಿದೆ.
ಒಂದು ಕಾಲದಲ್ಲಿ ಚನ್ನಪಟ್ಟಣದ ರೇಷ್ಮೆ ಉತ್ಪನ್ನಗಳು ಚೀನಾ ದೇಶದ ರೇಷ್ಮೆ ಉತ್ಪನ್ನಗಳಿಗೆ ಸೆಡ್ಡು ಹೊಡೆಯುತ್ತಿದ್ದವು. ಈಗ ಕಾಲ ಬದಲಾಗಿದೆ. ಚೀನಾದ ರೇಷ್ಮೆ ಉತ್ಪನ್ನಗಳು ದೇಶದ ಮಾರುಕಟ್ಟೆಯನ್ನು ಆಕ್ರಮಿಸಿಕೊಂಡಿವೆ. ಚನ್ನಪಟ್ಟಣದ ರೇಷ್ಮೆ ಜೂಟು ತಯಾರಿಕಾ ಘಟಕ ಮುಚ್ಚಿದ ನಂತರ ಚೀನಾ ದೇಶವು ಇಲ್ಲಿಂದ ಕಡಿಮೆ ಬೆಲೆಗೆ ರೇಷ್ಮೆ ಜೂಟು ಆಮದು ಮಾಡಿಕೊಂಡು ಅದರಿಂದ ಉತ್ಪನ್ನಗಳನ್ನು ತಯಾರಿಸಿ ನಮ್ಮ ದೇಶಕ್ಕೆ ಮಾರಾಟ ಮಾಡಿ ಕೋಟ್ಯಂತರ ರೂಪಾಯಿ ಲಾಭ ಗಳಿಸುತ್ತಿದೆ.
ಒಂದು ವೇಳೆ ಚನ್ನಪಟ್ಟಣ ಜೂಟು ತಯಾರಿಕಾ ಘಟಕಕ್ಕೆ ಮರುಜೀವ ನೀಡಿದರೆ ನಮ್ಮ ದೇಶದಲ್ಲೇ ಜೂಟು ಉತ್ಪನ್ನಗಳನ್ನು ತಯಾರಿಸಬಹುದು ಎನ್ನುವುದು ಸಂಸದರ ಅಭಿಪ್ರಾಯವಾಗಿರುವ ಕಾರಣ ಕೇಂದ್ರ ಸರ್ಕಾರ ಈ ಬಗ್ಗೆ ಗಂಭಿರ ಚಿಂತನೆ ನಡೆಸಿ ಮುಚ್ಚಿರುವ ಘಟಕವನ್ನು ಪುನರಾರಂಭಿಸಿ ಸ್ಥಳೀಯರಿಗೆ ಉದ್ಯೋಗ ನೀಡುವ ಜೊತೆಗೆ ಸ್ಥಳೀಯ ರೇಷ್ಮೆ ಬೆಳೆಗಾರ ರೈತರ ಸಹಾಯಕ್ಕೆ ಬರಲಿ ಎನ್ನುವುದು ಸ್ಥಳೀಯರ ಅಭಿಪ್ರಾಯವಾಗಿದೆ.
ರೇಷ್ಮೆ ಉತ್ಪಾದನೆಯಲ್ಲಿ ಭಾರತ ಜಗತ್ತಿನಲ್ಲಿ ಎರಡನೇ ಸ್ಥಾನದಲ್ಲಿದೆ. ರೇಷ್ಮೆಜೂಟು ಉತ್ಪನ್ನ ಕಾರ್ಖಾನೆಗಳು ನಮ್ಮ ದೇಶದಲ್ಲಿ ಇಲ್ಲದ ಕಾರಣ ಚೀನಾ ಲಾಭ ಮಾಡಿಕೊಳ್ಳುತ್ತಿದೆ. ಚನ್ನಪಟ್ಟಣದಲ್ಲಿ ರೇಷ್ಮೆ ಜೂಟು ಕಾರ್ಖಾನೆ ಪುನರಾರಂಭಿಸುವಂತೆ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿದ್ದೇನೆ. ಇದಕ್ಕೆ ಸಕಾರಾತ್ಮಕ ಸ್ಪಂದನೆ ದೊರೆತಿದೆ.ಡಾ. ಮಂಜುನಾಥ್ ಸಂಸದ.
ರೇಷ್ಮೆಗೂಡಿನಿಂದ ನಯವಾದ ನೂಲು ತೆಗೆದ ಬಳಿಕ ಉಳಿಯುವ ಕಚ್ಛಾ ತ್ಯಾಜ್ಯವನ್ನು ರೇಷ್ಮೆ ಜೂಟು ಎನ್ನಲಾಗುತ್ತದೆ. ಇದರಿಂದ ಗಟ್ಟಿ ನೂಲು ತೆಗೆದು ಬಟ್ಟೆಗಳು ಹಾಗೂ ನೆಲೆಹಾಸು ವಿವಿಧ ಅಲಂಕಾರಿಕ ವಸ್ತುಗಳು ಸ್ವೆಟರ್ ಶಾಲು ಹೊದಿಕೆಗಳು ಸೇರಿದಂತೆ ಸಾಕಷ್ಟು ವಸ್ತುಗಳ ತಯಾರಿಕೆಗೆ ಬಳಸಲಾಗುತ್ತದೆ.
ರೇಷ್ಮೆಜೂಟಿನಿಂದ ತಯಾರಿಸಿದ ವಸ್ತುಗಳಿಗೆ ಜಾಗತಿಕ ಮಟ್ಟದಲ್ಲಿ ಸಾಕಷ್ಟು ಬೇಡಿಕೆ ಇದೆ. ಶೀತವಲಯದ ದೇಶಗಳಲ್ಲಿ ಜೂಟಿನಿಂದ ತಯಾರಿಸಿದ ಸ್ವೆಟರ್ ಶಾಲು ಹೊದಿಕೆಗಳಿಗೆ ಬಹಳ ಬೇಡಿಕೆ ಇದೆ. ಹಾಗಾಗಿ ರಾಜ್ಯದ ವಿವಿಧೆಡೆ ರೇಷ್ಮೆಸೀರೆ ನೇಯ್ಗೆ ಘಟಕಗಳಲ್ಲಿ ರೇಷ್ಮೆಸೀರೆ ತಯಾರಿಕೆಗೆ ನಯವಾದ ನೂಲು ತೆಗೆದ ನಂತರ ಉಳಿಯುವ ಜೂಟನ್ನು ಚೀನಾಕ್ಕೆ ಮಾರಾಟ ಮಾಡುವ ಬದಲು ಚನ್ನಪಟ್ಟಣ ಘಟಕ ಪುನರಾರಂಭಿಸಿ ಇಲ್ಲಿಗೆ ಕಳಿಸಿ ಅದನ್ನು ಬಳಸಿಕೊಂಡು ವಿವಿಧ ಉತ್ಪನ್ನಗಳ ತಯಾರಿಕೆ ಮಾಡಬಹುದಾಗಿದೆ.
ಈ ವಿಚಾರದಲ್ಲಿ ಕೇಂದ್ರ ಅಧಿವೇಶನದಲ್ಲಿ ಭಾಷಣ ಮಾಡಿರುವ ಡಾ.ಮಂಜುನಾಥ್ ರೇಷ್ಮೆಜೂಟಿನಿಂದ ತಯಾರಿಸಿದ ಉತ್ಪನ್ನಗಳು ನಮ್ಮ ದೇಶದ ಮಾರುಕಟ್ಟೆಗಳಲ್ಲಿ ಪ್ರತಿವರ್ಷ ಸಾವಿರಾರು ಕೋಟಿ ರೂ ವಹಿವಾಟು ನಡೆಸುತ್ತಿವೆ. ಇದರಿಂದ ಚೀನಾಕ್ಕೆ ಲಾಭವಾಗುತ್ತಿದೆ. ರೇಷ್ಮೆ ಉತ್ಪಾದನೆಯಲ್ಲಿ ಮುಂಚೂಣಿಯಲ್ಲಿರುವ ರಾಮನಗರ ಜಿಲ್ಲೆಯಲ್ಲಿ ಇಂತಹ ವಸ್ತುಗಳ ತಯಾರಿಕೆಗೆ ಆದ್ಯತೆ ನೀಡಬೇಕು ಎಂದು ಮನವಿ ಮಾಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.